ಮಂಗಳೂರಿನಲ್ಲಿ ಬಿಜೆಪಿಯ ವಿಭಾಗ ಮಾಧ್ಯಮ ಕೇಂದ್ರ ಉದ್ಘಾಟನೆ
ಮಂಗಳೂರು: ಕಾಂಗ್ರೆಸ್ ಪಕ್ಷವೆಂದರೆ ಪರಮ ಭ್ರಷ್ಟಾಚಾರಿ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದು ರಾಜ್ಯ ಬಿಜೆಪಿಯ ಪ್ರಮುಖ ವಕ್ತಾರರಾದ ಮಹೇಶ್ ಎಂ.ಜಿ ಅವರು ಹೇಳಿದರು.
ಖಾಸಗಿ ವಾಹಿನಿಯೊಂದು ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಕಾಂಗ್ರೆಸ್‌ನ ಹಲವು ಶಾಸಕರು ಸಿಕ್ಕಿಬಿದ್ದಿರುವ ಹಿನ್ನೆಲೆಯಲ್ಲಿ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಚುನಾವಣೆ ಘೋಷಣೆಯಾದ ರಾಜಕೀಯ ಚಟುವಟಿಕೆಗಳು ತೀವ್ರವಾಗಿ ಚುರುಕುಗೊಂಡಿದ್ದು, ಮಂಗಳೂರಿನಲ್ಲಿ ಬಿಜೆಪಿಯ ವಿಭಾಗ ಮಾಧ್ಯಮ ಕೇಂದ್ರವನ್ನು ಶುಕ್ರವಾರ ಉದ್ಘಾಟಿಸಲಾಯಿತು. ಅಲ್ಲಿ ಇಂದು ನಡೆಸಿದ ಮೊದಲ ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ರಾಜ್ಯ ವಕ್ತಾರ ಮಹೇಶ್ ಅವರು ಮಾತನಾಡಿದರು.
ಖಾಸಗಿ ವಾಹಿನಿಯ ಕುಟುಕು ಕಾರ್ಯಾಚರಣೆಯಲ್ಲಿ ಒಟ್ಟಾರೆ 29 ಶಾಸಕರು ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದು, ಅವರಲ್ಲಿ 22 ಮಂದಿ ಕಾಂಗ್ರೆಸ್ ಶಾಸಕರು, 6 ಮಂದಿ ಜೆಡಿಎಸ್ ಶಾಸಕರು ಹಾಗೂ ಒಬ್ಬ ಪಕ್ಷೇತರ ಶಾಸಕ ಇದ್ದಾರೆ. ಈ ಶಾಸಕರ ಪಟ್ಟಿಯನ್ನೂ ರಾಜ್ಯ ಬಿಜೆಪಿ ವಕ್ತಾರರು ಈ ಸಂದರ್ಭದಲ್ಲಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿದರು.
ಬಿಜೆಪಿ ಮೇಲೆ 40% ಕಮಿಷನ್ ಎಂದು ಆರೋಪಿಸುವ ಕಾಂಗ್ರೆಸ್ ತನ್ನ 70 ವರ್ಷಗಳ ಆಡಳಿತದಲ್ಲಿ ನಡೆಸಿದ ಬ್ರಹ್ಮಾಂಡ ಭ್ರಷ್ಟಾಚಾರ ಎಂತಹುದು ಎಂಬುದು ಈಗಾಗಲೇ ದೇಶದ ಜನರಿಗೆ ಮನವರಿಕೆಯಾಗಿದೆ. ಒಂದು ಅಂದಾಜಿನಂತೆ 25 ಲಕ್ಷ ಕೋಟಿ ರೂ.ಗಳ ಭ್ರಷ್ಟಾಚಾರ ಕಾಂಗ್ರೆಸ್‌ನಿಂದ ನಡೆದಿದೆ. ಇಂತಹ ಇತಿಹಾಸವುಳ್ಳ ಪಕ್ಷ ಬಿಜೆಪಿ ವಿರುದ್ಧ ಆಧಾರವಿಲ್ಲದ ಆರೋಪ ಮಾಡುತ್ತಿದೆ ಎಂದು ಅವರು ಟೀಕಿಸಿದರು.
ಬಿಜೆಪಿಯ ಮೇಲೆ ಕಾಂಗ್ರೆಸ್‌ಗೆ ಆರೋಪ ಮಾಡಲು ಸಿಕ್ಕಿರುವ ಘಟನೆಯೆಂದರೆ ಗುತ್ತಿಗೆದಾರರೊಬ್ಬರ ಆತ್ಮಹತ್ಯೆ ಪ್ರಕರಣ. ಆದರೆ ಕಾರ್ಯಾದೇಶ (ವರ್ಕ್ ಆರ್ಡರ್) ಇಲ್ಲದೆಯೇ ಆ ಗುತ್ತಿಗೆದಾರರಿಂದ ಕೆಲಸ ಮಾಡಿಸಿಕೊಂಡವರು ಕಾಂಗ್ರೆಸ್‌ನ ಒಬ್ಬ ಶಾಸಕಿ. ಈ ವಿಚಾರವನ್ನು ಮುಚ್ಚಿಟ್ಟು ಕಾಂಗ್ರೆಸ್ ಬಿಜೆಪಿಯ ಮೇಲೆ ಗೂಬೆ ಕೂರಿಸುತ್ತಿದೆ ಎಂದು ಅವರು ನುಡಿದರು.
ಭ್ರಷಾಚಾರದ ವಿರುದ್ಧ ಶೂನ್ಯ ಸಹನೆ ನೀತಿ ಹೊಂದಿರುವ ಬಿಜೆಪಿ ಚುನಾವಣೆಯ ಹೊಸ್ತಿಲಿನಲ್ಲೂ ತನ್ನ ಶಾಸಕ ವಿರೂಪಾಕ್ಷ ಮಾಡಾಳ್ ವಿರುದ್ಧ ಕ್ರಮ ಕೈಗೊಳ್ಳುವ ಧೈರ್ಯ ಪ್ರದರ್ಶಿಸಿದೆ. ಇಂತಹ ನೈತಿಕ ಸ್ಥೈರ್ಯ ಬೇರಾವ ಪಕ್ಷಗಳಿಗೂ ಇಲ್ಲ ಎಂದು ಮಹೇಶ್ ಅವರು ಹೇಳಿದರು.
ದೇಶ ಮೊದಲು, ಪಕ್ಷ ನಂತರ, ವ್ಯಕ್ತಿ ಕೊನೆಗೆ ಎನ್ನುವುದು ಬಿಜೆಪಿಯ ಸೈದ್ಧಾಂತಿಕ ನಿಲುವು. ಅದರಂತೆ ಪಕ್ಷದ ಯಾರೇ ಆದರೂ ಭ್ರಷ್ಟಾಚಾರ ಆರೋಪ ಅಥವಾ ಅಪರಾಧದ ಆರೋಪದಲ್ಲಿ ದೋಷಿಗಳಾದರೆ ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ಅವರು ಪುನರುಚ್ಚರಿಸಿದರು.
ವಿಭಾಗ ಮಾಧ್ಯಮ ಕೇಂದ್ರ: ಚುನಾವಣೆ ಸಂದರ್ಭದಲ್ಲಿ ಮಾಧ್ಯಮಗಳಿಗೆ ಸರಿಯಾದ ಮಾಹಿತಿ ನೀಡಲು ಮತ್ತು ಪಕ್ಷದ ವಿಚಾರಗಳನ್ನು ಜನರಿಗೆ ತಲುಪಿಸುವ ದೃಷ್ಟಿಯಿಂದ ರಾಜ್ಯದಲ್ಲಿ ಒಟ್ಟು 6 ವಿಭಾಗ ಮಾಧ್ಯಮ ಕೇಂದ್ರಗಳನ್ನು ತೆರೆಯಲಾಗಿದೆ. ಇವುಗಳ ಪೈಕಿ ಮಂಗಳೂರಿನಲ್ಲಿ ಇಂದು ಉದ್ಘಾಟಿಸಲಾದ ಈ ಕೇಂದ್ರವೂ ಸೇರಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ದ.ಕ ಜಿಲ್ಲಾ ಬಿಜೆಪಿ ವಕ್ತಾರರಾದ ಜಗದೀಶ್ ಶೇಣವ, ರಾಜ್ಯ ಮಾಧ್ಯಮ ಸಂಚಾಲಕ ರತನ್ ಪೂಜಾರಿ, ಬಿಜೆಪಿ ಪ್ರಮುಖರಾದ ಸಂಜಯ್ ಪ್ರಭು, ರಂದೀಪ್ ಕಾಂಚನ್, ಸಂದೇಶ್ ಶೆಟ್ಟಿ ಮುಂತಾದವರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ