ಮಂಗಳೂರು: 1922ರಿಂದ, ಕಳೆದ ನೂರು ವರ್ಷಗಳಿಂದ ನಿರಂತರವಾಗಿ ಪ್ರತೀ ವಾರ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿರುವ ಮಂಗಳೂರಿನ ಶ್ರೀ ವಾಗೀಶ್ವರೀ ಯಕ್ಷಗಾನ ಕಲಾವರ್ಧಕ ಸಂಘದ ಶತಮಾನೋತ್ಸವ ಸಮಿತಿಯು ಕಳೆದ ಮಾರ್ಚ್ ತಿಂಗಳಿನಿಂದ ಪ್ರತೀ ಭಾನುವಾರ "ಶ್ರೀ ರಾಮ ಚರಿತಾಮೃತ"- ಶ್ರೀ ಮದ್ರಾಮಾಯಣದ ಪ್ರಸಂಗಗಳ ಧಾರವಾಹಿ ತಾಳಮದ್ದಳೆ ಕಾರ್ಯಕ್ರಮದ ಜೊತೆಯಲ್ಲಿ ಯಕ್ಷಸಾಧಕ ಸಂಮಾನವನ್ನು ಕರ್ನಾಟಕ ಯಕ್ಷಗಾನ ಅಕಾಡಮಿಯ ಸಹಭಾಗಿತ್ವದಲ್ಲಿ ನಡೆಸಿಕೊಂಡು ಬಂದಿದೆ. ಪ್ರತೀ ವಾರ ಕೀರ್ತಿಶೇಷ ಕಲಾವಿದರ ಸಂಸ್ಮರಣೆಯನ್ನು ನಡೆಸಲಾಗುತ್ತಿದ್ದು 52 ಸರಣಿ ಕಾರ್ಯಕ್ರಮಗಳನ್ನು ನಡೆಸಲಾಗಿದ್ದು, ಸಮಾರೋಪ ಸಮಾರಂಭವು ಮಾರ್ಚ್ 19, ಆದಿತ್ಯವಾರದಂದು ಜರಗಲಿದೆ.
ಶತಮಾನೋತ್ಸವ ಸಮಿತಿ ಪದಾಧಿಕಾರಿಗಳು ಇಂದು (ಬುಧವಾರ, ಮಾ.15) ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ವಿವರ ಮಾಹಿತಿ ನೀಡಿದರು.
ಯಕ್ಷಗಾನ ಪೀಠಿಕಾ ಸ್ಪರ್ಧೆ:
ಯಕ್ಷಗಾನ ಅರ್ಥಗಾರಿಕೆಯಲ್ಲಿ ಪೀಠಿಕೆ ಅರ್ಥಕ್ಕೆ ವಿಶೇಷ ಮಹತ್ವ ಇದೆ. ಭೂತ, ವರ್ತಮಾನ ಹಾಗೂ ಭವಿಷ್ಯತ್ ಕಾಲದ ಚಿಂತನ-ಮಂಥನದಿಂದ ಪರಿಪಕ್ವಗೊಂಡ ಮುಂದಿನ ಪಾತ್ರ ವಿಸ್ತಾರದ ಮೊದಲ ಮಾತುಗಳೇ 'ಪೀಠಿಕೆ'. ಪೀಠಿಕೆ ಅರ್ಥವನ್ನು ಚುಟುಕಾಗಿ ನಿರ್ವಹಿಸುವುದು ಕಲಾವಿದನ ಜಾಣ್ಮೆಯೂ ಹೌದು. ಈ ಹಿನ್ನಲೆಯಲ್ಲಿ ಐದು ನಿಮಿಷಗಳ ಕಾಲಾವಧಿಯಲ್ಲಿ ಪೀಠಿಕೆ ಅರ್ಥ ಹೇಳುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಸ್ಪರ್ಧಾ ವಿಜೇತರಿಗೆ ನಗದು ಬಹುಮಾನ ನೀಡಲಾಗುವುದು. ಪೀಠಿಕೆ ಪದ್ಯವನ್ನು ಭಾಗವತರು ಹಾಡಲಿದ್ದಾರೆ. ಮೊದಲ ಸುತ್ತಿನಲ್ಲಿ ತಮ್ಮ ಆಯ್ಕೆಯ ಪ್ರಸಂಗ, ಪಾತ್ರ, ಸನ್ನಿವೇಷದ ಪದ್ಯಕ್ಕೆ ಅರ್ಥ ಹೇಳಬಹುದು. ಅಂತಿಮ ಹಂತಕ್ಕೆ ಆಯ್ಕೆಯಾದ ಸ್ಪರ್ಧಾಳುಗಳು ತಮ್ಮ ಆಯ್ಕೆಯ ಐದು ಪದ್ಯಗಳಲ್ಲಿ ಒಂದನ್ನು ಚೀಟಿ ತೆಗೆದು ಅರ್ಥ ಹೇಳಬೇಕು.
ಮಾರ್ಚ್ 18ರ ಮುಂಚಿತವಾಗಿ ಆಸಕ್ತರು ಸಂಘದ ಪ್ರಧಾನ ಸಂಚಾಲಕ ಕದ್ರಿ ನವನೀತ ಶೆಟ್ಟಿ (9448123061), ಪ್ರಧಾನ ಕಾರ್ಯದರ್ಶಿ ಸಂಜಯ ಕುಮಾರ್ ರಾವ್ (9845687066) ಇವರಲ್ಲಿ ಹೆಸರು ನೊಂದಾಯಿಸಿಕೊಳ್ಳಬಹುದು.
ಮಂಗಳೂರು ಶ್ರೀ ಕುಡ್ತೇರಿ ಮಹಾಮಾಯಾ ದೇವಸ್ಥಾನದ ರಾಜಾಂಗಣದಲ್ಲಿ ಮಾರ್ಚ್ 19 ಆದಿತ್ಯವಾರದಂದು ಪುರುಷ, ಮಹಿಳೆ ಹಾಗೂ ಮಕ್ಕಳ ಮೂರು ವಿಭಾಗಗಳಲ್ಲಿ ಯಕ್ಷಗಾನ ಪೀಠಿಕೆ ಅರ್ಥಗಾರಿಕೆ ಸ್ಪರ್ಧೆ ನಡೆಯಲಿದೆ. ಬೆಳಿಗ್ಗೆ ಗಂಟೆ 8:00ಕ್ಕೆ ದೇವಸ್ಥಾನದ ಅರ್ಚಕ ವಿಠಲ್ ಭಟ್ ಹಾಗೂ ಇಸ್ಕಾನ್‌ನ ಶ್ರೀ ಸನಂದನದಾಸ ಅವರು ಸ್ಪರ್ಧೆಯನ್ನು ಉದ್ಘಾಟಿಸಲಿದ್ದಾರೆ.
ಶ್ರೀರಾಮ ಚರಿತಾಮೃತ ಪೀಠಿಕಾ ವೈಭವ:
ಸಂಜೆ ಗಂಟೆ 5:00 ರಿಂದ ಪಟ್ಲ ಸತೀಶ್ ಶೆಟ್ಟಿಯವರ ಭಾಗವತಿಕೆಯಲ್ಲಿ ಸಮಗ್ರ ರಾಮಾಯಣದ ಆಯ್ದ ಪಾತ್ರಗಳ ಪೀಠಿಕೆಯ ಪ್ರಸ್ತುತಿಯೊಂದಿಗೆ ಶ್ರೀರಾಮ ಚರಿತಾಮೃತ ಕಥಾನಕವನ್ನು ಪ್ರಸ್ತುತಿಗೊಳಿಸಲಾಗುವುದು.
ಡಾ. ಪ್ರಭಾಕರ ಜೋಷಿ, ಜಿ.ಕೆ. ಭಟ್ ಸೇರಾಜೆ, ಸರ್ಪಂಗಳ ಈಶ್ವರ ಭಟ್, ಭಾಸ್ಕರ ರೈ ಕುಕ್ಕುವಳ್ಳಿ ಹಾಗೂ ಸಂಘದ ಕಲಾವಿದರು ಪೀಠಿಕೆಯ ಅರ್ಥ ಹೇಳಲಿದ್ದಾರೆ.
ಶ್ರೀ ಶಾರದಾ ಯಕ್ಷಗಾನ ಮಂಡಳಿ, ಪೆರ್ಮುದೆ ಸಂಘಕ್ಕೆ ಶತಮಾನೋತ್ಸವ ವಿಶೇಷ ಸಂಮಾನ:
ಸಂಜೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಶತಮಾನದ ಹಿನ್ನೆಲೆಯುಳ್ಳ ಜಿಲ್ಲೆಯ ಹಿರಿಯ ಯಕ್ಷಗಾನ ಸಂಘವಾದ ಶ್ರೀ ಶಾರದಾ ಯಕ್ಷಗಾನ ಮಂಡಳಿ ರಿ., ಪೆರ್ಮುದೆ ಇವರಿಗೆ ವಾಗೀಶ್ವರೀ ಶತಮಾನೋತ್ಸವ ವಿಶೇಷ ಪ್ರಶಸ್ತಿ ನೀಡಿ ಅಭಿನಂದಿಸಲಾಗುವುದು.
ಎಸ್. ಪ್ರದೀಪ ಕುಮಾರ ಕಲ್ಕೂರ- ಗೌರವಾಧ್ಯಕ್ಷರು, ಕದ್ರಿ ನವನೀತ ಶೆಟ್ಟಿ- ಪ್ರಧಾನ ಸಂಚಾಲಕ, ಪಿ. ಸಂಜಯ್ ಕುಮಾರ್ ರಾವ್- ಪ್ರಧಾನ ಕಾರ್ಯದರ್ಶಿ, ಸಿ.ಎಸ್. ಭಂಡಾರಿ- ಶತಮಾನೋತ್ಸವ ಸಮಿತಿ ಅಧ್ಯಕ್ಷರು, ಶಿವಪ್ರಸಾದ್ ಪ್ರಭು- ಕೋಶಾಧಿಕಾರಿ- ಇವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ