ಯಕ್ಷ ಕಲಾ ಸುಂದರಿ ರಾಜೇಶ್ ನಿಟ್ಟೆ

Upayuktha
0


ಗಂಡಾಗಿ ಹುಟ್ಟಿ ಹೆಣ್ಣಿನ ಹಾವಭಾವ, ನಡೆಯುವ ರೀತಿ ಅನುಸರಿಸುವುದು, ಅಭಿನಯಿಸುವುದು ಸಣ್ಣ ವಿಚಾರವಲ್ಲ. ಆದರೆ ಗಂಡಸೊಬ್ಬ ಹೆಣ್ಣಿನ ರೂಪದಲ್ಲಿ ಎಂಥವರನ್ನೂ ಆಕರ್ಷಿಸಬಲ್ಲ ಎಂದರೆ ಆ ತಾಕತ್ತಿರುವುದು ಯಕ್ಷಗಾನ ಕಲಾವಿದರಿಗೆ ಮಾತ್ರ. ಯಕ್ಷಗಾನ ಕ್ಷೇತ್ರದಲ್ಲಿ ಸ್ತ್ರೀ ಪಾತ್ರದಲ್ಲಿ ಮೆರೆಯಬೇಕಾದರೆ ಸ್ತ್ರೀ ಸಹಜತೆಗೆ ಒಪ್ಪುವಂತಹ ಆಕರ್ಷಕ ಆಂಗಿಕ ಸೌಂದರ್ಯದ ಅವಶ್ಯಕತೆಯೂ ಸ್ವಲ್ಪಮಟ್ಟಿಗೆ ಅನಿವಾರ್ಯ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಈ ಲೇಖನದಲ್ಲಿ ನಾವು ಪರಿಚಯಿಸುತ್ತಿರುವ ಕಲಾವಿದ ಇಂತವರಲ್ಲೊಬ್ಬರಾದ ರಾಜೇಶ್ ನಿಟ್ಟೆ.


ಸಂಜೀವ ಕೊಟ್ಟಾರಿ ಹಾಗೂ ಬೇಬಿ ಇವರ ಮಗನಾದ ರಾಜೇಶ್ ಅವರಿಗೆ ಚಿಕ್ಕಂದಿನಿಂದಲೂ ಯಕ್ಷಗಾನ ಎಂದರೆ ಅತೀವ ಆಸಕ್ತಿ. ಉದಯೋನ್ಮುಖ ಸ್ತ್ರೀ ಪಾತ್ರಧಾರಿ ಕಾರ್ಕಳ ಶಶಿಕಾಂತ್ ಶೆಟ್ಟಿ ಅವರ ಪಾತ್ರಗಳು, ಖ್ಯಾತ ಸ್ತ್ರೀ ವೇಷಧಾರಿ ನೀಲ್ಕೋಡು ಶಂಕರ ಹೆಗಡೆ ಅವರ ನಾಗವಲ್ಲಿ ಪಾತ್ರ ನೋಡಿ ಪ್ರೇರಣೆಗೊಂಡು ಸ್ತ್ರೀ ಪಾತ್ರ ಮಾಡಬೇಕೆಂಬ ಆಸೆ ಹುಟ್ಟಿ ಯಕ್ಷಗಾನ ರಂಗಕ್ಕೆ ಬಂದವರು. ಕೆರ್ವಾಷೆ ಆನಂದ ಗುಡಿಗಾರ ಅವರು ಯಕ್ಷಗಾನದ ಪ್ರಥಮ ಗುರುಗಳು. ನಂತರ ಕೃಷ್ಣಪ್ಪ ಮೂಲ್ಯ ಕಟೀಲ್, ವಿಶ್ವರೂಪ ಮಧ್ಯಸ್ಥ ನೀಲಾವರ ಮುಂತಾದವರಲ್ಲಿ ಯಕ್ಷಗಾನ ಕಲಿತಿದ್ದಾರೆ.


ರಂಗಕ್ಕೆ ಹೋಗುವ ಮೊದಲು ಹಿಂದೆ ಆದ ಯಕ್ಷಗಾನ ತುಣುಕುಗಳನ್ನು ಯೂಟ್ಯೂಬ್ ನಲ್ಲಿ ನೋಡಿ ಅಥವಾ ಪ್ರಸಿದ್ಧ ಸ್ತ್ರೀ ವೇಷಧಾರಿ ಎಂ.ಕೆ ರಮೇಶ್ ಆಚಾರ್ಯ ಇವರ ಬಳಿ ಕೇಳಿ ತಿಳಿದುಕೊಳ್ಳುತ್ತೇನೆ. ಹಾಗೆಯೇ ಸಹ ಕಲಾವಿದರ ಮಾರ್ಗದರ್ಶನದಿಂದ ತಯಾರಿ ಮಾಡಿಕೊಳ್ಳುತ್ತೇನೆ ಎಂದು ವಿವರಿಸುತ್ತಾರೆ ರಾಜೇಶ್. ದೇವಿ ಮಹಾತ್ಮೆ, ಶ್ರೀಕೃಷ್ಣ ಪಾರಿಜಾತ, ನರಕಾಸುರ ಮೋಕ್ಷ, ಮಾನಿಷಾದ ಇವರ ನೆಚ್ಚಿನ ಪ್ರಸಂಗಗಳು. ಮಾಲಿನಿ, ಸತ್ಯಭಾಮೆ, ಸೈರಿಣಿ, ರತಿ, ಕಯಾದು, ಸೀತೆ ನೆಚ್ಚಿನ ವೇಷಗಳು.


ಯಕ್ಷಗಾನ ರಂಗದ ಇಂದಿನ ಸ್ಥಿತಿ ಗತಿ ಹಾಗೂ ಪ್ರೇಕ್ಷಕರ ಬಗ್ಗೆ ಹೇಳುವುದಾದರೆ, ಯಕ್ಷಗಾನ ಕಾಲಕ್ಕೆ ತಕ್ಕಂತೆ ಬದಲಾವಣೆಯನ್ನು ಪಡೆದುಕೊಂಡು ಮುಂದೆ ಹೋಗುತ್ತಿದೆ. ಕಲಾವಿದರಿಗೆ ಎಲ್ಲಾ ಪ್ರೇಕ್ಷಕರು, ಅಭಿಮಾನಿಗಳು ದೇವರಿಗೆ ಸಮಾನ. ಯಾರು ಏನು ಹೇಳಿದರು ಕೂಡ ಅದು ನಮ್ಮ ಒಳಿತಿಗೆ ಎಂದು ಪ್ರೀತಿಯಿಂದ ಸ್ವೀಕರಿಸಬೇಕು. ಯಕ್ಷಗಾನವನ್ನು ಆಸ್ವಾದಿಸುವವರಿಂದಲೇ ನಮ್ಮಂಥ ಕಲಾವಿದರು ಬೆಳೆಯಲು ಸಾಧ್ಯ. ಹಾಗಾಗಿ ಎಲ್ಲರೂ ಕೂಡ ಉತ್ತಮ ಪ್ರೇಕ್ಷಕರೇ ಎಂಬುದು ಇವರ ಅಭಿಪ್ರಾಯ.


ಬಪ್ಪನಾಡು, ಕಟೀಲು ಮೇಳಗಳಲ್ಲಿ ತಿರುಗಾಟ ಮಾಡಿರುವ ಇವರು ಪ್ರಸ್ತುತ ಪಾವಂಜೆ ಮೇಳದಲ್ಲಿ ತಿರುಗಾಟ ಮಾಡುತ್ತಿದ್ದಾರೆ. ಪುಸ್ತಕ ಓದುವುದು ಹಾಗೂ ಯಕ್ಷಗಾನ ವೀಡಿಯೋ ನೋಡುವುದು ಇವರ ಹವ್ಯಾಸ. ಬ್ರಹ್ಮಾವರದಲ್ಲಿ ವಿಶ್ವರೂಪ ಮಧ್ಯಸ್ಥ ನೀಲಾವರ ಅವರ ಕಾರ್ಯಕ್ರಮದಲ್ಲಿ "ಯಕ್ಷ ಕಲಾ ಸುಂದರಿ" ಎಂಬ ಬಿರುದಿಗೆ ಪಾತ್ರರಾಗಿದ್ದು, ಪಾವಂಜೆ ಮೇಳದಲ್ಲಿ ಕೂಡ ಹಲವು ಬಾರಿ ಪುರಸ್ಕೃತರಾಗಿದ್ದಾರೆ. 

ಇವರಿಗೆ ಕಲಾಮಾತೆ  ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ ಎಂಬುದು ಕಲಾಭಿಮಾನಿಗಳೆಲ್ಲರ ಹಾರೈಕೆಗಳು.


ಶ್ರವಣ್ ಕಾರಂತ್. ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top