ಇಲ್ಲಿ ರಾಮ ನವಮಿಯದ್ದೇ ವಿಶೇಷ!!!
ಇದೊಂದು ದೈವ ಸಂಕಲ್ಪವೇ ಎನ್ನಬೇಕು. ಇಲ್ಲವಾದರೆ ಎಲ್ಲಿಯ ಅಯೋಧ್ಯೆ? ಎಲ್ಲಿಯ ಈದು? ಅಷ್ಟಕ್ಕೂ ಅಯೋಧ್ಯೆಯಲ್ಲಿ ನಿಮರ್ಾಣವಾಗುತ್ತಿರುವ ಶ್ರೀ ರಾಮ ಮಂದಿರಕ್ಕೆ ಮೂಡುಬಿದಿರೆ -ಕಾರ್ಕಳ ತಾಲೂಕು ಗಡಿ ಭಾಗದ ಈದುವಿನ ತುಂಗ ಪೂಜಾರಿಯವರ ಜಾಗದ ಕೃಷ್ಣ ಶಿಲೆಯೊಂದು ಆಯ್ಕೆಯಾಗಿ ಹೊರಟು ನಿಂತದ್ದು ನೋಡಿದರೆ ದೈವ ಸಂಕಲ್ಪಕ್ಕೆ ಏನಾದರೂ ವಿಶೇಷ ಕಾರಣಗಳಿರಬಹುದೇ ಎಂದು ಅವಲೋಕಿಸಿದಾಗ ಈದುವಿನಲ್ಲಿ ಶ್ರೀರಾಮ 'ನವಮಿ'ಯದ್ದೇ ವಿಶೇಷ ಎನ್ನುವುದು ಗಮನ ಸೆಳೆಯುತ್ತದೆ!
ಹೌದು. ಈದು ಎನ್ನುವುದು ಪಶ್ಚಿಮ ಘಟ್ಟದ ತಪ್ಪಲಿನ ಅಪರೂಪದ ಸಾವಿರ ಮನೆಗಳ ಗ್ರಾಮ. ಇಲ್ಲಿ ಗ್ರಾಮಕ್ಕೇ ಪ್ರಧಾನ ಎನ್ನುವಂತಿರುವ ಸುಮಾರು ಏಳು ಶತಮಾನಗಳಿಗೂ ಮಿಕ್ಕಿದ ಇತಿಹಾಸವಿರುವ ಶ್ರೀ ಮೂಜಿಲ್ನಾಯ ದೈವ ಸನ್ನಿಧಿ. ದೈವಸ್ಥಾನವೇ ಪ್ರಧಾನ ಧಾರ್ಮಿಕ ತಾಣ. ಇಲ್ಲಿನ ವರ್ಷಾವಧಿ ಜಾತ್ರೆ ಅದು ಊರಿಗೇ ದೊಡ್ಡ ಹಬ್ಬ. ಅಂದ ಹಾಗೆ ಹೊಸವರ್ಷ ಯುಗಾದಿಗೆ ವಿಧಿ ವಿಧಾನಗಳು ಆರಂಭಗೊಂಡು ಶ್ರೀರಾಮ ನವಮಿಯಂದೇ ಇಲ್ಲಿ ಮಹೋತ್ಸವ! ಹಾಗಾಗಿ ಶ್ರೀರಾಮ ನವಮಿ ಊರಿನವರೆಲ್ಲ ಶ್ರದ್ಧಾ ಭಕ್ತಿಯಿಂದ ದೈವಕ್ಕೆ ನಮಿಸುವ ಸಂಭ್ರಮ. ದೈವಕ್ಕೆ ಸಲ್ಲಿಸುವ ವಿಶೇಷ ಪಂಜಕಜ್ಜಾಯ ಪೂಜೆಯೇ ಭಜಕರ ಪಾಲಿನ ಮಹಾಪ್ರಸಾದ.
ಇದೀಗ ಈದು ದೈವಸ್ಥಾನದ ವ್ಯಾಪ್ತಿಯ ಈಶಾನ್ಯ ದಿಕ್ಕಿನಲ್ಲಿ ತುಂಗ ಪೂಜಾರಿಯವರ ನಿವೇಶನದಲ್ಲಿ ಶ್ರೀರಾಮನಾಗುವ ಶಿಲೆ ದೊರೆತಿದೆ ಎಂದರೆ ಇದು ದೈವ ಪ್ರೇರಣೆಯೇ ಎನ್ನುತ್ತಾರೆ ಸ್ಥಳೀಯ ದೈವಸ್ಥಾನದ ಆಡಳಿತ ಮೊಕ್ತೇಸರ ಅಶೋಕ್ ಕುಮಾರ್ ಜೈನ್. ಅಷ್ಟಕ್ಕೂ ರಾಮನಿಗೂ ನವಮಿಗೂ ವಿಶೇಷ ನಂಟು. ಈದು ದೈವಸ್ಥಾನದಲ್ಲೂ ನವಮಿ ವಿಶೇಷತೆಗಳು ಬಹಳಷ್ಟಿವೆ ಎನ್ನುವುದೂ ಗಮನಾರ್ಹ.
ತುಂಗ ಪೂಜಾರಿ ಧನ್ಯತಾ ಭಾವ:
ಅಯೋಧ್ಯೆಯ ಶ್ರೀ ರಾಮ ಮಂದಿರಕ್ಕೆ ಶ್ರೀರಾಮನ ವಿಗ್ರಹಕ್ಕೆ ತನ್ನ ನಿವೇಶನದ ಶ್ರೀ ಕೃಷ್ಣ ಶಿಲೆ ಆಯ್ಕೆಯಾಗಲಿದೆ ಎನ್ನುವ ಕಲ್ಪನೆಯೂ ಇರದ ಈದು ತುಂಗ ಪೂಜಾರಿ ಈ ಬೆಳವಣಿಗೆಯಿಂದ ಸಂಭ್ರಮಿಸಿದ್ದಾರೆ. ಹಲವಾರು ವರ್ಷಗಳಿಂದ ತಮ್ಮ ಮನಸ್ಸಿನಾಸೆಯಂತೆ ಶ್ರೀ ಸತ್ಯನಾರಾಯಣ ಪೂಜೆಯನ್ನು ನೆರವೇರಿಸುತ್ತಾ ಬಂದಿರುವ ತುಂಗ ಪೂಜಾರಿ ತನ್ನ ಪಾಲಿಗೆ ಒದಗಿ ಬಂದ ಭಾಗ್ಯ ಎಂದೇ ಭಾವಿಸಿದ್ದಾರೆ.
ಎರಡು ದಶಕಗಳ ಹಿಂದೆ ಉಡುಪಿ ಜಿಲ್ಲಾ ವ್ಯಾಪ್ತಿಯ ಈದು ಎರಡು ಬಲಿ ಪಡೆದಮೊದಲ ನಕ್ಸಲ್ ಎನ್ಕೌಂಟರ್ನಿಂದ ಸುದ್ದಿಯಾಗಿತ್ತು. ಆದರೆ ಈಗ ಶ್ರೀರಾಮನಾಗುವ ಶಿಲೆಯಿಂದ ರಾಷ್ಟ್ರಮಟ್ಟಕ್ಕೆ ತೆರೆದುಕೊಳ್ಳುವಂತಾಗಿರುವುದೂ ಗಮನಾರ್ಹವೇ.
ಈದುವಿನ 'ನವಮಿ' ವಿಶೇಷತೆಗಳು!!
ರಾಮನಾಗುವ ಶಿಲೆಯಿಂದ ಗಮನ ಸೆಳೆದ ಈದುವಿನಲ್ಲಿ ಶ್ರೀರಾಮ 'ನವಮಿ'ಯಂದೇ ಊರ ದೈವಸ್ಥಾನದ ಮಹೋತ್ಸವ. ಅದೂ 9 ದಿನಗಳ (ನವಮಿ) ಉತ್ಸವ. ಈ ದೈವಸ್ಥಾನದಲ್ಲಿನ ಏಳು ದೈವಗಳು ಬ್ರಹ್ಮ, ನಾಗಸನ್ನಿಧಿ ಸೇರಿ ಇಲ್ಲಿ ಆರಾಧ್ಯ ಶಕ್ತಿಗಳೂ 9!
ಮುಜರಾಯಿ ಸುಪರ್ದಿಗೆ ಬರುವ ಈ ದೈವಸ್ಥಾನದ ಆಡಳಿತ ಮಂಡಳಿಯಲ್ಲೂ 9 ಮಂದಿಯಿದ್ದಾರೆ. ಹೀಗೆ ಶ್ರೀ ರಾಮನವಮಿಯ ನಂಟಿನೊಂದಿಗೆ ಬೆಸೆದಿರುವ ಈದುವಿನಿಂದ ಆಯ್ಕೆಯಾದ ಶಿಲೆ ಹೊರಟು ನಿಂತದ್ದೂ ಕಳೆದ ಮಾ17ರ ಫಾಲ್ಗುಣ ಬಹುಳ 'ನವಮಿ'ಯಂದು! ಮೂವರು ಪುತ್ರಿಯರು, ಅಳಿಯಂದಿರು, ಮೂವರು ಮೊಮ್ಮಕ್ಕಳು ಹೀಗೆ 9 ಮಂದಿ ಸಂಬಂಧಿಗಳ ಜತೆ ಈ ಸಂಭ್ರಮದಲ್ಲಿ ಧನ್ಯತೆಯನ್ನುಂಡವರು ತುಂಗ- ರತ್ನ ದಂಪತಿ. ಅಷ್ಟಕ್ಕೂ ಅಯೋಧ್ಯೆಯಲ್ಲಿನ್ನು ಶ್ರೀ ರಾಮ ಮಂದಿರ ಲೋಕಾರ್ಪಣೆಗೂ ಬರೇ ಒಂಭತ್ತು ತಿಂಗಳಷ್ಟೇ ಬಾಕಿ ಎನ್ನುವುದೂ ವಿಶೇಷ.
ಚಿತ್ರ: ಈದುವಿನಲ್ಲಿ ಸಿಕ್ಕ ಶಿಲೆ/ ಹೊರಟು ನಿಂತ ಸಂದರ್ಭ, ಈದು ಮೂಜಿಲ್ನಾಯ ದೈವ ಮತ್ತು ದೈವಸ್ಥಾನ /
- ಗಣೇಶ ಕಾಮತ್ ಮೂಡುಬಿದಿರೆ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ