ಉಡುಪಿ ಜಿಲ್ಲೆಯಲ್ಲಿ 13,878 ಕೋಟಿ ರೂ. ಸಾಲ ವಿತರಣೆ ಗುರಿ: ಜಿ.ಪಂ. ಸಿಇಓ ಪ್ರಸನ್ನ

Upayuktha
0


ಉಡುಪಿ :
ಜಿಲ್ಲೆಯಲ್ಲಿ 2023-24 ನೇ ಸಾಲಿನಲ್ಲಿ ವಿವಿಧ ಬ್ಯಾಂಕ್‍ಗಳ ಮೂಲಕ 13,878 ಕೋಟಿ ರೂ. ಗಳ ಸಾಲ ವಿತರಣೆಯ ಗುರಿ ಹೊಂದಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಎಚ್ ಹೇಳಿದರು.


ಅವರು ಇಂದು ನಗರದ ರಜತಾದ್ರಿಯ ಜಿಲ್ಲಾ ಪಂಚಾಯತ್‍ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನಡೆದ ಜಿಲ್ಲಾ ಲೀಡ್ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆಯಲ್ಲಿ, 2023-24 ನೇ ಸಾಲಿನ ಜಿಲ್ಲಾ ಸಾಲ ಯೋಜನೆ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.


2023-24 ನೇ ಸಾಲಿನಲ್ಲಿ ಆದ್ಯತಾ ವಲಯಕ್ಕೆ 10,644 ಕೋಟಿ ರೂ., ಕೃಷಿ ಕ್ಷೇತ್ರಕ್ಕೆ 5,502 ಕೋಟಿ ರೂ., ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ವಲಯಕ್ಕೆ 3444.72 ಕೋಟಿ ರೂ., ಶಿಕ್ಷಣ ಕ್ಷೇತ್ರಕ್ಕೆ 190.06 ಕೋಟಿ ರೂ., ವಸತಿ ಕ್ಷೇತ್ರಕ್ಕೆ 1063 ಕೋಟಿ ರೂ., 446 ಕೋಟಿ ರೂ.ಗಳನ್ನು ಇತರೇ ಆದ್ಯತಾ ವಲಯಗಳಿಗೆ ಸಾಲ ವಿತರಿಸಲು ಮೀಸಲಿಡಲಾಗಿದೆ ಎಂದರು. 


ಪ್ರಧಾನಮಂತ್ರಿ ಸ್ವ-ನಿಧಿ ಯೋಜನೆಯ ಸಾಲ ವಿತರಣೆಯಲ್ಲಿ ಉಡುಪಿ ಜಿಲ್ಲೆಯು ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದ್ದು, 3049 ಮಂದಿಗೆ ಸಾಲ ನೀಡುವ ಗುರಿ ಇದ್ದು, 4550 ಮಂದಿಗೆ ಸಾಲ ವಿತರಣೆ ಮಾಡಿ, ಶೇ.149 ರಷ್ಡು ಸಾಧನೆ ಮಾಡಿದ್ದು, ಬ್ಯಾಂಕ್‍ಗಳಲ್ಲಿ ಇನ್ನೂ ಬಾಕಿ ಇರುವ ಅರ್ಜಿಗಳನ್ನು ಶೀಘ್ರದಲ್ಲಿ ವಿಲೇವಾರಿ ಮಾಡುವಂತೆ ಸೂಚನೆ ನೀಡಿದರು.


ಪ್ರಧಾನ ಮಂತ್ರಿ ಉದ್ಯೋಗ ಸೃಜನಾ ಯೋಜನೆಯಡಿ 180 ಮಂದಿಗೆ ಸಾಲ ನೀಡುವ ಗುರಿ ಇದ್ದು, 472 ಮಂದಿಗೆ ಸಾಲ ವಿತರಿಸುವ ಮೂಲಕ 262% ಸಾಧನೆ ಮಾಡಿದ್ದು, ರಾಜ್ಯದಲ್ಲೇ 2 ನೇ ಸ್ಥಾನ ಪಡೆದಿದೆ ಎಂದರು.


ವಿವಿಧ ಯೋಜನೆಗಳಲ್ಲಿ ಸಾಲ ಕೋರಿ ಸಲ್ಲಿಕೆಯಾಗುವ ಫಲಾನುಭವಿಗಳ ಅರ್ಜಿಗಳನ್ನು ತಾಂತ್ರಿಕ ಕಾರಣಗಳಿಂದ ತಿರಸ್ಕರಿಸಿದೇ, ತಾಂತ್ರಿಕ ಕಾರಣಗಳ ಬಗ್ಗೆ ಬ್ಯಾಂಕ್ ಅಧಿಕಾರಿಗಳು ಮತ್ತು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಚರ್ಚಿಸಿ ಸೂಕ್ತ ಪರಿಹಾರ ಕಂಡುಕೊಳ್ಳುವುದರ ಮೂಲಕ ಅರ್ಹ ಎಲ್ಲರಿಗೂ ಸಾಲವನ್ನು ವಿತರಿಸುವಂತೆ ಎಲ್ಲಾ ಬ್ಯಾಂಕ್‍ಗಳಿಗೆ ತಿಳಿಸಿದರು.


ತ್ರೈಮಾಸಿಕ ವರದಿ ನೀಡಿದ ಕೆನರಾ ಬ್ಯಾಂಕಿನ ಪ್ರಾದೇಶಿಕ ಮ್ಯಾನೇಜರ್ ಲೀನಾ ಪಿಂಟೋ ಮಾತನಾಡಿ,ಜಿಲ್ಲೆಯಲ್ಲಿ ಕಳೆದ ಡಿಸೆಂಬರ್‍‌ಗೆ ಹೋಲಿಸಿದ್ದಲ್ಲಿ ಸಾಲ ನೀಡುವ ಪ್ರಮಾಣ ಶೇ.9.58 ಹೆಚ್ಚಳವಾಗಿದ್ದು, 15,964 ಕೋಟಿ ರೂ.ಸಾಲ ವಿತರಣೆ ಹಾಗೂ 34,120 ಕೋಟಿ ರೂ.ಠೇವಣಿ ಸಂಗ್ರಹಿಸಲಾಗಿದೆ. ದುರ್ಬಲ ವರ್ಗಕ್ಕೆ ಸಾಲ ವಿತರಿಸಲು ವಿಶೇಷ ಒತ್ತು ನೀಡಿ, 1,30,277 ಫಲಾನುಭವಿಗಳಿಗೆ 1855 ಕೋಟಿ ರೂ, 1,50,716 ಮಹಿಳೆಯರಿಗೆ 3,452 ಕೋಟಿ ರೂ. ಗಳನ್ನು ವಿತರಿಸಿದ್ದು, ಎಲ್ಲಾ ಬ್ಯಾಂಕ್‍ಗಳು ಮಾರ್ಚ್ ಅಂತ್ಯದ ವೇಳೆಗೆ ತಮ್ಮ ಗುರಿಯನ್ನು ಸಾಧಿಸುವಂತೆ ತಿಳಿಸಿದರು.


ರಿಸರ್ವ್ ಬ್ಯಾಂಕ್‍ನ ಕಾರ್ಯನಿರ್ವಾಹಕ ಅಧಿಕಾರಿ ಅಲೋಕ್ ಸಿನ್ಹಾ ಮಾತನಾಡಿ, ಗ್ರಾಹಕರು ಬ್ಯಾಂಕ್‍ ವ್ಯವಹಾರದಲ್ಲಿ ಅನ್‍ಲೈನ್ ವಂಚನೆಗೊಳಗಾಗದಂತೆ ಅರಿವು ಮತ್ತು ಜಾಗೃತಿ ಮೂಡಿಸುವಂತೆ ಹಾಗೂ ರಾಜ್ಯ ವಿಧಾನಸಭಾ ಚುನಾವಣೆಯ ಪ್ರಯುಕ್ತ, ಬ್ಯಾಂಕ್ ವಹಿವಾಟುಗಳ ನಿರ್ವಹಣೆ ಕುರಿತಂತೆ ಕೇಂದ್ರ ಚುನಾವಣಾ ಆಯೋಗವು ಸೂಚಿಸಿರುವ ಮಾರ್ಗಸೂಚಿಯನ್ನು ಪಾಲಿಸುವಂತೆ ಹಾಗೂ ಆಯೋಗ ಕೋರುವ ಅಗತ್ಯ ಮಾಹಿತಿಗಳನ್ನು ನೀಡುವಂತೆ ಎಲ್ಲಾ ಬ್ಯಾಂಕ್‍ಗಳಿಗೆ ಸೂಚನೆ ನೀಡಿದರು. 


ಸಭೆಯಲ್ಲಿ ನಬಾರ್ಡ್‍ನ ಡಿಡಿಎಂ ಸಂಗೀತಾ ಕಾರ್ಥಾ, ಯೂನಿಯನ್ ಬ್ಯಾಂಕ್‍ನ ಪ್ರಾದೇಶಿಕ ಮ್ಯಾನೇಜರ್ ಡಾ.ವಾಸಪ್ಪ, ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಪಿಂಜಾರ ಹಾಗೂ ಜಿಲ್ಲೆಯ ವಿವಿಧ ಬ್ಯಾಂಕ್‍ಗಳ ಹಾಗೂ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top