ಜನ ಸಾಮಾನ್ಯರಲ್ಲಿ ರಾಷ್ಟ್ರೀಯ ಸಂಪನ್ಮೂಲ ಮತ್ತು ಮಾನವ ಸಂಪನ್ಮೂಲಗಳ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವ ಸದುದ್ದೇಶದಿಂದ ಪ್ರತಿ ವರ್ಷ ದೇಶದಾದ್ಯಂತ ರಾಷ್ಟ್ರೀಯ ಸುರಕ್ಷತಾ ಪರಿಷತ್ತು ಮಾರ್ಚ್ 4ರಂದು 'ರಾಷ್ಟ್ರೀಯ ಸುರಕ್ಷತಾ ದಿನ' ಆಚರಿಸುತ್ತದೆ. “ರಾಷ್ಟ್ರೀಯ ಸುರಕ್ಷತಾ ಪರಿಷತ್ತು” ಸ್ವಾಯತ್ತ ಸಂಸ್ಥೆಯಾಗಿದ್ದು, ಸ್ವಂತ ಹಣಕಾಸಿನ ಬಲದಿಂದ ಲಾಭದಾಯಕವಲ್ಲದ ಉನ್ನತ ಸಂಸ್ಥೆಯಾಗಿದ್ದು ಭಾರತ ಸರಕಾರದ ಉದ್ಯೋಗ ಮಂತ್ರಾಲಯದ ಅಧೀನಕ್ಕೆ ಒಳಪಟ್ಟಿದೆ. 1966ರ ಮಾರ್ಚ್ 4ರಂದು ರಾಷ್ಟ್ರೀಯ ಸಂಪನ್ಮೂಲಗಳ ಸುರಕ್ಷತೆ, ಆರೋಗ್ಯ ಮತ್ತು ಪರಿಸರದ ಬಗ್ಗೆ ರಾಷ್ಟೀಯ ಮಟ್ಟದಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಸಂಸ್ಥೆಯನ್ನು ಹುಟ್ಟು ಹಾಕಲಾಯಿತು. ಸೊಸೈಟಿ ಖಾಯಿದೆಗಳ ಅಧೀನಕ್ಕೆ ಒಳಪಡುವ ಈ ಸಂಸ್ಥೆಯ ಕೇಂದ್ರ ಕಚೇರಿ ಮುಂಬಯಿಯಲ್ಲಿದ್ದು, ಕೈಗಾರಿಕಾ ಸಂಸ್ಥೆಗಳ ಬಗ್ಗೆ ಹೆಚ್ಚಿನ ಸುರಕ್ಷತೆ ಮತ್ತು ಭದ್ರತೆಯನ್ನು ಮೂಡಿಸುವ ಹೆಚ್ಚಿನ ಹೊಣೆಗಾರಿಕೆಯನ್ನು ಹೊಂದಿದೆ.
ಜನರಲ್ಲಿ ರಾಷ್ಟೀಯ ಸಂಪನ್ಮೂಲಗಳ ಸುರಕ್ಷತೆ, ಕೈಗಾರಿಕೀಕರಣದಿಂದಾಗುವ ಆರೋಗ್ಯದ ಮೇಲಿನ ದುಷ್ಫರಿಣಾಮ ಮತ್ತು ಪರಿಸರದ ಮೇಲಾಗುವ ದೌರ್ಜನ್ಯದ ಬಗ್ಗೆ ಜಾಗೃತಿ ಮೂಡಿಸಿ, ಜನರ ಹೃದಯದಲ್ಲಿ ವೈಜ್ಞಾನಿಕ ಚಿಂತನೆ, ರೋಗ ತಡೆಗಟ್ಟುವ, ಮಾನಸಿಕ ಸ್ಥಿತಿ ಮತ್ತು ವಿಪತ್ತುಗಳನ್ನು ಎದುರಿಸುವಲ್ಲಿ ರಚನಾತ್ಮಕ ಮತ್ತು ಧನಾತ್ಮಕ ವಿಚಾರ ಚಿಂತನೆಗಳನ್ನು ಮೂಡಿಸುವ ಮೂಲ ಉದ್ದೇಶವನ್ನು ರಾಷ್ಟ್ರೀಯ ಸುರಕ್ಷತಾ ಪರಿಷತ್ತು ಹೊಂದಿದೆ. ಈ ನಿಟ್ಟಿನಲ್ಲಿ ಮಾರ್ಚ್ 6ರಿಂದ 10ರ ವರೆಗೆ ರಾಷ್ಟ್ರದಾದ್ಯಂತ ರಾಷ್ಟ್ರೀಯ ಸುರಕ್ಷತಾ ಸಪ್ತಾಹ ಎಂದು ಆಚರಿಸಲಾಗುತ್ತದೆ.
ಸಾಮಾನ್ಯವಾಗಿ ಕೈಗಾರಿಕೆಗಳ ಮತ್ತು ಕಾರ್ಖಾನೆಗಳ ಸಾಂದ್ರತೆ ಜಾಸ್ತಿ ಇರುವ ಜಿಲ್ಲೆಗಳ ಕೇಂದ್ರ ಸ್ಥಾನಗಳಲ್ಲಿ ಸರಕಾರಿ ಮತ್ತು ಸರಕಾರೇತರ ಸಂಸ್ಥೆಗಳು ಒಂದುಗೂಡಿ, ಇತರ ಆರೋಗ್ಯ ಸಂಸ್ಥೆಗಳು, ಅಗ್ನಿಶಾಮಕದಳ, ಗೃಹರಕ್ಷಕದಳ, ಪೋಲಿಸ್ ಇಲಾಖೆ, ಅರಣ್ಯ ಇಲಾಖೆ, ಸಾರಿಗೆ ಇಲಾಖೆ ಮತ್ತು ಕೈಗಾರಿಕಾ ಸಂಘ ಸಂಸ್ಥೆಗಳೆಲ್ಲಾ ಒಟ್ಟು ಸೇರಿ ಈ ಆಚರಣೆಯನ್ನು ಮಾಡುತ್ತಿದೆ. ಜನರಲ್ಲಿ ಮತ್ತು ಸಾರ್ವಜನಿಕರಲ್ಲಿ ಕೈಗಾರಿಕ ಅವಘಡಗಳನ್ನು ತಡೆಯುವುದು ಹೇಗೆ ಮತ್ತು ಅವಘಡ ನಡೆದಾಗ ಯಾವ ರೀತಿ ಮಾನವ ಸಂಪನ್ಮೂಲ, ಸಾರ್ವಜನಿಕ ಆಸ್ತಿಪಾಸ್ತಿಗಳ ನಾಶವನ್ನು ಕಡಮೆ ಮಾಡುವುದು ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿ ಮತ್ತು ವಿಚಾರ ವಿನಿಮಯ ನಡೆಸಲಾಗುತ್ತದೆ. ಕೈಗಾರಿಕ ಸುರಕ್ಷತೆ ಬಗ್ಗೆ ವಿಚಾರ ಸಂಕಿರಣಗಳು, ವರ್ಕ್‍ಶಾಪ್‍ಗಳು, ಸೆಮಿನಾರ್‍ಗಳು, ಸಮ್ಮೇಳನಗಳು ಮತ್ತು ತರಬೇತಿ ಕಾರ್ಯಕ್ರಮಗಳನ್ನು ದೇಶದಾದ್ಯಂತ ಹಮ್ಮಿಕೊಂಡು, ಜನರಲ್ಲಿ ಹೆಚ್ಚಿನ ಕೈಗಾರಿಕ ದುರ್ಘಟನೆ ನಡೆದಾಗ ಯಾವ ರೀತಿ ವರ್ತಿಸಬೇಕು ಎಂಬುದರ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಅದೇ ರೀತಿ ಕೈಗಾರಿಕ ಕಾರ್ಖಾನೆಗಳ ಸಾಂದ್ರತೆ ಹೆಚ್ಚಿರುವ ಪ್ರದೇಶಗಳಲ್ಲಿ ಸುರಕ್ಷಿತ ಅವವ್ಯಯಗಳ ಪಟ್ಟಿ ಮಾಡುವುದು, ಕೈಗಾರಿಕೆಗಳಿಂದಾಗುವ ದುರ್ಘಟನೆಗಳ ಮಾಪನ, ಅಪಘಾತಗಳ ಸಮಯದಲ್ಲಿ ಉಂಟಾಗುವ ಅಪಾಯಗಳು, ಪ್ರಮಾಣೀಕರಣ ಮತ್ತು ಕಡಿತಗೊಳಿಸುವ ಪ್ರಕ್ರಿಯೆಗಳ ಬಗೆಗಿನ ವಿಚಾರ ವಿನಿಮಯ ನಡೆಸಲಾಗುತ್ತದೆ.
ದಕ್ಷಿಣ ಕನ್ನಡ ಜಿಲ್ಲೆಯ ಪಕ್ಷಿನೋಟ :
ದ.ಕ. ಜಿಲ್ಲೆ 4859 ಚದರ ಕಿಲೋ ಮೀಟರ್ ವಿಸ್ತೀರ್ಣವಿದ್ದು, ಸುಮಾರು 21 ಲಕ್ಷ ಜನ ಸಂಖ್ಯೆ ಹೊಂದಿದೆ. ಶೇಕಡಾ 100ರಷ್ಟು ಸಾಕ್ಷರತೆ ಹೊಂದಿದ, 17ರಿಂದ 37 ಡಿಗ್ರಿ ಸೆಲ್ಲಿಯಸ್ ಉಷ್ಣತೆಯೊಳಗಿನ, ವರ್ಷಕ್ಕೆ 4000ಮಿಮೀ ಮಳೆಯನ್ನು ಪಡೆಯುತ್ತಿದ್ದು ಸುಮಾರು 40 ಕಿ.ಮೀ ಕರಾವಳಿ ತೀರವನ್ನು ಹೊಂದಿದೆ. ಸುಮಾರು 4.5 ಲಕ್ಷ ಕರಾವಳಿ ತೀರದ ಜನಸಂಖ್ಯೆಯನ್ನು ಹೊಂದಿದೆ. ಸುಮಾರು 22 ಹಳ್ಳಿಗಳು ಈ ಕರಾವಳಿ ತೀರದಲ್ಲಿ ವಾಸಿಸುತ್ತಿದೆ. ರಾಷ್ಟೀಯ ಅವಘಡಗಳನ್ನು (1) ಭೌಗೋಳಿಕ (ನೆರೆಹಾವಳಿ, ಸೈಕ್ಲೋನ್, ಭೂಕಂಪ, ಭೂಕುಸಿತ) (2) ಕೈಗಾರಿಕಾ ಅವಘಡ (ವಿಷಾನಿಲ ದುರಂತ, ಬೆಂಕಿ ಅವಘಡ ಅಥವಾ ಸ್ಪೋಟ, ತೈಲ ಸೋರಿಕೆ) (3) ಜೈವಿಕ ಅವಘಡ (ಸಾಂಕ್ರಾಮಿಕ ರೋಗಗಳು, ಆಹಾರ ಕಲಬೆರಕೆ, ವಿಷಪೂರಿತ ಆಹಾರ ಸೇವನೆ) ಮತ್ತು ಇತರ ಅವಘಡಗಳು (ರೈಲು, ಬಸ್ಸು, ವಿಮಾನ ದುರಂತ, ಕಟ್ಟಡ ಕುಸಿತ, ಕಾಲ್ ತುಳಿತ, ಬಾಂಬ್ ಅವಘಡ) ಎಂಬುದಾಗಿ 4 ರೀತಿಯಲ್ಲಿ ವಿಂಗಡಿಸಲಾಗಿದೆ. ಯಾವುದೇ ರೀತಿಯ ಅವಘಡಗಳು ದೇಶದ ಯಾವುದೇ ರಾಜ್ಯದ, ಯಾವುದೇ ಭಾಗದಲ್ಲಿ, ಯಾವಾಗಲೂ ಸಂಭವಿಸುವ ಸಾಧ್ಯತೆ ಇರುತ್ತದೆ. ಆದರೆ ಸೂಕ್ತ ರೀತಿಯ ಪರಾಮರ್ಷೆ, ಪುನರ್ ವಿಮರ್ಷೆ ಮತ್ತು ಕೂಲಂಕಷ ಅಧ್ಯಯನ ಮಾಡಿ, ಸಾಕಷ್ಟು ಮುಂಜಾಗರೂಕತೆ ವಹಿಸಿದ್ದಲ್ಲಿ, ಹೆಚ್ಚಿನ ಜೀವ ಹಾನಿ, ಆಸ್ತಿಪಾಸ್ತಿ ಹಾನಿ ಮತ್ತು ರಾಷ್ಟ್ರೀಯ ಸಂಪನ್ಮೂಲದ ಹಾನಿಯನ್ನು ಕಡಿಮೆ ಮಾಡಬಹುದು. ದ.ಕ. ಜಿಲ್ಲೆಯಲ್ಲಿ ಕೈಗಾರಿಕ ಕಾರ್ಖಾನೆಗಳ ಸಾಂದ್ರತೆ ಹೆಚ್ಚಾಗಿರುವುದರಿಂದ ಕೈಗಾರಿಕ ಮತ್ತು ರಾಸಾಯನಿಕ ಅವಘಡಗಳ ಪಟ್ಟಿಯಲ್ಲಿ 10 MAH (Major Accident Hazard) ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಸುಮಾರು 11 ಮುಖ್ಯವಾದ ತೈಲ ಸಂಸ್ಕರಣಾ ಮತ್ತು ಸಂಗ್ರಹ ಘಟಕಗಳಿದ್ದು, ಹಿಂದೂಸ್ಥಾನ್ ಪೆಟ್ರೋಲಿಯಂ, ಭಾರತ್ ಪೆಟ್ರೋಲಿಯಂ, ಇಂಡಿಯನ್ ಆಯಿಲ್, ಎಂಆರ್ ಪಿಎಲ್, ಟೋಟಲ್ ಆಯಿಲ್, ಓಎನ್ ಜಿಸಿ, ಎಂಸಿಎಫ್ ಎಲ್, ಪುತ್ತೂರು ಪೆಟ್ರೋ ಪ್ರೋಡಕ್ಟ್ ಮುಂತಾದ ಬೃಹತ್ ಕಂಪೆನಿಗಳು ತಮ್ಮ ಘಟಕಗಳನ್ನು ಮಂಗಳೂರು ತಾಲೂಕಿನಲ್ಲಿ ಹೊಂದಿದೆ. ಈ ಕಾರಣದಿಂದಾಗಿ ಹೆಚ್ಚಿನ ಜಾಗ್ರತೆ, ಮುತುವರ್ಜಿ ಮತ್ತು ಮುಂಜಾಗರೂಕತೆ ಅತೀ ಅಗತ್ಯ. ತೈಲ ಸೋರಿಕೆ, ವಿಷಾನಿಲ ಸೋರಿಕೆ ಮತ್ತು ಬೆಂಕಿ ಸ್ಪೋಟ ಮತ್ತು ಹೆಚ್ಚು ಬೇಗನೆ ಹೊತ್ತಿ ಉರಿಯುವ ತೈಲಗಳಿಂದಾಗಿ ಅವಘಡಗಳ ಸಾಧ್ಯತೆ ಹೆಚ್ಚಿರುತ್ತದೆ. ಅದೇ ರೀತಿ ಕ್ಲೋರಿನ್ ಮತ್ತು ಅಮೋನಿಯ ಸೋರಿಕೆ ಆಗುವ ಸಾಧ್ಯತೆಯೂ ಇದೆ. ಕ್ಲೋರಿನ್ ಅನಿಲವನ್ನು ಸಾಮಾನ್ಯವಾಗಿ ನೀರು ಶುದ್ಧೀಕರಿಸಲು ಮತ್ತು ಪರಿಷ್ಕರಿಸುವ ಕಾರ್ಖಾನೆಗಳಲ್ಲಿ ಹೆಚ್ಚು ಬಳಸಲಾಗುತ್ತದೆ. ಅದೇ ರೀತಿ ಅಮೋನಿಯ ಅನಿಲವನ್ನು ಮಂಗಳೂರು ಬಂದರಿನಲ್ಲಿ ಮತ್ತುಎಂಸಿಎಫ್ ನಲ್ಲಿ ಹೆಚ್ಚಾಗಿ ಸಂಗ್ರಹಣೆ ಮತ್ತು ಸಾಗಣೆಗಾಗಿ ವ್ಯವಹರಿಸಲಾಗುತ್ತದೆ. ಹಾಗೆಯೇ ಎಲ್ ಪಿಜಿ ಅಥವಾ ದ್ರವ ಪೆಟ್ರೋಲಿಯಂ ಅನಿಲ ಹಾಗೂ ಪೆಟ್ರೋಲಿಯಂ ಆಯಿಲ್ ಉತ್ಪನ್ನಗಳನ್ನು ಹೆಚ್ಚಿನ ಆಮದು ಮಾಡಿಕೊಳ್ಳುವ ಸಂದರ್ಭದಲ್ಲಿ ನ್ಯೂ ಮಂಗಳೂರು ಪೋರ್ಟ್‍ನಲ್ಲಿ ವ್ಯವಹರಿಸಲಾಗುತ್ತದೆ. ಅದೇ ರೀತಿ ಸಂಸ್ಕರಿಸುವ, ಪರಿಷ್ಕರಿಸಿ ಸಂಗ್ರಹಿಸುವ ವ್ಯವಸ್ಥೆಯೂ ಇರುವುದರಿಂದ ಸಾಕಷ್ಟು ಮುಂಜಾಗರೂಕತೆ ಮತ್ತು ವಿಪತ್ತು ನಿರ್ವಹಣೆ ಯೋಜನೆಯ ಅಗತ್ಯವಿರುತ್ತದೆ.
ವ್ಯೆಜ್ಞಾನಿಕತೆ, ತಂತ್ರಜ್ಞಾನ ಮತ್ತು ಆವಿಷ್ಕಾರಗಳು ಹುಟ್ಟಿಕೊಂಡಂತೆ, ಜೊತೆ ಜೊತೆಗೆ ಮನುಷ್ಯನ ಪ್ರಾಥಮಿಕ ಅವಶ್ಯಕತೆಗಳ ಹೊರತಾಗಿ, ಇನ್ನಿತರ ಭೋಗ ಭಾಗ್ಯಗಳ ಪಟ್ಟಿ ಬೆಳೆಯುತ್ತಲೇ ಇದೆ. ಹಾಗಾಗಿ ಔದ್ಯೋಗಿಕರಣ, ಕೈಗಾರೀಕೀಕರಣ, ವ್ಯಾಪಾರೀಕರಣ ಎಲ್ಲವೂ ಜೊತೆ ಜೊತೆಯಾಗಿಯೇ ಧಾವಂತದಲ್ಲಿ ಮುನ್ನಗ್ಗುತ್ತಲಿದೆ. ಇದರ ಜೊತೆಗೆ ಹಲವಾರು ಅಡ್ಡ ಪರಿಣಾಮಗಳು, ತೊಂದರೆಗಳು ಮತ್ತು ಸಂಕಷ್ಟಗಳು ಬರತೊಡಗಿದೆ. ಜನರ ಆಸೆ ಆಕಾಂಕ್ಷೆಗಳಿಗೆ ಹೇಗೆ ಇತಿಮಿತಿ ಇಲ್ಲವೋ, ಹಾಗೆಯೇ ಕೈಗಾರಿಕೀಕರಣ ಮತ್ತು ಔದ್ಯೋಗಿಕ ಕ್ರಾಂತಿಯಿಂದ ಹಲವಾರು ಮನುಷ್ಯ ನಿರ್ಮಿತ ಅವಘಡಗಳ ಸಾಧ್ಯತೆಯನ್ನು, ಮನುಷ್ಯ ತನ್ನ ಸುತ್ತಲಿನ ವಾತಾರಣದಲ್ಲಿ ಬೆಳಸಿಕೊಂಡಿದ್ದಾನೆ. ಈ ಕಾಲಘಟ್ಟದಲ್ಲಿ ಅವಘಡಗಳು ಆಗುವುದು ಸಾಮಾನ್ಯ. ಆದರೆ ಈ ಅವಘಡಗಳನ್ನು ಹೇಗೆ ಪರಿಣಾಮಕಾರಿಯಾಗಿ ತಡೆಗಟ್ಟಬಹುದು ಮತ್ತು ಸುರಕ್ಷಿತವಾಗಿ ನಿಯಂತ್ರಿಸಬಹುದು ಎಂಬುದರ ಬಗ್ಗೆ ಪ್ರತಿಯೊಬ್ಬ ನಾಗರಿಕನೂ ಚಿಂತಿಸಬೇಕಾದ ಅನಿವಾರ್ಯತೆ ಖಂಡಿತವಾಗಿಯೂ ಇದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಪ್ರಜೆಯು ತನ್ನ ಸಾಮಾಜಿಕ ಹೊಣೆಗಾರಿಕೆಯನ್ನು ಅರಿತು ನಿಭಾಯಿಸಿದಲ್ಲಿ ಈ ರೀತಿಯ ಮಾನವ ನಿರ್ಮಿತ ಅವಘಡಗಳನ್ನು ಹತೋಟಿಯಲ್ಲಿಡಲು ಸಾಧ್ಯವಾಗಬಹುದು. ಈ ಕಾರಣದಿಂದಲೇ ರಾಷ್ಟ್ರೀಯ ಸುರಕ್ಷತಾ ಪರಿಷತ್ತು ಇದರ ವತಿಯಿಂದ ನಡೆಯುವ ರಾಷ್ಟ್ರೀಯ ಸುರಕ್ಷತಾ ದಿನ ಮತ್ತು ಸಪ್ತಾಹಕ್ಕೆ ಹೆಚ್ಚಿನ ಮಹತ್ವ ಬಂದಿದೆ ಎಂದರೂ ಅತಿಶಯೋಕ್ತಿಯಲ್ಲ. ಈ ಆಚರಣೆಯನ್ನು ನಾವೆಲ್ಲರೂ ಅರ್ಥಪೂರ್ಣವಾಗಿ ಆಚರಿಸೋಣ ಮತ್ತು ನಾವು ನಮ್ಮ ಸಾಮಾಜಿಕ ಜವಾಬ್ದಾರಿಗಳನ್ನು ಸೂಕ್ತ ರೀತಿಯಲ್ಲಿ ಸಕಾಲದಲ್ಲಿ ನಿಭಾಯಿಸೋಣ. ಇದರಲ್ಲಿಯೇ ನಮ್ಮ ಸಮಾಜದ ಮತ್ತು ಮನುಕುಲದ ಉನ್ನತ್ತಿ ಮತ್ತು ಸಾಮರಸ್ಯ ಅಡಗಿದೆ.
ಡಾ|| ಮುರಲೀ ಮೋಹನ್ ಚೂಂತಾರು
ಸಮಾದೇಷ್ಟರು, ಗೃಹರಕ್ಷಕದಳ
ಮುಖ್ಯ ಪಾಲಕರು, ದಕ್ಷಿಣ ಕನ್ನಡ ಜಿಲ್ಲಾ ಪೌರರಕ್ಷಣಾ ಪಡೆ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ