ಹರಿದ್ವಾರ: ದೇಶ, ವಿದೇಶದಲ್ಲಿ ನೆಲೆಸಿರುವ ಸಾರಸ್ವತ ಸಮಾಜ ಬಲಿಷ್ಟವಾಗಿ ಬೆಳೆದು ಒಗ್ಗಟ್ಟಿನಿಂದ ಧರ್ಮ, ಸಮಾಜ, ದೇಶದ ಏಳಿಗೆಗಾಗಿ ಪರಸ್ಪರ ಕೈ ಜೋಡಿಸಬೇಕು ಎನ್ನುವ ಉದ್ದೇಶದಿಂದ ವಿಶ್ವ ಸಾರಸ್ವತ ಸಮ್ಮೇಳನವನ್ನು ಆಯೋಜಿಸಲಾಗುತ್ತಿದೆ ಎಂದು ಕಾಶೀಮಠಾಧೀಶರಾದ ಪರಮಪೂಜ್ಯ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಹೇಳಿದರು.
ಶ್ರೀಗಳು ಹರಿದ್ವಾರದ ಶ್ರೀವ್ಯಾಸಾಶ್ರಮದಲ್ಲಿ ಎರಡು ದಿನಗಳ ಕಾಲ ಜರುಗಿದ ವಿಶ್ವ ಸಾರಸ್ವತ ಸಮ್ಮೇಳನ 2023ರಲ್ಲಿ ಆಶೀರ್ವಚನ ನೀಡಿದರು.
ಸಾರಸ್ವತರನ್ನು ಒಟ್ಟುಗೂಡಿಸುವ ಚಿಂತನೆಯನ್ನು ಇಟ್ಟುಕೊಂಡು ಕಾಶೀಮಠದ ಹಿರಿಯ ಯತಿವರ್ಯರಾದ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರು 30 ವರ್ಷಗಳ ಹಿಂದೆ ಕಂಡ ಕನಸನ್ನು ನನಸಾಗಿಸುವ ದೃಷ್ಟಿಯಲ್ಲಿ ನಮ್ಮ ಪ್ರಯತ್ನ ಮುಂದುವರೆಯುತ್ತಿದೆ. ಪಾಂಡವರ ರಾಜಧಾನಿಯಾಗಿದ್ದ ಇಂದ್ರಪ್ರಸ್ಥ ಅಥವಾ ಈಗಿನ ದೆಹಲಿಯಲ್ಲಿ ಸಾರಸ್ವತ ಸ್ಮೃತಿ ಭವನವನ್ನು ನಿರ್ಮಿಸಿದ ಸುಧೀಂದ್ರ ತೀರ್ಥ ಸ್ವಾಮೀಜಿಯವರು ಬಹಳ ಪ್ರೀತಿಸುವ ಹರಿದ್ವಾರದಲ್ಲಿ ಅವರ ವೃಂದಾವನದ ಸನಿಹದಲ್ಲಿಯೇ ವಿಶ್ವ ಸಾರಸ್ವತ ಸಮ್ಮೇಳನ ನಡೆಯುತ್ತಿರುವುದು ಬಹಳ ಖುಷಿ ತಂದಿದೆ ಎಂದು ಶ್ರೀಗಳು ಹೇಳಿದರು.
ಸಾರಸ್ವತರು ಸಂಧ್ಯಾವಂದನೆ ಸಹಿತ ಧರ್ಮಾಚರಣೆಯನ್ನು ಚಾಚು ತಪ್ಪದೆ ಅನುಸರಿಸಬೇಕು. ನಮ್ಮ ಪೂರ್ವಜರು ಧರ್ಮ ಪರಿಪಾಲನೆ ಮಾಡಿದ ಕಾರಣ ಯಾವ ಪರಕೀಯ ದಾಳಿ ಆಗಿದ್ದರೂ ನಮ್ಮ ಅಸ್ಮಿತೆ ನಾಶವಾಗಲಿಲ್ಲ ಎಂದು ತಿಳಿಸಿದರು.
ಚಿತ್ರಾಪುರ ಮಠಾಧೀಶರಾದ ಶ್ರೀಮದ್ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ ಆರ್ಶೀವಚನದಲ್ಲಿ ಯಾವುದೇ ಫಲಾಪೇಕ್ಷೆ ಇಲ್ಲದೆ ಸಮಾಜದ ಏಳಿಗೆಗಾಗಿ ಜ್ಞಾನ, ಧನ, ಸಮಯ ವಿನಿಯೋಗಿಸುವ ಕಾರ್ಯ ನಡೆದಾಗ ಅದನ್ನು ಎಲ್ಲರೂ ಬೆಂಬಲಿಸಬೇಕು. ದೇಶದ ವಿವಿಧ ರಾಜ್ಯಗಳಿಂದ ಬಂದಿರುವ ಸಾರಸ್ವತರ ಭಾಷೆ, ಆಹಾರ, ಆಚಾರ, ವಿಚಾರದಲ್ಲಿ ವಿಭಿನ್ನತೆ ಇದ್ದರೂ ಸಂಘಟನೆಯಲ್ಲಿ ಸಮಾನ ಉದ್ದೇಶ ಇದ್ದಾಗ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು.
ವಿಶ್ವ ಸಾರಸ್ವತ್ ಫೆಡರೇಶನ್ ಖಜಾಂಚಿ ಸಿಎ ಜಗನ್ನಾಥ್ ಕಾಮತ್ ಮಾತನಾಡಿ ಕಾಶ್ಮೀರದಲ್ಲಿ ಕಲಿಯುತ್ತಿರುವ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಮಕ್ಕಳನ್ನು ಗುರುತಿಸಿ ಅವರ ಶಿಕ್ಷಣಕ್ಕೆ ನೆರವಾಗುವ ಉದ್ದೇಶದಿಂದ ಫೆಡರೇಶನ್ ವತಿಯಿಂದ ಯಾವುದೇ ಜಾತಿ, ಮತ ಬೇಧವಿಲ್ಲದೆ ಕಾಶ್ಮೀರದ ಮಕ್ಕಳಿಗೆ ಕಳೆದ ವರ್ಷ ವಿದ್ಯಾರ್ಥಿ ವೇತನಕ್ಕಾಗಿ 36.5 ಲಕ್ಷ ರೂ ನೀಡಲಾಗಿತ್ತು. ಈ ಬಾರಿಯೂ 191 ಅರ್ಜಿಗಳು ಬಂದಿದ್ದು, ಈ ಬಾರಿಯೂ ವಿದ್ಯಾರ್ಥಿ ವೇತನ ನೀಡಲಾಗುವುದು ಎಂದು ತಿಳಿಸಿದರು. ಸಾಂಕೇತಿಕವಾಗಿ 8 ಕಾಶ್ಮೀರಿ ಮಕ್ಕಳಿಗೆ ಸ್ವಾಮೀಜಿಗಳು ವಿದ್ಯಾರ್ಥಿ ವೇತನ ಹಸ್ತಾಂತರಿಸಿದರು.
ಸಂಪನ್ಮೂಲ ವ್ಯಕ್ತಿಗಳನ್ನು, ಪ್ರಾಯೋಜಕರನ್ನು, ದಾನಿಗಳನ್ನು ಗೌರವಿಸಲಾಯಿತು. ಫೆಡರೇಶನ್ ಅಧ್ಯಕ್ಷ ಪ್ರದೀಪ್ ಪೈ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಾರ್ಯದರ್ಶಿ ಎ ಮಾಧವ ಕಾಮತ್, ಟ್ರಸ್ಟಿ ಸಿಎ ನಂದಗೋಪಾಲ ಶೆಣೈ, ಸಂಸ್ಕಾರ ಭಾರತೀಯ ದಿನೇಶ್ ಕಾಮತ್, ಕರ್ನಲ್ ಅಶೋಕ್ ಕಿಣಿ, ಸಿಎ ಗೌತಮ್ ಪೈ, ಚೇತನ್ ಕಾಮತ್, ನರೇಶ್ ಪ್ರಭು, ದೀಪಕ್ ಪೈ ಹಾಗೂ ಗಣ್ಯರು ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ