ಮಂಗಳೂರು: ದಿನಾಂಕ 10-04-2023 ರಿಂದ 19-04-2023 ರವರೆಗೆ ನಡೆದ ವಾರ್ಷಿಕ ತರಬೇತಿ ಶಿಬಿರದ ಸಮಾರೋಪ ಸಮಾರಂಭವು ದಿನಾಂಕ : 19-04-2023ರಂದು ಬೆಳಿಗ್ಗೆ 11.00ಗಂಟೆಗೆ ಶ್ರೀ ಭಾರತೀ ಕಾಲೇಜು, ನಂತೂರು ಮಂಗಳೂರು ಇಲ್ಲಿ ನಡೆಯಿತು. ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ದಿನೇಶ್, ಪೊಲೀಸ್ ಉಪ ಆಯುಕ್ತಕರು, ಸಂಚಾರ ಮತ್ತು ಅಪರಾಧ ವಿಭಾಗ, ಮಂಗಳೂರು ನಗರ ಇವರು ಆಗಮಿಸಿ ಮಾತನಾಡಿ, ಗೃಹರಕ್ಷಕದಳದಲ್ಲಿ ಕರ್ತವ್ಯ ನಿರ್ವಹಣೆಯು ಗೌರವಯುತವಾದಂತದ್ದು, ನೀವುಗಳು ಬೇರೆ ಬೇರೆ ಕಡೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರಬಹುದು ಆದರೆ ನಿಮಗೂ ಸಹ ಖಾಕಿ ಧರಿಸುವಂತಹ ಇಚ್ಛೆ ಇದ್ದು, ಖಾಕಿ ಬಗ್ಗೆ ಹೆಮ್ಮೆ ಇದ್ದು ಈ ಗೃಹರಕ್ಷಕದಳಕ್ಕೆ ಬಂದು ಸಮಾಜ ಸೇವೆಯಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳುತ್ತೀರ ಎಂಬ ಭಾವನೆಯನ್ನು ನಾನು ಹೊಂದಿದ್ದೇನೆ. ಗೃಹರಕ್ಷಕದಳವು ಸೇವೆಯ ಒಂದು ಪ್ರತೀಕ. ಕಾಯ ವಾಚ ಮನಸ ಎಂಬುದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಸಮಾಜದ ಜನರ ಸೇವೆಯನ್ನು ಮಾಡುತ್ತೀರಿ ಎಂದು ಪ್ರಮಾಣವಚನ ಸ್ವೀಕರಿಸಿರುತ್ತೀರಿ ಅದನ್ನು ನೀವು ನಿಮ್ಮ ಮುಂದಿನ ಜೀವನದಲ್ಲಿ ಅಳವಡಿಸಿಕೊಂಡು ಸದಾಕಾಲ ಖಾಕಿಯ ಗೌರವಕ್ಕೆ ಯಾವುದೇ ರೀತಿಯಲ್ಲಿ ಚುತಿಬಾರದಂತೆ ನೀವು ನಿಮ್ಮ ಕರ್ತವ್ಯವನ್ನು ನಿರ್ವಹಿಸಿಕೊಳ್ಳಿ ಎಂದು ಗೃಹರಕ್ಷಕರಿಗೆ ಆರೈಸಿದರು.
ಈ ಕಾರ್ಯಕ್ರಮದಲ್ಲಿ ಇನ್ನೋರ್ವ ಅತಿಥಿಗಳಾಗಿ ಭಾಗವಹಿಸಿದ ಖ್ಯಾತ ವೈದ್ಯರು ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ಡಾ. ಕಿಶನ್ ರಾವ್ ಬಾಳಿಲ, ಇವರು ಮಾತನಾಡಿ ನಮ್ಮ ಕುಟುಂಬಕ್ಕೆ ಇನ್ನಷ್ಟು ಬಲ ಬಂದಿದೆ ಹಾಗೂ ಇನ್ನು ಸದೃಢವಾಗಿದೆ ಎಂದು ಖುಶಿ ಪಡುತ್ತೇನೆ. ಗೃಹರಕ್ಷಕದಳ ಇಲಾಖೆಯ ಸೇವೆಯು ಜಿಲ್ಲಾ ಸಮಾದೇಷ್ಟರ ನೇತೃತ್ವದಲ್ಲಿ ಸಾಂಸ್ಕೃತಿಕ, ಕ್ರೀಡೆ, ಸಮಾಜಸೇವೆ ಎಲ್ಲವೂ ನಡೆಯುತ್ತಿರುವುದು ಒಂದು ಸಂತಸದ ವಿಚಾರ. ಇನ್ನಷ್ಟು ಮಂದಿ ಇಲಾಖೆಗೆ ಸೇರಿ ಇನ್ನಷ್ಟು ಸಮಾಜಸೇವೆ ಮಾಡುವಂತಾಗಲಿ ಎಂದು ನುಡಿದರು.
ಶ್ರೀ ಭಾರತೀ ಸಮೂಹ ಸಂಸ್ಥೆಯ ಕೋಶಾಧಿಕಾರಿಯಾದ ಉದಯ ಶಂಕರ್ ನಿರ್ಪಾಜೆ ಅವರು ಗೃಹರಕ್ಷಕರಿಗೆ ಹಿತನುಡಿಗಳನ್ನಾಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ದಕ್ಷಿಣ ಕನ್ನಡ ಜಿಲ್ಲಾ ಸಮಾದೇಷ್ಟರಾದ ಡಾ. ಮುರಲೀ ಮೋಹನ್ ಚೂಂತಾರು ಅವರು ಮಾತನಾಡಿ, ಈ ದಿನ ನಿಮಗೆಲ್ಲ ವಿಶೇಷವಾದದ್ದು, ನಿಮ್ಮ ಜೀವನದಲ್ಲಿ ನೀವು ಗೃಹರಕ್ಷಕರಾಗಿ ನೋಂದಾವಣೆ ಮಾಡಿದ ಬಳಿಕ ನಿಮಗೆ ಈ ರೀತಿಯ 10 ದಿನಗಳ ಮೂಲ ತರಬೇತಿ ಶಿಬಿರ ನೀಡಲಾಗುತ್ತದೆ. ನಿಮಗೆ ಒಬ್ಬ ಮಾದರಿ ಗೃಹರಕ್ಷಕನಾಗಲು ಬೇಕಾದ ಎಲ್ಲಾ ರೀತಿಯ ತರಬೇತಿಯನ್ನು ನೀಡಿರುತ್ತೇವೆ. ಎಲ್ಲಾ ಇಲಾಖೆಯಲ್ಲಿದ್ದುಕೊಂಡು ಇಲಾಖೆಯ ಬಗ್ಗೆ ಕನಿಷ್ಠ ಮಾಹಿತಿ ಮತ್ತು ವಿಚಾರದ ಬಗ್ಗೆ ಮಾಹಿತಿಯನ್ನು ನೀಡಿದ್ದೇವೆ. ನಾವು ಪೊಲೀಸ್ ಆಗದಿದ್ದರೂ ಸಹ ಅವರ ಜೊತೆ ಹೋದಾಗ ಯಾವತ್ತೂ ಅವರು ನಮ್ಮನ್ನು ಹೊರಗಿಟ್ಟು ನೋಡುದಿಲ್ಲ. ಗೃಹರಕ್ಷಕರಿಗೆ ಪ್ರಥಮ ಚಿಕಿತ್ಸೆ ಹಾಗೂ ಹೃದಯ ಪುನಚ್ಛೇತನ ಶಿಬಿರ ನೀಡಿ ಗೃಹರಕ್ಷಕರು ಈಗ ಜೀವರಕ್ಷಕರೂ ಆಗಿರುತ್ತಾರೆ. ನಿಮಗೆ ಜೀವವನ್ನು ಉಳಿಸುವ ಜವಬ್ದಾರಿಯೂ ಇದೆ, ಸಮಾಜವನ್ನು ರಕ್ಷಿಸುವ ಜವಾಬ್ದಾರಿಯೂ ಇದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಜೊತೆ ಹೆಗಲುಕೊಡಬೇಕಾದಂತ ಉನ್ನತವಾದ ಹೊಣೆಗಾರಿಕೆ ಸಹ ಇದೆ. ಪ್ರವಾಹರಕ್ಷಣೆ, ಚುನಾವಣೆ, ಜಾತ್ರೆ ಬಂದೋಬಸ್ತ್ ಗಳಿಗೂ ಗೃಹರಕ್ಷಕರು ಬೇಕು ಹೀಗೆ ಎಲ್ಲಾ ಕಡೆ ಪೊಲೀಸರೊಂದಿಗೆ ಕರ್ತವ್ಯ ನಿರ್ವಹಿಸುವ ಇಲಾಖೆ ಆಗಿರುತ್ತದೆ. ನಿಮ್ಮ ಮೇಲೆ ಇರುವ ಗೌರವವನ್ನು ಉಳಿಸಿಕೊಂಡು ನಿಷ್ಕಾಮ ಸೇವೆ ಸೇವೆಯೇ ಪರಮಗುರಿ ಎನ್ನುವ ಉದ್ದೇಶದೊಂದಿಗೆ ಕೆಲಸಮಾಡಬೇಕು ಎಂದು ನಡಿದರು.
ಈ ಸಂದರ್ಭದಲ್ಲಿ 10 ದಿನಗಳ ವಾರ್ಷಿಕ ತರಬೇತಿ ಶಿಬಿರನ್ನು ಉತ್ತಮವಾಗಿ ನಡೆಸಿಕೊಟ್ಟ ಪೌರರಕ್ಷಣಾ ಅಕಾಡೆಮಿ ಬೆಂಗಳೂರು ಇಲ್ಲಿಯ ಬೋಧಕರಾದ ಚಂದನ್ ಅವರಿಗೆ ಶಾಲು ಹೊದಿಸಿ, ಫಲಪುಷ್ಪ ನೀಡಿ, ಹಾರಹಾಕಿ ಸನ್ಮಾನಿಸಿದರು. ತರಬೇತಿ ಶಿಬಿರದಲ್ಲಿ ಭಾಗವಹಿಸಿದ ಹೊಸದಾಗಿ ನೋಂದಾಯಿತರಾದ ಮಂಗಳೂರು ಘಟಕದ ಗೃಹರಕ್ಷಕ ಬಸವರಾಜ್ ಮತ್ತು ಸುರತ್ಕಲ್ ಘಟಕದ ರಾಣಿ ಇವರು ತಮ್ಮ ಅನಿಸಿಕೆಗಳನ್ನು ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಉಪ ಸಮಾದೇಷ್ಟರಾದ ರಮೇಶ್ ಅವರು ಸ್ವಾಗತ ಭಾಷಣ ಮಾಡಿದರು, ಕಛೇರಿ ಅಧೀಕ್ಷಕಿ ಕವಿತಾ ಕೆ.ಸಿ ಅವರು ಕಾರ್ಯಕ್ರಮ ನಿರ್ವಹಣೆ ಮಾಡಿದರು. ಪ್ರತಿಜ್ಞಾವಿಧಿಯನ್ನು ಬೋಧಕರಾದ ಚಂದನ್ ಅವರು ಬೋಧಿಸಿದರು, ವಿಟ್ಲ ಘಟಕದ ಉಷಾ ಅವರು ಶೆಟ್ಟಿ ಅವರು ಪ್ರಾರ್ಥನೆಯನ್ನು ಮಾಡಿರು. 10 ದಿನಗಳ ತರಬೇತಿಯನ್ನು ಪೂರ್ಣಗೊಳಿಸಿದ ಎಲ್ಲಾ ಗೃಹರಕ್ಷಕ ಗೃಹರಕ್ಷಕಿಯರಿಗೆ ಮುಖ್ಯ ಅತಿಥಿಗಳು ಪ್ರಮಾಣ ವಚನ ನೀಡಿದರು. ಮಂಗಳೂರು ಘಟಕದ ಸೀನಿಯರ್ ಪ್ಲಟೂನ್ ಕಮಾಂಡರ್ ಮಾರ್ಕ್‍ಶೇರಾ ಅವರು ವಂದನಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಪ್ರಥಮ ದರ್ಜೆ ಸಹಾಯಕಿ ಅನಿತಾ ಟಿ.ಎಸ್, ಗೃಹರಕ್ಷಕರಾದ ಸುನಿಲ್, ಸುನಿಲ್ ಪೂಜಾರಿ, ರೇವತಿ, ನಿರುಪಮ, ರಂಜಿತ್, ಕನಕಪ್ಪ, ದಿವಾಕರ್ ಹಾಗೂ 60 ಮಂದಿ ಗೃಹರಕ್ಷಕ ಗೃಹರಕ್ಷಕಿಯರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ