ಅಂತಾರಾಷ್ಟ್ರೀಯ ಮಟ್ಟದಲ್ಲಿ 2 ಬಾರಿ ಮಿಂಚಿದ ಯೋಗಪಟು ತೃಪ್ತಿ ಎನ್

Upayuktha
0

ಪುತ್ತೂರು: ಸಾಧಿಸಲು ಛಲ ಒಂದಿದ್ದರೆ ಅಸಾಧ್ಯವಾದದ್ದು ಯಾವುದೂ ಇಲ್ಲ. ಸಾಧನೆಯ ಹಾದಿಯಲ್ಲಿ ಮುಂದುವರಿದರೆ ಗೆಲುವು ಖಂಡಿತ ಎಂಬ ಮಾತಿನಂತೆ 5ನೇ ತರಗತಿಯಿಂದ ಯೋಗಾಸನದಲ್ಲಿ ಆಸಕ್ತಿ ಬೆಳೆಸಿಕೊಂಡು ಕಿರಿಯ ವಯಸ್ಸಿನಲ್ಲೇ ಯೋಗ ಸ್ಪರ್ಧೆಯಲ್ಲಿ 2 ಬಾರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ಯೋಗಪಟು ತೃಪ್ತಿ ಎನ್‌.


ಇವರು ಮೂಲತಃ ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ಮಾಡಾವಿನ ಐತಪ್ಪ ನಾಯ್ಕ್ ಮತ್ತು ಪದ್ಮಲ ದಂಪತಿಗಳ ಪುತ್ರಿ. ಹೆತ್ತವರ ಹಾಗೂ ತರಬೇತಿಗಾರರ ಪ್ರೋತ್ಸಾಹದಿಂದ ಬಾಲ್ಯದಿಂದಲೇ ಯೋಗಾಸನ ತೊಡಗಿಸಿಕೊಂಡ ಇವರು ತಾಲೂಕು ಮಟ್ಟದಿಂದ ಅಂತರಾಷ್ಟ್ರೀಯ ಮಟ್ಟದವರೆಗೂ ಹಲವು ಕಡೆಗಳಲ್ಲಿ ಉತ್ತಮ ಯೋಗ ಪ್ರದರ್ಶನದೊಂದಿಗೆ ಅನೇಕ ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.


ಈಕೆ ಪ್ರಾಥಮಿಕ ಶಿಕ್ಷಣವನ್ನು ಗ್ರಾಮೀಣ ವಿದ್ಯಾ ಸಂಸ್ಥೆ ನರಿಮೊಗರಿನಲ್ಲಿ ಪೂರೈಸಿದ್ದು, ಪ್ರಸ್ತುತ ವಿದ್ಯಾಭ್ಯಾಸವನ್ನು ಸಂತ ಫಿಲೋಮಿನಾ ಪದವಿ ಪೂರ್ವದಲ್ಲಿ ನಡೆಸುತ್ತಿದ್ದಾರೆ.

ಕೇವಲ ಯೋಗ ಮಾತ್ರವಲ್ಲದೆ, ಕಾಲಿಗೆ ಗೆಜ್ಜೆ ಕಟ್ಟಿ ಕುಣಿಯಲು ಸೈ ಎಂಬಂತೆ ಭರತ್ ನಾಟ್ಯವನ್ನು ಕಲಿಯುತ್ತಿದ್ದ ಇವರು ಜೂನಿಯರ್ ಪರೀಕ್ಷೆಯನ್ನು ಮುಗಿಸಿರುತ್ತಾರೆ. ಅಷ್ಟೇ ಅಲ್ಲದೆ ಕರಾಟೆಯನ್ನು ತಮ್ಮ ಹವ್ಯಾಸವನ್ನಾಗಿಸಿಕೊಂಡಿದ್ದಾರೆ. ಓದಿನಲ್ಲೂ ಕೂಡ ಎತ್ತಿದ ಕೈ. ಯೋಗಾಸನದಲ್ಲಿ ಇವರಿಗಿದ್ದ ಆಸಕ್ತಿಯು ಇವರನ್ನು 2 ಬಾರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸುವಂತೆ ಮಾಡಿತು.


ಇವರಿಗೆ 2019 ರಲ್ಲಿ ತಾಲೂಕು ಮಟ್ಟದ ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ ಯೋಗಾಸನ ಸ್ಪರ್ಧೆಯಲ್ಲಿ, ಬೀದರ್ ನಲ್ಲಿ ನಡೆದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ, ಕೋಲ್ಕತ್ತಾದಲ್ಲಿ ನಡೆದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ, ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ವಿವೇಕಾನಂದ ವಿನೋಬನಗರ ಇಲ್ಲಿ ನಡೆದ ವಿದ್ಯಾಭಾರತಿ ಯೋಗಾಸನ ಸ್ಪರ್ಧೆಯಲ್ಲಿ, ರಾಜ್ಯ ಮಟ್ಟದ ಪತಂಜಲಿ ಮಂಗಳೂರು ಆಯೋಜಿಸಿದ್ದ ಯೋಗ ಸ್ಪರ್ಧೆಯಲ್ಲಿ,

2020 ರಲ್ಲಿ ಆವಿಷ್ಕಾರ ಯೋಗ ಮಂಗಳೂರು ನಡೆಸಿದ ಆನ್‌ಲೈನ್ ಸ್ಪರ್ಧೆಯಲ್ಲಿ, ಮಹಾತ್ಮಾ ಗಾಂಧಿ 150ನೇ ಜನ್ಮದಿನದ ಅಂಗವಾಗಿ ಸೌತ್ ಇಂಡಿಯನ್ ಇಂಟರ್ ಸ್ಟೇಟ್ ಯೋಗಸನ ಸ್ಪೋರ್ಟ್ ನಲ್ಲಿ, ರಾಜ್ಯ ಮಟ್ಟದ 2021 ರಲ್ಲಿ KYSA ಹಾಗೂ NYSF ರಲ್ಲಿ ನಡೆದ ಸ್ಪರ್ಧೆಯಲ್ಲಿ, ಯೋಗಕ್ಷೇಮ ಯೋಗ ಪ್ರತಿಷ್ಠಾನ ಇಂಡಿಯಾ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗ ಒಲಂಪಿಕ್ ಕಮಿಟಿ ನ್ಯೂಯಾರ್ಕ್‌ (ಅಮೆರಿಕ), ಯೋಗ ಸ್ಪರ್ಧೆಯಲ್ಲಿ, ಕುಂಡಲಿನಿ ಯೋಗ ಶಾಲೆ ಬೆಂಗಳೂರು ಇವರ ಆಶ್ರಯದಲ್ಲಿ ನಡೆದ ಸ್ಪರ್ಧೆಯಲ್ಲಿ, ಯೋಗ ಸ್ಪೋರ್ಟ್ಸ್ ಫೆಡರೇಷನ್ 10 ಆಯೋಜಿಸಿದ್ದ ಅಂತಾರಾಷ್ಟ್ರೀಯ ಚಾಂಪಿಯನ್ ಶಿಪ್‌ನಲ್ಲಿ, 2021 ಫಿಟ್ ಇಂಡಿಯಾ ಸಂಸ್ಥೆ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಹಾಗೂ ಒಡಿಸ್ಸಾದಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ, ಭಾಗವಹಿಸಿ ಪ್ರಥಮ ಮತ್ತು ದ್ವಿತೀಯ ಸ್ಥಾನ- ಹೀಗೆ ತನ್ನ ಯೋಗ ಸಾಧನೆಯಲ್ಲಿ 50 ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದಾರೆ. ಹಾಗೂ 2 ಬಾರಿ ಅಂತಾರಾಷ್ಟ್ರೀಯ ಮಟ್ಟಕ್ಕೆ, 9 ಬಾರಿ ರಾಷ್ಟ್ರಮಟ್ಟಕ್ಕೆ ಹಾಗೂ 15 ಬಾರಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಹೆಮ್ಮೆಯ ಪ್ರತಿಭೆ ಈಕೆ.


ಇವರ ಈ ಸಾಧನೆಯ ಹಿಂದೆ ನಿಂತು ಹುರುಪು ತುಂಬಿದ ಅಂತಾರಾಷ್ಟ್ರೀಯ ಯೋಗಪಟು ಮತ್ತು ರಾಷ್ಟ್ರ ಮಟ್ಟದ ಯೋಗ ತೀರ್ಪುಗಾರರಾದ ನವೀನ್ ಬಿ ಕೆಯ್ಯೂರು ಇವರಲ್ಲಿ ತರಬೇತಿಯನ್ನು ಪಡೆಯುತ್ತಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವ ಇವರ ಸಾಧನೆಯ ಗರಿಮೆಯು ಇನ್ನು ಎತ್ತರಕ್ಕೆ ಸಾಗಲಿ ಎಂದು ಹಾರೈಸೋಣ.


- ವಿಜಯಲಕ್ಷ್ಮಿ. ಬಿ

ಪತ್ರಿಕೋದ್ಯಮ ವಿದ್ಯಾರ್ಥಿನಿ.

ವಿವೇಕಾನಂದ ಮಹಾವಿದ್ಯಾಲಯ ನಗರ ಪುತ್ತೂರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter


Post a Comment

0 Comments
Post a Comment (0)
To Top