ಚಿಕ್ಕಮಗಳೂರು: ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತಗಳ ವಿರುದ್ದವಾಗಿ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ನಡೆದಿರುವ ಅಹಿತಕರ ಘಟನೆಗೆ ಕಾರಣರಾದವರ ವಿರುದ್ದ ಶಿಸ್ತು ಕ್ರಮ ಕೈಗೊಳ್ಳುವಂತೆ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಿಗೆ ಶಿಫಾರಸ್ಸು ಮಾಡುವುದಾಗಿ ಕೆಪಿಸಿಸಿ ವಕ್ತಾರ ಎಚ್.ಎಚ್. ದೇವರಾಜ್ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ನಡೆದಿರುವ ಘಟನೆಯಲ್ಲಿ ಹೊರಗೆ ಕಾಣದ ಕೈಗಳು ಕೆಲಸ ಮಾಡಿರುವ ಬಗ್ಗೆ ತಿಳಿದು ಬಂದಿದೆ ಈ ಬಗ್ಗೆ ಜಿಲ್ಲಾ ಪದಾಧಿಕಾರಿಗಳು ವರದಿಯನ್ನು ತಯಾರಿಸಿ ಸದ್ಯದಲ್ಲೇ ಕೆಪಿಸಿಸಿ ಹಾಗೂ ವರಿಷ್ಠರಿಗೆ ನೀಡುತ್ತೇವೆ ಎಂದರು.
ಇಂತಹ ಆಂತರಿಕ ಜಗಳ ಜಿಲ್ಲಾ ಕಾಂಗ್ರೆಸ್‍ನಲ್ಲಿ ಯಾವತ್ತೂ ನಡೆದಿರಲಿಲ್ಲ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರಕ್ಕೆ ಬರುವ ಸನಿಹ ಇರುವುದರಿಂದ ಈ ರೀತಿಯ ಘಟನೆಗಳು ನಡೆಯಬಾರದಿತ್ತು. ಕಾಂಗ್ರೆಸ್ ಪಕ್ಷ ಬಹಳ ಗಟ್ಟಿಯಾಗಿದೆ ವ್ಯಕ್ತಿಗಿಂತ ಪಕ್ಷ ಮುಖ್ಯ ಎಂದು ಹೇಳಿದರು.
ಇಡೀ ಜಿಲ್ಲೆಯಲ್ಲಿ ಟಿಕೆಟ್ ಹಂಚಿಕೆ ಬಗ್ಗೆ ಈಗಾಗಲೆ 5 ಬಾರಿ ಸರ್ವೆ ಆಗಿದೆ. ವೀಕ್ಷಕರು ಬಂದು ಸಭೆ ನಡೆಸಿದ್ದಾರೆ ಇಷ್ಟೆಲ್ಲಾ ಆದ ನಂತರವೇ ಪಕ್ಷ ಟಿಕೆಟ್ ನೀಡುವ ಕುರಿತು ವರದಿ ಆಧರಿಸಿ ತೀರ್ಮಾನಿಸಿದೆ. ಚಿಕ್ಕಮಗಳೂರು ಕ್ಷೇತ್ರದಲ್ಲಿಯೂ ಅದೇ ಆಗಿದೆ ಎಂದು ಸ್ಪಷ್ಟಪಡಿಸಿದರು.
ಈ ಸಂಬಂಧ ಕೆಪಿಸಿಸಿ ಅಧ್ಯಕ್ಷರು, ವಿರೋಧ ಪಕ್ಷದ ನಾಯಕರು ಮತ್ತು ಜಿಲ್ಲಾಧ್ಯಕ್ಷರ ಜೊತೆ ಮಾತುಕತೆ ನಡೆಸಿದ್ದು, ಈ ಬಗ್ಗೆ ಆಂತರಿಕ ಕಚ್ಚಾಟ ನಿಲ್ಲಿಸಿ ಇದು ಚುನಾವಣೆ ಸಂದರ್ಭದಲ್ಲಿ ಒಳ್ಳೆ ಬೆಳವಣಿಗೆ ಅಲ್ಲ ಪರಿವರ್ತನೆ ಮಾಡಿಕೊಳ್ಳಿ ಎಂದು ಹೇಳಿದ್ದಾರೆ ಎಂದು ತಿಳಿಸಿದರು.
ಕಾಂಗ್ರೆಸ್ ಕಛೇರಿಯಲ್ಲಿ ಈ ಘಟನೆ ನಡೆದಿರುವ ಸಂದರ್ಭದಲ್ಲಿ ಆರೋಪ ಮಾಡಿರುವುದು ಸರಿಯಾದುದ್ದಲ್ಲ ಇದು ಸೈದ್ಧಾಂತಿಕ ಭಿನ್ನಾಭಿಪ್ರಾಯನೂ ಅಲ್ಲ ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತದ ವಿರುದ್ದ ಹೋಗುತ್ತಿರುವುದನ್ನು ಹಿಮ್ಮೆಟ್ಟಿಸುವಲ್ಲಿ ನಾಯಕರು ಒಟ್ಟಾಗಿ ಹೋರಾಟ ಮಾಡಬೇಕಿದೆ ಎಂದು ಕರೆ ನೀಡಿದರು.
ಆಧಾರ್, ಪ್ಯಾನ್ ಲಿಂಕ್ ಮಾಡಬೇಕೆಂದು ಕೇಂದ್ರ ಸರ್ಕಾರ ಹೊರಡಿಸಿರುವ ಸೂಚನೆ ಬಡವರ ಜೀವನದ ಜೊತೆ ಚೆಲ್ಲಾಟ ಮಾಡುತ್ತಿದೆ ಕೂಡಲೇ ಜನವಿರೋದಿ ಈ ಆದೇಶವನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸಿದರು.
ಕಾಂಗ್ರೆಸ್ ನಾಯಕ ರಾಹುಲ್‍ಗಾಂಧಿಯವರ ಸಂಸತ್ ಸದಸ್ಯತ್ವ ಅನರ್ಹಗೊಳಿಸಿರುವುದು ಪ್ರಜಾಪ್ರಭುತ್ವ ವಿರೋಧಿಯಾಗಿದ್ದು, ಕೇಂದ್ರ ಸರ್ಕಾರ ಹಿಟ್ಲರ್ ಸಂಸ್ಕೃತಿ ಮಾದರಿ ಆಡಳಿತ ನಡೆಸುತ್ತಿದೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರದಲ್ಲಿ ನೆಹರು ವಾಲೀಕರ್, ಎಂ.ಪಿ ಕುಮಾರಸ್ವಾಮಿ, ಮಾಡಾಳು ವಿರೂಪಾಕ್ಷಪ್ಪ ಮುಂತಾದವರ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣಗಳು ನಡೆಯುತ್ತಿದ್ದರೂ ಇವರನ್ನು ಅನರ್ಹಗೊಳಿಸಿಲ್ಲ ಸಂವಿಧಾನದಡಿ ಇದ್ದರು ಬಿಜೆಪಿಗೊಂದು ಕಾನೂನು, ಕಾಂಗ್ರೆಸ್‍ಗೊಂದು ಕಾನೂನು ಎಂದು ಪ್ರಶ್ನಿಸಿದ ದೇವರಾಜ್ ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಅಜ್ಞಾನದ ಪರಮಾವಧಿಯಾಗಿ ಕರ್ತವ್ಯ ನಿರ್ವಹಿಸುತ್ತಿದೆ ಎಂದು ಟೀಕಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಹಿಂದುಳಿದ ವರ್ಗಗಳ ತಾಲ್ಲೂಕು ಅಧ್ಯಕ್ಷ ಜಯರಾಜ್ ಅರಸ್, ಮುಖಂಡರಾದ ನಯಾಜ್ ಅಹಮದ್, ಗುರುಮಲ್ಲಪ್ಪ, ಪ್ರಕಾಶ್ ರೈ, ಜಗದೀಶ್, ಸುರೇಶ್, ಮಲ್ಲಿಕಾರ್ಜುನ್ ಇದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ