ನಿಟ್ಟೆ: ಏ.1 ಶನಿವಾರದಂದು ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ವ್ಯವಹಾರ ಅಧ್ಯಯನ ಅಧ್ಯಾಪಕರ ಸಂಘದ ಸಹಯೋಗದೊಂದಿಗೆ ಡಾ.ಶಂಕರ ಅಡ್ಯಂತಾಯ ಸ್ಮಾರಕ ಪ್ರಥಮ ದರ್ಜೆ ಕಾಲೇಜಿನಲ್ಲಿ ಎನ್‌ಇಪಿ ಬಿಬಿಎ ನಾಲ್ಕನೇ ಚತುರ್ಮಾಸ ಪಠ್ಯಕ್ರಮ ಕುರಿತು ಒಂದು ದಿನದ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
ಕಾರ್ಯಾಗಾರವನ್ನು ಜೆ.ಕೆ.ಎಸ್.ಎಚ್.ಐ.ಎಮ್.ನ ಸಂಶೋಧನಾ ಪ್ರಧ್ಯಾಪಕ ಡಾ.ಟಿ. ಮಲ್ಲಿಕಾರ್ಜುನಪ್ಪ ಉದ್ಘಾಟಿಸಿದರು. ನೆರೆದ ಅಧ್ಯಾಪಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಈಗಿನ ವಿದ್ಯಾರ್ಥಿಗಳಿಗೆ ಸೈದ್ಧಾಂತಿಕ ಚಿಂತನೆಗಳಿಗಿಂತ ಹೆಚ್ಚು ಪ್ರಾಯೋಗಿಕ ಜ್ಞಾನವನ್ನು ಒದಗಿಸುವಲ್ಲಿ ಅಧ್ಯಾಪಕರು ಕಾರ್ಯಪ್ರವೃತ್ತರಾಗಬೇಕು, ಹಾಗೂ ಇಂದಿನ ಯುವ ಮನಸ್ಸುಗಳೊಂದಿಗೆ ನಮ್ಮ ಜ್ಞಾನವನ್ನು ಹಂಚಿಕೊಳ್ಳಲು ಹೆಚ್ಚು ಉತ್ಸಾಹವನ್ನು ಹೊಂದಿರಬೇಕು. ಇಂತಹ ಕಾರ್ಯಾಗಾರಗಳು ಈ ನಿಟ್ಟಿನಲ್ಲಿ ಪ್ರಯೋಜನಕಾರಿ ಎಂದು ತಿಳಿಸಿದರು.
ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎನ್.ಎಂ.ಎ.ಎಂ.ಐ.ಟಿ. ಯ ಪ್ರಾಂಶುಪಾಲ ಡಾ. ನಿರಂಜನ್ ಚಿಪ್ಳೂಣ್ಕರ್ ಅವರು ಮಾತನಾಡಿ ಕೊರೋನೋತ್ತರ ಕಾಲದಲ್ಲಿ ಶಿಕ್ಷಣ ಕ್ಷೇತ್ರ ಬಿಕ್ಕಟ್ಟು ಎದುರಿಸುತ್ತಿದೆ. ಹೀಗಾಗಿ ಅಧ್ಯಾಪಕರುಗಳು ಮೊದಲಿಗಿಂತ ಹೆಚ್ಚು ಸವಾಲುಗಳನ್ನು ಎದುರಿಸುತ್ತಿದ್ದು, ಈ ರೀತಿಯ ಕಾರ್ಯಾಗಾರಗಳು ಬೋಧಕರ ಜವಾಬ್ಧಾರಿಗಳನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಸಹಕಾರಿಯಾಗಲಿವೆ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳನ್ನು ಡಾ.ಎನ್.ಎಸ್.ಎ.ಎಂ. ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ವೀಣಾಕುಮಾರಿ ಬಿ.ಕೆ ಅವರು ಸ್ವಾಗತಿಸಿದರು. ಅಧ್ಯಾಪಕರ ಸಂಘದ ಸಹಕಾರ್ಯದರ್ಶಿ ಸಂಧ್ಯಾ ಭಂಡಾರಿ ವಂದಿಸಿದರು. ಇಂಗ್ಲೀಷ್ ವಿಭಾಗದ ಅಧ್ಯಾಪಕಿ ಶ್ರೀಮತಿ ಪ್ರಿಯಾಂಕ ಶಿರ್ವ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಾಗಾರದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಸಂಯೋಜಿತ ಕಾಲೇಜುಗಳ 130 ಬೋಧಕರು ಭಾಗವಹಿಸಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ