ಚಿಕ್ಕಮಗಳೂರು: ಇಂದು ಬೆಳಗ್ಗೆ ಇಲ್ಲಿನ ಈದ್ಗಾ ಮೈದಾನದಲ್ಲಿ ಶುಭಾಶಯ ಕೋರಲು ಹೋದ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಡಿ ತಮ್ಮಯ್ಯ ಅವರ ವಿರುದ್ಧ ಅಪಪ್ರಚಾರ ಮಾಡುವ ಸಲುವಾಗಿ ಕೆಲವು ಕಿಡಿಗೇಡಿಗಳು ಪೂರ್ವ ಯೋಜಿತವಾಗಿ ಗೊಂದಲ ಸೃಷ್ಠಿಮಾಡಿದ್ದಾರೆ ಎಂದು ಕೆ.ಪಿ.ಸಿ.ಸಿ ವಕ್ತಾರ ಹೆಚ್.ಹೆಚ್ ದೇವರಾಜ್ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು ರಂಜಾನ್ ಹಬ್ಬದ ಅಂಗವಾಗಿ ನಡೆದ ಸಾಮೂಹಿಕ ಪ್ರಾರ್ಥನೆ ಸಂದರ್ಭದಲ್ಲಿ ಪರಸ್ಪರ ಶುಭಾಶಯ ಕೋರುವುದು ಹಿಂದಿನಿಂದ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ. ಅದೇ ರೀತಿ ಇಂದು ಸಾಮೂಹಿಕ ಪ್ರಾರ್ಥನೆ ನಡೆಯುತ್ತಿದ್ದ ಸ್ಥಳಕ್ಕೆ ಕಾಂಗ್ರೆಸ್ ಪಕ್ಷದ ಇತರೆ ಮುಖಂಡರುಗಳೊಂದಿಗೆ ಅಭ್ಯರ್ಥಿ ಹೆಚ್.ಡಿ ತಮ್ಮಯ್ಯ ತೆರಳಿದ್ದರು ಎಂದಿದ್ದಾರೆ.
ಹೆಚ್.ಡಿ ತಮ್ಮಯ್ಯ ಅವರು ಅಲ್ಲಿ ಯಾವುದೇ ರೀತಿಯ ಚುನಾವಣಾ ಪ್ರಚಾರ ಮಾಡಿಲ್ಲ ಆದರೆ ಕೆಲವು ಕಿಡಿಗೇಡಿ ವ್ಯಕ್ತಿಗಳು ಗಲಾಟೆ ಸೃಷ್ಠಿಸುವ ಸಲುವಾಗಿ ಸುಳ್ಳು ಆರೋಪ ಮಾಡುವ ಮೂಲಕ ಗೊಂದಲ ಉಂಟುಮಾಡಿದರು ಎಂದು ತಿಳಿಸಿದ್ದಾರೆ.
ಬಹುಪಾಲು ಮುಸ್ಲಿಂ ಸಮುದಾಯದ ಜನರು ಹೆಚ್.ಡಿ ತಮ್ಮಯ್ಯ ಅವರಿಗೆ ಸಹಕಾರ ನೀಡುತ್ತಿದ್ದಾರೆ. ಯಾರದೋ ಚಿತಾವಣೆಯಿಂದ ಕೆಲವೇ ವ್ಯಕ್ತಿಗಳು ಗಲಾಟೆ ಪ್ರಾರಂಭಿಸಿದ್ದು, ಕೂಡಲೇ ಮುಸಲ್ಮಾನ ಸಮುದಾಯದ ಅನೇಕ ಮುಖಂಡರು ಪರಿಸ್ಥಿತಿ ನಿಯಂತ್ರಿಸುವ ಜೊತೆಗೆ ಶುಭಾಶಯ ಕೋರಲು ಬಂದಿದ್ದ ಹೆಚ್.ಡಿ ತಮ್ಮಯ್ಯ ಮತ್ತು ಕಾಂಗ್ರೆಸ್‍ನ ಇತರ ಮುಖಂಡರುಗಳಿಗೆ ಅಭಿನಂದನೆ ಸಲ್ಲಿಸಿದರು ಎಂದು ದೇವರಾಜ್ ತಿಳಿಸಿದ್ದಾರೆ.
ಸೌಹಾರ್ದತೆ ಕೆಡಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಅಪಪ್ರಚಾರ ಹುನ್ನಾರವಾಗಿದ್ದು, ಇದರ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿದ್ದು, ಇಂತಹ ಕುತಂತ್ರವನ್ನು ಕಾಂಗ್ರೆಸ್ ಪಕ್ಷ ತೀವ್ರವಾಗಿ ಖಂಡಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ