ಮುಂಜಾನೆಯ ತಿಂಡಿಯನ್ನು ಮಾಡುತ್ತಿರುವ ಶುಭಾಳ ಮನೆಯ ಮುಂದೆ ಜೀಪ್ ಬಂದು ನಿಂತ ಶಬ್ದವಾಯಿತು. ಶುಭಾ “ಯಾರಪ್ಪ ಇಷ್ಟು ಮುಂಜಾನೆ ತಮ್ಮ ಮನೆಗೆ ಬಂದಿರುವವರು? ಎಂದುಕೊಳ್ಳುತ್ತ ಮನೆಯ ಬಾಗಿಲ ಹತ್ತಿರ ಬರುವುದಕ್ಕೂ ಮನೆಯೊಳಗೆ ಪೋಲಿಸರು ಬರುವುದಕ್ಕೂ ಸರಿಹೋಯಿತು. ಇಷ್ಟು ಮುಂಜಾನೆ ಪೊಲೀಸರನ್ನು ಕಂಡ ಶುಭಾ ಒಂದರೆಕ್ಷಣ ದಂಗಾದಳು. ಅವಳಿಗೆ ಎನು ಮಾಡಬೇಕೆಂದು ತಿಳಿಯಲಿಲ್ಲ. ಅಷ್ಟರಲ್ಲಿ ಅವಳಿಗೆ ಒಂದು ಉಪಾಯ ಹೊಳೆಯಿತು. ಗಂಟೆಯನ್ನು ನೋಡಿದಳು. ಇನ್ನೂ ಐದು ಮೂವತ್ತು; ಮೇ ತಿಂಗಳಲ್ಲಿ ಬೇಗ ಬೇಳಗಾಗುವುದರಿಂದ ಹಕ್ಕಿಗಳು ಚಿಲಿಪಿಲಿಗುಟ್ಟುತ್ತಿದ್ದವು. ಶುಭಾ ಫೈನಾನ್ಸ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಅಂದು ಬೇಗನೆ ವಸೂಲಿಗೆ ಹೋಗಬೇಕಾಗಿರುವುದರಿಂದ ಮನೆಯ ಕೆಲಸಗಳನ್ನು ಬೇಗನೆ ಮುಗಿಸುತ್ತಿದ್ದಳು. ಯಾಕೆಂದರೆ ಕೆಲವರು ಯಾವಾಗ ಹೋದರೂ ಸಿಗುತ್ತಿರಲಿಲ್ಲ. ಪೋಲಿಸರನ್ನು ವರಾಂಡದಲ್ಲಿ ಕುಳಿತುಕೊಳ್ಳಲು ಹೇಳಿ ತನ್ನ ಕೌಟುಂಬಿಕ ಸಲಹೆಗಾರರಾದ ವಕೀಲರಿಗೆ ಪೋನ್ ಮಾಡಬೇಕೆನ್ನುವಷ್ಟರಲ್ಲಿ ಪೋಲಿಸರು “ನಾವು ನಿಮ್ಮನ್ನು ದಸ್ತಗಿರಿ ಮಾಡಲು ಬಂದಿದ್ದೇವೆಂದು” ಸ್ವಲ್ಪ ಗತ್ತಿನಿಂದ ಹೇಳಲನುವಾದರು. ಅಷ್ಟರಲ್ಲಿ ಶುಭಾ “ಯಾರು ಮಹಿಳಾ ಪೊಲೀಸರು ಕಾಣಿಸುತ್ತಿಲ್ಲವಲ್ಲ? ದಸ್ತಗಿರಿ ವಾರೆಂಟ್ ಎಲ್ಲಿದೆಯೆಂದು ಕೇಳಬಹುದೆ? ಎಂದು ಆದಷ್ಟು ಶಾಂತವಾಗಿ ಕೇಳಿದಳು. ಪೋಲಿಸರು ಅವಳಿಂದ ಈ ಪ್ರಶ್ನೆಗಳನ್ನು ನಿರೀಕ್ಷಿಸಿರಲಿಲ್ಲ.
“ನಮ್ಮ ಹತ್ತಿರ ಸಮಯವಿಲ್ಲ. ಬೇಗ ಹೊರಡಿ ಮೇಡಂ. ನಮಗೆ ಇನ್ನು ಅನೇಕ ಕೆಲಸಗಳಿರುತ್ತವೆ" ಎಂದು ಸ್ವಲ್ಪ ಒರಟಾಗಿ ಪೊಲೀಸರೋರ್ವರು ಹೇಳಿದರು. ಶುಭಾ ಸಹನೆಯನ್ನು ತಂದುಕೊಂಡು “ನಾನು ಕೇಳಿರುವ ಪ್ರಶ್ನೆಗಳಿಗೆ ಉತ್ತರವನ್ನು ನೀಡಿ" ಎಂದು ಸ್ವಲ್ಪ ಮೊನಚಾಗಿ ಹೇಳಿದಾಗ ಬಂದಿರುವ ಅಧಿಕಾರಿಗಳು ಸ್ವಲ್ಪ ಶಾಂತವಾದರು.
ಈ ಮೇಲಿನಂಥಹ ಘಟನೆಗಳನ್ನು ನಾವು ನಮ್ಮ ಸುತ್ತಮುತ್ತಲು ಎಷ್ಟೋ ಸಂದರ್ಭಗಳಲ್ಲಿ ನೋಡುತ್ತಿರುತ್ತೇವೆ; ಅನುಭವಿಸುತ್ತಿರುತ್ತೇವೆ. ಆದರೆ ಪೋಲಿಸರಿಗೆ ಹೆದರಿ ಅವರು ಹೇಳಿದಂತೆ ಕೇಳುತ್ತೇವೆ. ಆದರೆ ನಾವು ಇಲ್ಲಿ ಜನ ಸಾಮಾನ್ಯರಾಗಿ ಮಹಿಳೆಯರನ್ನು ದಸ್ತಗಿರಿ ಮಾಡುವ ಮುನ್ನ ಪೋಲಿಸರು ಪಾಲಿಸಬೇಕಾದ ಕೆಲವು ನಿಯಮಗಳನ್ನು ತಿಳಿದಿರತಕ್ಕದ್ದು. ಪೋಲಿಸರು ಮಹಿಳಾ ಆರೋಪಿತರನ್ನು ದಸ್ತಗಿರಿ ಮಾಡಲು ಬರುವಾಗ ಕನಿಷ್ಟ ಒಬ್ಬರಾದರೂ ಮಹಿಳಾ ಪೋಲಿಸ್ ಇರತಕ್ಕದ್ದು. ಆರೋಪಿತ ಮಹಿಳೆಯನ್ನು ಯಾವ ಕಾರಣಕ್ಕೆ ದಸ್ತಗಿರಿ ಮಾಡುವರೆಂದು ಅವಳಿಗೆ ಮತ್ತು ಕುಟುಂಬದವರಿಗೆ ಮಾಹಿತಿಯನ್ನು ನೀಡತಕ್ಕದ್ದು. ಅಲ್ಲದೆ (ಅಪರಾಧಿ ಸಹಿತೆಯ ಕಲಂ 46 ರಡಿ) ಮಹಿಳೆಯರನ್ನು ಮುಂಜಾನೆ ಸೂರ್ಯೋದಯದ ನಂತರ ಆರು ಗಂಟೆಯಿಂದ ಸಂಜೆ ಆರು ಗಂಟೆ ಅಂದರೆ ಸೂರ್ಯಾಸ್ತದ ಒಳಗೆ ದಸ್ತಗಿರಿ ಮಾಡತಕ್ಕದ್ದು. ಹಾಗೆ ದಸ್ತಗಿರಿ ಮಾಡುವಾಗ ದಸ್ತಗಿರಿಯ ವಾರೆಂಟ್ (ವಿಶೇಷ ಸಂದರ್ಭವನ್ನು ಹೊರತು ಪಡಿಸಿ) ಇಲ್ಲದೆ ಮಾಡುವಂತಿಲ್ಲ. ಅವಳ ವಿಚಾರಣೆಯನ್ನು ಕುಟುಂಬದ ಸದಸ್ಯರ ಸಮ್ಮುಖದಲ್ಲಿಯೇ ಮಾಡಬೇಕು. ಅಲ್ಲದೆ ಪೋಲಿಸರ ಅಧೀನದಲ್ಲಿಡುವ ಸಂದರ್ಭವೊದಗಿದರೆ ಮಹಿಳಾ ಆರೋಪಿಯನ್ನು ಪ್ರತ್ಯೇಕ ಕೊಠಡಿಯಲ್ಲಿರಿಸತಕ್ಕದ್ದು. ಅಲ್ಲದೆ ಅವಳ ಗೌರವಕ್ಕೆ ಚ್ಯುತಿ ಬರದೆ ಇರುವಂತೆ ನೋಡಿಕೊಳ್ಳಬೇಕು. ವಿಶೇಷ ಸಂದರ್ಭವನ್ನು ಹೊರತುಪಡಿಸಿ ಗರ್ಭಿಣಿ ಮಹಿಳೆಯನ್ನು ದಸ್ತಗಿರಿ ಮಾಡುವಂತಿಲ್ಲ. ಒಂದು ವೇಳೆ ಅಂಥ ಸಂದರ್ಭ ಬಂದಲ್ಲಿ ಅವಳ ಆರೋಗ್ಯವನ್ನು ಸರಿಯಾಗಿ ಮಹಿಳಾ ವೈದ್ಯಾಧಿಕಾರಿಯಿಂದಲೇ ಪರೀಕ್ಷಿಸತಕ್ಕದ್ದು. ಇಂತಹ ಅಂಶಗಳನ್ನು ನಾವು ತಿಳಿದುಕೊಂಡಿರದಿದ್ದರೆ ಪೋಲಿಸರು ಹೇಳಿದರೆಂದು ಅಥವಾ ಸಂಶಯವಿದೆಯೆಂದು ಅನೇಕ ಸಂದರ್ಭಗಳಲ್ಲಿ ನಾವು ವಿನಾಕಾರಣ ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ಆದ್ದರಿಂದ ಜನಸಾಮಾನ್ಯರು ಕಾನೂನಿನ ಕೆಲವು ವಿಚಾರಗಳನ್ನು ತಿಳಿದುಕೊಳ್ಳುವುದು ಅತೀ ಅವಶ್ಯಕವಾದುದು.
- ಶ್ರೀಮತಿ ಸರಸ್ವತಿ ಹೆಗಡೆ
ವಕೀಲರು, ಶಿರಸಿ.
ಮೊಬೈಲ್: 9480420950
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ