ಇಸ್ಮತ್ ಪಜೀರ್ ರ ‘ಪಾಲ’ ಬ್ಯಾರಿ ಕೃತಿ ಬಿಡುಗಡೆ

Upayuktha
0

 

ಮಂಗಳೂರು: ಮಂಗಳೂರು ವಿಶ್ವ ವಿದ್ಯಾನಿಲಯದ ಬ್ಯಾರಿ ಅಧ್ಯಯನ ಪೀಠದ ವತಿಯಿಂದ ಮಂಗಳೂರು ವಿವಿ ಪ್ರಸಾರಾಂಗ ಪ್ರಕಟಿಸಿದ ಲೇಖಕ ಇಸ್ಮತ್ ಪಜೀರ್ ರಚಿಸಿದ ಬ್ಯಾರಿ ವಿಮರ್ಶಾ ಲೇಖನಗಳ ಸಂಕಲನ ‘ಪಾಲ’ ಕೃತಿ ಬಿಡುಗಡೆ ಕಾರ್ಯಕ್ರಮ ಶನಿವಾರ ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಡಾ. ಶಿವರಾಮ ಕಾರಂತ ಸಭಾಭವನದಲ್ಲಿ ನಡೆಯಿತು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಗಳೂರು ವಿವಿ ಪ್ರಸಾರಾಂಗದ ನಿರ್ದೇಶಕ ಪ್ರೊ. ಸೋಮಣ್ಣ ಹೊಂಗಳ್ಳಿ ಬ್ಯಾರಿ ಸಾಹಿತ್ಯ ಸಮೃದ್ಧವಾಗಿ ಬೆಳೆಯಬೇಕಾದರೆ ಯುವ ಜನಾಂಗವನ್ನು ಸಾಹಿತ್ಯದ ಕಡೆ ಆಕರ್ಷಿಸಬೇಕು. ಕಮ್ಮಟಗಳನ್ನು ಆಯೋಜಿಸಿ, ಸೂಕ್ತ ತರಬೇತಿ ನೀಡುವುದರ ಮೂಲಕ ಉತ್ತಮ ಕೃತಿಗಳು ಬ್ಯಾರಿ ಸಾಹಿತ್ಯದಲ್ಲಿ ಹೊರಬರಬೇಕು ಎಂದರು.


ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಮಂಗಳೂರು ವಿವಿ ಪ್ರಸಾರಾಂಗದ ಉಪನಿರ್ದೇಶಕ ಡಾ. ಧನಂಜಯ ಕುಂಬ್ಳೆ, ‘ಕರಾವಳಿ ತೀರದಲ್ಲಿ ವೈಚಾರಿಕ ಬರಹಗಾರರ ಸಂಖ್ಯೆ ತೀರಾ ಕಡಿಮೆಯಿದೆ. ಇತ್ತೀಚಿನ ದಿನಗಳಲ್ಲಿ ಬ್ಯಾರಿ ಮುಸ್ಲಿಂ ಸಮುದಾಯದ ಬರಹಗಾರರು ವೈಚಾರಿಕ ದೃಷ್ಟಿಕೋನದಿಂದ ಬರೆಯುತ್ತಿರುವುದು ಆಶಾದಾಯಕ ಬೆಳವಣಿಯಾಗಿದೆ. ಭಾಷೆಯೊಂದರ ಪ್ರಕಟಿತ ಕೃತಿಗಳ ಬಗ್ಗೆ ವಿಮರ್ಶಾ ಸಂಕಲನ ಹೊರಬರುತ್ತಿರುವುದು ಆ ಭಾಷೆಯ ಪ್ರೌಢತೆಗೆ ಸಾಕ್ಷಿಯಾಗಿದೆ. ಇದೀಗ ‘ಪಾಲ’ದ ಮೂಲಕ ಬ್ಯಾರಿ ಭಾಷೆಯೂ ಪ್ರೌಢತೆಗೆ ಪ್ರಾಪ್ತವಾಗಿರುವುದು ಸಂತಸದ ವಿಚಾರ,’ ಎಂದರು.


ಉಪನ್ಯಾಸ ನೀಡಿದ ಬ್ಯಾರಿ ವಾರ್ತೆ ಮಾಸಿಕದ ಉಪ ಸಂಪಾದಕ ಮುಹಮ್ಮದಲಿ ಕಮ್ಮರಡಿ, ‘ಬ್ಯಾರಿ ಸಾಹಿತ್ಯಅಕಾಡಮಿಯಲ್ಲಿ ಈಗ ಯಾವ ಚಟುವಟಿಕೆಯೂ ನಡೆಯುತ್ತಿಲ್ಲ, ಹಾಗಾಗಿ ಬ್ಯಾರಿ ಅಧ್ಯಯನ ಪೀಠಕ್ಕೆ ಹೆಚ್ಚಿನ ಜವಾಬ್ದಾರಿ ಇದೆ. ‘ಬ್ಯಾರಿ’ ಕ್ಷೇತ್ರಕಾರ್ಯ ನಡೆಸುವ ಯುವ ಸಂಶೋಧಕರಿಗೆ ಮಾರ್ಗದರ್ಶನ ಹಾಗೂ ಆಸಕ್ತಿಯಿಂದ ಬರೆಯುವ ಯುವ ಲೇಖಕ-ಲೇಖಕಿಯರಿಗೆ ಸಾಹಿತ್ಯ ಕಮ್ಮಟಗಳನ್ನು ಆಯೋಜಿಸಲು ಮುಂದಾಗಬೇಕು’ ಎಂದು ಹೇಳಿದರು.


ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಹಿರಿಯ ಸಾಹಿತಿ ಅಬ್ದುಲ್‍ ಖಾದರ್ ಕುತ್ತೆತ್ತೂರು, ‘ಬ್ಯಾರಿ ಭಾಷೆಯಲ್ಲಿ ಪ್ರಕಟಗೊಂಡ ಕೃತಿಗಳ ಬಗ್ಗೆ ವಿಮರ್ಶಿಸಲ್ಪಟ್ಟ ಲೇಖನಗಳನ್ನು ಒಳಗೊಂಡ ಸಂಕಲನವು ಇದೇ ಮೊದಲ ಬಾರಿಗೆ ಪ್ರಕಟಗೊಳ್ಳುತ್ತಿದೆ. ಬ್ಯಾರಿಯಲ್ಲಿ ವಿಮರ್ಶಾ ಸಂಕಲನ ಪ್ರಕಟಗೊಂಡಿಲ್ಲ ಎಂಬ ಆ ಕೊರತೆ ಈ ಮೂಲಕ ನೀಗಿದೆ’ ಎಂದರು.


ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ ಅತಿಥಿಯಾಗಿ ಭಾಗವಹಿಸಿದ್ದರು. ಲೇಖಕ ಇಸ್ಮತ್ ಪಜೀರ್ ಕೃತಿ ರಚನೆಗೆ ಸಂಬಂಧಿಸಿದಂತೆ ಅನುಭವ ಹಂಚಿಕೊಂಡರು. ಬ್ಯಾರಿ ಅಧ್ಯಯನ ಪೀಠದ ಸಂಯೋಜಕ ಪ್ರೊ. ಅಬೂಬಕರ್ ಸಿದ್ಧೀಕ್ ಸ್ವಾಗತಿಸಿದರು. ಬ್ಯಾರಿ ಅಧ್ಯಯನ ಪೀಠದ ಸಲಹಾ ಸಮಿತಿಯ ಸದಸ್ಯ ಅಹ್ಮದ್ ಬಾವಾ ಪಡೀಲ್ ವಂದಿಸಿದರು. ಉಪನ್ಯಾಸಕಿ ಶಹಲಾ ರೆಹಮಾನ್‍ ಕಾರ್ಯಕ್ರಮ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top