ಬೆಂಗಳೂರು: ಅಯೋಧ್ಯಾ ಪ್ರಕಾಶನದ ವತಿಯಿಂದ ಬಸವನಗುಡಿಯ ಬಿ.ಪಿ. ವಾಡಿಯಾ ಸಭಾಂಗಣದಲ್ಲಿ ನಡೆದ, ಅರ್ಥಧಾರಿ ಹಾಗೂ ಪ್ರಸಂಗಕರ್ತ ಶ್ರೀಧರ ಡಿ.ಎಸ್. ಅವರ ‘ಮಾತಿನ ಕಲೆ- ತಾಳಮದ್ದಲೆ’ ಕೃತಿಯ ಲೋಕಾರ್ಪಣೆ ಹಾಗೂ ಭೃಗು ಶಾಪ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮದಲ್ಲಿ ಪತ್ರಕರ್ತ ಧೀರಜ್ ಪೊಯ್ಯೆಕಂಡ ಅವರ ರಾಜಕೀಯ ಥ್ರಿಲ್ಲರ್ ಕಾದಂಬರಿ ‘2035’ ಬಿಡುಗಡೆಗೊಂಡಿತು. ಈ ಪುಸ್ತಕವನ್ನು ಹಿರಿಯ ಅರ್ಥಧಾರಿ, ಯಕ್ಷಗಾನ ಸಂಶೋಧಕ ಡಾ. ಎಂ. ಪ್ರಭಾಕರ ಜೋಶಿ ಲೋಕಾರ್ಪಣೆಗೊಳಿಸಿದರು.
ಇದೇ ಕಾರ್ಯಕ್ರಮದಲ್ಲಿ, ಡಾ. ಸುಧಾಕರ ಹೊಸಳ್ಳಿ ಮತ್ತು ಪ್ರವಿಣ್ ಕುಮಾರ್ ಮಾವಿನಕಾಡು ಅವರು ಬರೆದಿರುವ ಸಂಶೋಧಿತ ನಾಟಕ ಅವಿತಿಟ್ಟ ಅಂಬೇಡ್ಕರ್, ನಾರಾಯಣ ಶೇವಿರೆ ಅವರ ಸಂಸ್ಕಾರ ಸಂಪದ ಕೃತಿ, ಎನ್. ಸ್ಮಿತಾ ರಮೇಶ್ ಅವರ ಕಾದಂಬರಿ ಸಂಗಮವೋ ಸುಳಿಯೋ ಕೂಡಾ ಲೋಕಾರ್ಪಣೆಗೊಂಡಿತು.
ರಾಜಕೀಯ ಥ್ರಿಲ್ಲರ್ 2035:
ಹೆಸರಿನಷ್ಟೇ ವಿಶಿಷ್ಟವಾದ ರಾಜಕೀಯ ಥ್ರಿಲ್ಲರ್ ಕಾದಂಬರಿ 2035. ರಾಜಕೀಯದ ಚದುರಂಗದಾಟ, ತಮ್ಮ ಬೇಳೆ ಬೇಯಿಸಿಕೊಳ್ಳಲು ಅಮಾಯಕರನ್ನು ದಾಳಗಳಾಗಿಸಿ ಕೊಳ್ಳುವ ಸ್ವಾರ್ಥಿಗಳ ನಯವಂಚನೆ, ಮೋಸದಾಟಕ್ಕೆ ಬಲಿಬೀಳುವ ಮುಗ್ಧ ಸಮಾಜ, ದುಷ್ಟರು ಮತ್ತು ಶಿಷ್ಟರ ಕೈಯಲ್ಲಿ ಬಗೆಬಗೆಯಲ್ಲಿ ಬಳಕೆಯಾಗುವ ಆಧುನಿಕ ತಂತ್ರಜ್ಞಾನಗಳು, ಜಗತ್ತು ಎಷ್ಟೇ ಆಧುನಿಕವಾದರೂ ಮನುಷ್ಯನಲ್ಲಿ ಮೂಲಭೂತವಾಗಿ ಅಡಗಿಕೊಂಡಿರುವ ಪಾಶವೀ ಪ್ರವೃತ್ತಿ... ಹೀಗೆ ಹತ್ತು ಹಲವು ಆಯಾಮಗಳಲ್ಲಿ ತೆರೆದುಕೊಳ್ಳುವ ಕಥಾನಕ ಈ ಕಾದಂಬರಿಯಲ್ಲಿದೆ.
ಮೂರನೇ ಕಾದಂಬರಿ: 2035 ಧೀರಜ್ ಪೊಯ್ಯೆಕಂಡ ಅವರ ಪ್ರಕಟಿತ ಮೂರನೇ ಕಾದಂಬರಿ. ಮಿತಿ ಹಾಗೂ ಪರಾಶರ ಅವರ ಮೊದಲೆರಡು ಕಾದಂಬರಿಗಳಾಗಿವೆ.
2035 ಕಾದಂಬರಿ ಅಯೋಧ್ಯಾ ಪ್ರಕಾಶನದ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಸಂಪರ್ಕ: 9620916996
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ