ಮಾ.23ರಿಂದ ಕಾಕೋಳು ವೇಣುಗೋಪಾಲಕೃಷ್ಣನ 90ನೇ ಬ್ರಹ್ಮರಥೋತ್ಸವ ಪ್ರಾರಂಭ

Upayuktha
0

ಶ್ರೀ ಸುವಿದ್ಯೇಂದ್ರ ತೀರ್ಥರಿಂದ ಉದ್ಘಾಟನೆ; ಡಾ.ಗುರುರಾಜ ಪೋಶೆಟ್ಟಿಹಳ್ಳಿ ರವರ ‘ಶ್ರೀ ಕೃಷ್ಣಾರ್ಪಣ ಕೃತಿ ಬಿಡುಗಡೆ


ಬೆಂಗಳೂರು: ಬೆಂಗಳೂರಿನ ಹೊರವಲಯದ ದೊಡ್ಡಬಳ್ಳಾಪುರ ರಸ್ತೆಯ ರಾಜಾನುಕುಂಟೆ ಸಮೀಪದ ಪೌರಾಣಿಕ ಹಿನ್ನೆಲೆಯ ಕಾಕೋಳು ಗ್ರಾಮದಲ್ಲಿ ದಾಸಸಾಹಿತ್ಯ ಆದ್ಯ ಪ್ರವರ್ತಕ ಶ್ರೀ ಶ್ರೀಪಾದರಾಜರಿಂದ ಪ್ರತಿಷ್ಠಾಪಿತ ಬೃಂದಾವನದಲ್ಲಿರುವ ಚತುರ್ಭುಜ ಶ್ರೀ ವೇಣುಗೋಪಾಲ ಸ್ವಾಮಿಯ ಜಾಗೃತ ಸನ್ನಿಧಾನವಾಗಿ ನಂಬಿ ಬರುವ ಆಸ್ತಿಕ ಭಕ್ತರ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿದೆ. ಮೂಲವಿಗ್ರಹಗಳ ಪುನರ್ ಪ್ರತಿಷ್ಠಾಪನೆಯ ಸಂಸ್ಮರಣಾರ್ಥವಾಗಿ ಆಚರಿಸುವ ಉತ್ಸವವೇ ಬ್ರಹ್ಮರಥೋತ್ಸವ. ಇದೇ ಶೋಭನಕೃತ್ ಸಂ|| ಚೈತ್ರ ಶುದ್ಧ ಪಂಚಮಿ (ಮಾರ್ಚ್‌ 26). ಶ್ರೀಸ್ವಾಮಿಯವರ ಬ್ರಹ್ಮರಥೋತ್ಸವಕ್ಕೆ 9ಂನೇ ವಸಂತದ ಸಂಭ್ರಮ. 1933ರಲ್ಲಿ ಆರಂಭಗೊಂಡ ಈ ಪರಂಪರೆ ಇಲ್ಲಿಯವರೆಗೂ ಅವಿಚ್ಛಿನ್ನವಾಗಿ ನಡೆದು ಬಂದಿರುವುದು ಒಂದು ದಾಖಲೆಯೇ ಸರಿ.


ಕಾಕೋಳು ಗ್ರಾಮದ ಗ್ರಾಮಸ್ಥರೂ ಸೇರಿದಂತೆ 4 ತಲೆಮಾರಿನ ಭಕ್ತ ಜನರು ಈ ಉತ್ಸವಕ್ಕೆ ಸಾಕ್ಷಿಯಾಗಿ ಹಲವು ಧಾರ್ಮಿಕ- ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿ ಮುನ್ನಡೆಸುತ್ತಿದ್ದಾರೆ. ಇದೀಗ ಶೋಭನಕೃತ್ ಸಂ|| ಚೈತ್ರ ಶುದ್ಧ ಪಂಚಮಿಯಂದು ಭಾಗವತಪ್ರಿಯ ಭಕ್ತವತ್ಸಲನ 90ನೇ ವರ್ಷದ ಬ್ರಹ್ಮರಥೋತ್ಸವದ ಸಂಭ್ರಮದ ಆಚರಣೆಗೆ ಸಿದ್ಧತೆಗಳು ನಡೆದಿವೆ. 

ಕಾಕೋಳು ಗ್ರಾಮಸ್ಥರು,  ಗ್ರಾಮೀಣ ಪ್ರದೇಶದಲ್ಲಿ ಆಧ್ಯಾತ್ಮಿಕತೆಯ ತಳಹದಿಯ ಮೇಲೆ ಅಕ್ಷರ, ಆರೋಗ್ಯ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಪಾಂಚಜನ್ಯ ಪ್ರತಿಷ್ಠಾನದ ಸಹಯೋಗ ಹಾಗೂ ಸಕಲ ಸದ್ಭಕ್ತರ ಸಹಕಾರದೊಡನೆ ನಾಡಿನ ಧಾರ್ಮಿಕ- ಸಾಂಸ್ಕೃತಿಕ ಕ್ಷೇತ್ರದ ಖ್ಯಾತನಾಮ ಗಣ್ಯರ ಉಪಸ್ಥಿತಿಯಲ್ಲಿ ಆಗಮೋಕ್ತ ರೀತಿಯಲ್ಲಿ ಅರ್ಥಪೂರ್ಣವಾಗಿ ಹಲವು ವಿಶಿಷ್ಠ ಗಾನ-ಜ್ಞಾನ ಯಜ್ಞ -ಉತ್ಸವಗಳಿಂದ ವಿಜೃಂಭಣೆಯಿಂದ ನಡೆಯಲಿದೆ.


ಕಾಕೋಳು ತೇರು- ವೇಣುಗೋಪಾಲನ ವೈಭವದ ಮೇರು: 

ಮಾ.23 ರಿಂದ 27ರವರೆಗೆ ದೇವಾಲಯದ ಆವರಣದ ಪಾಂಚಜನ್ಯ ಸಭಾಂಗಣದ ಹರಿತಸ ವೇದಿಕೆಯಲ್ಲಿ ನಡೆಯುವ ವೈವಿಧ್ಯಮಯ ಧಾರ್ಮಿಕ- ಸಾಂಸ್ಕೃತಿಕ ಕಾರ್ಯಕ್ರಮಗಳು.

ಮಾ.23 ಗುರುವಾರ ಬೆಳಿಗ್ಗೆ 9.30ಕ್ಕೆ ಪೂಜ್ಯ ಶ್ರೀ ಸುವಿದ್ಯೇಂದ್ರ ತೀರ್ಥ ಶ್ರೀಪಾದರಿಂದ 90ನೇ ಬ್ರಹ್ಮರಥೋತ್ಸವ ಕಾರ್ಯಕ್ರಮಗಳ ಉದ್ಘಾಟನೆ.

– ಪ್ರಣವ ಮೀಡಿಯಾ ಹೌಸ್ ಪ್ರಕಾಶನ ಪರಿಕಲ್ಪನೆಯ ಡಾ.ಗುರುರಾಜ ಪೋಶೆಟ್ಟಿಹಳ್ಳಿ ರವರ ಸಂಗ್ರಹಯೋಗ್ಯ ವಿಶಿಷ್ಠ ಸ್ಮರಣ ಸಂಪುಟ ‘ಶ್ರೀ ಕೃಷ್ಣಾರ್ಪಣ’ ಬಿಡುಗಡೆ . ಉಡುಪಿಯ ಓಂಪ್ರಕಾಶ ಭಟ್ಟ ಕೃತಿ ಪರಿಚಯ ಮಾಡಿಕೊಡುವರು. ವಿದ್ವಾನ್ ಬ್ರಹ್ಮಣ್ಯತೀರ್ಥಾಚಾರ್ಯ ರಿಂದ ಪ್ರವಚನ, ಟಿಟಿಡಿ ಎಸ್‍ವಿಬಿಸಿ ಕನ್ನಡ ಚಾನೆಲ್‍ನ ನಿರ್ದೇಶಕ ಡಿ.ಪಿ.ಅನಂತ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಸೇವೆಯಲ್ಲೇ ಸಾರ್ಥಕ್ಯ ಕಂಡ 90ರ ಹಿರಿಯ ಚೇತನಗಳಿಗೆ ಗೌರವ ಸಮರ್ಪಣೆ ನಡೆಯಲಿದೆ. 


ಮಾ.24 ಶುಕ್ರವಾರ ಬೆಳಿಗ್ಗೆ 7ರಿಂದ ಬೃಹತಿ ಸಹಸ್ರ ಮಹಾ ಯಾಗ; ಗ್ಲೋಬಲ್ ವಿಷ್ಣುಸಹಸ್ರ ನಾಮ ಸತ್ಸಂಗ ಫೆಡರೇಷನ್ ಸದಸ್ಯರಿಂದ 11 ಬಾರಿ ವಿಷ್ಣುಸಹಸ್ರ ನಾಮ ಪಾರಾಯಣ; ತಿರುಮಲ ತಿರುಪತಿ ದೇವಸ್ಥಾನದ ಹಿಂದೂ ಧರ್ಮಪ್ರಚಾರ ಪರಿಷದ್ ಪ್ರಾಯೋಜಕತ್ವದ ಪುಣ್ಯಕಥಾ ಸಮಯ- ಡಾ.ಅರಳುಮಲ್ಲಿಗೆ ಪಾರ್ಥಸಾರಥಿ ರವರಿಂದ ಪ್ರವಚನ- ಪೂರ್ಣಾಹುತಿ; ಶ್ರೀದೇವರಿಗೆ 108 ಕಲಶಾಭಿಷೇಕ. 


ಸಂಜೆ ದೊಡ್ಡಬಳ್ಳಾಪುರದ ಪಾಂಚರಾತ್ರಾಗಮ ಪ್ರವೀಣ ಡಾ. ಶ್ರೀನಿವಾಸ ರಾಘವನ್ ಮತ್ತು ಮಕ್ಕಳ ಆಗಮ ಸಾರಥ್ಯದಲ್ಲಿ ಗರುಡ ಧ್ವಜಾರೋಹಣ ಸಂತಾನಾಪೇಕ್ಷಿಗಳಿಗೆ ಗರುಡ ಬುತ್ತಿ, ತೊಟ್ಟಿಲುಪೂಜೆ ಆಯೋಜಿಸಲಾಗಿದೆ. ಬ್ರಹ್ಮರಥೋತ್ಸವದ ಪ್ರಮುಖ ಅಂಗವೇ ಗರುಡಬುತ್ತಿ. ಧ್ವಜಾರೋಹಣದಂದು ನೀಡುವ ಗರುಡದೇವರ ಪ್ರಸಾದವನ್ನು ಸಂತಾನಾಪೇಕ್ಷಿಗಳು ಸೇವಿಸಿ, ತೊಟ್ಟಿಲು ಪೂಜೆ ಮಾಡಿದರೆ ಸಂತಾನಭಾಗ್ಯ ನಿಶ್ಚಿತ ಎನ್ನುವ ನಂಬಿಕೆಯಿದೆ. ಹಾಗಾಗಿ ಇಲ್ಲಿಯ ಕೃಷ್ಣ ಸಂತಾನ ವೇಣುಗೋಪಾಲ ಎಂದೂ ಜನಜನಿತ.


ಮಾ.25 ಶನಿವಾರ ಬೆಳಿಗ್ಗೆ ಗಜೇಂದ್ರ ಮೋಕ್ಷ ಉತ್ಸವ – ಮ|ಶಾ|ಸಂ ವಿದ್ವಾನ್ ವೇಣುಗೋಪಾಲಾಚಾರ್ಯ ಗುಡಿರವರ ಪ್ರವಚನ; ಸಂಜೆ 5.00 ರಿಂದ ಊರ ಮುಂಭಾಗದ ಶಾಲಾ ಮೈದಾನದಲ್ಲಿ ಶ್ರೀವಾರಿ ಫೌಂಡೇಷನ್ ಎಸ್. ವೆಂಕಟೇಶಮೂರ್ತಿ ತಂಡದಿಂದ ವೈಭವದ ಪರಮ ಮಂಗಳಕರ ಮಹಾಕಲ್ಯಾಣೋತ್ಸವ ಏರ್ಪಡಿಸಲಾಗಿದೆ. 

 

ಮಾ.26 ಭಾನುವಾರ ಬೆಳಿಗ್ಗೆ ಗರುಡೋತ್ಸವ, ಶೇಷವಾಹನದಲ್ಲಿ ರುಕ್ಮಿಣಿ ಸತ್ಯಭಾಮ ಸಮೇತ ಶ್ರೀಕೃಷ್ಣನ ಉತ್ಸವಮೂರ್ತಿಯ ಮಂಟಪ್ಪಡಿ (ಗ್ರಾಮ ಪ್ರದಕ್ಷಿಣೆ) ಜಾನಪದ ಕಲಾತಂಡ ಹಾಗೂ ವ್ಯಾಸ ದಾಸ ಸಾಹಿತ್ಯ ಪಂಥದವರ ಸಮಾಗಮದ ವಿವಿಧ ಭಜನಾ ಮಂಡಳಿಯಿಂದ ನಾಮ ಸಂಕೀರ್ತನೆಯೊಂದಿಗೆ ಅಭಿಜಿನ್ ಮುಹೂರ್ತದಲ್ಲಿ ಪೂರ್ಣಾಹುತಿಯಾಗಿ ದಿವ್ಯ ಪುಷ್ಪಾಲಂಕೃತ ಮಹಾರಥಾರೋಹಣ (90ನೇ ಬ್ರಹ್ಮರಥೋತ್ಸವ) ಅನ್ನ ಸಂತರ್ಪಣೆ ನಡೆಯಲಿದೆ.

 

ಮಾ.27 ಸೋಮವಾರ ಬೆಳಿಗ್ಗೆ ಮೈಸೂರು ರಾಮಚಂದ್ರಾಚಾರ್ಯರಿಂದ ದಾಸರ ಪದಗಳ ಗಾಯನ: ಗೋಪಿವಲ್ಲಭ ಗಾನಸುಧಾ ವಸಂತೋತ್ಸವದೊಡನೆ ಅಷ್ಟಮಿಪ್ರಿಯನ ಅವಿಸ್ಮರಣೀಯ ಉತ್ಸವ ಸಂಪನ್ನವಾಗಲಿದೆ.


ಈ ಎಲ್ಲಾ ಉತ್ಸವಗಳ ಮಹಾಸರಣಿಯು ಭಕ್ತ ಬಂಧುಗಳ ಭವ ಬಂಧನಕ್ಕೊಂದು ಆಧ್ಯಾತ್ಮಿಕ ಸ್ಪಂದನ ನೀಡಿ ಇಂದಿನ ಒತ್ತಡಯುತ ಜೀವನಶೈಲಿಯ ಹತಾಶೆ, ಉದ್ವಿಗ್ನತೆ, ಮಾನಸಿಕ ತೊಳಲಾಟಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕಾಕೋಳು ದೇವಸ್ಥಾನವು ಅಗಾಧ ಕೊಡುಗೆ ನೀಡುತ್ತಿದೆ. ಒಟ್ಟಾರೆ ಈ ದೇಗುಲ ಸಂಕೀರ್ಣ ಕೃಷ್ಣಭಕ್ತಿಗೆ ಪ್ರೇರಕವೆನಿಸುತ್ತದೆ. ಗ್ರಾಮಾಂತರದಲ್ಲಿ ಆಧ್ಯಾತ್ಮಿಕತೆಯನ್ನಾಧರಿಸಿದ ಸಂಘಟನೆ, ಧರ್ಮಸಂಸ್ಕೃತಿ ಜಾಗೃತಿಯೇ ಇಲ್ಲಿ ಪರಮಲಕ್ಷ್ಯವಾಗಿದೆ ಎಂದು ದೇವಸ್ಥಾನ ವಿಶ್ವಸ್ಥ ಮಂಡಲಿಯವರು ತಿಳಿಸಿರುತ್ತಾರೆ.


ದೇಗುಲದ ಕಿರು ಪರಿಚಯ: ಬೃಂದಾವನದಲಿ ನಲಿಯುವ ಕೃಷ್ಣ

ಅಲ್ಲೊಂದು ತುಳಸಿ ಬೃಂದಾವನ. ನಡುವೆ ಎಡಗಾಲ ಮೇಲೆ ಬಲಗಾಲನ್ನಿಟ್ಟು ಕೊಳಲನ್ನು ಹಿಡಿದ ಮುರಳಿ, ಇಕ್ಕೆಲಗಳಲ್ಲಿ ವೇಣುಗಾನದಲ್ಲಿ ಭಾವ ಪರವಶವಾಗಿರುವ ಗೋವುಗಳು, ಎದುರಿಗೆ ಕೃಷ್ಣನ ದಿವ್ಯ ಸ್ವರೂಪವನ್ನು ಕಣ್ತುಂಬಿಸಿಕೊಳ್ಳುತ್ತಿರುವ ವೇದವ್ಯಾಸ, ಆಚಾರ್ಯ ಮಧ್ವ, ಶ್ರೀಪಾದರಾಜರು. ಸನಿಹದಲ್ಲಿಯೇ ಕನಕ- ಪುರಂದರದಾಸರು. ಮನದಲ್ಲಿ ನೆಮ್ಮದಿ, ಮಾತಿನಲ್ಲಿ ಸಿದ್ಧಿ, ಮನೆಯಲ್ಲಿ ಸಮೃದ್ಧಿ ಬೇಕೆ? ಹಾಗಿದ್ದರೆ ಬನ್ನಿ ಇಲ್ಲಿಗೆ ಎಂದು ಭಕ್ತಾದಿಗಳನ್ನು ಕೈಬೀಸಿ ಕರೆಯುತ್ತಿದೆ ಈ ತಾಣ. ಯಲಹಂಕ-ದೊಡ್ಡಬಳ್ಳಾಪುರ ರಸ್ತೆಯ ರಾಜಾನುಕುಂಟೆ ಸಮೀಪದ ಧಾರ್ಮಿಕ ಸೊಗಡಿನ ಚಾರಿತ್ರಿಕ, ಪೌರಾಣಿಕ ನೆಲೆಯೆಂದು ಜನಪ್ರಿಯವಾಗಿದೆ. ಕಾಲಕ್ಕೆ ತಕ್ಕಂತೆ ಕೊಂಚ ಆಧುನಿಕತೆಯ ಲೇಪವಿದ್ದರೂ ಗ್ರಾಮೀಣ ಸಂಸ್ಕøತಿಯಿಂದ ಬೇರ್ಪಟ್ಟಿಲ್ಲ. ಒಂದು ಊರಿನ ಇತಿಹಾಸವೆಂದರೆ ಅದು ಜನತೆಯ ಇತಿಹಾಸ, ಅವರು ಬಾಳಿ ಬದುಕಿದ ರೀತಿ, ಅನುಸರಿಸಿದ ಧರ್ಮ, ಸಾಂಸ್ಕೃತಿಕ ಸಾಮಾಜಿಕ ಪ್ರಜ್ಞೆ, ಜೀವನ ಮೌಲ್ಯಗಳನ್ನು ಶ್ರೀ ಕ್ಷೇತ್ರ ಕಾಕೋಳಿನಲ್ಲಿ ಕಾಣಬಹುದು.


ಚತುರ್ಭುಜ ವೇಣುಗೋಪಾಲ:

ಹೆಸರುಘಟ್ಟ ಕೆರೆ ಸನಿಹದ ಕಾಕೋಳಿನ  ಪ್ರಧಾನ  ಆಕರ್ಷಣೆ  ದಾಸಸಾಹಿತ್ಯದ ಆದ್ಯ ಪ್ರವರ್ತಕ ಶ್ರೀ ಶ್ರೀಪಾದರಾಜ ಪ್ರತಿಷ್ಠಿತ ಬೃಂದಾವನದಲ್ಲಿರುವ ಚತುರ್ಭುಜ ವೇಣುಗೋಪಾಲಸ್ವಾಮಿ ಮತ್ತು ಒಳ ಪ್ರವೇಶಿಸಿದೊಡನೆ ಎದುರು ಕಾಣುವುದೇ ಶೀಘ್ರ ವರಪ್ರದ ಮೋದ ಮಾರುತಿ. ವ್ಯಾಸರಾಜರು ಪ್ರತಿμÁ್ಠಪನೆ ಮಾಡಿರುವ 732 ಹನುಮನ ವಿಗ್ರಹಗಳಲ್ಲಿ ಒಂದಾದ ಕಂಬದ ಆಂಜನೇಯಸ್ವಾಮಿಯ ದರ್ಶನ ಇಲ್ಲಾಗುತ್ತದೆ. ಈ ಕ್ಷೇತ್ರ ಮೊದಲು ವಿಜಯನಗರ ಅರಸರ ಸಾಮಂತನೊಬ್ಬನ ಆಳ್ವಿಕೆಯಲ್ಲಿತ್ತು. ಆಗ ಇದಕ್ಕೆ ಕಾಕೋಡು, ಕಾಕಾಪುರ, ಮುಂತಾದ ಹೆಸರುಗಳಿದ್ದವು. ಕಾಕೋಡು ಎಂದರೆ ಸುಖ ಸಮೃದ್ಧಿಯಿಂದ ಕೂಡಿದ ಸ್ಥಳವೆಂದರ್ಥ. ರಾಮಾಯಣದ ಕಾಕಾಸುರನು (ಇಂದ್ರನ ಮಗ ಜಯಂತ) ಶಾಪ ವಿಮೋಚನೆಗಾಗಿ ಸ್ನಾನ ಮಾಡಿದ ಕೊಳ ಅದುವೇ `ಕಾಕೋಳು' ಆಯಿತೆನ್ನುತ್ತದೆ ಸ್ಥಳ ಪುರಾಣ. ಕಾಕೋಳು ಶ್ಯಾನುಭೋಗ್ ನರಸಣ್ಣ ಮತ್ತು ಶೇಷಗಿರಿರಾವ್ ಸಹೋದರರು ತಮ್ಮ ಜೀವನವನ್ನು ರಾಮ ಮತ್ತು ಲಕ್ಷ್ಮಣರಂತೆ ಕಳೆದರು, ಸಹೋದರತ್ವ, ಉದಾತ್ತ ಚಿಂತನೆಗಳು ಮತ್ತು ಸಮಾಜದ ಕಾಳಜಿಯ ಪ್ರತಿರೂಪವಾಗಿದ್ದರು. ಹಿಂದಿನ ಹೆಸರುಘಟ್ಟ ಕೆರೆ ಪ್ರದೇಶದಿಂದ 1900ರ ಸುಮಾರಿನಲ್ಲಿ ಕಾಕೋಳು ಗ್ರಾಮವನ್ನು ಸ್ಥಳಾಂತರಿಸಿದಾಗ, ಶ್ರೀ ವೇಣುಗೋಪಾಲಸ್ವಾಮಿ ಮತ್ತು ಮುಖ್ಯಪ್ರಾಣದೇವರ ವಿಗ್ರಹಗಳನ್ನು ಈಗಿನ ಕಾಕೋಳು ಗ್ರಾಮಕ್ಕೆ ಸ್ಥಳಾಂತರಿಸಿ ಮತ್ತು ಆರಾಧ್ಯ ದೇವತೆಯಾಗಿ ಪೂಜಿಸಲು ಸಣ್ಣ ದೇವಾಲಯವನ್ನು ನಿರ್ಮಿಸಿದರು. ದೇವಾಲಯದ ಆವರಣದಲ್ಲಿ ಸುಸಜ್ಜಿತವಾದ ಪಾಂಚಜನ್ಯ– ಸುದರ್ಶನವೆಂಬ ಸಭಾಂಗಣಗಳಿವೆ. ಬ್ರಹ್ಮರಥೋತ್ಸವದ ಅಷ್ಟ ದಶಮಾನೋತ್ಸವದ ಸ್ಮರಣಾರ್ಥ ನಡೆದ ಶ್ರೀಕೃಷ್ಣ ಕಲಾದರ್ಶನ ಆರ್ಟ್ ಗ್ಯಾಲರಿ ಕಣ್ತುಂಬಿಕೊಳ್ಳಬಹುದು. ಬೆಂಗಳೂರಿನ ಪ್ರಮುಖ ಬಸ್ ನಿಲ್ದಾಣಗಳಿಂದ ಕಾಕೋಳು ತಲುಪಲು ಸಾಕಷ್ಟು ಬಸ್ ಸೌಕರ್ಯಗಳಿವೆ. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top