ಮಹಿಳೆ ಮತ್ತು ಮನೆಗೆಲಸಗಳು!

Upayuktha
0

ಲಿಂಗ ಸಮಾನತೆಯ ಪಟ್ಟಿಯಲ್ಲಿ 108ನೇ ಸ್ಥಾನದಲ್ಲಿದ್ದ ಭಾರತಕ್ಕೆ 87ನೇ ಸ್ಥಾನ ಲಭಿಸಿದೆ ಹಾಗೂ ಶಿಕ್ಷಣ ಅರ್ಥವ್ಯವಸ್ಥೆ ಆರೋಗ್ಯ ಮತ್ತು ರಾಜಕೀಯ ಪ್ರಾತಿನಿಧ್ಯಕ್ಷೇತ್ರಗಳನ್ನು ಮಾನದಂಡಗಳಾಗಿ ಪರಿಶೀಲಿಸಿ ಲಿಂಗ ಸಮಾನತೆಯ ಪ್ರಮಾಣವನ್ನು ವರದಿ ಮಾಡಲಾಗಿದೆ ಎಂದು ಇತ್ತೀಚಿಗೆ ಒಂದು ಪ್ರಮುಖ ಪತ್ರಿಕೆ ವರದಿ ಮಾಡಿತ್ತು ಆದರೆ ಈ ಮಾನ ದಂಡಗಳನ್ನು ಹೊರತುಪಡಿಸಿ, ಕೌಟುಂಬಿಕ ವ್ಯವಸ್ಥೆಯಲ್ಲಿ ಮನೆಗೆಲಸಗಳ ಹಂಚಿಕೆಗೆ ಸಂಬಂಧಿಸಿದಂತೆ ಲಿಂಗ ಸಮಾನತೆಯ ಕುರಿತು ಇಂದು ನಾವು ಯೋಚಿಸು ಅಗತ್ಯವಿದೆ ಭಾರತೀಯ ಮಹಿಳೆ ದಿನದಲ್ಲಿ 6 ಗಂಟೆಗಳ ಕಾಲ ಮನೆ ಕೆಲಸದಲ್ಲಿ ತನ್ನನ್ನು ತೊಡಗಿಸಿ ಕೊಂಡರೆ ಇಲ್ಲಿ ಪುರುಷರು ಒಂದು ಗಂಟೆಗಿಂತಲೂ ಕಡಿಮೆ ಅವಧಿಯ ಮನೆ ಕೆಲಸಗಳನ್ನು ಮಾಡುತ್ತಾರೆ.


ಮುಂದುವರಿದ ರಾಷ್ಟ್ರಗಳಾದ ಯು ಕೆ ಯಲ್ಲಿ ಮಹಿಳೆಯರು ನಾಲ್ಕು ಗಂಟೆಗಳಿಗಿಂತ ಹೆಚ್ಚು ಕಾಲ ಮನೆ ಕೆಲಸ ಮಾಡಿದರೆ, ಪುರುಷರು 2 ಗಂಟೆ ,ಚೀನಾದಲ್ಲಿ ನಾಲ್ಕು ಗಂಟೆಯಷ್ಟು ಮಹಿಳೆಯರು ಮನೆ ಕೆಲಸದಲ್ಲಿ ತೊಡಗಿಕೊಂಡರೆ ಪುರುಷರು ಒಂದು ಗಂಟೆಗಿಂತ ಹೆಚ್ಚಿನ ಕಾಲ ಮನೆಗೆಲಸ ಮಾಡುತ್ತಾರೆಂದು ತಿಳಿದು ಬಂದಿದೆ .ಕೆನಡಾದಲ್ಲಿ ಮೂರುವರೆ ತಾಸಿಗಿಂತ ಹೆಚ್ಚು ಕಾಲ ಮಹಿಳೆಯರು ಮನೆ ಕೆಲಸದಲ್ಲಿ ತೊಡಗಿ ಕೊಂಡರೆ ಪುರುಷರು ಎರಡು ಗಂಟೆಗಿಂತಲೂ ಅಧಿಕಕಾಲ ಮನೆ ಕೆಲಸ ಮಾಡುತ್ತಾರೆಂದು ಅಂಕಿ ಅಂಶಗಳು ಹೇಳುತ್ತವೆ.  


2020 ರ ವರದಿ ಪ್ರಕಾರ ಭಾರತದಲ್ಲಿ 26 ಶೇಕಡದಷ್ಟು ಪುರುಷರು ಮನೆ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಾರೆಂದು ಗಮನಿಸಬಹುದಾಗಿದೆ.   ಆದ್ದರಿಂದ ಲಿಂಗ ಸಮಾನತೆಯು ಮೊದಲು ಕುಟುಂಬದಲ್ಲಿ, ಮನೆಗಳಲ್ಲಿ ಪ್ರಾರಂಭವಾಗಬೇಕಿದೆ . ವಿಶೇಷವಾಗಿ ಮನೆಗೆಲಸಗಳು ,ಸ್ವಚ್ಛತೆಯ ಕೆಲಸಗಳು ಮನೆಯ ಸದಸ್ಯರು ಗಳಲ್ಲಿ ಸಮಾನವಾಗಿ ಹಂಚಿಕೆಯಾಗಬೇಕಾಗಿದೆ. ನಾನು ,ಯುವ ಜನತೆ ಯೊಂದಿಗೆ, ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮಗಳಲ್ಲಿ ಭಾಗ ವಹಿಸುವಾಗ ಕುತೂಹಲಕ್ಕಾಗಿ ಕೇಳುವ ಪ್ರಶ್ನೆ ಎಂದರೆ, ನಿಮ್ಮ ಮನೆ ಯಲ್ಲಿ ಸ್ವಚ್ಛತೆಯ ಕೆಲಸವನ್ನು ಮಾಡುವವರು ಯಾರು‌ ?ಎಂದು. ಸುಮಾರು ನೂರು ಜನರಲ್ಲಿ 95 ಜನರ  ಉತ್ತರ "ಅಮ್ಮ" ಇದರೊಂದಿಗೆ ಅಕ್ಕ, ದೊಡ್ಡಮ್ಮ, ಚಿಕ್ಕಮ್ಮ, ಅಜ್ಜಿ ಹೀಗೆ ಮುಂದುವರಿಯುತ್ತದೆ . ಇಲ್ಲಿ ಎಲ್ಲವೂ ಸ್ತ್ರೀಲಿಂಗಗಳೇ! ಉಳಿದ ಐದು ಜನರ ಉತ್ತರದಲ್ಲಿ ಅಣ್ಣ ಅಥವಾ ಅಪ್ಪ ಎಂದಿರುತ್ತದೆ.


ನನ್ನ ಮರು ಪ್ರಶ್ನೆ ,ಯಾಕೆ ಅಮ್ನನೇ ಸ್ವಚ್ಛತೆಯ ಕೆಲಸ ಮಾಡಬೇಕು? ಈ ಪ್ರಶ್ನೆಗೆ ಅಲ್ಲಿ ಉತ್ತರವಿಲ್ಲ,! ಮನೆಯ ಎಲ್ಲಾ ಕೆಲಸಗಳಲ್ಲಿ ಮನೆಯ ಎಲ್ಲಾ ಸದಸ್ಯರಿಗೂ ಜವಾಬ್ದಾರಿ ಇದೆ ಎನ್ನುವ ಅರಿವನ್ನು ಇಂದು ಮನೆಯ ಮಕ್ಕಳಿಗೆ ನೀಡಬೇಕಾಗಿದೆ ದೈಹಿಕ ಶ್ರಮದ ಮಹತ್ವದ ಕುರಿತು ಹದಿಹರೆಯದವರಿಗೆ ಮನವರಿಕೆ ಮಾಡಿಸುವ ಅಗತ್ಯವಿದೆ. ಮನೆಯಲ್ಲಿ ಮಹಿಳೆಯರ ಕೆಲಸವನ್ನು ವೇತನ ರಹಿತ ಕೆಲಸವೆಂದು ನಿರ್ಲಕ್ಷಿಸದೆ, ಗೌರವಿಸುವ ಕೆಲಸ ಮಾಡಬೇಕಾಗಿದೆ. ಮನೆಯೊಳಗಿನ ಕೆಲಸಗಳು ಸಮಾನವಾಗಿ ಹಂಚಿಕೆಯಾದಾಗ ಮಹಿಳೆಯರಿಗೆ ಒತ್ತಡ ರಹಿತ ಜೀವನ ನಡೆಸಲು ಸಾಧ್ಯವಿದೆ. ಒತ್ತಡರಹಿತ ಬದುಕು ಮನಸ್ಸಿನ ಆರೋಗ್ಯಕ್ಕೆ ನಾಂದಿಯಾಗುತ್ತದೆ . ಆ ಮೂಲಕ ಆತ್ಮವಿಶ್ವಾಸ ಇಮ್ಮಡಿಗೊಂಡಾಗ ಮಹಿಳೆಯರ ಆಂತರಿಕ ಶಕ್ತಿ ಹೊರಹೊಮ್ಮುತ್ತದೆ.              


ಡಾ ಮಧುಮಾಲ ಕೆ      

ಸಹಾಯಕ ಪ್ರಾಧ್ಯಾಪಕರು 

ಸಮಾಜ ಕಾರ್ಯ ವಿಭಾಗ ಆಳ್ವಾಸ್ ಕಾಲೇಜು ಮೂಡುಬಿದಿರೆ

Post a Comment

0 Comments
Post a Comment (0)
To Top