ಮಂಗಳೂರು: ನಗರದ ಕೆನರಾ ಕಲ್ಚರಲ್ ಅಕಾಡೆಮಿ ಮತ್ತು ಕಲಾಭಿ ಸಂಸ್ಥೆಯ ವತಿಯಿಂದ ಮಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಏ.16ರಿಂದ 26ರ ವರೆಗೆ 9-ರಿಂದ 17 ವರ್ಷದೊಳಗಿನ ಮಕ್ಕಳಿಗಾಗಿ ವೃತ್ತಿಪರ ರಂಗಭೂಮಿ ಕಾರ್ಯಾಗಾರ ಆಯೋಜಿಸಲಾಗಿದೆ. ಪ್ರತಿದಿನ ಬೆಳಗ್ಗೆ 9ರಿಂದ ಸಂಜೆ 5ರ ವರೆಗೆ ಕೊಡಿಯಾಲ್‌ಬೈಲಿನ ಕೆನರಾ ಇಂಗ್ಲಿಷ್ ಹೈಯರ್ ಪ್ರೈಮರಿ ಶಾಲೆಯಲ್ಲಿ ಈ ಕಾರ್ಯಾಗಾರ ನಡೆಯಲಿದೆ.
ಕೊನೆಯ ದಿನ ಕೆನರಾ ಪಿಯು ಕಾಲೇಜಿನಲ್ಲಿ ಮೂರು ನಾಟಕಗಳನ್ನು ಪ್ರದರ್ಶಿಸಲಾಗುವುದು ಎಂದು ಕಲಾಭಿ ಸಂಸ್ಥೆಯ ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಂಗಳೂರಿನ ಎಲ್ಲ ಮಕ್ಕಳಿಗೂ ಮುಕ್ತ ಅವಕಾಶವಿದ್ದು, ಹೆಚ್ಚಿನ ಮಾಹಿತಿ ಮತ್ತು ನೋಂದಣಿಗಾಗಿ 8431631998 / 9900772221 ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.
ಕೆನರಾ ವಿದ್ಯಾ ಸಂಸ್ಥೆ ಇತ್ತೀಚೆಗೆ ಕೆನರಾ ಕಲ್ಚರಲ್ ಅಕಾಡೆಮಿಯನ್ನು ಆರಂಭಿಸಿದೆ. ಗೋವಾದ ಮುಖ್ಯ ಮಂತ್ರಿಗಳಾದ ಪ್ರಮೋದ್ ಸಾವಂತ್ ರವರು ಇದನ್ನೂ ವಿಧ್ಯುಕ್ತವಾಗಿ ಲೋಕಾರ್ಪಣೆ ಮಾಡಿದ್ದಾರೆ. ಈ ಅಕಾಡೆಮಿ ಮುಖಾಂತರ ಪಠ್ಯದೊಂದಿಗೆ ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಾಸ ಸಾಧಿಸುವ ಉದ್ದೇಶ ಹೊಂದಿದೆ. ರಾಷ್ಟ್ರೀಯ ಶಿಕ್ಷಣ ಯೋಜನೆಗೆ ಅನುಗುಣವಾಗಿ ಈ ಸಂಸ್ಥೆ ಹೊಸ ಯೋಜನೆಗಳನ್ನು ವಿದ್ಯಾರ್ಥಿಗಳ ಮಾನಸಿಕ ವಿಕಸನಕ್ಕಾಗಿ ಕಾರ್ಯಕ್ರಮ ನಿರ್ವಹಿಸುತ್ತಿದೆ.
ಮಂಗಳೂರಿನಲ್ಲಿ ಕಲೆ, ಕಲಾವಿದ ಮತ್ತು ಕಲಿಕೆ; ಈ ಮೂರನ್ನು ಕೇಂದ್ರವಾಗಿಸಿಕೊಂಡು, 'ಕಲೆಗಾಗಿ ಕಲಾವಿದ; ಕಲಾವಿದನಿಗಾಗಿ ಕಲೆ' ಎನ್ನುವ ಧ್ಯೇಯವಾಕ್ಯದೊಂದಿಗೆ ಅಸ್ತಿತ್ವಕ್ಕೆ ಬಂದ ಸಂಸ್ಥೆ 'ಕಲಾಭಿ'. ಕಲೆಯ ಕಲಿಕೆಗಾಗಿ ನೂತನ ದಾರಿಗಳ ಹುಡುಕಾಟದಲ್ಲಿ ಸದಾ ತನ್ನನ್ನು ತೊಡಗಿಸಿಕೊಂಡಿದೆ. ಈ ಎರಡೂ ಸಂಸ್ಥೆಗಳು ಜತೆಗೂಡಿ ಹಮ್ಮಿಕೊಂಡಿರುವ ಕಾರ್ಯಾಗಾರವೇ "ಅರಳು 2023". ಮಗು ಎಳವೆಯಿಂದಲೇ ಸ್ಪಂದನೆ ಮತ್ತು ಪ್ರತಿ ಸ್ಪಂದನೆಯ ಮೂಲಕ ಕಲಿಯುತ್ತಾ ಬೆಳೆಯುತ್ತದೆ. ಸೃಜನಶೀಲತೆ, ಕಾರ್ಯದಕ್ಷತೆ ಹಾಗೂ ಜತೆಗೂಡಿ ಬದುಕುವುದನ್ನು ಅದು ಸಮಾಜದಿಂದ ಕಲಿಯುತ್ತದೆ.
(ಮೊದಲ 60 ಮಕ್ಕಳಿಗೆ ಮಾತ್ರ ಆದ್ಯತೆ), ಮೂರು ಯುವ ಭರವಸೆಯ ನಿರ್ದೇಶಕರು, ನವೀನ್ ಸಾಣೆಹಳ್ಳಿ- ನೀನಾಸಂ ಪದವೀಧರ, ರಂಗಭೂಮಿ ನಿರ್ದೇಶಕ, ಚಲನಚಿತ್ರ ನಟ ಬಿಂದು ರಕ್ಷಿದಿ- ನೀನಾಸಂ ಪದವೀಧರರು, ಪಡ್ಡಾಯಿ ಚಲನಚಿತ್ರದ ನಾಯಕ ನಟ ಭುವನ್ ಮಣಿಪಾಲ- ನೀನಾಸಂ ಪದವೀಧರರ, ರಂಗಭೂಮಿ ನಿರ್ದೇಶಕ ಈ ಕಾರ್ಯಾಗಾರದ ನಾಟಕಗಳನ್ನು ನಿರ್ದೇಶಿಸಲಿದ್ದಾರೆ. ಕಲಾಭಿ ಸಂಸ್ಥೆಯ ಕಾರ್ಯದರ್ಶಿ, ನೀನಾಸಂ ಪದವೀಧರ ಭರವಸೆಯ ನಟ, ನಾಟಕ, ಚಿತ್ರಕಲೆ, ನೃತ್ಯ ಹೀಗೆ ಕಲೆಯ ವಿಭಿನ್ನ ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಉಜ್ವಲ್ ಯು.ವಿ. ಈ ಶಿಬಿರದ ನಿರ್ದೇಶಕರಾಗಿರುವರು.
ಮಕ್ಕಳ ಸೃಜನಶೀಲತೆಯನ್ನು ಪೋಷಿಸಲು, ಕಲ್ಪನೆ, ನಟನಾ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಕಲೆಯ ಮೇಲಿನ ಪ್ರೀತಿಯನ್ನು ಬೆಳೆಸಲು ಮಕ್ಕಳಿಗೆ ಅನನ್ಯ ಮತ್ತು ಹೃದಯ ಶ್ರೀಮಂತಿಕೆ ಅನುಭವವನ್ನು ಒದಗಿಸುವ ಕಾರ್ಯಾಗಾರವೇ ಈ ಅರಳು 2023. ಮಂಗಳೂರಿನ ರಂಗಾಸಕ್ತರು ಮಕ್ಕಳಿಗಾಗಿ ನಡೆಯುವ ಅರಳು ಕಾರ್ಯಾಗಾರದ ಪ್ರಯೋಜನವನ್ನು ಪಡೆಯುವಂತೆ ರಂಗಾಸಕ್ತರ, ಶಿಕ್ಷಕರ ಮತ್ತು ಪೋಷಕರ ಸಹಕಾರವನ್ನು ಸಂಯೋಜಕರು ಅಪೇಕ್ಷಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ