ಮಂಗಳೂರು: ಕರ್ನಾಟಕ ಕರಾವಳಿ ನೃತ್ಯಕಲಾ ಪರಿಷತ್ ಮಂಗಳೂರು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಭಾಗಿತ್ವದಲ್ಲಿ ಮಾ.19ರಂದು ಭಾನುವಾರ ಅತ್ತಾವರದ ಶ್ರೀ ಚಕ್ರಪಾಣಿ ಗೋಪಿನಾಥ ದೇವಸ್ಥಾನದಲ್ಲಿ ಭರತಮುನಿ ಜಯಂತಿ ಕಾರ್ಯಕ್ರಮ ಜರುಗಲಿದೆ.
ಬೆಳಗ್ಗೆ 10 ಗಂಟೆಯಿಂದ ಸಭಾ ಕಾರ್ಯಕ್ರಮ ಆರಂಭವಾಗಲಿದ್ದು, ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಹಾಗೂ ವಿಶ್ರಾಂತ ಪ್ರಾಂಶುಪಾಲರಾದ ಪ್ರೊ. ಎಂ.ಎಲ್ ಸಾಮಗ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ಮಂಗಳೂರು-ಉರ್ವದ ನಾಟ್ಯಾರಾಧನಾ ಕಲಾಕೇಂದ್ರದ ನಾಟ್ಯ ವಿದುಷಿ ಸುಮಂಗಲಾ ರತ್ನಾಕರ್ ಅವರು ಭರತಮುನಿಗೆ ನುಡಿನಮನ ಸಲ್ಲಿಸಲಿದ್ದಾರೆ. ಚಕ್ರಪಾಣಿ ದೇವಸ್ಥಾನದ ಮೊಕ್ತೇಸರರಾದ ಮೋಹನ್ ಕೆ. ಪೂಜಾರಿ, ಮಂಗಳೂರು ಪ್ರೆಸಿಡೆನ್ಸಿ ಸ್ಕೂಲ್ ಪ್ರಾಂಶುಪಾಲರಾದ ನಾಟ್ಯ ವಿದುಷಿ ಶೈಲಾ ಸಚಿನ್ ಅವರು ಅಭ್ಯಾಗತರಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಹಿರಿಯ ಕಲಾವಿದರಾದ ಕರ್ನಾಟಕ ರಾಜ್ಯೋತ್ಸವ ಪುರಸ್ಕೃತ, ಕರ್ನಾಟಕ ಕಲಾಶ್ರೀ ಪಿ. ಕಮಲಾಕ್ಷ ಆಚಾರ್ (ನೃತ್ಯ ನಿಕೇತನ ಬೆಳ್ತಂಗಡಿ) ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಕದ್ರಿ ನೃತ್ಯ ಭಾರತಿಯ ನಿರ್ದೇಶಕಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ 2022ನೇ ಸಾಲಿನ ಕರ್ನಾಟಕ ಕಲಾಶ್ರೀ ಪುರಸ್ಕೃತೆ ವಿದುಷಿ ಗೀತಾ ಸರಳಾಯ ಹಾಗೂ ಕೊಟ್ಟಾರದ ಭರತಾಂಜಲಿಯ ನೃತ್ಯ ನಿರ್ದೇಶಕಿ, 2022ನೇ ಸಾಲಿನ ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ವಿದುಷಿ ಪ್ರತಿಮಾ ಶ್ರೀಧರ್ ಅವರಿಗೆ ಅಭಿನಂದನೆ ಕಾರ್ಯಕ್ರಮವೂ ನೆರವೇರಲಿದೆ.
ಬಳಿಕ ನೃತ್ಯಾರ್ಚನೆ- ಸಮೂಹ ನೃತ್ಯ ನಡೆಯಲಿದೆ. ಇದರಲ್ಲಿ ವಿದ್ವಾನ್ ಬಿ. ದೀಪಕ್ ಕುಮಾರ್ ಅವರ ನಿರ್ದೇಶನದಲ್ಲಿ ಪುತ್ತೂರಿನ ಶ್ರೀ ಮೂಕಾಂಬಿಕ ಕಲ್ಚರಲ್ ಅಕಾಡೆಮಿ ಸಂಸ್ಥೆಯ ಕಲಾವಿದರು; ವಿದುಷಿ ವಿದ್ಯಾ ಮನೋಜ್ ಅವರ ನಿರ್ದೇಶನದಲ್ಲಿ ಕಲ್ಲಡ್ಕದ ಕಲಾನಿಕೇತನ ಡ್ಯಾನ್ಸ್ ಫೌಂಡೇಶನ್ ಕಲಾವಿದರು; ಪ್ರಣತಿ ಚೈತನ್ಯ ನಿರ್ದೇಶನದಲ್ಲಿ ಪದಯಾನ ಪದ್ಯಾಣ ಸಂಸ್ಥೆಯ ಕಲಾವಿದರು ಭಾಗವಹಿಸಲಿದ್ದಾರೆ.
ಅಪರಾಹ್ನ 2:30ರಿಂದ ನೃತ್ಯ ಕಲಾವಿದರ ಸಮಾವೇಶ ನಡೆಯಲಿದ್ದು, ಕರ್ನಾಟಕ ಕಲಾಶ್ರೀ ವಿದ್ವಾನ್ ಚಂದ್ರಶೇಖರ ನಾವಡ ಕೆ. ಅವರು ನಿರ್ವಹಿಸಲಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ