ಆಜಾದ್ ಕಿ ಅಮೃತ ಮಹೋತ್ಸವ್- ಶಿಕ್ಷಕರಿಗಾಗಿ ಕಾರ್ಯಾಗಾರ

Upayuktha
0


ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಕೇಂದ್ರ 'ಡಯಟ್'ನಲ್ಲಿ ಇತ್ತೀಚೆಗೆ ‘ಆಜಾದಿ ಕಾ ಅಮೃತ್ ಮಹೋತ್ಸವ್’ ಅಂಗವಾಗಿ ಶಿಕ್ಷಕರಿಗಾಗಿ ಒಂದು ದಿನದ ಕಾರ್ಯಾಗಾರ ಜರಗಿತು.

ಈ ಸಂದರ್ಭ, ಉತ್ತರ ವಲಯದ ಶಿಕ್ಷಕರಿಂದ ರಾಷ್ಟ್ರ ಜಾಗೃತಿಯ ಯಕ್ಷಗಾನ ತಾಳಮದ್ದಳೆ ‘ಕ್ರಾಂತಿ ಕಹಳೆ’ ನಡೆಯಿತು. ಈ ಪ್ರಸಂಗದ ಪರಿಕಲ್ಪನೆ ಮತ್ತು ಕಥಾ ಸಂಯೋಜನೆ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಅವರದು. ಭಾರತ ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿ ಹೋರಾಟದ ಘಟನೆಗಳನ್ನು ಆಧರಿಸಿದ ಯಕ್ಷಗಾನದ ಹಾಡುಗಳ ರಚನೆ ಡಾ.ದಿನಕರ ಎಸ್.ಪಚ್ಚನಾಡಿಯವರದು.

ಸುಮಾರು 1 ಗಂಟೆ 10 ನಿಮಿಷದ ಅವಧಿಯ ‘ಕ್ರಾಂತಿ ಕಹಳೆ’ ಯಕ್ಷಗಾನ ತಾಳಮದ್ದಳೆಯ ಹಿಮ್ಮೇಳದಲ್ಲಿ ಹರೀಶ್ ಶೆಟ್ಟಿ ಸೂಡ ಅವರ ಭಾಗವತಿಕೆ, ಚೆಂಡೆ - ಮದ್ದಳೆಯಲ್ಲಿ ಸ್ಕಂದ ಕೊನ್ನಾರ್ ಮತ್ತು ಲಕ್ಷ್ಮೀನಾರಾಯಣ ಹೊಳ್ಳ ಭಾಗವಹಿಸಿದ್ದರು.

ಮುಮ್ಮೇಳದಲ್ಲಿ ಅರ್ಥಧಾರಿಗಳಾಗಿ ಉತ್ತರ ವಲಯದ ಶಿಕ್ಷಕರಾದ ನಾಗರಾಜ ಖಾರ್ವಿ (ಅಬ್ಬಕ್ಕ ರಾಣಿ), ಕೃಪಾ (ತಿಮ್ಮಣ್ಣ ನಾಯಕ ಮತ್ತು ದಿವಾನ್ ಪೂರ್ಣಯ್ಯ), ಪ್ರಮೀಳಾ (ಪೊರ್ಚುಗೀಸ್ ಕುಟಿನ್ನೊ), ಚಿತ್ರಶ್ರೀ ಕೆ.ಎಸ್. (ಝಾನ್ಸಿರಾಣಿ), ವಿನೋದಾ ಅಮೀನ್ (ನಾನಾಸಾಹೇಬ್), ಹರಿಪ್ರಸಾದ್ ಶೆಟ್ಟಿ  (ಲಾರ್ಡ್ ಕಾರ್ನವಾಲಿಸ್, ಹ್ಯೂರೋಜ ಮತ್ತು ಆಂಗ್ಲಾಧಿಕಾರಿ), ವಸಂತ ಪಾಲನ್ (ಟಿಪ್ಪು ಮತ್ತು ಲಾಲಾ ಲಜಪತರಾಯ್), ಗೀತಾ ಎಸ್. (ಬಾಲ ಗಂಗಾಧರ ತಿಲಕ್), ಪ್ರೇಮನಾಥ್ ಮರ್ಣೆ (ಭಗತ್ ಸಿಂಗ್), ವೀಣಾ (ಚಂದ್ರಶೇಖರ ಆಜಾದ್), ಹಾಗೂ ವಿದ್ಯಾವತಿಯಾಗಿ ತಂಡದ ನಿರ್ದೇಶಕಿ ಡಾ. ಮಂಜುಳಾ ಶೆಟ್ಟಿ  ಪಾತ್ರವಹಿಸಿದ್ದರು.

ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರರ ಬಗ್ಗೆ ಅಧ್ಯಯನ ಮಾಡಿ ಅವರ ಹೋರಾಟದ ಕಥೆಯನ್ನು ಹೊರತರುವುದೇ ಮುಖ್ಯ ಉದ್ದೇಶವಾಗಿದ್ದ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಡಿಡಿಪಿಐ ದಯಾನಂದ ನಾಯಕ್, ಯಕ್ಷಗಾನ ವಿದ್ವಾಂಸ ಭಾಸ್ಕರ ರೈ ಕುಕ್ಕುವಳ್ಳಿ ಮತ್ತು ಯುವ ಲೇಖಕ ಅನಿಂದಿತ್ ಗೌಡ ಉಪಸ್ಥಿತರಿದ್ಡರು.

ಸಿ.ಸಿ.ಆರ್.ಟಿ.ಯ ಈ ಡಿ.ಡಿ.ಆರ್. ಕಾರ್ಯಾಗಾರವನ್ನು ದೆಹಲಿಯಿಂದ ಆಗಮಿಸಿದ ಸಿ.ಸಿ.ಆರ್.ಟಿ.ಯ ಉಪ ನಿರ್ದೇಶಕ ರಾಹುಲ್ ಉದ್ಘಾಟಿಸಿದರು. ಕಾರ್ಯಾಗಾರದಲ್ಲಿ ಒಟ್ಟು 98 ಮಂದಿ ಶಿಕ್ಷಕರು ಮತ್ತು ವಿವಿಧ ಕ್ಷೇತ್ರದ ಗಣ್ಯರು ಪಾಲ್ಗೊಂಡಿದ್ದರು. ಡಯಟ್ ನ ಪ್ರಾಚಾರ್ಯೆ ರಾಜಲಕ್ಷ್ಮಿ ಸ್ವಾಗತಿಸಿ, ದೆಹಲಿಯ ವಿಮಲ್ ಧನ್ಯವಾದ ಸಮರ್ಪಿಸಿದರು. ಕಾರ್ಯಾಗಾರದ ಸಂಯೋಜಕಿ ಜಿಲ್ಲಾ ಸಂಪನ್ಮೂಲ ವ್ಯಕ್ತಿ ವಿಲ್ಮಾ ಕ್ರಾಸ್ತಾ ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top