ಹೊಸದಿಲ್ಲಿ: ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಸೂರತ್ ನ್ಯಾಯಾಲಯದಿಂದ 2 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಲೋಕಸಸಭೆ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದೆ.
2019ರ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಸೂರತ್ ನ್ಯಾಯಾಲಯದಿಂದ ಶಿಕ್ಷೆಗೊಳಗಾದ ಒಂದು ದಿನದ ನಂತರ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಶುಕ್ರವಾರ ಲೋಕಸಭೆಯಿಂದ ಅನರ್ಹಗೊಳಿಸಲಾಗಿದೆ.
ಅವರ ಅನರ್ಹತೆಯನ್ನು ಘೋಷಿಸಿದ ಲೋಕಸಭೆಯ ಸಚಿವಾಲಯ ಅಧಿಸೂಚನೆಯಲ್ಲಿ ಇದು ಮಾರ್ಚ್ 23 ರಿಂದ, ಶಿಕ್ಷೆಯ ದಿನದಿಂದ ಜಾರಿಗೆ ಬರುತ್ತದೆ ಎಂದು ಹೇಳಿದೆ.
"ಸೂರತ್‌ನ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಅವರಿಗೆ ಶಿಕ್ಷೆ ವಿಧಿಸಿದ ಪರಿಣಾಮವಾಗಿ ಕೇರಳದ ವಯನಾಡ್ ಸಂಸದೀಯ ಕ್ಷೇತ್ರವನ್ನು ಪ್ರತಿನಿಧಿಸುವ ಲೋಕಸಭಾ ಸದಸ್ಯರಾದ ರಾಹುಲ್ ಗಾಂಧಿ ಅವರು 23 ಮಾರ್ಚ್, 2023 ರಿಂದ ಲೋಕಸಭೆಯ ಸದಸ್ಯತ್ವದಿಂದ ಅನರ್ಹರಾಗಿದ್ದಾರೆ" ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಇದು ನ್ಯಾಯಾಲಯದ ಆದೇಶ, ಇದನ್ನು ಎಲ್ಲರೂ ಒಪ್ಪಿಕೊಳ್ಳಬೇಕು. ನ್ಯಾಯಾಲಯ ಆತನಿಗೆ ಶಿಕ್ಷೆ ವಿಧಿಸಿದೆ. ಚುನಾವಣೆ ವೇಳೆ ಒಂದು ಸಮುದಾಯವನ್ನು ಅವಮಾನಿಸಿದ ಪ್ರಕರಣಕ್ಕೆ ಕೋರ್ಟ್ ನೀಡಿದ ತೀರ್ಪು ದೇಶದಾದ್ಯಂತ ಉತ್ತಮ ಸಂದೇಶ ರವಾನಿಸಿದೆ ಎಂದು ಬಿಜೆಪಿ ಸಂಸದ ವಿನೋದ್ ಸೋಂಕರ್ ಪ್ರತಿಕ್ರಿಯಿಸಿದ್ದಾರೆ.
ಭಾರತೀಯ ಪ್ರಜಾಪ್ರಭುತ್ವಕ್ಕೆ ಓಂ ಶಾಂತಿ: ಕಾಂಗ್ರೆಸ್
ನಾವು ಕಾನೂನಾತ್ಮಕ ಮತ್ತು ರಾಜಕೀಯವಾಗಿ ಈ ಹೋರಾಟವನ್ನು ಎದುರಿಸುತ್ತೇವೆ. ನಾವು ಹೆದರುವುದಿಲ್ಲ ಅಥವಾ ಮೌನವಾಗಿರುವುದಿಲ್ಲ. ಪಿಎಂ-ಸಂಬಂಧಿತ ಅದಾನಿ ಮಹಾಮೇಗಾ ಹಗರಣದಲ್ಲಿ ಜೆಪಿಸಿ ಬದಲಿಗೆ, ರಾಹುಲ್ ಗಾಂಧಿಯನ್ನು ಅನರ್ಹಗೊಳಿಸಲಾಗಿದೆ. ಭಾರತೀಯ ಪ್ರಜಾಪ್ರಭುತ್ವ ಓಂ ಶಾಂತಿ- ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ
ಕೇಂದ್ರ ಸಚಿವ ಅನುರಾಗ್ ಠಾಕೂರ್, "ರಾಹುಲ್ ಗಾಂಧಿ ಅವರು ನ್ಯಾಷನಲ್ ಹೆರಾಲ್ಡ್ ಭ್ರಷ್ಟಾಚಾರ ಪ್ರಕರಣದಲ್ಲಿ ಜಾಮೀನಿನ ಮೇಲೆ ಇದ್ದಾರೆ. ಅವರು ಸಂಸತ್ತಿನಲ್ಲಿ ಸತ್ಯದಿಂದ ದೂರ ಸರಿಯುವುದು ವಾಡಿಕೆ. ಸಂಸತ್ತು, ಕಾನೂನು, ದೇಶಕ್ಕಿಂತ ತಾವು ಮೇಲಿನವರು ಎಂದು ರಾಹುಲ್ ಗಾಂಧಿ ನಂಬುತ್ತಾರೆ. ತಾವು ಏನು ಮಾಡಿದರೂ ನಡೆಯುತ್ತದೆ ಎನ್ನುವ ಮನೋಭಾವ ಅವರದ್ದು' ಎಂದು ಪ್ರತಿಕ್ರಿಯಿಸಿದ್ದಾರೆ.
ಪ್ರಕರಣ ಏನು?
ಕಳೆದ ಲೋಕಸಭಾ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಕರ್ನಾಟಕದ ಕೋಲಾರದಲ್ಲಿ ನಡೆದ ರಾಜಕೀಯ ಸಮಾವೇಶದಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಳ್ಳನೆಂದು ಕರೆದಿದ್ದರು. ನೀರವ್ ಮೋದಿ, ಲಲಿತ್ ಮೋದಿ, ನರೇಂದ್ರ ಮೋದಿ- ಇವರೆಲ್ಲರ ಉಪನಾಮ (ಸರ್‍ನೇಮ್) ಒಂದೇ ಆಗಿದ್ದು, ಎಲ್ಲರೂ ಕಳ್ಳರು. ನಮ್ಮ ದೇಶವನ್ನು ಲೂಟಿ ಮಾಡುತ್ತಿದ್ದಾರೆ' ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಈ ಹೇಳಿಕೆಯ ಆಧಾರದಲ್ಲಿ ಗುಜರಾತ್‌ನ ಮಾಜಿ ಸಚಿವ ಪೂರ್ಣೇಶ್ ಮೋದಿ ಅವರು ರಾಹುಲ್ ಗಾಂಧಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಸೂರತ್ ನ್ಯಾಯಾಲಯ, ರಾಹುಲ್ ಗಾಂಧಿ ಅವರನ್ನು ದೋಷಿ ಎಂದು ತೀರ್ಮಾನಿಸಿ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿ ಗುರುವಾರ ಆದೇಶ ಹೊರಡಿಸಿತ್ತು.
ಕಾಂಗ್ರೆಸ್ ಪ್ರತಿಭಟನೆ:
ರಾಹುಲ್ ಗಾಂಧಿ ಅನರ್ಹತೆ ಕುರಿತ ಅಧಿಸೂಚನೆ ಪ್ರಕಟಣೆಗೆ ಮುನ್ನ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಕಚೇರಿಯಲ್ಲಿ ಪ್ರತಿಪಕ್ಷಗಳ ಸಂಸದರು ತುರ್ತು ಸಭೆ ನಡೆಸಿದ್ದರು. ಬಳಿಕ ರಾಷ್ಟ್ರಪತಿ ಭವನದತ್ತ ತೆರಳಿ, ಪ್ರಜಾಪ್ರಭುತ್ವ ಅಪಾಯದಲ್ಲಿದೆ' ಎಂಬ ಭಿತ್ತಿಪತ್ರ ಹಿಡಿದು ಮೆರವಣಿಗೆ ನಡೆಸಿದರು. ವಿಜಯ ಚೌಕ್‌ನಲ್ಲಿ ಕೆಲವು ಸಂಸದರನ್ನು ಪೊಲೀಸರು ವಶಕ್ಕೆ ಪಡೆದರು.
ಶುಕ್ರವಾರ ಬೆಳಗ್ಗೆ ಲೋಕಸಭೆಗೆ ಆಗಮಿಸಿದ ರಾಹುಲ್ ಗಾಂಧಿ ಅವರು ಮಾತನಾಡಲು ಅವಕಾಶ ಕೋರಿದರು. ಆದರೆ ಕಾಂಗ್ರೆಸ್ ಸದಸ್ಯರ ಪ್ರತಿಭಟನೆಯ ಕಾರಣದಿಂದ ಕಲಾಪವನ್ನು ಮುಂದೂಡಲಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ