ವೆಜಿಟೇಬಲ್ ಕಾರ್ವಿಂಗ್‍ ಕಲಾವಿದ ಎಸ್ ಭರತ್‍

Upayuktha
0

ಹಣ್ಣು ತರಕಾರಿಗಳಲ್ಲಿ ಮೂಡಿದ ಸೆಲೆಬ್ರಿಟಿಗಳು..! 



ಹೋಟೆಲ್‍ನಲ್ಲಿ ಕೆಲಸ ಮಾಡುವಾಗ ಅಚಾನಕ್ ಆಗಿ ಬೆಳೆದ ತರಕಾರಿ ಕೆತ್ತನೆ ಹವ್ಯಾಸ ನನ್ನನ್ನು ಅದರಲ್ಲೇ ಪರಿಣತರನ್ನಾಗಿ ಮಾಡಿತು ಎನ್ನುವ ಎಸ್. ಭರತ್. ಅರಕಲಗೊಡಿನಲ್ಲಿ ನಡೆದ 21ನೇ ಹಾಸನ ಜಿಲ್ಲಾ ಸಾಹಿತ್ಯ ಸಮ್ಮೇಳನದ ಪುಸ್ತಕ ವಸ್ತು ಪ್ರದರ್ಶನ ಮಳಿಗೆಯೊಂದರಲ್ಲಿ ನನ್ನನ್ನು ಆಕರ್ಷಿಸಿದರು. ನಾನು ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳಲು ಹೋದ ವೇಳೆ ಕಲಾವಿದರು ಅಲ್ಲಿ ಇರಲಿಲ್ಲ. ಅವರ ದೂರವಾಣಿ ನಂಬರ್ ಒಂದು ಕಲ್ಲಂಗಡಿ ಹಣ್ಣಿನಲ್ಲಿ ಕೊರೆದಿದ್ದು ಸಂಪರ್ಕಿಸಿದೆ. ಪೋನ್ ಮಾತುಕತೆಯಲ್ಲಿ ತಮ್ಮ ಸಾಧನೆಯ ಹಾದಿಯಲ್ಲಿ ಈ ಕಲೆ ತಮ್ಮ ಕೈ ಹಿಡಿದಿದ್ದನ್ನು ತಿಳಿಸಿದರು.


'ಬಾಲ್ಯದಿಂದಲೂ ಚಿತ್ರ ಬರೆಯುವುದೆಂದರೆ ನನಗೆ ವಿಶೇಷ ಆಸಕ್ತಿ. ಉಡುಪಿ ಜಿಲ್ಲೆ ಪಡುಬಿದ್ರಿ ಸಮೀಪದ ಅಡ್ವೆ ಸನ್ನೋಣಿ ಎಂಬ ಪುಟ್ಟ ಊರಿನಲ್ಲಿ ನಾನು ಹುಟ್ಟಿದ್ದು. ಚಿಕ್ಕವನಿದ್ದಾಗ ಮನೆಗೋಡೆ ಅಷ್ಟೇ ಏಕೆ ಸಿಕ್ಕಿದಲ್ಲೆಲ್ಲ ಚಿತ್ರ ಗೀಚುತ್ತಿದ್ದೆ. ಮನೆ ಸಮೀಪದ ದೇಗುಲದಲ್ಲಿ ಕಲಾವಿದರು ಥರ್ಮಾಕೋಲ್‍ನಲ್ಲಿ ವಿವಿಧ ವಿನ್ಯಾಸ ರೂಪಿಸುತ್ತಿದ್ದನ್ನು ನೋಡಿ ಅನುಕರಿಸಿದೆ. ಓದು ತಲೆಗೆ ಹತ್ತಲಿಲ್ಲ. ನವಗ್ರಹಕ್ಕೆ ಕೈ ಮುಗಿದೆ ಅರ್ಥಾತ್‍ ಒಂಬತ್ತನೆ ಕ್ಲಾಸ್‍ಗೆ ಓದು ಬಿಟ್ಟು ಬಾಂಬೆಗೆ ಸ್ಲೀಪರ್ ಕೋಚ್‍ನಲ್ಲಿ ಹೊರಟೆ. ಅಲ್ಲಿ ಕಲಾ ಶಾಲೆಗೆ ಸೇರಬೇಕೆಂಬ ತುಡಿತವಿತ್ತು. ಆದರೆ ದುಡಿಮೆ ಇರಲಿಲ್ಲ. ಮಲಾಡ್ ಎಂಬಲ್ಲಿ ಹೋಟಲ್ ಕೆಲಸಕ್ಕೆ ಸೇರಿದೆ. ಆರು ವರ್ಷ ದುಡಿದೆ. ಫೀಜ್‍ ಮೊತ್ತ 60 ಸಾವಿರ ಹೊಂದಿಸಲಾಗಲಿಲ್ಲ. ಬಾಂಬೆಯ ಬಿಸಿಲಿಗೆ ಬೆವರಿ ಸುಸ್ತಾಗಿ ಬೆಂಗಳೂರಿಗೆ ಬಂದೆ. ಮೊದಲು ಕೆಂಗೇರಿಯಲ್ಲಿ ಹೋಟೆಲ್ ಕೆಲಸಕ್ಕೆ ಸೇರಿ ನಂತರ ಜಯನಗರ ಉತ್ಸವ್ ಹೋಟೆಲ್ ಸೇರಿಕೊಂಡೆ. ಅಲ್ಲಿಯ ಅಡುಗೆ ಭಟ್ಟರಾದ ಶ್ರೀಧರ್ ಅವರು ನಾನು ಪೇಪರ್ ನಲ್ಲಿ ಚಿತ್ರಿಸುತ್ತಿದ್ದನ್ನು ಕಂಡು ಕುಂಬಳಕಾಯಿಯಲ್ಲಿ ಹೀಗೆ ಚಿತ್ರ ಬಿಡಿಸು ಎಂದರು. ಅಂತೆಯೇ ಪ್ರಯತ್ನಿಸಿ ಹಿಡಿತ ಸಾಧಿಸಿರುವೆ' ಎಂದು ವಿವರಿಸಿದರು ಭರತ್.


ವೆಜೆಟೇಬಲ್ ಕಾರ್ವಿಂಗ್‍ನಲ್ಲಿ ಹಾಗಲಕಾಯಿಯಲ್ಲಿ ಮೊಸಳೆ, ಕ್ಯಾರಟ್‍ನಲ್ಲಿ ಗಿಳಿ, ಬೀಟ್‍ರೂಟ್‍ನಲ್ಲಿ ಪಕ್ಷಿ, ಬದನೆಕಾಯಿಯಲ್ಲಿ ನವಿಲು. ಸಿಹಿ ಕುಂಬಳದಲ್ಲಿ ತಾಜ್ ಮಹಲ್‍ ಕಲ್ಲಂಗಡಿಯಲ್ಲಿ ಚಿತ್ರ ನಟರು- ಹೀಗೆ ಕೊರೆದು ಕೊರೆದು ಈ ಮಟ್ಟಿಗೆ ಬೆಳೆದು ನಿಂತಿದ್ದಾರೆ.


ಗಾಂಧಿ, ಅಂಬೇಡ್ಕರ್, ಡಾ.ಶಿವಕುಮಾರ್ ಸ್ವಾಮೀಜಿ.. ಮೊದಲಾಗಿ ಮಹನೀಯ ವ್ಯಕ್ತಿಗಳನ್ನು ವೆಜಿಟೇಬಲ್ ಕಾರ್ವಿಂಗ್‍ನಲ್ಲಿ ಅರಳಿಸಿದ್ದಾರೆ. ಡಾ.ರಾಜ್‍ಕುಮಾರ್, ಶಂಕರ್ ನಾಗ್, ಅಂಬರೀಷ್, ಅಮಿತಾಭ್.. ಹೀಗೆ ಸ್ಯಾಂಡಲ್‍ವುಡ್‍ನಿಂದ ಬಾಲಿವುಡ್‍ವರೆಗೆ ಸಿನಿಮಾ ತಾರೆಯರನ್ನು ತರಕಾರಿಯಲ್ಲಿ ರೂಪಿಸಿದ್ದಾರೆ. ಮದುವೆ ಸಭೆ ಸಮಾರಂಭ, ಕೃಷಿ ಮೇಳ, ಜಾತ್ರೆ ಉತ್ಸವಗಳಲ್ಲಿ ತರಕಾರಿ ಹಣ್ಣುಗಳಲ್ಲಿ ಚಿತ್ತಾರದ ಚಿತ್ರಿ ಬಿಡಿಸಿ ಪ್ರದರ್ಶಿಸಿದ್ದಾರೆ. ತರಕಾರಿ ಕೆಡದಿದ್ದರೆ ಒಂದು ವಾರ ಕಾಲ ಪ್ರದರ್ಶಿಸಬಹುದು. ಭರತ್ ಅವರು ಯಾವುದೇ ಪೂರ್ವತರಬೇತಿ ಇಲ್ಲದೇ ಸ್ವತ: ಆಸಕ್ತಿ ಪರಿಶ್ರಮದಿಂದ ಈ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಕೇಟರಿಂಗ್ ಕೆಲಸ ಮಾಡುತ್ತಿರುವಾಗ ಮೊದಲಿಗೆ ತರಕಾರಿಗಳನ್ನು ವಿಭಿನ್ನವಾಗಿ ಅಲಂಕರಿಸುತ್ತಾ ಬರ್ತಾ ಬರ್ತಾ ತರಕಾರಿ ಕೆತ್ತನೆಯೇ ಕಾಯಕವಾಗಿ ಕೈ ಹಿಡಿದಿದೆ. 18 ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಿದ್ದು ಕೇಟರಿಂಗ್‍ ಉದ್ಯಮಕ್ಕೆ ಕಾಲಿಟ್ಟಿರುವ ಭರತ್ ಅವರಲ್ಲಿ ಹಲವಾರು ಮಂದಿ ಮದುವೆ ಸಮಾರಂಭಗಳಿಗಾಗಿ ವಧು-ವರರ ಚಿತ್ರ ಬಿಡಿಸಿಕೊಂಡು ಹೋಗಿದ್ದಾರೆ.



ಮಕ್ಕಳಿಗೆ ಬೇಸಿಗೆ ಶಿಬಿರ ನಡೆಸಿ  ಆರಂಭದಲ್ಲಿ ಪೇಪರಿನಲ್ಲಿ ಹೂಗಳನ್ನು ಬಿಡಿಸುವ ನಂತರ ಚಾಕು ಹಿಡಿಯುವ ಕೌಶಲ್ಯ ತೋರಿಸಿ ವೆಜೆಟೇಬಲ್ ಕಾರ್ವಿಂಗ್‍ ಕಲಿಸಿದ್ದಾರೆ. ಅಕ್ರಿಲಿಕ್ ಪೇಂಟಿಂಗ್, ಕಸದಿಂದ ರಸ ಪರಿಕಲ್ಪನೆಯಲ್ಲಿ ಕ್ರಿಯಾಶೀಲರು. ಕಲ್ಲಂಗಡಿ ಹಣ್ಣಿನ ಮೇಲೆ ಐದು ಗಂಟೆಯಲ್ಲಿ 10 ಚಿತ್ರಗಳನ್ನು ಬಿಡಿಸುವ ಕೌಶಲ್ಯ ಸಾಧಿಸಿದ್ದಾರೆ.


-ಗೊರೂರು ಅನಂತರಾಜು, ಹಾಸನ. 

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top