ನಮ್ಮ ಬಾಲ್ಯ ಮೊಬೈಲ್ ರಹಿತವಾಗಿತ್ತು; ಅಲ್ಲಿ ಜೀವಂತಿಕೆಯಿತ್ತು ಎಂಬ ಬಗ್ಗೆ ಹೆಮ್ಮೆಯಿದೆ. ಸುತ್ತಲಿನ ಗಿಡಮರಗಳು, ಪ್ರಾಣಿ- ಪಕ್ಷಿಗಳ ಕುರಿತು ಒಂದು ಕುತೂಹಲದ ಕಣ್ಣು ಯಾವಾಗಲೂ ಜಾಗೃತವಾಗಿರುತ್ತಿತ್ತು. ಹಕ್ಕಿಗಳ ಹಾರಾಟ ಜೋರಾಗಿದೆಯೆಂದರೆ ಅವು ಗೂಡು ಕಟ್ಟಲು ಜಾಗ ಹುಡುಕುತ್ತಿವೆ ಎಂದು ನಮಗರಿವಾಗುತ್ತಿತ್ತು. ಯಾವಾಗ, ಯಾವ ಹಕ್ಕಿ ಗೂಡು ಕಟ್ಟುತ್ತದೆ, ಮೊಟ್ಟೆ ಒಡೆದು ಮರಿ ಬರಲು ಎಷ್ಟು ದಿನ ಬೇಕು ಎಂಬುದೆಲ್ಲಾ ನಮಗೆ ಅಚ್ಚರಿಯ ಸಂಗತಿಯಾಗಿತ್ತು.
ಬೇಸಿಗೆ ರಜೆಯೆಂದರೆ ನೆನಪಾಗುವುದು ಅಜ್ಜಿ ಮನೆ. ಎಲ್ಲರೂ ಅಜ್ಜಿ ಮನೆಗೆ ಪೇಟೆಯಿಂದ ಹಳ್ಳಿಗೆ ಬಂದರೆ ನಾವು ಹಳ್ಳಿಯಿಂದ ಪೇಟೆಗೆ ಹೋಗುತ್ತಿದ್ದೆವು. ಮನೆ ಪಕ್ಕದ ಕಂಪೌಂಡ್ ಹತ್ತಿರ ಅಜ್ಜನೊಟ್ಟಿಗೆ ನಿಂತುಕೊಂಡು, ಮನೆ ಮುಂದೆಯೇ ಸಾಲು ಸಾಲಾಗಿ ಹೋಗುವ ಆಟೋ ರಿಕ್ಷಾ, ಕಾರು, ಬಸ್ ಗಳು, ನಮೂನೆ ನಮೂನೆ ಬೈಕ್ ಗಳು, ಸ್ಕೂಟರ್ ಗಳನ್ನು ಲೆಕ್ಕ ಹಾಕುತ್ತಿದ್ದೆವು. ಆ ದಿನಗಳಲ್ಲಿ ಲೆಕ್ಕದ ಬೈಕುಗಳು, ಎರಡಂಕಿಯೊಳಗಿನ ನಾಲ್ಕು ಚಕ್ರದ ವಾಹನಗಳು ಮಾರ್ಗದಲ್ಲಿ ಓಡಾಡುತ್ತಿದ್ದವು. ನಾನು, ನನ್ನ ತಂಗಿ ಹಾಗೂ ಮಾವನ ಎರಡರ ಹರೆಯದ ಮಗ ಮೂವರು ಸೇರಿ ಲೆಕ್ಕ ಹಾಕುತ್ತಿದ್ದೆವು. ನಾವು ಮಾರ್ಗಕ್ಕೆ ಇಳಿಯದಂತೆ ಅಜ್ಜ ಜಾಗ್ರತೆ ವಹಿಸುತ್ತಿದ್ದರು. ಸಂಜೆ ಮಾವಂದಿರು ಮನೆಗೆ ಬರುತ್ತಲೇ ನಮ್ಮ ಲೆಕ್ಕ ಒಪ್ಪಿಸುತ್ತಿದ್ದೆವು. ಸುಸ್ತಾಗಿ ಬಂದಿದ್ದರೂ ಸ್ವಲ್ಪವೂ ಬೇಸರಿಸಿಕೊಳ್ಳದೇ ಕೇಳಿಸಿಕೊಳ್ಳುತ್ತಿದ್ದರು. ಮರುದಿನಕ್ಕೆ ನಮ್ಮ ಬೇಡಿಕೆಗಳ ಪಟ್ಟಿಗಳನ್ನು ತಾಳ್ಮೆಯಿಂದ ಕೇಳಿಕೊಳ್ಳುತ್ತಿದ್ದರು. ಸಾಧ್ಯವಾದಷ್ಟು ಈಡೇರಿಸುತ್ತಿದ್ದರು. ಆವಾಗಿನ ಮಕ್ಕಳ ಬೇಡಿಕೆಗಳೂ ಸಣ್ಣಮಟ್ಟಿನವು. ಮಣಿಸರ, ಪ್ಲಾಸ್ಟಿಕ್ ಬಳೆಗಳು, ಪುಟ್ಟ ಕೈ ಚೀಲ, ಉದ್ದನೆಯ ಗೌನ್, ಬಿಸ್ಕತ್ತು, ಪೆಪ್ಪರಮೆಂಟ್, ಬಾಲಮಂಗಳ, ಚಂದಮಾಮ ಇವುಗಳು ನಮ್ಮ ಪಟ್ಟಿಯಲ್ಲಿ ಸ್ಥಾನ ಪಡೆದವುಗಳು. ಮಾವಂದಿರೂ ಬುದ್ಧಿವಂತಿಕೆ ತೋರಿಸುತ್ತಾ ಇದ್ದರು, ದಿನಕ್ಕೆ ಒಂದೇ ಎಂದು!
ಈ ಎಲ್ಲವುಗಳಿಗಿಂತ ನಮಗೆ ಆಕರ್ಷಣೆ ಇದ್ದುದು ಅಜ್ಜ ಹೇಳುತ್ತಿದ್ದ ಕಥೆಗಳಲ್ಲಿ. ನಮ್ಮ ಬಾಲ್ಯದ ದಿನಗಳಲ್ಲಿ ಪೇಟೆಯಾದರೂ ಹಳ್ಳಿಯ ವಾತಾವರಣ ಅಲ್ಲಿ ಇತ್ತು. ಪೇಟೆಯ ಹೊರವಲಯದಲ್ಲಿ ಇದ್ದ ಕಾರಣ ಮಾಲಿನ್ಯ ರಹಿತ ವಾತಾವರಣ. ಹಾಗಾಗಿ ಅಜ್ಜನನ್ನು ಪೇಟೆಗೆ ಹೋಗಲೂ ಬಿಡದೆ ಕಥೆ ಹೇಳುವಂತೆ ಸತಾಯಿಸುತ್ತಿದ್ದೆವು. ಅವರು ಒಂದು ಹೊತ್ತಿಗೆ 5 ಕಥೆಗಳನ್ನು ಹೇಳದೆ ಬಿಡುತ್ತಲೇ ಇರಲಿಲ್ಲ. ಅವರೂ ಅಷ್ಟೇ, ಬಹಳ ಶ್ರದ್ಧೆಯಿಂದ ಯಾವುದೂ ಪುನರಾವರ್ತಿತವಾಗದಂತೆ ವಿಭಿನ್ನ ಶೈಲಿಯಲ್ಲಿ ಬೇರೆ ಬೇರೆ ಕಥೆಗಳನ್ನು ಹೇಳುತ್ತಿದ್ದರು. ಅಲ್ಲಿ ರಾಮಾಯಣ, ಮಹಾಭಾರತ ಕಥೆಗಳಲ್ಲದೆ ತೆನಾಲಿರಾಮ, ಚಾಣಕ್ಯ, ವಿಕ್ರಮ- ಬೇತಾಳದ ಪಾತ್ರಗಳೆಲ್ಲಾ ಬಂದು ಹೋಗುತ್ತಿದ್ದವು. ಅಜ್ಜ ಎಷ್ಟು ಆಕರ್ಷಕವಾಗಿ ಕಥೆ ಹೇಳುತ್ತಿದ್ದರೆಂದರೆ ಅಜ್ಜಿ ತಂದಿಡುತ್ತಿದ್ದ ಕೋಡುಬಳೆ, ಕರ್ಜಿಕಾಯಿ, ತುಕ್ಕುಡಿ ಕಾಣುತ್ತಿರಲಿಲ್ಲ; ಕಥೆಯ ಪಾತ್ರಗಳೇ ಕಣ್ಣ ಮುಂದಿರುತ್ತಿದ್ದುವು! ಅಜ್ಜಿ, ಅಜ್ಜನಿಗೆ ಹೇಳುತ್ತಿದ್ದ ಕೆಲಸಗಳನ್ನೆಲ್ಲಾ ನಾವೇ ಮಾಡಿ ಮುಗಿಸುತ್ತಿದ್ದೆವು, ಕಥೆಯ ಸಮಯ ತಪ್ಪಬಾರದಲ್ಲಾ ಎಂಬ ಮುಂದಾಲೋಚನೆಯಲ್ಲಿ. ಆಮೇಲೆ ದೂರದರ್ಶನ ಬಂದರೂ ಅಜ್ಜ ಹೇಳುತ್ತಿದ್ದ ಕಥೆಯ ಆಕರ್ಷಣೆ ಕಡಿಮೆಯಾಗಲಿಲ್ಲ.
ನಾವು ಅಜ್ಜನಿಂದ ಕೇಳಿದಷ್ಟು ಕಥೆಗಳು, ಆ ಅನುಭವಗಳಾವುದೂ ಇಂದಿನ ಮಕ್ಕಳಿಗಿಲ್ಲವಲ್ಲ ಎಂಬ ವಿಚಾರ ಬಹಳಷ್ಟು ಕಾಡುತ್ತಿತ್ತು. ಈಗ ಅಜ್ಜನ ಬಳಿ ಕೇಳಿದ ಕಥೆಗಳನ್ನು ಮಕ್ಕಳಿಗೆ ಹೇಳುತ್ತಿದ್ದರೆ, ಬಾಲ್ಯದ ದಿನಗಳು ಮರುಕಳಿಸುತ್ತಿವೆಯೇನೋ ಅನ್ನಿಸುತ್ತಿದೆ.
- ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ