|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮುಂಬಯಿಯ ಮೋಹನ್ ಮಾರ್ನಾಡ್‌ರಿಗೆ ಮಲಬಾರ್ ವಿಶ್ವರಂಗ ಪುರಸ್ಕಾರ- 2023

ಮುಂಬಯಿಯ ಮೋಹನ್ ಮಾರ್ನಾಡ್‌ರಿಗೆ ಮಲಬಾರ್ ವಿಶ್ವರಂಗ ಪುರಸ್ಕಾರ- 2023


ಮೂಡುಬಿದರೆಯ ಸನಿಹದ ಒಂದು ಪುಟ್ಟ ಹಳ್ಳಿ ಮೂಡುಮಾರ್ನಾಡ್. ಆ ಮೂಡುಮಾರ್ನಾಡ್ ನಲ್ಲಿ ಅರಳಿತೊಂದು ಬೆಲೆ ಬಾಳುವ ಮುತ್ತು. ಆ ಮುತ್ತು ಮುಂಬಯಿಗೆ ಬಂದು ರತ್ನವಾದ ಕಥೆ ನಿಮ್ಮ ಮುಂದೆ.


ಅಂದು 1964 ಫೆಬ್ರವರಿ 21. ಅಪ್ಪಟ 24 ಕ್ಯಾರಟ್ ಚಿನ್ನದಿಂದ ರೂಪುಗೊಂಡಿತ್ತು ಸುಂದರ ಹೊನ್ನ ಸರ. ಅದು ಹೊನ್ನಪ್ಪ ಮತ್ತು ಸರಸ್ವತಿ ಶೆಟ್ಟಿ ದಂಪತಿಗಳು ಕೂಡಿಸಿ ಕಳಿದು ಬರೆದ ಮೋಹನ ಸರ.


ಹೌದು ಈ ಮುತ್ತು, ರತ್ನ, ಚಿನ್ನಕ್ಕೆ ಸಮನಾದ ಆ ಸರಸ್ವತೀ ಪುತ್ರ ಮೋಹನ್ ಮಾರ್ನಾಡ್ ರ ಜೀವನವೇ ಸಾಧನೆಗಳ ಆಗರ- ಸಾಗರ. ಇವರೊಬ್ಬ ಖ್ಯಾತ ಅಂಕಣ ಬರಹಗಾರ, ಕವಿ, ಕತೆಗಾರ, ನಾಟಕಕಾರ, ನಟ, ನಿರ್ದೇಶಕ, ನಿರ್ಮಾಪಕ, ಡಬ್ಬಿಂಗ್ ಕಲಾವಿದ ಇನ್ನೂ ಹಲವಾರು. ಆಲ್ ಇನ್ ವನ್.


ಮೋಹನ್ ತನ್ನ ಪ್ರಾಥಮಿಕ ವಿದ್ಯಾರ್ಜನೆಯನ್ನು ಹುಟ್ಟೂರ ನೆಲದಲ್ಲೇ ಮುಗಿಸಿ ಮುಂಬಯಿಯತ್ತ ಮುಖ ಮಾಡಿದರು. ಆಗಿನ ಪರಿಸ್ಥಿತಿಗೆ ತಲೆಬಾಗಿ  ಉದ್ಯೋಗಾಕಾಂಕ್ಷಿಯಾಗಿ ಮುಂಬಯಿಯತ್ತ ಪಾದ ಬೆಳೆಸಿದವರು ಮೋಹನ್. ಆದರೆ ಓದುವ ಬಯಕೆ ಮಾತ್ರ ಇಂಗಿರಲಿಲ್ಲ. ಉದ್ಯೋಗ ಮಾಡಿಕೊಂಡು ಓದು ಮುಂದುವರಿಸುವ ಆಕಾಂಕ್ಷಿಗಳ ವಿದ್ಯಾಲಯ. ಮುಂಬಯಿಯ ಪಿ.ಟಿ. ಬಜಾರ್ ಗೇಟ್ ನ ಫ್ರೀ ನೈಟ್ ಹೈಸ್ಕೂಲಿಗೆ ಸೇರಿದರು. ಮುಂದೆ ಕನ್ನಡ ಭವನ, ಸಿದ್ಧಾರ್ಥ ಕಾಲೇಜಿನಲ್ಲಿ ಬಿ.ಕಾಂ. ಪದವಿಯನ್ನೂ ಪಡೆದರು.

ಕೆಸರನ್ನೊದ್ದು ನೀರಿಂದೆದ್ದು ಹೊರಬಂದು ತನ್ನ ಚಂದವ ಜಗಕೆ ತೋರುವ ಆ ಚೆಲುವ ನೀರ್ದಾವರೆಯಂತೆ ಕಷ್ಟ ಪಟ್ಟು ಇಷ್ಟಪಟ್ಟು ಜೀವನ ಸರೋವರದಲ್ಲಿ ಮೇಲೆದ್ದು ಬಂದರು.


ಎಳವೆಯಿಂದಲೇ ಇವರಿಗೆ ನಮ್ಮ ಮಣ್ಣಿನ ಸಂಸ್ಕೃತಿ ಕಲೆಗಳ ಬಗ್ಗೆ ಅತೀವ ಒಲವು ಇತ್ತು. ವಿದ್ಯಾರ್ಜನೆಯ ಸಂದರ್ಭದಲ್ಲೂ ನಾಟಕಗಳಲ್ಲಿ ಅಭಿನಯ, ಭಾಷಣ, ಏಕಪಾತ್ರಾಭಿನಯ ಹೀಗೆ ಎಲ್ಲಾ ಕಲಾ ಪ್ರಾಕಾರಗಳಲ್ಲೂ ಆಸಕ್ತಿಯ ತೊಡಗಿ ಕೊಳ್ಳುವಿಕೆ ಸಾಧನೆಯ ಉತ್ತುಂಗ ಬಿಂದುವಿನ ಕಡೆ ಬೊಟ್ಟು ಮಾಡಿ ತೋರಿಸುತ್ತಿತ್ತು ಇವರ ಮನ. ಪುಟಿದೇಳಬೇಕು ಜೀವನದಿ ಕೊನೆ ಉಸಿರಿರುವವರೆಗೂ ಬದ್ದತೆ ಇರಬೇಕು ತೊಡಗಿಕೊಳುವ ಕಾಯಕದೊಳ್ ಎಂಬಂತೆ ಉದ್ಯೋಗದ ಜೊತೆಗೆ ರಂಗಭೂಮಿಯನ್ನು ಒಪ್ಪಿಕೊಂಡಿದ್ದರಿಂದ ಮುಂಬಯಿಯ ಕಲಾ ಜಗತ್ತು ಇವರನ್ನು ಕರೆಯಿತು. ಒಳ್ಳೆಯ ಸನ್ಮಿತ್ರರ ಬಳಗದ ಪ್ರೀತಿ ದೊರಕಿತು. ನಟನೆ ಮೋಹನ್ ರನ್ನು ಅಪ್ಪಿ ಹಿಡಿಯಿತು, ಎಲ್ಲರ ಗಮನ ಸೆಳೆಯಿತು. ಹೊರಟಿತು ರಥ ಯಾತ್ರೆ.. ಅಭಿನಯ ಚಕ್ರವರ್ತಿಯ ವಿಜಯಯಾತ್ರೆ.


ಬರೆದರೆರಡು ತುಳು ನಾಟಕಗಳು. ಅದರಲ್ಲೊಂದು ಕಕುಂ ಮಮ ಎ೦ದು. ಬಿಡಿಸಿ ಹೇಳಬೇಕೆಂದರೆ "ಕಲುವೆರೆ ಕುಂಟು ಮಡಿ ಮಲ್ಪುನಾಯೆ" ಎಂದು. ಇನ್ನೊಂದು ಯಮಲೋಕೊಡು ಪಾಲಿಟಿಕ್ಸ್. ಅದೇ ರೀತಿ ಕನ್ನಡದಲ್ಲೊಂದು "ಮಿಲನ". 


ಇನ್ನು  ಮೂರು ವಿಭಿನ್ನ ಪಾತ್ರಗಳ ಮೂಲಕ ಅಭಿಮಾನಿಗಳಿಗೆ ತನ್ನ ಅಭಿನಯ ಸಾಮರ್ಥ್ಯವನ್ನು ತೋರಿಸಿಕೊಟ್ಟ ನಾಟಕ. "ಬಲ್ಪುನಕುಲಾ... ಗಿಡಪ್ಪುನಕುಲಾ....".

ಇವರ ಅಭಿನಯ ಸಾಮರ್ಥ್ಯ ಜನತೆಗೆ ಎಷ್ಟು ಹಿಡಿಸಿತ್ತೆಂದರೆ 1991ರಲ್ಲಿ ಇವರ 27ನೇ ವರ್ಷದಲ್ಲೇ ಹೆಸರಾಂತ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ "ಮುಂಬಯಿಯ ಸೂಪರ್ ಸ್ಟಾರ್ ಕನ್ನಡಿಗ" ಎಂಬ ಪ್ರಶಂಸನಾ ಲೇಖನ ಅಚ್ಚಾಗಿತ್ತು. ಹಾಗಾಗಿ ಇವರ ಅಭಿನಯ ಅನುಭವ ಟೆಲಿವಿಶನ್ ವಲಯಕ್ಕೆ ಲಗ್ಗೆ ಹಾಕಿತು. ಅಶೋಕ್ ಪಂಡಿತ್ ರ ಫಿಲ್ಮೀ ಚಕ್ಕರ್, ಸ್ವಾಮೀ ಸ್ಟಾಮೀ ಕನ್ನಡ ಧಾರವಾಹಿಯಲ್ಲಿ ನಟನೆ, ಹಿಂದಿ ಧಾರವಾಹಿ ಚಾಣಕ್ಯಕ್ಕೆ ಸಂಗೀತ ರಚನೆ, ಜ್ಞಾನಪೀಠ ಪುರಸ್ಕೃತ "ಕಯರ್" ಟಿವಿ ಧಾರಾವಾಹಿಗೆ ಸಹ ನಿರ್ದೇಶನ, 13 ಕಂತುಗಳ "ಕಥಾ ಧಾರೆ" ಗೆ ಸಂಭಾಷಣೆ, ನಟನೆ, ಸಹ ನಿರ್ದೇಶನ ಮಾಡುವ ಮೂಲಕ ದೃಶ್ಯ ಮಾಧ್ಯಮದಲ್ಲಿ ಸಂಚಲನ ಮೂಡಿಸಿದರು. 


ಮಾರ್ನಾಡ್ ನಿರ್ಮಾಣದ "ಸುದ್ದ" ಎಂಬ ಡಿಜಿಟಲ್ ಚಿತ್ರ 2006ರಲ್ಲಿ 8 ನೇ ಏಷ್ಯನ್ ಚಲನಚಿತ್ರೋತ್ಸವದಲ್ಲಿ ಶ್ರೇಷ್ವ ಭಾರತೀಯ ವಿಭಾಗದ ಚಲನಚಿತ್ರ ಪ್ರಶಸ್ತಿ ಪಡೆದು ಜರ್ಮನಿಯ ಸ್ಟುಟ್ಗರ್ಟ ಚಿತ್ರೋತ್ಸವದಲ್ಲೂ ಪ್ರದರ್ಶನಗೊಂಡು ಅಂತರ್ ರಾಷ್ಟ್ರೀಯ ಮನ್ನಣೆಗೆ ಪಾತ್ರವಾದ ಪ್ರಥಮ ತುಳು ಡಿಜಿಟಲ್ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಯ್ತು.

1995ರಲ್ಲಿ ಮುಂಬಯಿಯಲ್ಲಿ ಮೋಹನ್ ರು ನಲ್ವತ್ತು ಕಲಾವಿದರನ್ನು ಒಗ್ಗೂಡಿಸಿ "ಟಿಪ್ಪು ಸುಲ್ತಾನ್" ಎಂಬ ಐತಿಹಾಸಿಕ ನಾಟಕ ನಿರ್ದೇಶನ ಮಾಡಿ ಜೊತೆಗೆ ಅದರಲ್ಲಿ ಟಿಪ್ಪುವಿನ ಪಾತ್ರ ನಿರ್ವಹಿಸಿದ್ದು ಎಲ್ಲರ ಮೆಚ್ಚುಗೆ ಪಡೆದದ್ದು ನೆನಪಿನಿಂದ ಮಾಸದ ವಿಷಯವಾಗಿತ್ತು. ಇನ್ನು 8 ಬಾರಿ ಪ್ರದರ್ಶನ ಕಂಡ ಇವರ ನಿರ್ದೇಶನದ "ನಲ್ವತ್ತರ ನಲುಗು" ಮಾರ್ನಾಡರನ್ನು ಶ್ರೇಷ್ಟ ನಿರ್ದೇಶಕರ ಸಾಲಿಗೆ ಸೇರಿಸಿತು. ಇನ್ನು ದೈವ ನ ಮನೆ, ನಾವಿಲ್ಲದಾಗ, ಬಿಡುಗಡೆ ಎಂಬಿತ್ಯಾದಿ ನಾಟಕಗಳು ಇವರ ಕೈಯಿಂದ ಜೀವ ತಳೆದಿವೆ.


ಮಾರ್ನಾಡರು ಜೀವನೋಪಾಯಕ್ಕಾಗಿ ಪ್ರಾರಂಭದಲ್ಲಿ ಅಂಬಾನಿಯವರ 'ಮುದ್ರಾ' ಜಾಹಿರಾತಿಗೆ ಕೆಲಸ ಮಾಡಿ ನಂತರ ತಮ್ಮದೇ ಆದ "ಮಾರ್ನಾಡ್ ಎಸೋಸಿಯೇಟ್ಸ್. ಎಂಬ ಜಾಹಿರಾತು ಸಂಸ್ಥೆಯನ್ನು ಸ್ಥಾಪಿಸಿ ನಡೆಸಿಕೊಂಡು ಬಂದಿದ್ದಾರೆ. ಉದ್ಯೋಗದ ನಡುವೆ ಈ ವರೆಗೆ ಒಂದು ಲಕ್ಷಕ್ಕೂ ಮಿಕ್ಕ ಜಾಹಿರಾತುಗಳಿಗೆ ಕನ್ನಡ ಹಾಗೂ ಇತರ ಭಾಷೆಗಳಲ್ಲಿಯೂ ಧ್ವನಿ ಸಂಯೋಜನೆ ಮಾಡಿದ್ದು ಜೀವನ ಶ್ರೇಷ್ಟಸಾಧನೆಯೇ ಸರಿ.


ಮಾರ್ನಾಡರು H. K ಕರ್ಕೇರಾ, ಸದಾನಂದ ಸುವರ್ಣ, ಗಿರಿಧರ್, ಭರತ್ ಕುಮಾರ್ ಪೊಲಿಪು, ಅಹಲ್ಯಾ ಬಲ್ಲಾಳ್ ರಂತಹ ಹಲವಾರು ಶ್ರೇಷ್ಟ ನಿರ್ದೇಶಕರ ನಿರ್ದೇಶನದ ನಾಟಕಗಳಲ್ಲಿ ಈ ವರೆಗೆ ಸುಮಾರು 375 ಕ್ಕೂ ಮಿಕ್ಕಿದ ನಾಟಕಗಳಲ್ಲಿ ಅಭಿನಯಿಸಿ, 6 ಜಾಹಿರಾತು ಚಿತ್ರಗಳಲ್ಲೂ ನಟಿಸಿ ಅಭಿನಯ ಲೋಕದ ತಾರೆ ಎನಿಸಿಕೊಂಡರು. ಈ ಎಲ್ಲ ಸಾಧನೆಗಳ ಕೈಗನ್ನಡಿಯಾಗಿ "ಮೋಹನ ತರಂಗ" ಎಂಬ ಕೃತಿ ಅನಿತಾ ಪಿ. ತಾಕೊಡೆ ಯವರಿಂದ ವಿರಚಿಸಲ್ಪಟ್ಟು ಕರ್ನಾಟಕ ಸಂಘದಿಂದ ಪ್ರಕಟಿತಗೊಂಡು ಕನ್ನಡ ಸಂಸ್ಕೃತಿ ಇಲಾಖೆಯ ನಗದು ಪುರಸ್ಕಾರಕ್ಕೆ ಭಾಜನವಾಯ್ತು.


ಇವರ ಅಭಿನಯ ಲೋಕದ ಅನನ್ಯ ಸಾಧನೆಗಳನ್ನು ಗುರುತಿಸಿದ ಜನ, ಸಂಘ ಸಂಸ್ಥೆಗಳು ಪ್ರಶಸ್ತಿಗಳ ಸರಮಾಲೆಯನ್ನು ಇವರ ಕೊರಳ ಹಾರವಾಗಿಸಿದರು. ಅದರಲ್ಲಿ ಮುಖ್ಯವಾಗಿ : ಸದ್ದಿಲ್ಲದೆ ಮಾಡಿದ ಸಮಾಜ ಸೇವೆಗೆ ಸಮಾಜ ರತ್ನ, ಅಂತರ್ ರಾಷ್ಟ್ರೀಯ ಸಾಧನೆಗೆ ಮಂಗಳೂರು ನಾಗರಿಕ ಪ್ರಶಸ್ತಿ, ಸುವರ್ಣ ಶ್ರೀ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿಯ ವಾರ್ಷಿಕ ರಂಗ ಪ್ರಶಸ್ತಿ, ಮುಂಬಯಿ ಸುತ್ತಲಿನ ಅನೇಕ ಸಂಘ ಸಂಸ್ಥೆಗಳು ಕೊಡಮಾಡಿದ 35ಕ್ಕೂ ಹೆಚ್ಚು ಸನ್ಮಾನಗಳು, ಉಡುಪಿ ತುಳುಕೂಟ ನಡೆಸುವ ರಾಜ್ಯ ಮಟ್ಟದ ತುಳು ನಾಟಕ ಸ್ಪರ್ಧೆಯಲ್ಲಿ ಪಡೆದ 6 ಭಾರಿ ಯ ಶ್ರೇಷ್ಟ ನಟ ಪ್ರಶಸ್ತಿ ಗಳಿತ್ಯಾದಿ ಹಲವು ಪುರಸ್ಕಾರಗಳು ಆ ಕೊರಳ ಹಾರದ ಮುತ್ತು ರತ್ನಗಳಾಗಿ ಜನಮನದ ಕಣ್ಣು ಕುಕ್ಕುತ್ತಿವೆ. ಬಾಳಿನೆರಡು ಬಿಂಬಗಳು ಮಡದಿ ಸೀಮಾ ಹಾಗು ಮಗಳು ಮಾನವಿ  ಮಾರ್ನಾಡರ ಭಾವಾಂತರಂಗಗಳಿಗೆ ಕನ್ನಡಿಯಂತೆ ಸ್ಪಂದಿಸುತ್ತ ಬಾಳ ಪಯಣದಲ್ಲಿ ಕೈಗೆ ಕೈ ಜೋಡಿಸಿ ಸಾಗುತ್ತಿದ್ದಾರೆ.

ಹೀಗೆ ನಾಟಕರಂಗದ ಅಪೂರ್ವ ಸಾಧನೆಗಳಿಗೆ ಶಿರಬಾಗಿ ಸಂಸ್ಕೃತಿ ವಿಶ್ವಪ್ರತಿಷ್ಠಾನ (ರಿ) ಉಡುಪಿ ಹಾಗೂ ಮಲಬಾರ್ ಗೋಲ್ಡ್ ಆ್ಯಂಡ್ ಡ್ರೈಮಂಡ್ಸ್ ಈ ಬಾರಿಯ "ಮಲಬಾರ್ ವಿಶ್ವರಂಗ ಪುರಸ್ಕಾರ - 2023 ನ್ನು ದಿನಾಂಕ 26-03-23 ರಂದು ಕೊಟ್ಟು ಗೌರವಿಸಲಾಗುವುದು.

-ರಾಜೇಶ್ ಭಟ್ ಪಣಿಯಾಡಿ.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter



0 Comments

Post a Comment

Post a Comment (0)

Previous Post Next Post