ಶ್ರೀಪತಿ ತಂತ್ರಿಗಳ ಕೃತಿ ಲೋಕಾರ್ಪಣೆ
ಮಂಗಳಗಂಗೋತ್ರಿ: ಭಾರತೀಯ ದರ್ಶನಗಳು ಬದುಕಿನ ಮಾನಸಿಕ, ಬೌದ್ದಿಕ, ಅಧ್ಯಾತ್ಮಿಕ ವಿಕಸನದ ಜೊತೆಗೆ ಸಾಮಾಜಿಕ ಸಂಸ್ಕಾರವನ್ನು ಉನ್ನತಿಗೇರಿಸುವ ಜ್ಞಾನ ಪರಂಪರೆಯನ್ನು ಹೊಂದಿದೆ. ಜ್ಞಾನಕ್ಕೆ ಯಾವುದೇ ಮಿತಿಯಿಲ್ಲ, ಗಡಿಗಳಿಲ್ಲ, ಜ್ಞಾನ ಎಲ್ಲಕ್ಕಿಂತ ಮಿಗಿಲು ಎಂಬುದು ಜಗತ್ತಿನ ಎಲ್ಲ ಧರ್ಮಗಳ ಸಾರವಾಗಿದೆ. ಭಾರತೀಯ ವೇದೋಪನಿಷತ್ತುಗಳು ಮತ್ತು ದರ್ಶನಗಳು ಜಾಗತಿಕ ಮನ್ನಣೆಗೆ ಪಾತ್ರವಾಗಿದೆ ಎಂದು ಮಂಗಳೂರು ವಿವಿಯ ಕುಲಪತಿ ಪ್ರೊ. ಪಿ.ಎಸ್ ಯಡಪಡಿತ್ತಾಯ ಹೇಳಿದರು.
ಅವರು ಸೋಮವಾರ ಮಂಗಳೂರು ವಿವಿ ಪ್ರಸಾರಾಂಗ ಪ್ರಕಟಿಸಿದ ಸಮಾಜಶಾಸ್ತ್ರಜ್ಞ ಉಡುಪಿ ಶ್ರೀಪತಿ ತಂತ್ರಿ ಇವರ 'ಭಾರತೀಯ ದರ್ಶನಗಳ ಇತಿಹಾಸ- ಒಂದು ಮಾನವ ಶಾಸ್ತ್ರೀಯ ವಿಮರ್ಶೆ' ಎಂಬ ಕೃತಿಯನ್ನು ಸಿಂಡಿಕೇಟ್ ಸಭಾಂಗಣದಲ್ಲಿ ಬಿಡುಗಡೆಗೊಳಿಸಿ ಮಾತನಾಡಿದರು.
ಶ್ರೀಪತಿ ತಂತ್ರಿಯವರದು ವಿದ್ವತ್ಪೂರ್ಣ ನೇರ ನಡೆ ನುಡಿಯ ವ್ಯಕ್ತಿತ್ವ. ಚಿಕಿತ್ಸಕ ದೃಷ್ಟಿಕೋನದ ಅವರು ಮಂಗಳೂರು ವಿಶ್ವವಿದ್ಯಾನಿಲಯದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಭಾರತೀಯ ದರ್ಶನಗಳ ಇತಿಹಾಸದ ಕುರಿತ ಅವರ ಸಂಶೋಧನೆಯು ಮಂಗಳೂರು ವಿವಿಯ ಡಿಲಿಟ್ ಪದವಿ ಗೌರವಕ್ಕೆ ಪಾತ್ರವಾಗಿದ್ದು ಅದೀಗ ಪುಸ್ತಕ ರೂಪದಲ್ಲಿ ಪ್ರಸಾರಾಂಗದಿಂದ ಪ್ರಕಟಗೊಳ್ಳುತ್ತಿರುವುದು ಅಭಿನಂದನಾರ್ಹ ಎಂದರು.
ಮಂಗಳೂರು ವಿವಿ ಕುಲಸಚಿವ ಪ್ರೊ.ಕಿಶೋರ್ ಕುಮಾರ್ ಸಿ.ಕೆ ಮಾತನಾಡಿ, ಮನುಷ್ಯನ ಬದುಕಿಗೆ ನಂಬಿಕೆಗಳೇ ಮುಖ್ಯ. ನಂಬಿಕೆಗಳಿಂದಲೇ ಜಗತ್ತು ನಡೆಯುತ್ತದೆ. ಆ ನಂಬಿಕೆಗಳ ವೈಜ್ಞಾನಿಕ ಅರಿವು ಹೊಸ ದರ್ಶನಗಳನ್ನು ನಮ್ಮ ಮುಂದಿಡುತ್ತದೆ. ಶ್ರೀಪತಿ ತಂತ್ರಿಗಳು ಭಾರತೀಯ ಪರಂಪರೆಯ ಇಂತಹ ದರ್ಶನಗಳ ಕುರಿತು ಈ ಕೃತಿಯಲ್ಲಿ ಸೂಕ್ಷ್ಮ ಅವಲೋಕನ ಮಾಡಿದ್ದಾರೆ ಎಂದು ಹೇಳಿದರು.
ಮಂಗಳೂರು ವಿವಿಯ ಹಣಕಾಸು ಅಧಿಕಾರಿ ಪ್ರೊ. ಸಂಗಪ್ಪ, ಯೋಗ ವಿಜ್ಞಾನ ವಿಭಾಗದ ಅಧ್ಯಕ್ಷರಾದ ಪ್ರೊ. ಕೆ. ಕೃಷ್ಣಶರ್ಮ, ಪ್ರಸಾರಾಂಗದ ನಿರ್ದೇಶಕ ಪ್ರೊ. ಸೋಮಣ್ಣ, ಸಹಾಯಕ ನಿರ್ದೇಶಕ ಡಾ. ಧನಂಜಯ ಕುಂಬ್ಳೆ ಮತ್ತು ಪ್ರಸಾರಾಂಗದ ಸಿಬ್ಬಂದಿಗಳು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ