ಇತಿ ತೇ ಜ್ಞಾನಮಾಖ್ಯಾತಮ್
ಗುಹ್ಯಾದ್ಗುಹ್ಯತರಂ ಮಯಾ |
ವಿಮೃ ಶ್ಯೈ ತದಶೇಷೇಣ
ಯಥೇಚ್ಛಸಿ ತಥಾ ಕುರು ||18- 63||
ಅರ್ಜುನನಿಗೆ ಅಂತರ್ಯಾಮಿಯಾದ ಪರಮೇಶ್ವರನಲ್ಲಿ ಶರಣಾಗಲು ಆಜ್ಞೆಯನ್ನು ಕೊಟ್ಟು ಭಗವಂತನು ಹೇಳಿದಂತಹ ಉಪದೇಶದ ಉಪಸಂಹಾರ ಮಾಡುತ್ತಾ ಹೀಗೆ ಹೇಳುತ್ತಾನೆ. ಅತ್ಯಂತ ರಹಸ್ಯವಾದ ಜ್ಞಾನವನ್ನು ನಾನು ನಿನಗೆ ಹೇಳಿಬಿಟ್ಟೆನು. ಈಗ ಇದನ್ನೆಲ್ಲಾ ಸರಿಯಾದ ರೀತಿಯಲ್ಲಿ ಪೂರ್ಣವಾಗಿ ವಿಚಾರ ಮಾಡಿ ಅನಂತರ ನೀನು ಹೇಗೆ ಇಚ್ಛೆ ಪಡುವೆಯೋ ಹಾಗೆ ಮಾಡು.
ಭಗವಂತ ಎರಡನೇ ಅಧ್ಯಾಯದ ಹನ್ನೊಂದನೇ ಶ್ಲೋಕದಿಂದ ಪ್ರಾರಂಭಿಸಿ ಇಲ್ಲಿ ತನಕ ಅರ್ಜುನನಿಗೆ ತನ್ನ ಗುಣ, ಪ್ರಭಾವ, ತತ್ತ್ವ ಮತ್ತು ಸ್ವರೂಪದ ರಹಸ್ಯವನ್ನು ಉತ್ತಮವಾಗಿ ತಿಳಿಸಿದ್ದರಿಂದ ಭಗವಂತನ ಪ್ರತ್ಯಕ್ಷ ಜ್ಞಾನವನ್ನೇ ಹೊಂದುವಂತದ್ದಾಗಿದೆ. ಭಗವಂತನ ಮೂಲಕ ಹೇಳಲ್ಪಟ್ಟ ಈ ಜ್ಞಾನವು ತುಂಬಾ ಮಹತ್ವದ್ದು ಎಂಬ ಭಾವವನ್ನೇ ತೋರಿಸಿದ್ದಾನೆ. ಅಂತರಂಗ ಕೇಳಿಸಿಕೊಳ್ಳಲು ಸಿದ್ಧವಿದ್ದರೂ ಬಾಹ್ಯದಲ್ಲಿ ಲಘುವಾಗಿ ಪರಿಗಣಿಸುತ್ತಾರೆ. ಕೆಲವರಿಗೆ ಎಷ್ಟೂ ಹೇಳಿದರೂ ಅಷ್ಟೆ. ಶಂಖದಿಂದ ಬಂದರೆ ಮಾತ್ರ ತೀರ್ಥ ಅನ್ನೋ ತರ ನಡೆಯುತ್ತಾರೆ. ಬೇರೆ ಯಾರೂ ಹೇಳಿದರೂ ತಾವೇ ಉತ್ತಮರು ಹಾಗೂ ತಿಳಿದವರು ಎಂಬ ರೀತಿಯಲ್ಲಿ ವರ್ತಿಸುತ್ತಾರೆ.
ಡಾಕ್ಟರಲ್ಲಿಗೆ ಹೋದಾಗ ಯೋಗ ಕ್ಷೇಮ ವಿಚಾರಿಸುತ್ತಾರೆ. ಆದೇ ರೀತಿ ನಮ್ಮ ಮನಸ್ಸು ಹಾಗೂ ಬುದ್ಧಿ ನಮ್ಮೊಳಗಿನ ಯೋಗಕ್ಷೇಮ ವಿಚಾರಿಸಿಕೊಳ್ಳುತ್ತಿರಬೇಕು. ಅದಕ್ಕೆ ಮೌನ ಬೇಕು. ಹಿಡಿದ ಕಾರ್ಯವನ್ನು ಮುಂದೂಡುತ್ತೇವೆ. ಇನ್ನೊಂದು ಕಾರ್ಯವನ್ನು ಹಿಡಿದು ಅದನ್ನು ಮನಃಪೂರ್ವಕ ಅನುಭವಿಸುವಲ್ಲಿ ವಿಫಲರಾಗುತ್ತೇವೆ. ಹಾಗಾಗಿ ಯಾವುದೇ ಕಾರ್ಯವಿರಲಿ ಅದನ್ನು ಮುಂದೂಡದೇ ಸಕಾಲದಲ್ಲಿ ಪೂರೈಸಬೇಕು. ಆಗ ಬದುಕಿನ ಸಂತಸದ ಮಜಲುಗಳು ನಿರೀಕ್ಷಿತವಾಗಿಯೇ ಅನುಭವಕ್ಕೆ ಬರುತ್ತವೆ.
ಅದೇಕೋ ಅಪ್ಪನದೇ ನೆನಪು ಕಾಡುವುದು. ಎಂದು ನೋಡುವೆನೋ, ಯಾವಾಗ ಸಿಗುವರೋ, ಕೈಗೆ ಪೆಪ್ಪರಮೆಂಟು ಯಾವಾಗ ದೊರಕುವುದೋ ಎಂದು. ಅವರಿಗೆ ಅದರ ಗೊಡವೆಯೇ ಇರುತ್ತಿರಲಿಲ್ಲ. ಕೆಲಸ, ಕೆಲಸ, ಕೆಲಸ. ಕಾದದ್ದೇ ಬಂತು. ನಿರಾಸೆಯ ಮೋಡ ಆಕಾಶದ ತುಂಬಾ ಹಂದರ ಹಾಕುವಂತೆ ತೋರುತ್ತಿತ್ತು. ಸೂರ್ಯನು ಮರೆಯಾಗಿ ಇನ್ನೇನು ಹಿಂದೆ ತಿರುಗಬೇಕು ಅನ್ನುವಷ್ಟರಲ್ಲಿ ಎಲ್ಲಿಂದಲೋ ಹಾರಿಕೊoಡು ಬಂದ ಪಾರಿಜಾತ ಹೂವೊಂದು ಕಣ್ಣೆದುರು ಹಾದು ಹೋಯಿತು. ಇನ್ನೇನು ಹಾರಿ ಹಿಡಿದೇ ಬಿಡಬೇಕು ಎನ್ನುತ್ತ ಹಾರಿದವಳಿಗೆ ಹಾರಿದ ನೆನಪು ಮಾತ್ರ. ಮತ್ತೆ ಏನೂ ನೆನಪೇ ಇಲ್ಲ. ಎಲ್ಲಿದ್ದೇನೆಂದು ಗೊತ್ತಿಲ್ಲ. ಹೀಗಿದ್ದರೂ ನೆನಪೊಂದು ಮಣ್ಣಿನೊಳಗಿರುವ ಬೀಜವೊಂದು ಮೊಳಕೆಯೊಡೆದ ರೀತಿಯಲ್ಲಿ ಮನದಾಳದಲ್ಲಿ ಇರುವುದು. ಹಾಗಾಗಿ ನಮ್ಮನ್ನು ನಾವು ಉತ್ತಮರನ್ನಾಗಿಸಿಕೊಳ್ಳಬೇಕು. ಸತ್ಫಲಗಳನ್ನು ಬಯಸುತ್ತಾ ಕಾರ್ಯಕ್ಕಿಳಿಯಬೇಕು. ಆಗ ಒಳಿತೇ ಆಗುವುದು. ಅನುಮಾನ, ಅಂಜಿಕೆ, ಹಿಂಜರಿಕೆ ಖಂಡಿತಾ ಮಾಡಬಾರದು.
ಹೇಳಿದರೆ ಕೇಳುವ ಮನಸ್ಸಲ್ಲ. ಆದರೂ ಮನದಲ್ಲಿ ಆಗಾಧ ಕನಸುಗಳದ್ದೇ ಸರಮಾಲೆ. ಸುಮ್ಮನೇ ಕುಳಿತರೆ ಆರೋಗ್ಯವೇನೂ ಸುಮ್ಮನಿರುವುದಿಲ್ಲವಲ್ಲ. ಕ್ರಿಯಾಶೀಲತೆಯೇ ಮನುಷ್ಯನ ಅಭಿಮುಖ ವ್ಯಕ್ತಿತ್ವ ವಾಗಿದೆಯೆಂದು ಬಲ್ಲ ವಿಷಯ. ಆದರೆ ಉದಾಸೀನ ಭಾವ. ಒಂದೆರಡು ದಿನಗಳಿಂದಲ್ಲ ದಿನವೂ ಇಂತದೇ ಸ್ಥಿತಿ. ತನ್ನ ಆರೋಗ್ಯದೆಡೆಗೆ ಗಮನ ಕೇಂದ್ರೀಕರಿಸಲು ಆಗುವುದಿಲ್ಲ. ಬೇರೆಯವರಿಗೆ ಉಪದೇಶ ಮಂತ್ರ. ಕಾಣದ ಕಡಲಿಗೆ ಹಂಬಲಿಸುವ ಮನ ಕಡಲಿಗಿಂತಲೂ ಆಳವಿದೆಯೆಂದು ಅರಿಯುವವರಾರು? ಒಂದೇ ದೋಣಿಯ ಪಯಣವಾದರೂ ಹುಟ್ಟು ಬೇರೆ ಬೇರೆ. ವಿರುದ್ಧ ದಿಕ್ಕಿನಿಂದ ಹುಟ್ಟು ಹಾಕಿದಾಗ ದೋಣಿ ಮುಂದೆ ಚಲಿಸುವಂತೆ ಬಾಳ ಪಯಣ ಸಾಗುತ್ತಿದೆ. ಲಹರಿಯ ನಾದದಿಂದ ಹರಿಯನ್ನು ಭಜಿಸುವ ಮನಸ್ಸಿಗೆ ಆತನೇ ನಾವಿಕನೆಂಬ ನಿರ್ವಾಹವಿಲ್ಲದ ಒಪ್ಪಿಗೆಗೆ ಸಹಿ ಹಾಕಿಯಾಗಿದೆ. ಅದನ್ನು ಹೇಗೆ ಮಾಡಿದರೂ ಅಳಿಸಲಾಗದ ಅಲೌಕಿಕ ಬಾಂಧವ್ಯವೇ ಅಡಗಿ ಹೋಗಿದೆ. ಹಾಗಾಗಿ ಈಗೀಗ ಅಲೆಗಳೆಂಬ ಮಾತುಗಳ ಅಬ್ಬರವಿಲ್ಲ.
ಮಂದಾನಿಲ ಬೀಸುವ ಹೊತ್ತು. ಸುಮ್ಮನೆ ಕುಳಿತರೂ ಹೊತ್ತು ಸಾಗುತ್ತಿರುತ್ತದೆ. ಹಾಗಂತ ಮಾಡಬೇಕಾದ ಕಾರ್ಯಗಳು ಬೆಟ್ಟದಷ್ಟಿವೆ. ಉತ್ಸಾಹದ ಮೂಟೆ ಬೆನ್ನ ಮೇಲಿದೆ. ಮತ್ತಿನ್ನೇನು, ಅವಕಾಶಗಳು ಕಾಯುತ್ತಿವೆ. ಆಕಾಶದಲ್ಲಿ ಪಯಣಿಸೋ ಛಲ ಬೇಕು ಅಷ್ಟೆ. ಬೆಳಿಗ್ಗೆ ಏಳುವ ಮುಂಚೆ ಬಿಸಿ ಬಿಸಿಯಾಗಿ ಕೈಗಳನ್ನು ಒಂದಕ್ಕೊಂದು ಉಜ್ಜುತ್ತ ಮುಖಕ್ಕೆ ಆನಿಸಿಕೊಳ್ಳಬೇಕು. ಆಗ ಎಷ್ಟೇ ಹಿರಿದಾದ ನಿದ್ದೆಯಾದರೂ ಓಡಿಯೇ ಹೋಗುತ್ತದೆ. ಆದರೆ ಏಳಲು ಬೇಕಾದ ಮನಸ್ಸನ್ನು ನಾವೇ ತಯಾರಿ ಮಾಡಿಟ್ಟುಕೊಳ್ಳಬೇಕು. ಅದಕ್ಕೆ ಹಿಂದಿನ ದಿನವೇ ಏನಾದರೂ ಒಂದು ಕಾರ್ಯ ಹಚ್ಚಿರಬೇಕು. ನಾಳೆ ಬೆಳಗ್ಗೆ ಇಂತಿಂತ ಕಾರ್ಯ ಇಷ್ಟು ಹೊತ್ತಿಗೆ ಮಾಡಿ ಮುಗಿಸಬೇಕು ಎಂಬ ಆಜ್ಞೆ ಮೆದುಳಿಗೆ ಕೊಟ್ಟಿರಬೇಕು. ಆಗ ಮನಸ್ಸು ಬೆಳಗ್ಗೆ ಬೇಗನೇ ಎಚ್ಚರ ಗೊಂಡು ಅದೇ ಕಾರ್ಯದ ನೆನಪು ಮಾಡಿಕೊಡುತ್ತದೆ. ಹಾಗೂ ಎದ್ದೇಳುವಂತೆ ಪ್ರೇರೇಪಿಸುತ್ತದೆ. ಹಾಗಾಗಿ ಬೆಳಗು ಧ್ಯಾನ, ಆಸನ, ಪ್ರಾಣಾಯಾಮಗಳನ್ನು ಸಕ್ರಿಯವಾಗಿ ಮಾಡಿಸುತ್ತದೆ. ಅದುವೇ ಕ್ರಮೇಣ ರೂಢಿಯಾಗಿ ತನ್ನಷ್ಟಕ್ಕೆ ತಾನೇ ಏಳುವ ಮನಸ್ಸು ಚಿಗುರೊಡೆಯುತ್ತದೆ. ಬೆಳಕಿಗೆ ಬರುತ್ತದೆ. ಆಸ್ವಾದದ ಭಾವವನ್ನು ಇಮ್ಮಡಿಗೊಳಿಸುತ್ತದೆ.
ಜ್ಞಾನ ಸಾಗರವಾದ ಈ ಭೂಮಿಯ ಮೇಲೆ ನೆಲೆ ನಿಲ್ಲುವ ಮೂಲಕ ಆಸಕ್ತಿಯ ಕೇಂದ್ರವಾಗಿ ಕಾದಂಬರಿ, ಕತೆ, ಲಲಿತ ಪ್ರಬಂಧ ಇತ್ಯಾದಿಗಳನ್ನು ಓದುವುದರಿಂದ ಜೀವನದ ಹಲವು ರೀತಿಯ ಕಷ್ಟಗಳಿಗೆ ಪರಿಹಾರ ಸಿಗುವಂತಾಗುತ್ತದೆ. ಹಾಗೂ ಜೀವನದ ಆಗು ಹೋಗುಗಳ ಹೊರತಾಗಿಯೂ ಬದುಕುವ ವಿಭಿನ್ನ ಕಲೆಗಳ ಅನಾವರಣ ಮನದಲ್ಲಿ ಮಿಂಚುತ್ತದೆ. ಪ್ರತಿದಿನದ ಬ್ರಾಹ್ಮೀ ಮುಹೂರ್ತದ ಏಳುವಿಕೆಯು ಮಧ್ಯಾಹ್ನ ಸೂರ್ಯ ನಡು ನೆತ್ತಿಯ ಮೇಲೆ ಬರುವಂತಾದಾಗ ಸುಸ್ತು, ಆಯಾಸ, ಬಳಲಿಕೆಗಳು ತೀವ್ರವಾಗುತ್ತವೆ. ಕೆಲವೊಮ್ಮೆ ವಿಶ್ರಾಂತಿಯೊಂದೇ ಅನಿವಾರ್ಯವಾಗಿತ್ತದೆ. ಆಗಲೇ ಕಣ್ಣು ಮುಚ್ಚಿ ಮಲಗಿದರೆ ಮತ್ತೆ ಕಣ್ತೆರೆಯಲು ಮನಸ್ಸೇ ಬಾರದು. ಬಿಸಿಲ ಝಳಪು ಸಾಕಷ್ಟಿದೆ. ಯಥೇಷ್ಠ ನೀರು ಕುಡಿಯುವುದು ಅಗತ್ಯ. ಆಸುಪಾಸು ಗಿಡಗಳ ಬಳಿ ಹೋಗಿ ಅದರ ಜೊತೆಗೆ ಮಾತುಕತೆ ಕೂಡಾ ಮನಸ್ಸಿಗೆ ತೀವ್ರಗತಿಯಲ್ಲಿ ಆಹ್ಲಾದವನ್ನು ತಂದುಕೊಡುತ್ತದೆ. ಆಗ ಆಯಾಸ ಬಳಲಿಕೆಗಳು ಶೀಘ್ರದಲ್ಲಿಯೇ ಹೇಳ ಹೆಸರಿಲ್ಲದಂತೆ ಓಡಿ ಬಿಡುತ್ತವೆ. ಹೂಗಳನ್ನು ಸ್ಪರ್ಶಿಸುತ್ತ, ಅದರ ಸೊಬಗಿನ ಬಗೆಗೆ ಮನದೊಳಗೆ ಚಿಂತನೆಗಳು ಹುಟ್ಟು ಹಾಕುತ್ತವೆ. ಯಾವುದೇ ಹೂಗಳಾಗಿರಲಿ ಅಥವಾ ಗಿಡಗಳೇ ಆಗಿರಲಿ ಇದಕ್ಕೆ ಹೊರತಾದುದಿಲ್ಲ.
-ಮಲ್ಲಿಕಾ ಜೆ ರೈ ಪುತ್ತೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ