ಪ್ರತಿಯೊಬ್ಬರಲ್ಲಿಯೂ ನ್ಯೂನತೆಗಳಿವೆ, ಆದರೆ ಬೇರೆಯವರ ನ್ಯೂನತೆಗಳನ್ನು ಹುಡುಕುವಲ್ಲಿ ಜನರು ತಮ್ಮ ಸಮಯವನ್ನು ವ್ಯಯಿಸುತ್ತಾರೆ. ಅವನು ಕಪ್ಪಾಗಿದ್ದಾನೆ, ದಪ್ಪಗಿದ್ದಾನೆ, ತೆಳ್ಳಗಿದ್ದಾನೆ, ಕುಳ್ಳಗಿದ್ದಾನೆ ಎನ್ನುವ ಜನರು ತಮ್ಮ ನ್ಯೂನತೆಗಳನ್ನು ಮರೆತು ಬೇರೆಯವರ ಕುರಿತಾಗಿ ಸಂಶೋಧನೆ, ಚರ್ಚೆ, ಟೀಕೆ, ಪರಿಹಾರಗಳನ್ನು ಕೊಡುವಲ್ಲಿ ಪರಿಣಿತರು. ಆದರೆ ಸಾಧನೆಗೆ ಯಾವ ನ್ಯೂನತೆಗಳು ಅಡ್ಡಿಯಲ್ಲ. ನ್ಯೂನತೆಗಳನ್ನು ಹುಡುಕುವುದಿರಲಿ, ಹೀಯಾಳಿಕೆಯ ವಿಷಯಕ್ಕೆ ಬಂದರೆ, ಜನರು ಇನ್ನೊಬ್ಬರನ್ನು ಹೀಯಾಳಿಸುವುದು ತಪ್ಪು. ಆದರೆ ಈ ಹೀಯಾಳಿಕೆಗೂ ಕೂಡ ಒಬ್ಬ ವ್ಯಕ್ತಿಯನ್ನು ಬೆಳೆಸುವ ಸಾಮರ್ಥ್ಯವಿದೆ. ಎರಡು ರೀತಿಯಲ್ಲಿ ನಾವು ಬೇರೆಯವರಾಡುವ ಹೀಯಾಳಿಕೆಗಳನ್ನು ಸ್ವೀಕರಿಸುತ್ತೇವೆ. ಬೇರೆಯವರ ಟೀಕೆಗೆ ಕುಗ್ಗಿಹೋಗುವುದು ಒಂದಾದರೆ, ಸವಾಲಾಗಿ ಸ್ವೀಕರಿಸುವುದು ಇನ್ನೊಂದು.
ಅತಿಯಾಗಿ ಜನರ ಆಯ್ಕೆ ಅರ್ಥವಿಲ್ಲದ ಮಾತಿಗೆ ಕುಗ್ಗಿ ಹೋಗುವುದು. ಆತ್ಮವಿಶ್ವಾಸಕ್ಕೆ ಹಾನಿ ಮಾಡುವ ನಕಾರಾತ್ಮಕ ಯೋಚನೆಗಳನ್ನು ಹಿಂಬಾಲಿಸುವುದು. ಹೀಯಾಳಿಕೆ ಮನುಜನ ಸಹಜ ಗುಣ. ನಾವು ಹೇಗೆಯೇ ಇದ್ದರೂ ಅವರಿಗೆ ಸರಿಹೊಂದುವುದಿಲ್ಲ ಮತ್ತು ಅವರೆಂದೂ ಸರಿಯಾಗುವುದಿಲ್ಲ.
ಅದಕ್ಕಿರುವ ಒಂದು ಮಾರ್ಗ, ಹೀಯಾಳಿಕೆಯನ್ನು ಸವಾಲಾಗಿ ಸ್ವೀಕರಿಸುವುದು. ಮನುಷ್ಯ ಹಣವನ್ನು ಸಂಗ್ರಹಿಸಿ ಇಡುವುದು ತನ್ನ ಭವಿಷ್ಯದ ಒಳಿತಿಗೆ. ಹಾಗೆಯೇ ನಮ್ಮ ಭವಿಷ್ಯದ ಒಳಿತಿಗೆ ಸವಾಲಾಗಿ ಹೀಯಾಳಿಕೆಗಳ ಸಂಗ್ರಹ ಕೂಡ ಅಗತ್ಯ. ಆದರೆ ಅದೆಂದಿಗೂ ನಕಲಿ ಹಣವಾಗಿರಬಾರದು ಅಂದರೆ 'ಅವನು ಹೇಳಿದಂತೆ ನನ್ನಿಂದ ಸಾಧಿಸಲು ಸಾಧ್ಯವಿಲ್ಲ' ಎಂಬ ನಕಾರಾತ್ಮಕ ಯೋಚನೆ ಆಗಿರಬಾರದು. ಒಂದು ಹೀಯಾಳಿಕೆಯನ್ನು ಎಂದು ನಾವು 'ಅವನು ಹೇಳಿರುವುದೇನು? ನನ್ನಿಂದ ಸಾಧಿಸಲು ಸಾಧ್ಯ' ಎಂಬ ಸಕರಾತ್ಮಕ ಯೋಚನೆಯನ್ನು ಯಾವಾಗ ಸ್ವೀಕರಿಸುತ್ತೇವೆಯೋ ಅಂದೇ ಅದು ಸವಾಲಾಗಿ ಬದಲಾಗುತ್ತದೆ.
ಹೀಯಾಳಿಕೆಯನ್ನು ಸವಾಲಾಗಿ ಸ್ವೀಕರಿಸಿದರೆ ನಮಗೆ ಒಳಿತಾಗಬಹುದೇ ಹೊರತು ಕೆಡುಕಾಗಲಾರದು. ಯಾರೂ ಹೀಯಾಳಿಸದೆ ಹೋದರೆ ಸವಾಲು, ಸಾಧನೆ ಎರಡರಲ್ಲಿಯೂ ನಾವು ಆಲಸಿಗಳಾಗಿ ಬದುಕಬೇಕಿರುತಿತ್ತು. ಮೌನವು ಕೊನೆಗೊಂದು ದಿನ ಹೀಯಾಳಿಸಿದವರಿಗೆ ಉತ್ತರ ನೀಡಲು ನಿರತವಾಗಿದ್ದರೆ ಸಾಕು, ಈಗ ಮಾತಾಡುವ, ಕುಗ್ಗುವ ಅವಶ್ಯಕತೆ ಇರುವುದಿಲ್ಲ. ಪ್ರತಿಯೊಬ್ಬರಿಗೂ ಜೀವನದಲ್ಲಿ ಒಬ್ಬ ಶತ್ರು, ಒಬ್ಬ ಮಿತ್ರ ಇದ್ದೇ ಇರುತ್ತಾನೆ.
ಶತ್ರು ಇರುವಾಗ ಸೋಲಬಾರದೆಂಬ ಭಯ ಇರುತ್ತದೆ, ಆಗ ಸೋಲುವುದು ನಮ್ಮಿಂದ ತಪ್ಪಿ ಹೋಗುತ್ತದೆ. ಹಾಗೆಯೇ ಎಲ್ಲಾ ಹೀಯಾಳಿಕೆಯನ್ನು ಸಂಗ್ರಹಿಸಿ, ಅದನ್ನು ಸವಾಲಾಗಿ ಸ್ವೀಕರಿಸಿ, ಆಗ ಗೆಲುವು ಸಾಧ್ಯ.
- ಅಶ್ವಿನಿ. ಎಚ್ ನಂದಳಿಕೆ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ


