ಯಕ್ಷ ಪ್ರತಿಭೆ ಶ್ರಾವಣಿ ಕಾಟುಕುಕ್ಕೆ

Upayuktha
0

ಕ್ಷಗಾನ, ಭರತನಾಟ್ಯ, ಸಂಗೀತ ಮುಂತಾದ ಕಲಾಕ್ಷೇತ್ರದಲ್ಲಿ ಬೆಳೆಯುತ್ತಿರುವ ಬಹುಮುಖ ಪ್ರತಿಭೆ ಶ್ರಾವಣಿ ಕಾಟುಕುಕ್ಕೆ. ಶಿವಪ್ರಸಾದ್ ರಾವ್ ಹಾಗೂ ವೀಣಾ ಅವರ ಮಗಳಾದ ಇವರು ಪ್ರಸ್ತುತ ಪುತ್ತೂರಿನ ಅಂಬಿಕಾ ಪದವಿ ಪೂರ್ವ ವಿದ್ಯಾಲಯದಲ್ಲಿ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ.


ಶ್ರಾವಣಿ ತನ್ನ ಆರನೇ ವಯಸ್ಸಿನಲ್ಲಿ ಶಿವಾಂಜಲಿ ನೃತ್ಯ ಕಲಾ ಕೇಂದ್ರ (ರಿ.) ಪೆರ್ಲ ಇದರ ನಿರ್ದೇಶಕಿ ವಿದುಷಿ ಶ್ರೀಮತಿ ಕಾವ್ಯ ಭಟ್ ಇವರಲ್ಲಿ ಭರತನಾಟ್ಯ ಪ್ರಾರಂಭಿಸಿ, ಹತ್ತನೇ ವಯಸ್ಸಿನಲ್ಲಿ ಭರತನಾಟ್ಯ ಜೂನಿಯರ್ ಪರೀಕ್ಷೆಯನ್ನು ಶೇಕಡ 90 ಅಂಕಗಳೊಂದಿಗೆ ಅತ್ಯುತ್ತಮ ದರ್ಜೆಯಲ್ಲಿ ಉತ್ತೀರ್ಣಗೊಂಡು, ಪ್ರಸ್ತುತ ಭರತನಾಟ್ಯ ಸೀನಿಯರ್ ಪರೀಕ್ಷೆಯನ್ನು ಬರೆದಿರುತ್ತಾರೆ. ಇವರಿಗೆ ಹತ್ತಾರು ವೇದಿಕೆಗಳು ತನ್ನ ಪ್ರತಿಭೆಯನ್ನು ಗುರುತಿಸಿಕೊಳ್ಳಲು ಅವಕಾಶ ನೀಡಿದೆ.


ಅದೇ ರೀತಿ ಏಳು ವರ್ಷಗಳಿಂದ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರ (ರಿ.) ಪೆರ್ಲ ಇದರ ನಿರ್ದೇಶಕರಾದ ನಾಟ್ಯಾಚಾರ್ಯ ಗುರು ದಕ್ಷಿಣಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ಸಬ್ಬಣಕೋಡಿ ರಾಮ ಭಟ್ ಇವರಲ್ಲಿ ನಾಟ್ಯಾಭ್ಯಾಸ ಮಾಡುತ್ತಿದ್ದಾರೆ. ನೂರಾರು ವೇದಿಕೆಗಳಲ್ಲಿ ಯಕ್ಷಗಾನ ಪ್ರದರ್ಶನ ನೀಡಿದ್ದಾರೆ. ಮೀನಾಕ್ಷಿ ಕಲ್ಯಾಣದ ಮೀನಾಕ್ಷಿಯಿಂದ ಮೊದಲ್ಗೊಂಡು ಕೃಷ್ಣ, ವಿಷ್ಣು, ಸುಧನ್ವ, ದೇವಿ ಮಹಾತ್ಮೆಯ ದೇವಿ, ಚಿತ್ರಾಂಗದೆ ಮುಂತಾದ  ವೇಷಗಳನ್ನು ಮಾಡಿದ್ದಾರೆ. ಅದೇ ರೀತಿ ವಿದುಷಿ ಶ್ರೀಮತಿ ಅನುರಾಧಾ ಭಟ್ ಅಡ್ಕಸ್ಥಳ ಅವರ ಬಳಿ ಕಳೆದ ಆರು ವರ್ಷದಿಂದ ಸಂಗೀತಾಭ್ಯಾಸ ಮಾಡುತ್ತಾ ಜೂನಿಯರ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣಳಾಗಿದ್ದಾಳೆ. ಕಳೆದೊಂದು ವರ್ಷದಿಂದ ಭಾಗವತಿಕೆಯನ್ನು ಕೂಡ ತೆಂಕಬೈಲು ಶ್ರೀ ಮುರಳಿ ಕೃಷ್ಣ ಶಾಸ್ತ್ರಿಗಳಲ್ಲಿ ಅಭ್ಯಾಸ ಮಾಡುತ್ತಾ ರಂಗಪ್ರವೇಶ ಮಾಡಿದ್ದಾಳೆ.


ಇಡೀ ರಾತ್ರಿ ಪ್ರದರ್ಶನಗೊಂಡ ಕರಾವಳಿ ಜನತೆಯ ಕಲೆಯೆಂಬ ಅಭಿಮಾನ ಪೌರಾಣಿಕ ಸಾಹಿತ್ಯ, ಶಿಕ್ಷಣ ಒದಗಿಸುತ್ತಿದ್ದ ಯಕ್ಷಗಾನ  ಇತ್ತೀಚಿನಿಂದ ಕಾಲಮಿತಿಯತ್ತ ಸಾಗುತ್ತಿದ್ದು ಕಾಲಘಟ್ಟದಲ್ಲಿ ಅನಿವಾರ್ಯತೆ ಆಗಿರಬಹುದು. ಆದರೆ ಇನ್ನು ಮುಂದೆ 2 ಗಂಟೆ ಒಳಗೆ ಸೀಮಿತ ಅವಧಿಯಲ್ಲಿ ಯಕ್ಷಗಾನ ಪ್ರದರ್ಶನ ಸಂದರ್ಭ ಬಾರದಂತೆ ಕಲಾಭಿಮಾನಿಗಳು ಎಚ್ಚರವಹಿಸಬೇಕು. ಕಲಾಶೋಧನೆಯ ಸಾಧನೆಗಳು ನಡೆಯಬೇಕು, ಜಾಗತಿಕ ಮಟ್ಟದಲ್ಲಿ ಕಲೆಯ ನೆಲೆಯನ್ನು ಗಾಂಭೀರ್ಯವಾಗಿ ಚಿಂತಿಸಬೇಕು, ಯಕ್ಷಗಾನ ಶಕ್ತಿಶಾಲಿ ಕಲಾಮಾಧ್ಯಮ ಆಗಬೇಕು. ಯಕ್ಷಗಾನ ತೀರ ಸರಳ. ಏನು ತಿಳಿಯದವನಿಗೂ ಅಲ್ಲಿ ನೋಡುವಂತಹುದು ಇರುತ್ತದೆ. ಯಕ್ಷಗಾನ ಭಾರತದ ಅನನ್ಯ ಸಾಂಸ್ಕೃತಿಕ ಕಲೆಯಾಗಿದ್ದು ಅದಕ್ಕೆ ಮನುಷ್ಯನನ್ನು ಮಾನವನನ್ನಾಗಿ ಪರಿವರ್ತಿಸುವ ಶಕ್ತಿ ಇದೆ. ಜ್ಞಾನ, ತರ್ಕ ಶಕ್ತಿ, ವಿಚಾರ, ಭಾವ ಬುದ್ಧಿ, ಭಾಷಾಶುದ್ದಿ, ವ್ಯಾಯಾಮ ಇವೆಲ್ಲವನ್ನೂ ಒಳಗೊಂಡಿರುವ ಉನ್ನತ ಸಂಸ್ಕಾರವನ್ನು  ನಡೆಸುವ ಶಕ್ತಿ ಇರುವ ಯಕ್ಷಗಾನ ಶಾಲಾ ಕಾಲೇಜುಗಳಲ್ಲಿ ಶಿಕ್ಷಣದ ಒಂದು ಅಂಗವಾಗಬೇಕು. ಯಕ್ಷಗಾನ ಶಿಕ್ಷಣವು ಉನ್ನತ ಮೌಲ್ಯ ನಿರ್ಮಾಣಕ್ಕೆ ನೆರವಾಗಬೇಕು. ಶಾಲಾ ಕಾಲೇಜುಗಳಲ್ಲಿ ಯಕ್ಷಗಾನ ಶಿಕ್ಷಣ ನೀಡುವುದರಿಂದ ಭದ್ರವಾದ ಸಾಂಸ್ಕೃತಿಕ ನೆಲೆಗಟ್ಟು ನಿರ್ಮಾಣವಾಗಬೇಕು ಎಂಬುದು ಇವರ ಅನಿಸಿಕೆ.


ಕಾಟುಕುಕ್ಕೆ ಯಕ್ಷೋತ್ಸವ ಪ್ರಶಸ್ತಿ, ಕಣಿಪುರ ಯಕ್ಷ ಪ್ರತಿಭೆ ಪುರಸ್ಕಾರ ಅಲ್ಲದೆ ಶಾಲೆ ಹಾಗೂ ಹಲವು ಸಂಘ ಸಂಸ್ಥೆಗಳು ಇವರ ಪ್ರತಿಭೆಯನ್ನು ಗುರುತಿಸಿವೆ. ಷಷ್ಠಿ ಜಾತ್ರೆಯ ಸಂದರ್ಭದಲ್ಲಿ ಭಾಗವತರಾದ ಸತ್ಯನಾರಾಯಣ ಪುಣಿಚಿತ್ತಾಯರ ಸಾಹಿತ್ಯದಲ್ಲಿ ಕಾಟುಕುಕ್ಕೆಯ ಸುಬ್ರಾಯ ದೇವರಿಗೆ ಒಂದು ಹಾಡನ್ನು ಹಾಡಿದ್ದಾಳೆ. ಅದು ಇತ್ತೀಚೆಗೆ ಜಾತ್ರೆಯ ಸಂದರ್ಭದಲ್ಲಿ ಬಿಡುಗಡೆಗೊಂಡಿದೆ.


ಗುರುಗಳಾದ ನಾಟ್ಯಾಚಾರ್ಯ ಸಬ್ಬಣಕೋಡಿ ರಾಮ ಭಟ್ಟರು ಮತ್ತು ನನ್ನ ತಂದೆ ತಾಯಿ ತುಂಬಾ ಪ್ರೋತ್ಸಾಹ ಕೊಟ್ಟಿದ್ದಾರೆ. ನಾನೀಗ ಪ್ರಾಥಮಿಕ ಹಂತದಲ್ಲಿದ್ದೇನೆ. ಇನ್ನೂ ಕಲಿಯಲು ಬೇಕಾದಷ್ಟಿದೆ. ನನ್ನ ಗುರುಗಳ ಆಶೀರ್ವಾದ, ಮನೆಯವರ ಪ್ರೋತ್ಸಾಹ ಇರುವಷ್ಟು ಸಮಯ ಮುಂದುವರಿಸುತ್ತೇನೆ ಎಂಬುದು ಇವರ ಮನದಾಳದ ಮಾತುಗಳು.


ಇವರಿಗೆ ಕಲಾಮಾತೆ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ. 


- ಶ್ರವಣ್ ಕಾರಂತ್ ಕೆ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter


Post a Comment

0 Comments
Post a Comment (0)
To Top