ಬ್ಯಾಂಕ್‍ ಆಫ್ ಬರೋಡ: ಉಜಿರೆಯಲ್ಲಿ ನೂತನ ಮುಖ್ಯ ಶಾಖೆಯ ಉದ್ಘಾಟನೆ

Upayuktha
0

 


ಉಜಿರೆ: ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ಹೆಬ್ಬಾಗಿಲಿನಂತಿರುವ ಉಜಿರೆಯು ಸಸ್ಯಕಾಶಿಯಾಗಿಯೂ, ಜ್ಞಾನಕಾಶಿಯಾಗಿಯೂ ಬೆಳೆಯುತ್ತಿದ್ದು ಹಲವು ಸೃಜನಾತ್ಮಕ ಚಟುವಟಿಕೆಗಳ ಕೇಂದ್ರವಾಗಿದ್ದು ಸಾರ್ವಜನಿಕ ಸೇವೆಯಲ್ಲಿ ಆರೋಗ್ಯಕರ ಸ್ಪರ್ಧೆ ಇರಲಿ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹಾರೈಸಿದರು.


ಅವರು ಬುಧವಾರ ಉಜಿರೆಯಲ್ಲಿ ಚಾರ್ಮಾಡಿ ರಸ್ತೆಯಲ್ಲಿರುವ “ಮಂಜೂಷಾ” ಕಟ್ಟಡದಲ್ಲಿ ಬ್ಯಾಂಕ್‍ ಅಫ್ ಬರೋಡ ನೂತನ ಮುಖ್ಯ ಶಾಖೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು.


1966ರಲ್ಲಿ ತನ್ನ ತಂದೆ ಕೀರ್ತಿಶೇಷ ರತ್ನವರ್ಮ ಹೆಗ್ಗಡೆಯವರು ಉಜಿರೆಯಲ್ಲಿ ಪದವಿ ಕಾಲೇಜನ್ನು ಪ್ರಾರಂಭಿಸಿದ ಬಳಿಕ ಸಸ್ಯಕಾಶಿಯಾಗಿದ್ದ ಉಜಿರೆಯು ಹಲವು ಪ್ರಗತಿಪರ ಚಟುವಟಿಕೆಗಳ ಮೂಲಕ ದೇಶದ ಗಮನ ಸೆಳೆದಿದೆ. ಗ್ರಾಮಾಭಿವೃದ್ಧಿ ಯೋಜನೆ, ಕೆ.ಜಿ.ಯಿಂದ ಪಿ.ಜಿ. ವರೆಗಿನ ಶಿಕ್ಷಣ ಸಂಸ್ಥೆಗಳು ಉನ್ನತ ಸಾಧನೆ ಮಾಡಿವೆ. 1968ರಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿಯಾಗಿ ಪಟ್ಟಾಭಿಷಿಕ್ತರಾದ ಬಳಿಕ ಅಂದಿನ ವಿಜಯಾ ಬ್ಯಾಂಕಿನ ಸ್ಥಾಪಕ ಅಧ್ಯಕ್ಷರಾಗಿದ್ದ ಸುಂದರರಾಮ ಶೆಟ್ಟಿ ಅವರು ತನ್ನನ್ನು ಬ್ಯಾಂಕಿನ ನಿರ್ದೇಶಕರಾಗಿ ಮಾಡಿ ಸೇವೆ ನೀಡುವ ಅವಕಾಶ ನೀಡಿರುವುದನ್ನು ಹೆಗ್ಗಡೆಯವರು ಸ್ಮರಿಸಿದರು.


ಉಜಿರೆಯ ನಾಗರಿಕರು ಬ್ಯಾಂಕ್‍ ಆಫ್ ಬರೋಡದ ಸೇವೆಯ ಸದುಪಯೋಗ ಪಡೆದು ಉನ್ನತ ಪ್ರಗತಿ ಸಾಧಿಸುವಂತಾಗಲೆಂದು ಹೆಗ್ಗಡೆಯವರು ಹಾರೈಸಿದರು.


ಬ್ಯಾಂಕ್‍ ಆಫ್ ಬರೋಡಾದ ಕಾರ್ಯನಿರ್ವಾಹಕ ನಿರ್ದೇಶಕ ಅಜಯ್ ಕೆ.ಖುರಾನಾ ಮಾತನಾಡಿ, ಅಧಿಕ ಲಾಭ ಮತ್ತು ಉತ್ತಮ ಸೇವೆಯೊಂದಿಗೆ ಪ್ರಗತಿ ಪಥದಲ್ಲಿ ಮುನ್ನಡೆಯುತ್ತಿರುವ ಬ್ಯಾಂಕ್‍ ಆಫ್ ಬರೋಡ ಉನ್ನತ ಸಾಧನೆಯಲ್ಲಿ ದೇಶದಲ್ಲಿ ಎರಡನೆ ಸ್ಥಾನದಲ್ಲಿದೆ ಎಂದರು. ಹೆಗ್ಗಡೆಯವರು ಸಾಹಿತ್ಯ, ಧರ್ಮ, ಕಲೆ, ಸಮಾಜಸೇವೆ, ಗ್ರಾಮಾಭಿವೃದ್ಧಿ ಮೊದಲಾದ ಕ್ಷೇತ್ರಗಳಲ್ಲಿ ಸಲ್ಲಿಸಿದ ಅನುಪಮ ಸೇವೆಯನ್ನು ಅವರು ಶ್ಲಾಘಿಸಿ ಅಭಿನಂದಿಸಿದರು.


ಸಾಧಕರಿಗೆ ಸನ್ಮಾನ: ಬ್ಯಾಂಕ್‍ ಆಫ್ ಬರೋಡಾದ ಸೇವೆಯ ಸದುಪಯೋಗ ಪಡೆದು ಉನ್ನತ ಸಾಧನೆ ಮಾಡಿದ ಗ್ರಾಹಕರಾದ ರಾಜೇಶ್ ಪೈ, ಶೈಲಾ, ಗಣೇಶ ಎಂ. ಅಶ್ವಿನಿ ಕುಮಾರಿ, ಡಾ.ಗೋಪಾಲಕೃಷ್ಣ ಭಟ್‍ ಅವರನ್ನು ಬ್ಯಾಂಕಿನ ವತಿಯಿಂದ ಗೌರವಿಸಲಾಯಿತು.


ಗ್ರಾಹಕರ ಪರವಾಗಿ ರಾಜೇಶ್ ಪೈ ಕೃತಜ್ಞತೆಗಳೊಂದಿಗೆ ಬ್ಯಾಂಕ್‍ಗೆ ಅಭಿನಂದನೆ ಸಲ್ಲಿಸಿದರು.


ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯ ನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್. ಮಂಜುನಾಥ ಗ್ರಾಹಕರಿಗೆ ಬ್ಯಾಂಕ್‍ ಆಫ್ ಬರೋಡಾದ ಸೌಜನ್ಯಪೂರ್ಣ ಸೇವೆಯನ್ನು ಶ್ಲಾಘಿಸಿ ಅಭಿನಂದಿಸಿದರು.


ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಎಸ್. ಸತೀಶ್ಚಂದ್ರ, ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಆಡಳಿತ ನಿರ್ದೇಶಕ ಜನಾರ್ದನ, ಕೆ.ಎನ್. ಬ್ಯಾಂಕ್‍ಆಫ್ ಬರೋಡ ಉಜಿರೆ ಶಾಖೆಯ ಹಿರಿಯ ವ್ಯವಸ್ಥಾಪಕ ಪ್ರಸಾದ್‍ ಎನ್., ಪ್ರಾದೇಶಿಕ ವ್ಯವಸ್ಥಾಪಕ ದೇವಿಪ್ರಸಾದ್ ಶೆಟ್ಟಿ ಮತ್ತು ಆರ್. ಗೋಪಾಲಕೃಷ್ಣ ಉಪಸ್ಥಿತರಿದ್ದರು.


ಬ್ಯಾಂಕ್‍ ಆಫ್ ಬರೋಡದ ಮಂಗಳೂರು ವಲಯದ ಪ್ರಧಾನ ವ್ಯವಸ್ಥಾಪಕರಾದ ಗಾಯತ್ರಿ, ಆರ್. ಸ್ವಾಗತಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top