ಹಿರಿಯ ವಿದ್ವಾಂಸ ಡಾ. ಎಸ್. ಜಗನ್ನಾಥ ಸಲಹೆ | ಒಆರ್‌ಐ ನಲ್ಲಿ ವಿಶೇಷ ಉಪನ್ಯಾಸ
ಮೈಸೂರು: ಗ್ರಂಥಸಂಪಾದನೆ ಶಾಸ್ತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರಿಗೆ ಹೆಚ್ಚಿನ ಅಧ್ಯಯನದ ಅವಶ್ಯಕತೆ ಇದೆ ಎಂದು ಹಿರಿಯ ವಿದ್ವಾಂಸ ಡಾ. ಎಸ್. ಜಗನ್ನಾಥ ಹೇಳಿದರು.
ಪ್ರಾಚ್ಯವಿದ್ಯಾ ಸಂಶೋಧನಾಲಯ (ಒಆರ್‌ಐ), ಇಂದಿರಾಗಾಂಧಿ ರಾಷ್ಟ್ರಿ ಕಲಾ ಕೇಂದ್ರ ವತಿಯಿಂದ ನಗರದ ಮಾನಸಗಂಗೋತ್ರಿಯ ವಿಜ್ಞಾನ ಭವನ ಸಭಾಂಗಣದಲ್ಲಿ ಬುಧವಾರ ‘ಗ್ರಂಥಸಂಪಾದನ ಶಾಸ್ತ್ರದ ಪರಿಚಯ’ ವಿಷಯದ ಕುರಿತು ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಪ್ರಧಾನ ಭಾಷಣ ಮಾಡಿದರು.
ಅಧ್ಯಯನ ಎಂಬುದು ಇಲ್ಲದಿದ್ದರೆ ಹೆಚ್ಚಿನ ಪ್ರಮಾದಗಳು ಎದುರಾಗುತ್ತದೆ. ಪ್ರಾಚೀನ ಗ್ರಂಥಗಳಲ್ಲಿ ಕಂಡು ಬರುವ ಹಲವು ಹತ್ತು ಶಬ್ದಗಳು ನಮಗೆ ಪರಿಚಯವೇ ಇರುವುದಿಲ್ಲ. ಆದರೆ ಆ ಶಬ್ದದ ಅರ್ಥವನ್ನು ಸೂಕ್ತವಾಗಿ ಅರ್ಥ ಮಾಡಿಕೊಳ್ಳುವ ಕಲೆಗಾರಿಕೆ, ತಂತ್ರ ಮತ್ತು ಜಾಣ್ಮೆ ಗಳನ್ನು, ಸಂದರ್ಭೋಚಿತ ಅರ್ಥತಿಳಿಯುವ ಚಾಕಚಕ್ಯತೆಯನ್ನು ರೂಢಿಸಿಕೊಳ್ಳಬೇಕು. ಆಗ ಮಾತ್ರ ನಾವು ಮೂಲ ಗ್ರಂಥ ಕರ್ತರಿಗೆ ಸೂಕ್ತ ನ್ಯಾಯ ಒದಗಿಸಲು ಸಹಕಾರಿಯಾಗುತ್ತದೆ. ಕೃತಿ ಆಶಯ ಓದುಗರಿಗೆ ಮುಟ್ಟಿಸಲು ಅನುವಾಗುತ್ತದೆ ಎಂದು ಅವರು ಹೇಳಿದರು.
ಅನುವಾದಕರು, ಗ್ರಂಥ ಸಂಪಾದಕರು ಈ ನಿಟ್ಟಿನಲ್ಲಿ ಆತ್ಮಾವಲೋಕನ ಮಾಡಿಕೊಂಡರೆ ವಿಶ್ವಾಸ ಮತ್ತು ಭರವಸೆ ಸಾವಿರ ಪಟ್ಟು ಹೆಚ್ಚಾಗುತ್ತದೆ ಎಂದು ಜಗನ್ನಾಥ್ ಸಲಹೆ ನೀಡಿದರು.
ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವ ವಿದ್ಯಾಲಯದ ಕುಲಸಚಿವ ಪ್ರೊ. ನಾಗೇಶ ವಿ. ಬೆಟ್ಟಕೋಟೆ ಅವರು ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರಾಚ್ಯವಿದ್ಯಾ ಸಂಶೋಧನಾಲಯದಲ್ಲಿರುವ ಗ್ರಂಥಗಳು ಸಂಶೋಧಕರಿಗೆ ಸರಳವಾಗಿ ಲಭ್ಯವಾಗಬೇಕು.
ಪ್ರಾಚೀನ ಗ್ರಂಥ, ತಾಳೆಗರಿ ಸಂಗ್ರಹ ಮಾಡುವ ಮಹೋನ್ನತ ಕಾರ್ಯನಿರ್ವಹಿಸುತ್ತಿರುವ ಪ್ರಾಚ್ಯವಿದ್ಯಾ ಸಂಶೋಧನಾಲಯಕ್ಕೆ ಸರ್ಕಾರದಿಂದ ಹೆಚ್ಚುವರಿ ಆರ್ಥಿಕ ನೆರವು ದೊರೆಯಬೇಕು ಎಂದು ಆಶಿಸಿದರು.
ಪ್ರಾಚ್ಯವಿದ್ಯಾ ಸಂಶೋಧನಾಲಯದ ನಿರ್ದೇಶಕ ಡಾ.ಡಿ.ಪಿ. ಮಧುಸೂದನಾಚಾರ್ಯ, ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ಬೆಂಗಳೂರಿನ ಸಂಯೋಜನಾ ಸಹಾಯಕಿ ಆರ್. ಸ್ವಕ್ಷಾ,ಉಪ ನಿರ್ದೇಶಕಿ ಡಾ.ಸಿ. ಪಾರ್ವತಿ, ಹಿರಿಯ ವಿದ್ವಾಂಸ ಡಾ. ಟಿ.ವಿ. ಸತ್ಯನಾರಾಯಣ ಇತರರು ಹಾಜರಿದ್ದರು.
ಮೈಸೂರಿನ ಪ್ರಾಚ್ಯವಿದ್ಯಾ ಸಂಶೋಧನಾಲಯವು ಮಾನಸಗಂಗೋತ್ರಿಯ ವಿಜ್ಞಾನ ಭವನ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ಗ್ರಂಥಸಂಪಾದನ ಶಾಸ್ತ್ರದ ಪರಿಚಯ’ ವಿಷಯದ ಕುರಿತು ಹಿರಿಯ ವಿದ್ವಾಂಸ ಡಾ. ಜಗನ್ನಾಥ ವಿಶೇಷ ಉಪನ್ಯಾಸ ನೀಡಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ