ಕಾಂಗ್ರೆಸ್ ಅಂದರೆ ಭ್ರಷ್ಟಾಚಾರ, ಅಭಿವೃದ್ಧಿಗೆ ಅಡ್ಡಗಾಲು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ವಾಗ್ದಾಳಿ

Upayuktha
0

ಕರುನಾಡ ಕದನ: ಬಿಜೆಪಿಯ ಮಂಗಳೂರು ವಿಭಾಗ ಮಾಧ್ಯಮ ಕೇಂದ್ರ ಉದ್ಘಾಟನೆ


ಮಂಗಳೂರು: ಬಿಜೆಪಿಯ ಡಬಲ್ ಎಂಜಿನ್ ಸರಕಾರಕ್ಕೆ ನಾಡಿನ ಸಮಗ್ರ ಅಭಿವೃದ್ಧಿಯೇ ಮೂಲಮಂತ್ರವಾಗಿದ್ದರೆ, ಟ್ರಬಲ್ ಎಂಜಿನ್ ಹೊಂದಿರುವ ಕಾಂಗ್ರೆಸ್‌ನ ಪಕ್ಷಕ್ಕೆ ಕ್ಷುಲ್ಲಕ ರಾಜಕೀಯ, ಪ್ರತಿ ಹಂತದಲ್ಲೂ ಅಭಿವೃದ್ಧಿಗೆ ಅಡ್ಡಗಾಲು ಹಾಕುವುದೇ ಧ್ಯೇಯವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ಹೇಳಿದರು.  


ಚುನಾವಣೆಗಾಗಿ ಸಜ್ಜುಗೊಳಿಸಲಾದ ಪಕ್ಷದ ಮಂಗಳೂರು ವಿಭಾಗ ಮಾಧ್ಯಮ ಕೇಂದ್ರವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.


ಪ್ರಧಾನಿ ನರೇಂದ್ರ ಮೋದಿ ಅವರ ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್ ಘೋಷ ವಾಕ್ಯದಂತೆ ಆಡಳಿತ ನಡೆಸುತ್ತಿರುವ ಬಿಜೆಪಿ ಈ ಚುನಾವಣೆಯಲ್ಲಿ ಮತ್ತೆ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಮರಳುವುದು ಶತಸ್ಸಿದ್ಧ ಎಂದು ಅವರು ನುಡಿದರು. ಅಭಿವೃದ್ಧಿಯ ಸೂಚ್ಯಂಕದಲ್ಲಿ ದೇಶದಲ್ಲೇ ಮೊದಲ ಸ್ಥಾನ ಪಡೆಯಲು ಕರ್ನಾಟಕಕ್ಕೆ ಎಲ್ಲ ಅರ್ಹತೆಗಳಿವೆ. ಇದು ಸಾಕಾರವಾಗಲು ಪಕ್ಷದ ಸರಕಾರ ಮತ್ತೆ ಅಧಿಕಾರಕ್ಕೆ ಬರುವುದು ಅವಶ್ಯಕ ಎಂದು ಭಾಟಿಯಾ ಹೇಳಿದರು.


ಕಾಂಗ್ರೆಸ್‌ನ ವೋಟ್ ಬ್ಯಾಂಕ್ ಆಧರಿತ ತುಷ್ಟೀಕರಣ ರಾಜಕಾರಣ, ವಿಭಜನಕಾರಿ ರಾಜನೀತಿ, ಭ್ರಷ್ಟಾಚಾರಗಳು ಈ ದೇಶದ ಅಭಿವೃದ್ಧಿಗೆ ಮಾರಕವಾಗಿವೆ ಎಂದು ಅವರು ತಿಳಿಸಿದರು. ಚುನಾವಣೆ ಬಂದಾಗ ಘೋಷಿಸುವ ಕಾಂಗ್ರೆಸ್‌ನ 'ಗ್ಯಾರಂಟಿ'ಗಳು ಅಂದರೆ ಭ್ರಷ್ಟಾಚಾರ ಗ್ಯಾರಂಟಿ ಎಂದೇ ಅರ್ಥ. ಕಾಂಗ್ರೆಸ್ ಮತ್ತು ಜೆಡಿಎಸ್‌ ಎರಡೂ ನಕಾರಾತ್ಮಕ ರಾಜಕಾರಣ ಮಾಡುವ ಪಕ್ಷಗಳಾಗಿದ್ದು, ಇವುಗಳು ರಾಷ್ಟ್ರ ಹಿತಕ್ಕೆ ಮಾರಕವಾಗಿವೆ ಎಂದು ಭಾಟಿಯಾ ಟೀಕಿಸಿದರು.


ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗೆಲ್ಲ ರಾಷ್ಟ್ರೀಯ ಹಿತಾಸಕ್ತಿ ಮತ್ತು ರಾಷ್ಟ್ರದ ಭದ್ರತೆಗೆ ಧಕ್ಕೆ ಬರುವಂತೆ ನಡೆದುಕೊಂಡಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ದೇಶದ್ರೋಹಿ ಸಂಘಟನೆಗಳಾದ ಪಿಎಫ್‌ಐ ಮತ್ತು ಎಸ್‌ಡಿಪಿಐ ಕುರಿತು ಮೃದು ನಿಲುವು ತಳೆದು, ದುಷ್ಕರ್ಮಿಗಳ ವಿರುದ್ಧದ 1,700 ಪ್ರಕರಣಗಳನ್ನು ರದ್ದುಪಡಿಸಿದ್ದರು. ಇದರಿಂದ ಪೊಲೀಸರ ನೈತಿಕ ಸ್ಥೈರ್ಯ ಕುಸಿಯುವಂತಾಯಿತು. ಆದರೆ ಪ್ರಧಾನಿ ಮೋದಿ ಅವರು ದಿಟ್ಟ ನಿರ್ಧಾರ ಕೈಗೊಂಡು ಪಿಎಫ್‌ಐಗೆ ನಿಷೇಧ ಹೇರಿದರು ಎಂದು ಭಾಟಿಯಾ ನೆನಪಿಸಿದರು.


ಎಲ್‌ಪಿಜಿ ಬೆಲೆ ಏರಿಕೆ ವಿಚಾರವಾಗಿ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಭಾಟಿಯಾ, ಇದು ಹಣದುಬ್ಬರದ ಜತೆ ತಳುಕು ಹಾಕಿಕೊಂಡಿರುವ ವಿಚಾರ. 2014ರಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರಕಾರ ಬಂದ ಬಳಿಕ ಕೈಗೊಂಡ ಹಲವಾರು ಆರ್ಥಿಕ ಬಿಗಿ ಕ್ರಮಗಳಿಂದ ಹಣದುಬ್ಬರ ನಿಯಂತ್ರಣಕ್ಕೆ ಬಂದು ಪ್ರಸ್ತುತ ಸರಾಸರಿ ಶೇ 4-5ರ ಆಸುಪಾಇಸನಲ್ಲಿದೆ. ಆದರೆ ಕಾಂಗ್ರೆಸ್‌ ಸರಕಾರವಿದ್ದಾಗ ಶೇ 30ರಷ್ಟು ಏರಿಕೆಯಾಗಿತ್ತು. ಅಲ್ಲದೆ ಜಿಡಿಪಿ ಬೆಳವಣಿಗೆ ಇರಲಿಲ್ಲ ಎಂದು ಅವರು ಹೇಳಿದರು.


ಅಭ್ಯರ್ಥಿಗಳ ಪಟ್ಟಿ ಶೀಘ್ರ ಬಿಡುಗಡೆ:

ಬಿಜೆಪಿ ಅತ್ಯಂತ ರಚನಾತ್ಮಕ ಮತ್ತು ಪ್ರಜಾಸತ್ತಾತ್ಮಕ ಪಕ್ಷವಾಗಿದ್ದು, ವ್ಯವಸ್ಥಿತ ರೀತಿಯಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತದೆ. ಇದಕ್ಕೆ ನಾನಾ ಹಂತದ ಪ್ರಕ್ರಿಯೆಗಳನ್ನು ನಡೆಸಲಾಗಿದ್ದು, ಶೀಘ್ರವೇ ಪಟ್ಟಿ ಬಿಡುಗಡೆಯಾಗಲಿದೆ ಎಂದು ಶ್ರೀ ಭಾಟಿಯಾ ತಿಳಿಸಿದರು.


ರಾಜ್ಯ ಬಿಜೆಪಿ ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ವಿಧಾನ ಪರಿಷತ್‌ ಸದಸ್ಯ ಪ್ರತಾಪ್ ಸಿಂಹ ನಾಯಕ್, ದ.ಕ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಎಂ, ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಬಿಜೆಪಿಯ ರಾಜ್ಯ ಮಾಧ್ಯಮ ಸಂಚಾಲಕ ಕರುಣಾಕರ ಖಾಸಲೆ ಮತ್ತು ದ.ಕ ಜಿಲ್ಲಾ ಬಿಜೆಪಿ ಮುಖ್ಯ ವಕ್ತಾರ ಶಂಕರ ಮಿಜಾರು ಅವರು ಪತ್ರಿಕಾಗೋಷ್ಠಿಯಲ್ಲಿ ವೇದಿಕೆಯಲ್ಲಿ ಉಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top