ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ: ಡಿಕೆ ಶಿವಕುಮಾರ್
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಕನಕಪುರದ ಚುನಾವಣಾಧಿಕಾರಿ ಕಚೇರಿಯಲ್ಲಿ ಸೋಮವಾರ ನಾಮಪತ್ರ ಸಲ್ಲಿಸಿದರು.
ಬೆಂಗಳೂರು: ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ. ನೀವು ನನ್ನನ್ನು ವಿಧಾನಸೌಧದ 3ನೇ ಮಹಡಿಯಲ್ಲಿ ಕೂರಿಸಿ ರಾಜ್ಯದ ಜನರ ಸೇವೆ ಮಾಡುವ ಅವಕಾಶ ಕಲ್ಪಿಸಬೇಕು ಎಂದು ಡಿಕೆ ಶಿವಕುಮಾರ್ ಜನತೆಗೆ ಮನವಿ ಮಾಡಿದರು.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಕನಕಪುರದ ಚುನಾವಣಾಧಿಕಾರಿ ಕಚೇರಿಯಲ್ಲಿ ಸೋಮವಾರ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಉಷಾ ಶಿವಕುಮಾರ್, ದುಂತೂರು ವಿಶ್ವನಾಥ್, ಚಿನ್ನರಾಜು ಜತೆಗಿದ್ದರು. ಬಳಿಕ ಅವರು ನೆರೆದ ಜನಸ್ತೋಮ ಉದ್ದೇಶಿಸಿ ಮಾತನಾಡಿದರು.
ದೊಡ್ಡಾಲಹಳ್ಳಿ ಕೆಂಪೇಗೌಡರು ಡಿ.ಕೆ. ಶಿವಕುಮಾರ್, ಡಿ.ಕೆ. ಸುರೇಶ್ ಹಾಗೂ ಮಂಜುಳಾ ಅವರಿಗೆ ಜನ್ಮ ಕೊಟ್ಟಿದ್ದಾರೆ. ಆದರೆ ಈ ಡಿ.ಕೆ ಶಿವಕುಮಾರ್ ನನ್ನು ಕಳೆದ 40 ವರ್ಷಗಳಿಂದ ಮನೆ ಮಗನಂತೆ ಬೆಳೆಸಿರುವುದು ಈ ಕ್ಷೇತ್ರದ ನನ್ನ ತಾಯಂದಿರು, ತಂಗಿಯರು, ಅಣ್ಣತಮ್ಮಂದಿರು. ನೀವು ತೋರಿರುವ ಪ್ರೀತಿ ಅಭಿಮಾನವನ್ನು ಹೇಗೆ ಋಣ ತೀರಿಸಬೇಕು ಗೊತ್ತಿಲ್ಲ. ನನ್ನನ್ನು 7 ಬಾರಿ ವಿಧಾನಸೌಧಕ್ಕೆ ಆರಿಸಿ ಕಳುಹಿಸಿದ್ದೀರಿ. ಮುಂದಿನ ತಿಂಗಳು 10ರಂದು ನಡೆಯಲಿರುವ ಚುನಾವಣೆ ಕೇವಲ ಡಿ.ಕೆ. ಶಿವಕುಮಾರ್ ಅವರನ್ನು ಗೆಲ್ಲಿಸುವ ದಿನ ಮಾತ್ರವಲ್ಲ. ಇಡೀ ರಾಜ್ಯಕ್ಕೆ ಒಬ್ಬ ಶಕ್ತಿಶಾಲಿ ಸೇವಕನನ್ನು ಅರ್ಪಣೆ ಮಾಡುವ ದಿನ. ಈ ಜನ ಸಮೂಹವನ್ನು ನಾನು ತಯಾರು ಮಾಡಿಲ್ಲ. ಇಷ್ಟು ಅಭಿಮಾನ, ಕಾರ್ಯಕರ್ತರು, ನಾಯಕರುಗಳು ಇಲ್ಲಿ ಸೇರಿದ್ದೀರಿ. ನಾನು ಕಳೆದ ಐದು ವರ್ಷಗಳಿಂದ ನಿಮ್ಮನ್ನು ಹೆಚ್ಚಾಗಿ ಭೇಟಿ ಮಾಡಲು ಆಗಿಲ್ಲ ಎಂದರು.
ಬಿಜೆಪಿಯವರು ನನ್ನ ವಿರುದ್ಧ ಇಡಿ, ಸಿಬಿಐ ಕೇಸು ಹಾಕಿ ತಿಹಾರ್ ಜೈಲಿಗೆ ಹಾಕಿದರು. ಆಗ ನೀವು ಮಾಡಿದ ಪ್ರಾರ್ಥನೆ, ಪೂಜೆ, ಹರಕೆ, ನಿಮ್ಮ ಪ್ರೀತಿ ಅಭಿಮಾನಕ್ಕೆ ನಾನು ಬದುಕಿರುವವರೆಗೂ ತೀರಿಸಲು ಸಾಧ್ಯವಿಲ್ಲ. ಇಂದು ಈ ಚುನಾವಣೆಯನ್ನು ನಾನು, ಡಿ.ಕೆ ಸುರೇಶ್ ಮಾಡುವುದಿಲ್ಲ. ನೀವೇ ಈ ಚುನಾವಣೆ ಮಾಡಬೇಕು. ನೀವುಗಳೇ ಡಿ.ಕೆ. ಶಿವಕುಮಾರ್ ಆಗಿ ಪ್ರತಿಯೊಬ್ಬರು ಐದು ಮತದಾರರನ್ನು ಸಂಪಾದಿಸಿ ಜೆಡಿಎಸ್, ಬಿಜೆಪಿಯಲ್ಲಿ ಗುರುತಿಸಿಕೊಂಡಿರುವವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನನಗೆ ಮತ ಹಾಕಿಸಬೇಕು ಎಂದು ಡಿಕೆಶಿ ಮನವಿ ಮಾಡಿದರು.
ರಾಜಕಾರಣ ವ್ಯವಸಾಯ ಇದ್ದಂತೆ. ನನ್ನ ಹಾಗೂ ನಿಮ್ಮ ಶ್ರಮಕ್ಕೆ ಮೇ 10ರಂದು ಮತದ ಮೂಲಕ ಫಲ ಬರಬೇಕು. ಚುನಾವಣೆ ಪ್ರಜಾಪ್ರಭುತ್ವದ ಹಬ್ಬ. ಆ ದಿನ ನೀವು ನನಗೆ ಆಶೀರ್ವಾದ ಮಾಡಬೇಕು.ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ. ನೀವು ನನ್ನನ್ನು ವಿಧಾನಸೌಧದ 3ನೇ ಮಹಡಿಯಲ್ಲಿ ಕೂರಿಸಿ ರಾಜ್ಯದ ಜನರ ಸೇವೆ ಮಾಡುವ ಅವಕಾಶ ಕಲ್ಪಿಸಬೇಕು. ನಮ್ಮ ಮನೆ ದೇವರು, ಗ್ರಾಮ ದೇವತೆ ಕೆಂಕೇರಮ್ಮ ದೇವಾಲಯಕ್ಕೆ ಹೋಗಿದ್ದು, ಕಬ್ಬಾಳಮ್ಮ ದೇವಾಲಯಕ್ಕೂ ತೆರಳುತ್ತೇನೆ. ಇಂದು ನಾನು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು ಇಲ್ಲಿಗೆ ಬಂದಿದ್ದೇನೆ. ನಾನು ನಮ್ಮ ಗೆಳೆಯರಾದ ಅಶೋಕ್, ಬೊಮ್ಮಾಯಿ ಅವರಿಗೆ ಶೆಟ್ಟರ್ ಅವರ ಸೇರ್ಪಡೆಯ ಉಡುಗೊರೆ ಕೊಟ್ಟು ಬಂದಿದ್ದೇನೆ.
ಅಧಿಕಾರ ನಶ್ವರ. ನನ್ನ ಹಾಗೂ ನಿಮ್ಮ ಸಾಧನೆ ಅಜಾರಮರ. ಮತದಾರನೇ ಈಶ್ವರ ಎಂದು ನಿಮ್ಮ ಪಾದಕ್ಕೆ ನಮಿಸುತ್ತಿದ್ದೇನೆ. ಇಲ್ಲಿ ನನ್ನ ತಾಯಂದಿರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದಾರೆ. ನಾನು ನಾಮಪತ್ರ ಸಲ್ಲಿಸುವಾಗ ವಿಶ್ವನಾಥ್ ಅವರಿಗೆ ಒಂದು ಮಾತು ಹೇಳಿದ್ದೆ. ನಾನು ನಿಮ್ಮೆಲ್ಲರಿಗೂ ಸಹಾಯ ಮಾಡಲು ಆಗದೇ ಇರಬಹುದು. ಆದರೆ ನಿಮ್ಮ ಆಸ್ತಿಯ ಮೌಲ್ಯಗಳನ್ನು 10 ಪಟ್ಟು ಹೆಚ್ಚು ಮಾಡುತ್ತೇನೆ ಎಂದು ಹೇಳಿದ್ದೆ. ಇಂದು ಈ ಕ್ಷೇತ್ರದ ಅಭಿವೃದ್ಧಿಯಿಂದ 2-3 ಲಕ್ಷದಷ್ಟಿದ್ದ ಎಕರೆ ಜಮೀನು 50 ಲಕ್ಷಕ್ಕೆ ಹೆಚ್ಚುವಂತೆ ಮಾಡಿದ್ದೇನೆ. ನರೇಗಾ ಯೋಜನೆಯನ್ನು ದೇಶಕ್ಕೆ ಮಾದರಿಯಾಗುವಂತೆ ಜಾರಿ ಮಾಡಿದ್ದೇನೆ.
ರೈತರು ಈ ಹಿಂದೆ ಟ್ರಾನ್ಸ್ ಫಾರಂಗೆ 30-40 ಸಾವಿರ ಹಣ ಪಾವತಿಸಬೇಕಿತ್ತು. ಆದರೆ ನಾವು ಎಲ್ಲ ರೈತರಿಗೆ ಟ್ರಾನ್ಸ್ ಫಾರಂ ಅಳವಡಿಸಿಕೊಟ್ಟಿದ್ದೇವೆ. ಆಮೂಲಕ ರೈತರ ಬದುಕು ಹಸನ ಮಾಡುವ ಪ್ರಯತ್ನ ಮಾಡಿದ್ದೇವೆ. ನರೆಗಾ ಮೂಲಕ ಪ್ರತಿ ಕುಟುಂಬಕ್ಕೆ ಸಹಾಯ ಮಾಡುವ ಪ್ರಯತ್ನ ಮಾಡಿದ್ದೇವೆ. ನಗರ ಪಾಲಿಕೆಯಲ್ಲಿ ನಿವೇಶನ, ಮನೆ ನಿರ್ಮಾಣ ಮಾಡಿದ್ದೇವೆ. ಇದು ನನ್ನೊಬ್ಬನ ಸಾಧನೆಯಲ್ಲ. ನನ್ನ ಎಲ್ಲ ನಾಯಕರು ಕಾರ್ಯಕರ್ತರ ಸಹಕಾರದಿಂದ ಇದು ಸಾಧ್ಯವಾಗಿದೆ. ನನಗೆ ಗೊತ್ತಿದ್ದೋ, ಗೊತ್ತಿಲ್ಲದೆ ನಾನು, ಸುರೇಶ್ ಅಥವಾ ನಮ್ಮ ನಾಯಕರು ಅಥವಾ ಕಾರ್ಯಕರ್ತರು ನಿಮ್ಮ ಮನಸ್ಸಿಗೆ ನೋವು ಮಾಡಿದ್ದರೆ, ನಿಮ್ಮ ಭಾವನೆಗೆ ಧಕ್ಕೆ ಮಾಡಿದ್ದರೆ ನಿಮ್ಮ ಮಗನನ್ನು ಕ್ಷಮಿಸಿ ಎಂದು ಪ್ರಾರ್ಥಿಸುತ್ತೇನೆ.
ನನ್ನ ವಿರುದ್ಧ ಯಾರು ನಿಲ್ಲುತ್ತಾರೆ ಎಂಬುದು ಮುಖ್ಯವಲ್ಲ. ನಮ್ಮ ನಿಮ್ಮ ನಡುವಣ ಸಂಬಂಧ ಭಕ್ತ ಹಾಗೂ ಭಗವಂತನ ನಡುವಣ ಸಂಬಂಧ. ನಿಮ್ಮ ಹಾಗೂ ಈ ತಾಯಿಯ ಆಶೀರ್ವಾದ ಪಡೆದು ನಾಮಪತ್ರ ಸಲ್ಲಿಸುತ್ತಿದ್ದೇನೆ. ನಾನು ನಿಮ್ಮ ಭಾವನೆ ಅರ್ಥ ಮಾಡಿಕೊಂಡಿದ್ದೇನೆ. ನಾನು ಇಡೀ ರಾಜ್ಯ ಪ್ರವಾಸ ಮಾಡಬೇಕು. ಹೀಗಾಗಿ ಚುನಾವಣೆಗೂ ಮುನ್ನ ಒಂದು ದಿನ ಬಂದು ಪ್ರಚಾರ ಮಾಡುತ್ತೇನೆ. ಇಂದು ನಾಮಪತ್ರ ಸಲ್ಲಿಸಿದ ನಂತರ ಮಡಿಕೇರಿಗೆ ತೆರಳುತ್ತಿದ್ದೇನೆ. ನಾಳೆ ತುಮಕೂರಿನ ನಾಲ್ಕು ಭಾಗಗಳಲ್ಲಿ ಪ್ರವಾಸ ಮಾಡುತ್ತಿದ್ದೇನೆ.
ಹಿಂದೂ, ಮುಸಲ್ಮಾನರು, ಕ್ರೈಸ್ತರು, ಒಕ್ಕಲಿಗರು, ಲಿಂಗಾಯತರು, ದಲಿತರು ಎಲ್ಲರೂ ಅಣ್ಣ ತಮ್ಮಂದಿರಂತೆ ಒಟ್ಟಾಗಿ ಕೆಲಸ ಮಾಡಿಕೊಂಡು ಬಂದಿದ್ದಾರೆ. ನನ್ನ ವಿರುದ್ಧ ಯಾರೇ ಸ್ಪರ್ಧೆ ಮಾಡಿದರೂ ನೀವು ಯಾರೂ ವಿಚಲಿತರಾಗಬೇಡಿ. ಚುನಾವಣೆ ಸಮಯದಲ್ಲಿ ಅವರು ಬರುತ್ತಾರೆ. ಚುನಾವಣೆ ಮುಗಿದ ನಂತರ ಹೋಗುತ್ತಾರೆ. ನಂತರ ನಿಮಗೆ ನಾನು, ನನಗೆ ನೀವು ಇರೋಣ. ನಮ್ಮಿಂದ ಯಾವುದಾದರೂ ತಪ್ಪಾಗಿದ್ದರೆ ಅದನ್ನು ಸರಿಪಡಿಸಿಕೊಳ್ಳುತ್ತೇವೆ. ಕಳೆದ ವರ್ಷ ಎಷ್ಟು ಮತಗಳಿಂದ ಗೆಲ್ಲಿಸಿದ್ದಿರೋ ಅದಕ್ಕಿಂತ ಹೆಚ್ಚಿನ ಮತ ನೀಡಿ ಆಶೀರ್ವದಿಸಬೇಕು ಎಂದು ಡಿಕೆ ಶಿವಕುಮಾರ್ ಹೇಳಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ