ಮಧ್ವರ ಸನ್ಯಾಸಧರ್ಮ ಲೋಕಕ್ಕೆ ಆದರ್ಶ: ಸೋಸಲೆ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ

Upayuktha
0

ವ್ಯಾಸತೀರ್ಥ ವಿದ್ಯಾಪೀಠದಲ್ಲಿ ವಾಕ್ಯಾರ್ಥ ಗೋಷ್ಠಿ | ಮಧ್ವನವಮಿ ನಿಮಿತ್ತ ವಿಶೇಷ ಪೂಜೆ



ಮೈಸೂರು: ಮಧ್ವಾಚಾರ್ಯರ ಸನ್ಯಾಸಧರ್ಮ ಯತಿಗಳಿಗೆ ಮಾತ್ರವಲ್ಲ, ಲೋಕಕ್ಕೇ ಆದರ್ಶಪ್ರಾಯ ಎಂದು ಸೋಸಲೆ ವ್ಯಾಸರಾಜ ಮಠಾಧೀಶ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಹೇಳಿದರು.

ನಗರದ ಕೃಷ್ಣಮೂರ್ತಿಪುರಂನಲ್ಲಿರುವ ಶ್ರೀ ವ್ಯಾಸತೀರ್ಥ ವಿದ್ಯಾಪೀಠದಲ್ಲಿ ಮಧ್ವನವಮಿ ಉತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ವಾಕ್ಯಾರ್ಥ ಗೋಷ್ಠಿ, ವಿಚಾರಸಂಕಿರಣದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಮಧ್ವಾಚಾರ್ಯರು ಜ್ಞಾನದ ಸಾಗರ ಇದ್ದಂತೆ. ಅವರಿಗೆ ಸಮಗ್ರ ವೇದದ ಪರಿಣತಿ ಇತ್ತು. ಆದಕಾರಣ ಯಾವುದೇ ವಿದ್ವಾಂಸರು ಯಾವುದೇ ವೇದ ಭಾಗವನ್ನು ಆಯ್ದುಕೊಂಡು ವಾದಕ್ಕೆ ಬಂದರೂ ಮಧ್ವರ ಎದುರು ಪರಾಭವಗೊಳ್ಳುತ್ತಿದ್ದರು. ಇದನ್ನು ಸಾಕ್ಷಾತ್ ಕಂಡ ತ್ರಿವಿಕ್ರಮ ಪಂಡಿತಾಚಾರ್ಯರು ತಮ್ಮ ‘ತತ್ವ ಪ್ರದೀಪ’ ಗ್ರಂಥದ ಆರಂಭದಲ್ಲಿ ಈ ಸಂಗತಿಯನ್ನು ಉಲ್ಲೇಖಿಸಿದ್ದಾರೆ ಎಂದರು.


ಮಹೋನ್ನತ ಕೊಡುಗೆ:

ಆಚಾರ್ಯ ಮಧ್ವರ ಬಾಲ್ಯ, ಜ್ಞಾನ, ಸನ್ಯಾಸ, ಗ್ರಂಥರಚನೆ ಪ್ರೌಢಿಮೆ, ವೇದಾರ್ಥ ಪರಿಣತಿ ಸೇರಿದಂತೆ ಸಮಗ್ರ ಅವತಾರವೇ ಲೋಕಕ್ಕೆ ಒಂದು ಮಹೋನ್ನತ ಕೊಡುಗೆಯಾಗಿದೆ. ಅವರ ದ್ವೈತಮತ ಸಿದ್ಧಾಂತವನ್ನು ಅನುಸರಿಸಿ ಜೀವನ ಪಾವನ ಮಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಶ್ರೀಗಳು ತಿಳಿಸಿದರು.

ವಿದ್ವಾಂಸರಾದ ಶೇಷಗಿರಿ ಆಚಾರ್ಯ, ಸಿ.ಎಚ್. ಶ್ರೀನಿವಾಸಮೂರ್ತಿ, ವಿದ್ವಾನ್ ಬಂಡಿ ಶ್ಯಾಮಾಚಾರ್ಯ, ಎಲ್.ಎನ್. ಸುಧೀಂದ್ರ ಆಚಾರ್ಯ, ವಿದ್ವಾನ್ ಸತ್ತೇಗಿರಿ ವಾಸುದೇವಾಚಾರ್ಯ, ಪ್ರದ್ಯುಮ್ನಾಚಾರ್ಯ ಉಪಸ್ಥಿತರಾಗಿದ್ದರು.ವಿದ್ಯಾರ್ಥಿಗಳಾದ ಸರ್ವಜ್ಞ ಮತ್ತು ಶ್ರೀಹರಿ ತತ್ತ್ವೋದ್ಯೋತ ಗ್ರಂಥದ ಪರೀಕ್ಷೆಯನ್ನು ನೀಡಿದರು. ಅನಂತರ  ಸೌಮಿತ್ರಿ ಆಚಾರ್ಯ ಅವರು ಶ್ರೀಮನ್ ನ್ಯಾಯಸುಧಾ ಗ್ರಂಥದ 4ನೇ ಅಧ್ಯಾಯದ ಪರೀಕ್ಷೆಯನ್ನು ನೀಡಿದರು.


ಮಧ್ಯಾಹ್ನದ ಗೋಷ್ಠಿಯಲ್ಲಿ ಹಿರಿಯ ವಿದ್ಯಾರ್ಥಿಗಳಾದ ಶ್ರೀಶ ಆಚಾರ್ಯ ಮತ್ತು ಪ್ರಣವಾಚಾರ್ಯರು  ನ್ಯಾಯಾಮೃತ,  ಸುಘೋಷಾಚಾರ್ಯರು ಶ್ರೀಮತ್ ತಾತ್ಪರ್ಯಚಂದ್ರಿಕಾ ಗ್ರಂಥದ ಪರೀಕ್ಷೆಯನ್ನು ನೀಡಿದರು. ಸಂಜೆ ವಿದ್ಯಾಪೀಠದ ಪ್ರಾಂಶುಪಾಲ ಡಾ. ಶ್ರೀನಿಧಿ ಆಚಾರ್ಯ ಪ್ಯಾಟಿ ಪ್ರವಚನ ನೀಡಿದರು.

ಸಾಮೂಹಿಕ ಪಾರಾಯಣ:

ಮಧ್ವನವಮಿ ಅಂಗವಾಗಿ ಶ್ರೀಮಠದಲ್ಲಿ ಬೆಳಗಿನ ಅವಧಿಯಲ್ಲಿ ವಿದ್ಯಾರ್ಥಿವರ್ಗದಿಂದ ಸಾಮೂಹಿಕ ಸುಮಧ್ವ ವಿಜಯದ ಪಾರಾಯಣ, ಪವಮಾನ ಹೋಮ, ವಾಯುಸ್ತುತಿ ಪುನಶ್ಚರಣೆ ಶ್ರೀಗಳಿಂದ ಸಂಸ್ಥಾನಪೂಜೆ ನೆರವೇರಿತು. 300ಕ್ಕೂ ಹೆಚ್ಚು ಭಕ್ತರು ಇದಕ್ಕೆ ಸಾಕ್ಷಿಯಾದರು.

ಪ್ರತಿಭೆ ಅನಾವರಣ: ವಿದ್ಯಾಪೀಠದ ವಿದ್ಯಾರ್ಥಿಗಳು ಆಚಾರ್ಯ ಮಧ್ವರ ಜೀವನ ಮತ್ತು ಸಾಧನೆ ಕುರಿತಾದ ಛಾಯಾಚಿತ್ರಗಳ ಪ್ರದರ್ಶನ ನಡೆಸಿ ಎಲ್ಲರ ಗಮನ ಸೆಳೆದರು.

ನಗರದ ಕೃಷ್ಣಮೂರ್ತಿ ಪುರಂನ ಶ್ರೀ ವ್ಯಾಸತೀರ್ಥ ವಿದ್ಯಾಪೀಠದಲ್ಲಿ ಹಮ್ಮಿಕೊಂಡಿದ್ದ ಮಧ್ವ ನವಮಿ ಉತ್ಸವದಲ್ಲಿ  ವಿದ್ಯಾಪೀಠದ ವಿದ್ಯಾರ್ಥಿಗಳು ಆಚಾರ್ಯ ಶ್ರೀ ಮಧ್ವರ ಜೀವನ ಮತ್ತು ಸಾಧನೆ ಕುರಿತಾದ ಛಾಯಾಚಿತ್ರಗಳ ಪ್ರದರ್ಶನ ನಡೆಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
To Top