ಮಿಜಾರು (ಮೂಡುಬಿದಿರೆ): ‘ವೃತ್ತಿಗಾಗಿ ಹುಡುಕಾಟ ನಡೆಸುವ ಬದಲು, ನವೀನತೆ ಹಾಗೂ ಸೃಜನಶೀಲತೆಯಿಂದ ಸ್ವಯಂ ಉದ್ಯೋಗ ಸೃಷ್ಟಿಸಿಕೊಳ್ಳಿ’ ಎಂದು ಭಾರತೀಯ ದಂತ ವೈದ್ಯ ಪರಿಷತ್ ಸದಸ್ಯ ಹಾಗೂ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯ ಡಾ. ಶಿವಶರಣ್ ಶೆಟ್ಟಿ ಹೇಳಿದರು.
ಆಳ್ವಾಸ್ ಹೋಮಿಯೋಪತಿ ವೈದ್ಯಕೀಯ ಕಾಲೇಜಿನಲ್ಲಿ ಶುಕ್ರವಾರ ನಡೆದ ವಿದ್ಯಾರ್ಥಿಗಳ ನೂತನ ತಂಡದ ಉದ್ಘಾಟನೆ (ಅಭಿವಿನ್ಯಾಸ) ಹಾಗೂ ಪೋಷಕರು ಮತ್ತು ಶಿಕ್ಷಕರ ಸಭೆಯಲ್ಲಿ ಅವರು ಮಾತನಾಡಿದರು.
‘ಹೋಮಿಯೋಪತಿಯು ವಿದ್ಯಾರ್ಥಿಗಳ ಸ್ವಯಂ ಅವಲಂಬನೆಗೆ ಸಹಕಾರಿಯಾಗಿದೆ. ವಿದ್ಯಾರ್ಥಿಗಳು ಸಾಮಾಜಿಕ ಚಿಂತನೆಗಳನ್ನು ಜವಾಬ್ದಾರಿಯುತವಾಗಿ ವೃದ್ಧಿಸಿಕೊಳ್ಳುವುದು ಅಗತ್ಯ’ ಎಂದರು. ವೈದ್ಯಕೀಯ ಶಿಕ್ಷಣದಲ್ಲಿ ಹೊಸ ಶಿಕ್ಷಣ ಪದ್ಧತಿಯನ್ನು ಕೆಲವೇ ವರ್ಷಗಳಲ್ಲಿ ಅಳವಡಿಸಲಾಗುವುದು. ಇದರಿಂದ ಹಲವಾರು ಬದಲಾವಣೆಗಳು ಆಗಲಿವೆ ಎಂದ ಅವರು, ಶಿಕ್ಷಣ ಸಂಸ್ಥೆಯ ಮೌಲ್ಯವು ಅಲ್ಲಿನ ಶಿಕ್ಷಕರ ಗುಣಮಟ್ಟದಿಂದ ನಿರ್ಧಾರವಾಗುತ್ತದೆ. ಇಂದು ಉತ್ತಮ ಶಿಕ್ಷಕರ ಅವಶ್ಯಕತೆ ಬಹಳ ಇದೆ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ‘ಎಲ್ಲರಿಗೂ ನಿತ್ಯ ಕಲಿಕೆ ಬಹಳ ಅವಶ್ಯಕ. ಜೀವನವು ನಮಗೆ ದಿನಕ್ಕೊಂದು ಪಾಠವನ್ನು ಕಲಿಸುತ್ತದೆ. ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಮೊಬೈಲ್ ಬಳಕೆ ಹೆಚ್ಚಾಗಿದ್ದು, ಗ್ರಹಣಶಕ್ತಿ ಕಡಿಮೆ ಆಗುತ್ತಿದೆ’ ಎಂದರು. ‘ವೈದ್ಯಕೀಯ ವಿದ್ಯಾರ್ಥಿಗಳಿಗೆ ಧೈರ್ಯ ಹೆಚ್ಚಿರಬೇಕು. ವೃತ್ತಿಯಲ್ಲಿ ಹೆಚ್ಚಿನ ಸವಾಲುಗಳನ್ನು ಎದುರಿಸಬೇಕಾಗಿದ್ದು, ಧೈರ್ಯದಿಂದ ಸವಾಲುಗಳನ್ನು ಎದುರಿಸಬೇಕು’ ಎಂದರು.
ಆಳ್ವಾಸ್ ಹೋಮಿಯೋಪತಿ ವೈದ್ಯಕೀಯ ಕಾಲೇಜಿನ ಸಲಹೆಗಾರ ಡಾ.ಪ್ರವೀಣ್ ರಾಜ್ ಮತ್ತು ಕಾಲೇಜಿನ ಸಹ ಆಡಳಿತ ಅಧಿಕಾರಿ ಡಾ. ಪ್ರಜ್ಞಾ ಆಳ್ವ ಹಾಜರಿದ್ದರು.
ಹಿರಿಯ ಹೋಮಿಯೋಪತಿ ವೈದ್ಯ ಡಾ.ಸುಪ್ರಸಾದ್ ರಾವ್ ಅವರನ್ನು ಸನ್ಮಾನಿಸಲಾಯಿತು. ಕಾಲೇಜಿನ ಒರ್ಗನನ್ ವಿಭಾಗದ ಮುಖ್ಯಸ್ಥೆ ಡಾ. ಜೀಜಿ ಎಸ್ ಕಾಪ್ಪಿಲ್ ನಿರೂಪಿಸಿ, ಕಾಲೇಜಿನ ಪ್ರಾಂಶುಪಾಲ ಡಾ.ಹೆರಾಲ್ಡ್ ರೋಶನ್ ಪಿಂಟೊ ಸ್ವಾಗತಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ