ಮಹಿಳಾ ದಿನಾಚರಣೆ: ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೇ ತತ್ರ ದೇವತಾ

Upayuktha
0

 


“ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೇ ತತ್ರ ದೇವತಾ’, ಅಂದ್ರೆ ಮಹಿಳೆಯರನ್ನು ಎಲ್ಲಿ ನಾವು ಆರಾಧಿಸುತ್ತೇವೆಯೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ. ಸ್ತ್ರೀಯರನ್ನು ಶಕ್ತಿ ಸ್ವರೂಪಿಣಿಯಾಗಿ ಆರಾಧಿಸಿದ ದೇಶ ನಮ್ಮದು. ಸ್ತ್ರೀಯನ್ನು ಮೂರು ದೃಷ್ಟಿಯಿಂದ ನೋಡುತ್ತೇವೆ. ಕತೃತ್ವ, ನೇತೃತ್ವ, ತಾಯ್ತನದ ಸ್ವರೂಪವಾಗಿರುತ್ತಾಳೆ. ಇವೆಲ್ಲವೂ ಒಂದು ಹೆಣ್ಣಿನಲ್ಲಿ ಇದ್ದಾಗ ಸಮಾಜದಲ್ಲಿ ಶಾಂತಿ-ನೆಮ್ಮದಿಯ ನೆಲೆಯಾಗುತ್ತದೆ. ಹಾಗೆಯೇ ಪ್ರತಿಯೊಬ್ಬ ಪುರುಷನ ಯಶಸ್ಸಿನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ.


ಸಾಧನೆಗೆ ಸ್ಫೂರ್ತಿ, ಬದುಕಿಗೆ ದಾರಿ, ಕುಟುಂಬದ ಶಕ್ತಿ... ಎಲ್ಲರ ಬದುಕಿನಲ್ಲೂ ಪ್ರಮುಖ ಸ್ಥಾನ ಪಡೆದವಳು ಹೆಣ್ಣು. ಹೆಣ್ಣಿಲ್ಲದೆ ಇಲ್ಲದೆ ಬದುಕೇ ಇಲ್ಲ...


ಹೆಣ್ಣು ಮೃದುವಾಗಿರಬೇಕು ಶಾಂತವಾಗಿರಬೇಕು. ತ್ಯಾಗ ಮಾಡಬೇಕು ತಲೆ ತಗ್ಗಿಸಿ ನಡೆಯಬೇಕು ಜೋರಾಗಿ ಮಾತನಾಡಬಾರದು ಎಂಬ ಹುಚ್ಚು ಕಟ್ಟುಪಾಡುಗಳನ್ನು ಇನ್ನಾದರೂ ಮುರಿಯಬೇಕಾಗಿದೆ. ಗಂಡು ಜೋರಾಗಿ ಇರಬೇಕು, ಹೆಣ್ಣು ಶಾಂತವಾಗಿರಬೇಕು ಎಂಬ ವಿಚಿತ್ರ ಮಾತುಗಳು ಕೇಳುತ್ತಲೇ ಇರುತ್ತೇವೆ. ಆದರೆ ಈಗ ಕಾಲ ಬದಲಾಗಿದೆ ತನ್ನ ಕೆಲಸ ಕಾರ್ಯ ತನ್ನ ಗೌರವವನ್ನು ಕಾಪಾಡಿಕೊಳ್ಳಲು ಹೆಣ್ಣು ಯಾವಾಗಲೂ ಮುಂದಾಗಬೇಕು. ಹೆಣ್ಣು ಎಂದು ಗೌರವ ಕೊಡುವುದಕ್ಕಿಂತ ಆಕೆಯೂ ಮನುಷ್ಯಳು ಎಂದು ಗೌರವಿಸುವ ಪದ್ಧತಿ ಶುರುವಾಗಬೇಕು.


ಹುಟ್ಟಿದ ಪ್ರತಿಯೊಂದು ಹೆಣ್ಣು ಮಗು ತನ್ನ ಜೀವನದುದ್ದಕ್ಕೂ ಮಗಳಾಗಿ, ಹೆಂಡತಿಯಾಗಿ, ತಾಯಿಯಾಗಿ, ಸ್ನೇಹಿತೆ, ಸಹೋದರಿ, ಸಹೋದ್ಯೋಗಿಯಾಗಿ ಹೀಗೆ ಹಲವಾರು ಹಂತಗಳನ್ನು ಪೂರೈಸುತ್ತಾಳೆ. ತಂದೆ-ತಾಯಿ, ಗಂಡ, ಮಕ್ಕಳು, ಕಚೇರಿ ಹೀಗೆ ತನ್ನವರನ್ನು ತನ್ನ ಕೆಲಸವನ್ನು ಅತ್ಯಂತ ಅಚ್ಚಕಟ್ಟಾಗಿ, ಕಾಳಜಿಯಿಂದ, ಸಹನೆಯಿಂದ ಮತ್ತು ಪ್ರೀತಿಯಿಂದ ನೋಡಿಕೊಳ್ಳುತ್ತಾಳೆ. ಆದರೂ ನಮ್ಮ ಸಮಾಜದಲ್ಲಿ ಹೆಣ್ಣು ಹೆಚ್ಚು ಶೋಷಣೆಗೆ ಒಳಗಾಗುವುದು ದುರ್ದೈವ. ಹೀಗಾಗಿ ಹೆಣ್ಣಿಗೆ ಉನ್ನತ ಸ್ಥಾನಮಾನಗಳನ್ನು ನೀಡಬೇಕು ಎನ್ನುವ ಕೂಗು ಎಂದಿನಿಂದಲೂ ಇದೆ. ಆದರೆ ಇಂದಿಗೂ ಕೂಡ ಒಂಟಿ ಮಹಿಳೆ ತಡ ರಾತ್ರಿ ಇರಲಿ ಹಗಲಲ್ಲೂ ನಿರ್ಭಯವಾಗಿ ಓಡಾಡಲು ಸಾಧ್ಯವಾಗುತ್ತಿಲ್ಲ. ಇಂತಹ ಸಮಸ್ಯೆಗಳ ನಡುವೆಯೂ ಮಹಿಳೆ ರಾಜಕೀಯವಾಗಿ, ಸಾಮಾಜಿಕವಾಗಿ ಹಲವಾರು ಕ್ಷೇತ್ರಗಳಲ್ಲಿ ಮುಂದಿದ್ದಾಳೆ. ಹಲವಾರು ರಂಗಗಳಲ್ಲಿ ತನ್ನನ್ನು ತಾನು ಗುರುತಿಸಿಕೊಂಡಿದ್ದಾಳೆ. ಹೀಗಾಗಿ ಎಲ್ಲಾ ಅದ್ಭುತ ಮಹಿಳೆಯರ ಸಾಧನೆಯನ್ನು ಆಚರಿಸಲು ಪ್ರತಿ ವರ್ಷ ಮಾರ್ಚ್ 8 ರಂದು ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ.


ಕೊಂಚ ಮಹಿಳಾ ದಿನಾಚರಣೆಯ ಇತಿಹಾಸವನ್ನು ನೋಡುವುದಾದರ 1908ರಲ್ಲಿ ಅಮೆರಿಕದಲ್ಲಿ ಕಾರ್ಮಿಕ ಚಳವಳಿ ನಡೆದಿತ್ತು. ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದುಡಿಯುವ ಮಹಿಳೆಯರು ಪಾಲ್ಗೊಂಡಿದ್ದರು. ಸುಮಾರು 15,000 ಮಹಿಳೆಯರು ನ್ಯೂಯಾರ್ಕ್ ಬೀದಿಗಳಲ್ಲಿ ಮೆರವಣಿಗೆ ನಡೆಸಿದ್ದರು ಮತ್ತು ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತಿದ್ದರು. ತಮ್ಮ ಕೆಲಸದ ಅವಧಿಯನ್ನು ಕಡಿಮೆ ಮಾಡಬೇಕು ಮತ್ತು ವೇತನ ಶ್ರೇಣಿಯನ್ನು ಹೆಚ್ಚಿಸಬೇಕು ಎಂದು ಕಾರ್ಮಿಕ ಮಹಿಳೆಯರು ಒತ್ತಾಯಿಸಿದ್ದರು. ಮಹಿಳೆಯರಿಗೂ ಮತದಾನದ ಹಕ್ಕನ್ನು ನೀಡಬೇಕೆಂದು ಬೇಡಿಕೆಯಿಟ್ಟಿದ್ದರು. ಮಹಿಳೆಯರ ಧ್ವನಿ ಅಂದಿನ ಸರ್ಕಾರದ ಕಿವಿಗೆ ಬಿದ್ದಿತ್ತು. ನಂತರ 1909 ರಲ್ಲಿ, ಚಳುವಳಿಯ ಒಂದು ವರ್ಷದ ನಂತರ, ಅಮೆರಿಕಾದ ಸಮಾಜವಾದಿ ಪಕ್ಷ ಮಹಿಳಾ ದಿನವನ್ನು ಘೋಷಿಸಿತು. ಅಂದಿನಿಂದ ಮಾರ್ಚ್ 8 ರಂದು ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ. ಮಹಿಳೆಯರ ಸಾಧನೆಯನ್ನು ನೆನೆಯುವ ಮೂಲಕ ಮಹಿಳೆಯರಿಗೆ ಪ್ರೋತ್ಸಾಹ ನೀಡಲಾಗುತ್ತದೆ. ನಾವು ಕೂಡ ಮಹಿಳಾ ದಿನಾಚರಣೆಯ ಶುಭಾಶಯಗಳನ್ನು ಹಂಚಿಕೊಳ್ಳುವ ಮೂಲಕ ಮಹಿಳೆಯರಿಗೆ ಪ್ರೋತ್ಸಾಹವನ್ನು, ಉತ್ಸಾಹವನ್ನು ನೀಡೋಣ.


ಹೆಣ್ಣು ಎಂಬುದು ಶಕ್ತಿ. ಹೆಣ್ಣು ಇಲ್ಲದೆ ಈ ಜಗವೇ ಇಲ್ಲ. ಹೀಗೆ ತಮ್ಮ ದಣಿವರಿಯದೆ ಕೆಲಸ, ನಿಸ್ವಾರ್ಥ ಪ್ರೀತಿ, ಕಾಳಜಿಯ ಕಾರಣದಿಂದ ಎಲ್ಲರ ಬದುಕಿಗೂ ಸ್ಫೂರ್ತಿಯಾದ ಮಹಿಳೆಗೆ ಧನ್ಯವಾದ ಹೇಳುವ ದಿನವೇ ಮಾರ್ಚ್ 8. ಈ ದಿನವನ್ನು ಅಂತಾರಾಷ್ಟ್ರೀಯ ಮಹಿಳಾ ದಿನವನ್ನಾಗಿ ಆಚರಿಸಲಾಗುತ್ತದೆ. ಹಾಗೆ ನೋಡಿದರೆ ಮಹಿಳಾ ದಿನವನ್ನು ಬರೀ ಒಂದು ದಿನಕ್ಕೆ ಸೀಮಿತಗೊಳಿಸಲು ಸಾಧ್ಯವಿಲ್ಲ. ಪ್ರತಿದಿನವೂ ಮಹಿಳಾ ದಿನವೇ. ಎಲ್ಲರ ಬದುಕಿನಲ್ಲೂ ಪ್ರತಿದಿನ ಮಹಿಳೆ ತೋರುವ ಅಕ್ಕರೆ, ನಿಭಾಯಿಸುವ ಜವಾಬ್ದಾರಿ, ಕುಟುಂಬಕ್ಕಾಗಿ ವಹಿಸುವ ಶ್ರಮ ಪ್ರತಿಯೊಬ್ಬರಿಗೂ ಗೊತ್ತಿದೆ. ಹೀಗಾಗಿ, ಒಂದು ದಿನ ಅವರಿಗಾಗಿ ಮೀಸಲಿಟ್ಟು ಎಲ್ಲರೂ ಮಹಿಳೆಯರಿಗೆ ಧನ್ಯವಾದ ಹೇಳುತ್ತಾರೆ. ಅದು ಎಲ್ಲರ ಕರ್ತವ್ಯ ಕೂಡಾ ಹೌದು.


ಸರಸ್ವತಿ ವಿಶ್ವನಾಥ್ ಪಾಟೀಲ್

ಕಾರಟಗಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top