ಯುಗಾದಿಗೆ ಸಿದ್ಧವಾಯ್ತು ನಟ ಸುಚೇಂದ್ರ ಪ್ರಸಾದ್ ನಿರ್ದೇಶನದ ಮಾವು-ಬೇವು

Upayuktha
0

14ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ಆಯ್ಕೆಯಾಯ್ತು ಸದಭಿರುಚಿಯ ಚಿತ್ರ



ಬೆಂಗಳೂರು: ಹೆಸರಾಂತ ನಟ, ಸದಭಿರುಚಿಯ ಚಿತ್ರಗಳ ನಿರ್ದೇಶಕ ಸುಚೇಂದ್ರ ಪ್ರಸಾದ್ ನಿರ್ದೇಶನದ ಮಾವು ಬೇವು ಸಿನೆಮಾ ಈ ಬಾರಿಯ 14ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ಆಯ್ಕೆಯಾಗಿದೆ. ಸುಚೇಂದ್ರ ಪ್ರಸಾದ್ ಎಂದ ಕೂಡಲೇ ನೆನಪಾಗುವುದು ಅವರ ಶುದ್ದ ಕನ್ನಡ, ಭಾಷಾ ಶುದ್ಧತೆ, ಅಮೋಘ ನಟನೆ ಮತ್ತು ಹಿತಕರವಾದ ಧ್ವನಿ.


ಸಂಸ್ಕೃತ ಭಾಷೆಯ 'ಏಕಚಕ್ರಮ್' ಸೇರಿದಂತೆ ಸಾಕಷ್ಟು ಸಿನೆಮಾಗಳ ಮೂಲಕ ಭಿನ್ನ ವಿಭಿನ್ನ ಪಾತ್ರಕ್ಕೆ ಬಣ್ಣ ಹಚ್ಚಿರುವ ಸುಚೇಂದ್ರ ಪ್ರಸಾದ್ ತಮ್ಮದೇ ಆದ ಛಾಪು ಮೂಡಿಸಿಕೊಂಡವರು.


ಇದೀಗ `ಮಾವು ಬೇವು' ಎಂಬ ಭಿನ್ನ ಕಥಾನಕದ, ಸದಭಿರುಚಿಯ ಚಿತ್ರವೊಂದನ್ನು ನಿರ್ದೇಶನ ಮಾಡಿದ್ದಾರೆ. ಬಿಡುಗಡೆಯ ಹೊಸ್ತಿಲಿಗೆ ಬಂದು ನಿಂತಿರುವ ಮಾವು ಬೇವು ಸಿನೆಮಾ ಬೆಂಗಳೂರು ಅಂತಾರಾಷ್ಟ್ರಿಯ ಸಿನಿಮೋತ್ಸವದಲ್ಲಿ ಮೊದಲ ಬಾರಿಗೆ ಪರದೆ ಮೇಲೆ ಮೂಡಿ ಬರಲಿದೆ. ಇದು ಸಿನೆಮಾ ತಂಡದ ಪಾಲಿಗೆ ಸಿಕ್ಕ ಮೊದಲ ಯಶಸ್ಸು.


ಈಗಿನ ಸಮಾಜದಲ್ಲಿ ನಡೆಯುವ ಘಟನೆಗಳಾಧಾರಿತ ಈ ಕಾಲಘಟ್ಟದ ತಲ್ಲಣ, ಸಾಂಸಾರಿಕ, ಸಾಮಾಜಿಕ ನೈಜತೆಗಳನ್ನೊಳಗೊಂಡ ಮಾವು ಬೇವು ಚಿತ್ರ ಸಿನಿಮೋತ್ಸವಕ್ಕೆ ಆಯ್ಕೆಯಾಗಿದೆ ಅಂದ್ರೆ ಪ್ರತಿಷ್ಠೆಯ ಸಂಗತಿಯೂ ಹೌದು. ಈ ಮೂಲಕ ಮೊದಲ ಹೆಜ್ಜೆಯಲ್ಲೇ ಸುಚೇಂದ್ರ ಪ್ರಸಾದ್ ರಿಗೆ ಗೆಲುವು ದಕ್ಕಿದಂತಾಗಿದೆ.


ಮಾವು ಬೇವು ಸಿನಿಮಾಕ್ಕೂ ಎಂಭತ್ತರ ದಶಕದ ಆಚೀಚಿಗಿನ ಸಾಂಸ್ಕೃತಿಕ ಜಗತ್ತಿನ ಸಮೃದ್ಧ ಇತಿಹಾಸಕ್ಕೂ ನೇರಾನೇರ ಸಂಬಂಧವಿದೆ ಎನ್ನಬಹುದು. ಯಾಕೆಂದರೆ, ಆ ಕಾಲದಲ್ಲಿ ಸಂಗೀತ, ಸಾಹಿತ್ಯ ಜಗತ್ತಿನ ಸಾಮ್ರಾಟರಂತಿದ್ದ ಸಾಹಿತಿ ದೊಡ್ಡರಂಗೇಗೌಡ, ಸಂಗೀತ ನಿರ್ದೇಶಕ ಸಿ. ಅಶ್ವತ್ಥ್, ಎಲ್. ವೈದ್ಯನಾಥ್ ಮತ್ತು ಗಾಯಕ ಎಸ್.ಪಿ ಬಾಲಸುಬ್ರಹ್ಮಣ್ಯಂ ಸಹಯೋಗದಲ್ಲಿ ಹತ್ತು ಹಾಡುಗಳ `ಮಾವು ಬೇವು' ಎಂಬ ಹಾಡುಗಳ ಆಲ್ಬಮ್ ಒಂದು ಜನಪ್ರಿಯಗೊಂಡಿತ್ತು. ಸರ್ವ ಕಾಲಕ್ಕೂ ಸಲ್ಲುವ ಆ ಹಾಡುಗಳ ಅಂತಃಸತ್ವಕ್ಕೆ ಸರಿ ಹೊಂದುವಂಥ ಕಥೆಯೊಂದನ್ನು ಸಿದ್ಧಪಡಿಸಿಕೊಂಡಿದ್ದ ಸುಚೇಂದ್ರ ಪ್ರಸಾದ್, ಅದಕ್ಕೆ ಪರಿಣಾಮಕಾರಿ ದೃಶ್ಯ ರೂಪ ನೀಡಿದ್ದಾರೆ.


ಶ್ರೀ ಸಾಯಿ ಗಗನ ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ರಾಜಶೇಖರ ಅವರ ನಿರ್ಮಾಣದಲ್ಲಿ ಈ ಚಿತ್ರ ಮೂಡಿಬಂದಿದ್ದು, ಅನಿವಾಸಿ ಭಾರತೀಯರಾದ ದೀಪಕ್ ಪರಮಶಿವನ್ ಸಣ್ಣ ಪಾತ್ರಕ್ಕೆ ಬಣ್ಣ ಹಚ್ಚುವುದರೊಂದಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಮನು ಯಾಪ್ಲಾರ್ ಮತ್ತು ನಾಗರಾಜ ಅದ್ವಾನಿ ಛಾಯಾಗ್ರಹಣ ಈ ಚಿತ್ರಕ್ಕಿದೆ. ನೀನಾಸಂ ಸಂದೀಪ ಮತ್ತು ಡ್ಯಾನಿ ಕುಟ್ಟಪ್ಪ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಗಾಯಕಿ ಚೈತ್ರಾ, ಸುಪ್ರಿಯಾ ಎಸ್ ರಾವ್, ರಂಜಿತಾ, ಸಿತಾರಾ, ಚಕ್ರವರ್ತಿ ದಾವಣಗೆರೆ, ರಂಜನ್ ಮುಂತಾದವರ ತಾರಾಗಣವಿದೆ. ಈಗ ಬಿಡುಗಡೆಗೆ ತಯಾರಾಗಿ ನಿಂತಿದ್ದ ಮಾವು ಬೇವು ಸಿನಿ ತಂಡಕ್ಕೆ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆ ಆಗಿರುವುದಕ್ಕೆ ತನ್ನ ಓದುಗರ ಪರವಾಗಿ ಉಪಯುಕ್ತ ನ್ಯೂಸ್ ಡಿಜಿಟಲ್ ಮಾಧ್ಯಮದ ಶುಭಾಶಯಗಳು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top