|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬ್ಯಾಂಕಿಂಗ್ ವೈಫಲ್ಯಕ್ಕೆ ಸಾಕ್ಷಿಯಾದ ಅಮೇರಿಕಾ

ಬ್ಯಾಂಕಿಂಗ್ ವೈಫಲ್ಯಕ್ಕೆ ಸಾಕ್ಷಿಯಾದ ಅಮೇರಿಕಾ

ಅಮೇರಿಕಾದ ಬ್ಯಾಂಕುಗಳ ಪತನ: ಬ್ಯಾಂಕಿಂಗ್ ವಲಯಕ್ಕೆ ಪಾಠ


ಮೆರಿಕದ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ತೀವ್ರ ಬಿಕ್ಕಟ್ಟು ಎದುರಾಗಿದೆ. ಸಿಲಿಕಾನ್‌ ವ್ಯಾಲಿ ಬ್ಯಾಂಕ್‌(SVB) ಭಾರೀ ನಷ್ಟದೊಂದಿಗೆ ಮುಚ್ಚಿತು. ಇದರ ಬೆನ್ನಲ್ಲೇ ಇನ್ನೂ ಹಲವು ಬ್ಯಾಂಕ್‌ಗಳು ಮುಳುಗುವ ಹಂತ ತಲುಪಿವೆ.ಸಿಲಿಕಾನ್ ವ್ಯಾಲಿ ಬ್ಯಾಂಕ್‌ನ ಬೆರಗುಗೊಳಿಸುವ ಪತನವು ಶುಕ್ರವಾರ ಪ್ರಾರಂಭವಾಯಿತು. ಅದರ ಗ್ರಾಹಕರು ತಮ್ಮ ಖಾತೆಗಳಿಂದ ಏಕಕಾಲದಲ್ಲಿ ಹಿಂತೆಗೆದುಕೊಳ್ಳಲು ಧಾವಸಿಬ್ಯಾಂಕಿಂಗ್ ವ್ಯವಸ್ಥೆಯನ್ನು ಅಸ್ಥಿರಗೊಳಿಸುವ’ ’ರನ್ ಆನ್ ಬ್ಯಾಂಕ್’ಘಟನೆಗೆ ಸಾಕ್ಷಿಯಾಯಿತು.


ಕ್ಯಾಲಿಫೋರ್ನಿಯಾದಲ್ಲಿರುವ 'ಸಿಲಿಕಾನ್‌ ವ್ಯಾಲಿ' ಪ್ರಪಂಚದಲ್ಲೇ ತಂತ್ರಜ್ಞಾನಕ್ಕೆ ಪ್ರಖ್ಯಾತವಾಗಿದ್ದು, ಇಲ್ಲಿಅನೇಕ ಸ್ಟಾರ್ಟಪ್‌ಗಳಿವೆ. ಈ ಕ್ಯಾಲಿಫೋರ್ನಿಯಾದಲ್ಲಿಯೇ 1983ರಲ್ಲಿ ಸಿಲಿಕಾನ್‌ ವ್ಯಾಲಿ ಬ್ಯಾಂಕ್‌ಪ್ರಾರಂಭವಾಯಿತು. ಸ್ಟಾರ್ಟಪ್‌ಗಳಿಗೆ ಸಾಲ ನೀಡುವ ಉದ್ದೇಶದಿಂದ ಆರಂಭವಾದ ಈ ಬ್ಯಾಂಕ್‌ಅಮೆರಿಕದ ಅತ್ಯಂತ ದೊಡ್ಡ ಬ್ಯಾಂಕುಗಳ ಪಟ್ಟಿಯಲ್ಲಿ 16ನೇ ಸ್ಥಾನ ಪಡೆದಿತ್ತು. 


ಗಾಯದ ಮೇಲೆ ಬರೆ

ತಂತ್ರಜ್ಞಾನ ಜಗತ್ತಿನ ಹಲವು ಪ್ರಮುಖ ನವೋದ್ಯಮಗಳಿಗೆ ಸಾಲ ನೀಡುವ ಮೂಲಕ ಪ್ರಸಿದ್ಧಿಗೆ ಬಂದ ಅಮೇರಿಕನ್ ಸಿಲಿಕಾನ್ ವ್ಯಾಲಿ ಬ್ಯಾಂಕು ಪತನಗೊಂಡಿದೆ. 2008 ರ ಜಾಗತಿಕ ಆರ್ಥಿಕ ಹಿಂಜರಿತದ ಬಳಿಕ ನೆಲಕಚ್ಚಿದ ಅತೀ ದೊಡ್ಡ ಬ್ಯಾಂಕು ಇದಾಗಿದೆ. ಜಗತ್ತು ಆರ್ಥಿಕ ಹಿಂಜರಿತದ ಭೀತಿಯಲ್ಲಿರುವಾಗಲೇ ಈ ಆಘಾತಕಾರಿ ಬೆಳವಣಿಗ ’ಗಾಯದ ಮೇಲೆ ಬರೆ’ ಎಳೆದಂತಾಗಿದೆ. ಸಿಲಿಕಾನ್ ವ್ಯಾಲಿ ಬ್ಯಾಂಕಿಗ ಬೀಗ ಬೀಳುತ್ತಿದ್ದಂತೆ ಜಾಗತಿಕ ಷೇರು ಮಾರುಕಟ್ಟೆಯಲ್ಲಿ ಆತಂಕದ ಸ್ಥಿತಿ ಮೂಡಿಬಂದಿದೆ. ಬ್ಯಾಂಕಿನ ಪತನದ ಸುಳಿವು ಸಿಕ್ಕ ಗ್ರಾಹಕರು ತಮ್ಮ ಠೇವಣಿ ಹಣವನ್ನ ಪಡೆಯಲು ಮುಗಿಬಿದ್ದ ಪರಿಣಾಮವಾಗಿ ಬ್ಯಾಂಕುಗಳತ್ತ ಓಟದ (Run on Banks)  ಸ್ಥಿತಿ ನಿರ್ಮಾಣವಾಗಿ ಕ್ಯಾಲಿಫೋರ್ನಿಯಾದ ಹಣಕಾಸು ರಕ್ಷಣೆ ಮತ್ತು ನಾವಿನ್ಯತಾ ಇಲಾಖೆಯು ಬ್ಯಾಂಕಿಗೆ ಬೀಗ ಜಡಿಯಿತು. ಇದರಿಂದಾಗಿ ಅಮರಿಕಾದ 16ನೇ ಅತೀ ದೊಡ್ಡ ಬ್ಯಾಂಕು ಸ್ಥಗಿತಗೊಂಡಿದೆ.


ಪತನದ ಹಿನ್ನೆಲೆ

ಎಸ್ವಿಬಿ ದಿವಾಳಿ ಆಗಿರುವುದು ಹಣಕಾಸು ಜಗತ್ತಿನಲ್ಲಿ ಕಂಪನ ಮೂಡಿಸಿದೆ. ಈ ಪತನವನ್ನು 2008 ರ ಬಿಕ್ಕಟ್ಟಿನ ಜೊತೆ ಹಲಿಕೆ ಮಾಡಲಾಗುತ್ತಿದೆ. ಆದರೆ ಇವೆರೆಡರ ನಡುವೆ ಬಹಳ ವ್ಯತ್ಯಾಸ ಇದೆ. ಮಾಹಿತಿ ತಂತ್ರಜ್ಞಾನ ಮತ್ತು ಆರೋಗ್ಯ ಕ್ಷೇತ್ರಗಳ ನವೋದ್ಯಮಗಳಿಗೆ ಎಸ್ ವಿ ಬಿ ಆದ್ಯತೆ ನೀಡುತ್ತಿತ್ತು. ಬ್ಯಾಂಕಿಗೆ ಹಣದ ಹರಿವು ಹೆಚ್ಚೇ ಇತ್ತು. ಸಣ್ಣ ಮೊತ್ತದ ಠೇವಣಿಯನ್ನು ತನ್ನ ಬಳಿ ಇಟ್ಟುಕೊಂಡು ಹೂಡಿಕೆಯಾಗಿ ಬೃಹತ್ ಮೊತ್ತವನ್ನು ಸರಕಾರಿ ಬಾಂಡ್ ಖರೀದಿಗೆ ಬ್ಯಾಂಕು ಬಳಸಿಕೊಂಡಿತು. 


ಸರಕಾರಿ ಬಾಂಡ್‌ಗಳಲ್ಲಿ ಹೂಡಿಕೆ ಮಾಡಿದರೆ ಬ್ಯಾಂಕಿಗೆ ಬಡ್ಡಿ ದೊರೆಯುತ್ತದೆ. ಹಣವೂ ಸುರಕ್ಷಿತ. ಹೆಚ್ಚಿನ ಠೇವಣಿಯನ್ನು ಹೊಂದಿದ್ದ ಎಸ್‌ವಿಬಿ, ತನ್ನ ಬಾಂಡ್‌ ವಿನಿಯೋಗದಲ್ಲಿ ಶೇ.77ರಷ್ಟನ್ನು ದೀರ್ಘಕಾಲ ಎಂದರೆ ಹತ್ತು ವರ್ಷದ ಬಾಂಡುಗಳಲ್ಲಿ ಹೂಡಿಕೆ ಮಾಡಿತು. ಏಕೆಂದರೆ ಅಮೆರಿಕದಲ್ಲಿ ಬಡ್ಡಿದರ ಕೆಳ ಮುಖವಾಗಿ ಶೇ.1 ತಲುಪಿತ್ತು. ಇನ್ನೂ ಕಡಿಮೆಯಾಗುವ ಅವಕಾಶ ಹೆಚ್ಚು ಎಂದು ಮಾರುಕಟ್ಟೆ ಯೋಚಿಸಿತ್ತು. ಹೀಗಾಗಿ ಈ ಬ್ಯಾಂಕು ಶೇ.77ರಷ್ಟು ಹಣವನ್ನು ದೀರ್ಘಾವಧಿ ಬಾಂಡ್‌ನಲ್ಲಿ ಹೂಡಿಕೆ ಮಾಡಿತು. ಇದರಿಂದ ಸಾಕಷ್ಟು ಲಾಭವೂ ಬರುತ್ತಿತ್ತು.


ಕೋವಿಡ್‌ ಸಮಯದಲ್ಲಿ ಸರಕಾರದ ಯೋಜನೆಗಳಿಂದ ಮಾರುಕಟ್ಟೆಯಲ್ಲಿ ಹಣದ ಹರಿವು ಹೆಚ್ಚಾಯಿತು. ಅದಕ್ಕೆ ಸರಿಯಾಗಿ ಉತ್ಪಾದನೆ ಇರದ ಕಾರಣಕ್ಕೆ ಹಣ ತನ್ನ ಮೌಲ್ಯವನ್ನು ಕಳೆದುಕೊಂಡಿತು. ವಸ್ತುಗಳ ಬೆಲೆ ಏರಿದ್ದರಿಂದ ಹಣದುಬ್ಬರ ಹೆಚ್ಚಾಯಿತು. ಏರುಗತಿಯಲ್ಲಿದ್ದ ಹಣದುಬ್ಬರವನ್ನು ತಡೆಯಲು ಸಹಜವಾಗಿ ಅಮೇರಿಕಾದ ಫೆಡರಲ್ ರಸರ್ವ್ ಬಡ್ಡಿದರವನ್ನು ಒಂದು ವರ್ಷದಲ್ಲಿ ಎಂಟು ಬಾರಿ  ಹೆಚ್ಚಿಸಿತು.


ಈ ಬ್ಯಾಂಕು ತೊಡಗಿಸಿದ್ದ ಬಾಂಡಿಗೆ ಕೇವಲ ಶೇ.1ರಷ್ಟು ಬಡ್ಡಿ ಇತ್ತು. ಇದರ ಪರಿಣಾಮವಾಗಿ ಬಾಂಡ್ ಮೌಲ್ಯ ಕುಸಿಯಲಾರಂಭಿಸಿ ಬ್ಯಾಂಕು ಸಂಕಷ್ಟಕ್ಕೀಡಾಯಿತು.  ಮಾರುಕಟ್ಟೆಯಲ್ಲಿ ಹೊಸ ಬಾಂಡಿಗೆ ಶೇ.4ರಷ್ಟು ರಿಟರ್ನ್ಸ್‌ ದೊರೆಯುವಂತಾಗ, ಬ್ಯಾಂಕಿನ ಬಳಿ ಇದ್ದ ಬಾಂಡುಗಳ ಬೆಲೆ ಇಳಿಕೆಯಾಗಿ ನಷ್ಟವಾಯಿತು. ಎಸ್‌ವಿಬಿ ನಷ್ಟ ಸುಮಾರು 1,800 ದಶಲಕ್ಷ ಡಾಲರ್‌(1,44,800 ಕೋಟಿ ರೂ.) ಎಂದು ಅಂದಾಜು ಮಾಡಲಾಗಿದೆ.


ಕೋವಿಡ್ ಸಾಂಕ್ರಾಮಿಕದ ನಂತರ ಸ್ಟಾರ್ಟಪ್ ಪಂಡಿಂಗ್ ಕೂಡಾ ವಿಫಲಗೊಳ್ಳಲಾರಂಭಿಸಿತು. ಇದರಿಂದಾಗಿ ಬ್ಯಾಂಕಿನ ಹೆಚ್ಚಿನ ಗ್ರಾಹಕರು ಹಣವನ್ನು ಹಿಂಪಡೆದುಕೊಳ್ಳಲಾರಂಭಿಸದರು. ಇದರಿಂದಾಗಿ ಎಸ್ ವಿ ಬಿ ತನ್ನ ಹೂಡಿಕೆಗಳನ್ನು ನಷ್ಟದಲ್ಲಿ ಮಾರಾಟಮಾಡಬೇಕಾದ ಒತ್ತಡಕ್ಕೆ ಒಳಗಾಯಿತು. ಇದು ಕೂಡಾ ಬ್ಯಾಂಕ್ ನಷ್ಟಕ್ಕೆ ಕಾರಣವಾಯಿತು.ಕ್ರಿಪ್ಟೋ ಕರೆನ್ಸಿಗಳಲ್ಲಿನ ತೀವ್ರ ಕುಸಿತ ಮತ್ತು ಹೂಡಿಕೆದಾರರಲ್ಲಿ ಅಭದ್ರತೆಯ ಭಾವನೆಯನ್ನು ಕಾರಣದಿಂದಾಗಿ ಇನ್ನೊಂದು ದೊಡ್ಡ ಬ್ಯಾಂಕ್ ಸಿಗ್ನೇಚರ್ ಬ್ಯಾಂಕ್ ದಿವಾಳಿಯ ಅಂಚಿನಲ್ಲಿದೆ.


ಒಂದೇ ವಲಯಕ್ಕೆ ಆದ್ಯತೆ ಮುಳುವಾಯಿತೇ?

ಮಾಹಿತಿ ತಂತ್ರಜ್ಞಾನ ಹಾಗೂ ಆರೋಗ್ಯ ವಲಯದ ನವೋದ್ಯಮ್ಯಕ್ಕೇ ಆದ್ಯತೆ ನೀಡಿ ಎಸ್ ವಿ ಬ್ಯಾಂಕು ಕೆಲಸ ಮಾಡುತ್ತಿತ್ತು. ಕಳೆದ ಒಂದು ವರ್ಷದಂದ ಈ ಕ್ಷೇತ್ರದಲ್ಲಾದ ವ್ಯತ್ಯಯಗಳು ಹಾಗೂ ಕುಸಿತ ಬ್ಯಾಂಕನ್ನು ಬೀದಿಗೆ ಬರುವಂತೆ ಮಾಡಿದೆ. 2008 ರಲ್ಲಿ 63,000  ಕೋಟಿ ಡಾಲರ್ ಮೌಲ್ಯದ ಸ್ವತ್ತು ಹೊಂದಿದ್ದ ಅಮೇರಿಕಾದ ಅತೀ ದೊಡ್ಡ ಹೂಡಿಕೆ ಬ್ಯಾಂಕು ಎನಿಸಿದ್ದ ಲೆಹ್ಮನ್ ಬ್ರದರ್ಸ್ ರೀಯಲ್ ಎಸ್ಟೇಟ್ ಹೂಡಕೆಗೆ ನೀಡಿದ ಒತ್ತು ಮತ್ತು ಸಬ್ ಪ್ರೈಮ್ ಸಾಲದಿಂದಾಗಿ ದಿವಾಳಿ ಆಯಿತು. ಹೂಡಿಕೆಯ ಅಸಮರ್ಪಕ ನಿರ್ವಹಣೆ ಬ್ಯಾಂಕು ದಿವಾಳಿಗೆ ಕಾರಣವಾದುದನ್ನು ಕಂಡುಕೊಳ್ಳಬಹುದು.


ಭಾರತೀಯ ಷೇರುಮಾರುಕಟ್ಟೆ ಕುಸಿತ

ಅಮೇರಿಕ ಕೆಲ ಪ್ರಮುಖ ಬ್ಯಾಂಕುಗಳು ಬಾಗಿಲು ಹಾಕಿದ ಪರಿಣಾಮ ಭಾರತೀಯ ಮಾರುಕಟ್ಟೆಯಲ್ಲಂತೂ ವಿಪರೀತ ಏರುಪೇರುಗಳು ಆರಂಭವಾಗಿದೆ. ಸೋಮವಾರ ವಿತ್ತೀಯ, ಬಂಡವಾಳ ಸರಕುಗಳು, ಐಟಿ ಕಂಪೆನಿಗಳ ಷೇರುಗಳ ಮಾರಾಟ ಶುರುವಾಗಿದೆ.ಇದರಿಂದ ಸತತ ಎರಡು ದಿನ ಏರಿದ್ದ ಸನ್ಸಕ್ಸ್ 360.95 ಅಂಕ ಕುಸಿದ 57,528.95ಕ್ಕೆ ಮಟ್ಟಿದೆ. ಇದಕ್ಕೂ ಮುನ್ನ 900 ಅಂಕಗಳಷ್ಟು ಕುಸಿದಿತ್ತು. ನಿಫ್ಟಿ ಕೂಡಾ 111.65 ಕುಸಿತ ಕಂಡು 16,988.40ಕ್ಕೆ ತಲುಪಿದೆ.


ಅಮೇರಿಕಾದಲ್ಲಿ ಹೊಸದಾಗಿ ಆರಂಭವಾಗುವ ಪ್ರತಿ ಮೂರು ನವೋದ್ಯಮಗಳಲ್ಲಿ ಒಂದು ಭಾರತೀಯರು ಅಥವಾ ಭಾರತೀಯ ಅಮೇರಿಕನ್ನರಿಗೆ ಸೇರಿದ್ದಾಗಿರುತ್ತದೆ. ಬಹುತೇಕ ನವೋದ್ಯಮಗಳ ವಹಿವಾಟು ಮುಖ್ಯವಾಗಿ ಸಾಲ, ಹೂಡಿಕೆ ಹಾಗೂ ವೇತನ ಪಾವತಿ ಎಸ್ ವಿ ಬಿ ಮೂಲಕವೇ ನಡೆಯುತ್ತಿತ್ತು. ಈಗ ಎಸ್ ವಿ ಬಿ ಸಂಕಷ್ಟದಲ್ಲಿರುವುದು ಭಾರತ ಮೂಲದ ನವೋದ್ಯಮಿಗಳಿಗೆ ದೊಡ್ಡ ಆಘಾತವೇ ಸರಿ. 


ಮುಂದೇನು?

ಬೇರೆ ಬ್ಯಾಂಕುಗಳ ಜೊತೆ ಅಥವಾ ಜಾಗತಿಕ ಬ್ಯಾಂಕಿಂಗ್ ವ್ಯವಸ್ಥೆಯ ಜೊತೆ ಎಸ್ ವಿ ಬಿ ಅಷ್ಟಾಗಿ ಸಂಬಂಧ ಹೊಂದಿಲ್ಲದಿರವುದರಿಂದ ಬೇರೆ ಬ್ಯಾಂಕುಗಳ ಮೇಲೆ ಅತಿ ಹೆಚ್ಚಿನ ಪರಣಾಮ ಬೀರದು. ಆದರೂ ಹಣಾಕಾಸು ವ್ಯವಸ್ತೆಯಲ್ಲಿ ಕಂಪನವನ್ನಂತೂ ಸರಿಯಾಗಿಯೇ ಮೂಡಿಸಿದೆ. ಹಣಕಾಸು ಸಂಸ್ಥೆಗಳು ನಿರ್ವಹಣೆಯಲ್ಲಿ ಸಾಂಪ್ರದಾಯಕ ತತ್ವಗಳಿಗೆ ಒತ್ತು ನೀಡಬೇಕು ಹಾಗೂ ಶಾಸನಬದ್ಧ ನಿಯಂತ್ರಣ ಸಂಸ್ಥೆಗಳುನಿರಂತರವಾಗಿ ನಿಗಾ ಇರಿಸಬೇಕು ಎಂಬ ಸಂದೇಶವನ್ನೂ ನೀಡಿದೆ.


ಸಾಮಾನ್ಯವಾಗಿ ಆಡಳಿತಗಾರರು ಹಾಗೂ ಅರ್ಥಶಾಸ್ತ್ರಜ್ಞರು ಅಂಕೆ ಸಂಖ್ಯೆಗಳ ಮೇಲೆ ಗಮನ ಹರಿಸುತ್ತಾರೆ.  ಆದರೆಈ ರೀತಿಯ ಕ್ಷಣಗಳು ಸಾಮಾನ್ಯವಾಗಿ ಅಮೂರ್ತ ಮಾನವ ಭಾವನೆಗಳಿಗೆ ಕಾರಣವಾಗುತ್ತದೆ. ಸಣ್ಣ ಮತ್ತು ಮಧ್ಯಮ ಗಾತ್ರದ ಬ್ಯಾಂಕ್‌ಗಳಲ್ಲಿನ ಠೇವಣಿದಾರರು ಸುರಕ್ಷಿತತೆಯ ಹುಡುಕಾಟದಲ್ಲಿ ತಮ್ಮ ಹಣವನ್ನು ಹಿಂಪಡೆಯಲು ಕಾರಣವಾದ ವಿಭ್ರಾಂತಿಯನ್ನುತಡೆಯುವುದು ನೀತಿ ತಯಾರಕರ ಮುಖ್ಯ ಗುರಿಯಾಗಬೇಕಾಗಿದೆ.


-ಡಾ.ಎ.ಜಯ ಕುಮಾರ ಶೆಟ್ಟಿ                        

ಪ್ರಾಂಶುಪಾಲರು

ಶ್ರೀ.ಧ.ಮಂ. ಕಾಲೇಜು (ಸ್ವಾಯತ್ತ), ಉಜಿರೆ

                                                                                                                      ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


0 Comments

Post a Comment

Post a Comment (0)

Previous Post Next Post