ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

Upayuktha
0

ಬೆಂಗಳೂರು: ‘ಇಂದು ಭಾರತ ದೇಶದ ನಿವ್ವಳ ದೇಶೀಯ ಉತ್ಪನ್ನ ಅಂದರೆ ಜಿ.ಡಿ.ಪಿ ಯಲ್ಲಿ ನಿರ್ದಿಷ್ಟ ಏರಿಕೆ ಕಾಣುತ್ತಿದೆ. ಇದಕ್ಕೆ ಮುಖ್ಯ ಕಾರಣ ಕಾರ್ಯಕ್ಷೇತ್ರದಲ್ಲಿನ ಗಂಡು ಹಾಗೂ ಹೆಣ್ಣುಗಳಿಬ್ಬರ ಸಹಭಾಗಿತ್ವ. ಈ ಪ್ರಮಾಣದ ಸಹಭಾಗಿತ್ವ ಮೊದಲು ಇರಲಿಲ್ಲ. ಹೀಗಾಗಿಯೇ ನಾವು ಬಡರಾಷ್ಟ್ರಗಳ ಪಟ್ಟಿಯಲ್ಲಿ ಸೇರಿದ್ದೆವು. ಹೆಣ್ಣು ಯಾವ ಗಂಡಿಗೂ ಕಡಿಮೆಯಿಲ್ಲದಂತೆ ಎಲ್ಲಾ ಕ್ಷೇತ್ರಗಳಲ್ಲೂ ತನ್ನ ಅಸ್ತಿತ್ವವನ್ನು ಸಾಬೀತುಪಡಿಸುತ್ತಿರುವುದರಿಂದ ನಮ್ಮ ದೇಶ ಅತ್ಯಂತ ಅಲ್ಪಾವಧಿಯಲ್ಲಿ ವಿಶ್ವಗುರು ಆಗಲಿದೆ’ ಎಂದು ಖ್ಯಾತ ಶಿಕ್ಷಣ ಹಾಗೂ ಪರಿಸರ ತಜ್ಞೆ ಡಾ. ಎಲಿಜಬೆತ್ ಚೆರಿಯನ್ ಪರಮೇಶ್ ನುಡಿದರು.


ಅವರು ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಜರುಗಿದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. 


‘ಶತಮಾನಗಳ ದಾಸ್ಯದ ಶೃಂಖಲೆಗಳನ್ನು ಕಳಚಿ ಹೊರಬಂದಿರುವುದರಿಂದ ಮಹಿಳೆಯರಲ್ಲಿ ಆಗಾಗ್ಗೆ ಆತ್ಮವಿಶ್ವಾಸದ ಕೊರತೆ ಕಾಡಬಹುದು. ಆದರೆ ಇದನ್ನು ಮಹಿಳೆ ಸ್ವಯಂ ಹತ್ತಿಕ್ಕಿ ಬಲಶಾಲಿಯಾಗಬೇಕು. ಯಾರೂ ಹುಟ್ಟುತ್ತಲೇ ಬಲಶಾಲಿಗಳಾಗಿರುವುದಿಲ್ಲ. ಕ್ರಮೇಣ ತನ್ನನ್ನು ತಾನು ಬದುಕಿನ ಅಗ್ನಿಪರೀಕ್ಷೆಗಳಿಗೆ ಒಡ್ಡಿಕೊಳ್ಳುವುದರಿಂದ ಮಹಿಳೆ ಗಟ್ಟಿಯಾಗುತ್ತಾ ಹೋಗುತ್ತಾಳೆ; ಪುರುಷರನ್ನೂ ಮೀರಿಸುವ ಸಾಮರ್ಥ್ಯ ಪಡೆಯುತ್ತಾಳೆ. ಮಹಿಳೆ ಪುರುಷರಿಗಿಂತ ಮಿಗಿಲಾದ ಸ್ಥಾನ ಪಡೆದಿದ್ದಾಳೆ ಹಾಗೂ ಅಂತಃಕರಣ ಮತ್ತು ತುಂಬುಪ್ರೀತಿಗಳ ವಿಷಯಗಳಲ್ಲಿ ಮಹಿಳೆಯರನ್ನು ಮೀರಿಸಲು ಪುರುಷರಿಂದ ಸಾಧ್ಯವೇ ಇಲ್ಲ. ಇದರಿಂದಲೇ ಅವಳು ತಾಯಿಸ್ಥಾನವನ್ನು ಅಲಂಕರಿಸುವುದು' ಎಂದರು.


ಬೆಂಗಳೂರಿನ ಮದರ್ ಹುಡ್ ಆಸ್ಪತ್ರೆಯ ಸ್ತ್ರೀರೋಗಶಾಸ್ತ್ರ ತಜ್ಞೆ  ಡಾ. ಮಧುಶ್ರೀ ವಿಜಯಕುಮಾರ್ ಗೌರವಾನ್ವಿತ ಅತಿಥಿಗಳಾಗಿ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಅವರು ತಮ್ಮ ಸುದೀರ್ಘ ಭಾಷಣದಲ್ಲಿ ಮಹಿಳೆ ಆರೋಗ್ಯದ ಬಗ್ಗೆ ವಹಿಸಬೇಕಾದ ಕಾಳಜಿಗಳ ಬಗ್ಗೆ ಹೆಚ್ಚು ಒತ್ತು ನೀಡಿದರು. ‘ಮಹಿಳೆಯರು ಮಕ್ಕಳಿಗೆ ತಾಯಿಯಾಗುವುದರಿಂದ ಪೌಷ್ಟಿಕತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಹೆಚ್ಚು ಗಮನ ನೀಡಬೇಕು. ಅಲ್ಲದೆ ಆಗಾಗ್ಗೆ ನಿಗದಿತ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಬೇಕು. ಇತ್ತೀಚೆಗೆ ಜಾಸ್ತಿಯಾಗುತ್ತಿರುವ ಎದೆಯ ಅರ್ಬುದ ರೋಗ ಅಂದರೆ ಬ್ರೆಸ್ಟ್ ಕ್ಯಾನ್ಸರ್ ಬಗ್ಗೆ ಜಾಗ್ರತೆಯಿಂದಿರಬೇಕು. ತಪಾಸಣೆಗಳಿಂದ, ರೋಗ ಬಲಿಯುವ ಮುನ್ನವೇ ಪತ್ತೆಯಾಗುತ್ತದೆ ಹಾಗೂ ಸಮಸ್ಯೆ ನಿವಾರಣೆಯಾಗುತ್ತದೆ’ಎಂದು ವಿಶ್ಲೇಷಿಸಿದರು.


ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಹೆಚ್.ಸಿ. ನಾಗರಾಜ್ ಅವರು ಮಾತನಾಡಿ ‘ಸ್ತ್ರೀ ಸಬಲೀಕರಣದ ಬಗ್ಗೆ ನಮಗೆ ಸದಾ ಗೌರವಾದರಗಳಿವೆ. ಅದರಿಂದಲೇ ಹನಿವೆಲ್ ಸಂಸ್ಥೆಯ ಸಹಯೋಗದೊಂದಿಗೆ ಮಹಿಳೆಯರ ಸಬಲೀಕರಣಕ್ಕೆ ಸಂಪೂರ್ಣ ಮೀಸಲಾದ ಔನ್ನತ್ಯ ಕೇಂದ್ರವನ್ನು ತೆರೆದಿದ್ದೇವೆ. ಇದು ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ’ಎಂದರು.


ಸಂಸ್ಥೆಯ ವಿದ್ಯಾರ್ಥಿ ಕಲ್ಯಾಣ ಡೀನ್ ಹಾಗೂ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥೆ ಡಾ. ಎನ್. ನಳಿನಿ ಸ್ವಾಗತಿಸಿದರು. ಸಂಸ್ಥೆಯ ಮ್ಯಾನೇಜ್‍ಮೆಂಟ್ ವಿಭಾಗದ ಮುಖ್ಯಸ್ಥೆ ಡಾ. ಶಿಲ್ಪಾ ಅಜಯ್  ವಂದಿಸಿದರು. ನಿಟ್ಟೆ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ರೋಹಿತ್ ಪೂಂಜ, ಸಂಸ್ಥೆಯ ಶೈಕ್ಷಣಿಕ ವಿಭಾಗದ ಮುಖ್ಯಸ್ಥ ಡಾ. ವಿ. ಶ್ರೀಧರ್ ಮತ್ತು ನೂರಾರು ವಿದ್ಯಾರ್ಥಿನಿಯರು ಹಾಗೂ ಮಹಿಳಾ ಸಿಬ್ಬಂದಿಗಳು ಪಾಲ್ಗೊಂಡಿದ್ದರು.


إرسال تعليق

0 تعليقات
إرسال تعليق (0)
To Top