ಕರ್ತವ್ಯ ಬೋಧ ದಿವಸ್, ಅಭಿನಂದನಾ ಸಮಾರಂಭದಲ್ಲಿ KRMSS ಅಧ್ಯಕ್ಷ ಡಾ. ರಘು ಅಕ್ಮಂಜಿ ಅಭಿಮತ
ಮಂಗಳೂರು: ವಿಶ್ವವಿದ್ಯಾನಿಲಯಗಳಲ್ಲಿ ದೇಶೀಯ ಚಿಂತನೆ ಇದ್ದಾಗ, ಸಂಸ್ಕಾರ ಪರ ಚಿಂತನೆಯಿದ್ದಾಗ ಮಾತ್ರ ವಿದ್ಯಾರ್ಥಿಗಳಲ್ಲಿ ಅದನ್ನು ನಿರೀಕ್ಷಿಸಲು ಸಾಧ್ಯ. ಅಧ್ಯಾಪಕರು ತಮ್ಮ ಹೊಣೆಗಾರಿಕೆ ಅರಿತಾಗ, ಶಾಲೆ ಕಾಲೇಜುಗಳ ಬಗ್ಗೆ ಜನರಲ್ಲಿ ಗೌರವ ಮೂಡಿದಾಗ ಮಾತ್ರ ನಾವು ದೇಶದ ಅಭಿವೃದ್ಧಿಯನ್ನು ನಿರೀಕ್ಷಿಸಬಹುದು, ಎಂದು ಕರ್ನಾಟಕ ರಾಜ್ಯ ಮಹಾವಿದ್ಯಾನಿಲಯ ಶಿಕ್ಷಕ ಸಂಘದ ರಾಜ್ಯಾಧ್ಯಕ್ಷ ಡಾ. ರಘು ಅಕ್ಮಂಜಿ ಅಭಿಪ್ರಾಯಪಟ್ಟರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಡಾ. ಶಿವರಾಮ ಕಾರಂತ ಸಭಾಭವನದಲ್ಲಿ ಬುಧವಾರ ಕರ್ನಾಟಕ ರಾಜ್ಯ ಮಹಾವಿದ್ಯಾನಿಲಯ ಶಿಕ್ಷಕ ಸಂಘ (KRMSS) ದ ಮಂಗಳೂರು ವಿಶ್ವವಿದ್ಯಾನಿಲಯ ವಿಭಾಗದ ವತಿಯಿಂದ ನಡೆದ ಕರ್ತವ್ಯ ಬೋಧ ದಿವಸ್ ಮತ್ತು ಸಿಂಡಿಕೇಟ್ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೆಆರ್‌ಎಂಎಸ್‌ಎಸ್ ಅಧ್ಯಾಪಕರ ಶ್ರಮವನ್ನು ಗುರುತಿಸಿ ಅವರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದೆ, ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ, ನಾವು ಯಾವುದೇ ಹುದ್ದೆಯಲ್ಲೂ ಶ್ರೇಷ್ಠ ಸಾಮರ್ಥ್ಯ ತೋರಿದಾಗ, ಕರ್ತವ್ಯ ಪ್ರಜ್ಞೆ ಇದ್ದಾಗ ಮಾತ್ರ ರಾಷ್ಟ್ರ ನಿರ್ಮಾಣ ಸಾಧ್ಯ. "ಮಂಗಳೂರು ವಿಶ್ವವಿದ್ಯಾನಿಲಯದ ಸಾಧನೆಯಲ್ಲಿ ಸರ್ಕಾರದಿಂದ ನೇಮಕವಾದ ಆರು ಮಂದಿ ಮತ್ತು ರಾಜ್ಯಪಾಲರಿಂದ ನಾಮಾಂಕಿತಗೊಂಡ ಇಬ್ಬರು ಸಿಂಡಿಕೇಟ್ ಸದಸ್ಯರು, ಮತ್ತು ಅಧಿಕಾರಿ ವರ್ಗದ ಪಾಲು ದೊಡ್ಡದಿದೆ," ಎಂದು ಸ್ಮರಿಸಿಕೊಂಡರು.
ಇದೇ ವೇಳೆ ಕೆಆರ್‌ಎಂಎಸ್‌ಎಸ್ ಮಂಗಳೂರು ವಿಶ್ವವಿದ್ಯಾನಿಲಯ ವಿಭಾಗದ ವತಿಯಿಂದ ಕುಲಪತಿ ಪ್ರೊ. ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ, ಕುಲಸಚಿವ ಡಾ. ಕಿಶೋರ್‌ಕುಮಾರ್ ಸಿ ಕೆ, ಕುಲಸಚಿವ (ಪರೀಕ್ಷಾಂಗ) ಡಾ. ರಾಜು ಕೃಷ್ಣ ಚಲ್ಲಣ್ಣವರ್, ಪೂರ್ವತನ ಕುಲಸಚಿವ (ಪರೀಕ್ಷಾಂಗ) ಪ್ರೊ. ಪಿ ಎಲ್ ಧರ್ಮ, ಹಣಕಾಸು ಅಧಿಕಾರಿ ಡಾ. ಸಂಗಪ್ಪ ವೈ, ಸಿಂಡಿಕೇಟ್ ಸದಸ್ಯರಾದ ರಮೇಶ್ ಕೆ, ರವಿಚಂದ್ರ ಪಿ ಎಂ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ರಮೇಶ್ ಕೆ ಮತ್ತು ರವಿಚಂದ್ರ ಪಿ ಎಂ ವಿಶ್ವವಿದ್ಯಾನಿಲಯ ವಿದ್ಯಾರ್ಥಿಪರ ಮತ್ತು ಪ್ರಾಧ್ಯಾಪಕರ ಪರ ಇರುವಂತೆ ನಾವು ಶ್ರಮಿಸಿದ್ದೇವೆ, ಎಂದರಲ್ಲದೆ ಕುಲಪತಿ, ಅಧಿಕಾರಿಗಳ ಧನಾತ್ಮಕ ನಿಲುವನ್ನು ಪ್ರಶಂಸಿಸಿದರು. ಕುಲಸಚಿವ ಡಾ. ಕಿಶೋರ್‌ಕುಮಾರ್ ಸಿ ಕೆ ಮಾತನಾಡಿ, ಸಿಂಡಿಕೇಟ್ ಸದಸ್ಯರು ವಿವಿಯ ಘನತೆಗೆ ಕುಂದು ಬರದಂತೆ, ಕಾನೂನಿನ ಚೌಕಟ್ಟಿನೊಳಗೆ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ನೆರವಾಗಿದ್ದಾರೆ, ಎಂದರು.
ಪೂರ್ವತನ ಕುಲಸಚಿವ (ಪರೀಕ್ಷಾಂಗ) ಪ್ರೊ. ಪಿ ಎಲ್ ಧರ್ಮ ಮಾತನಾಡಿ, ವಿವಿಯ ಕಷ್ಟಕಾಲದಲ್ಲಿ ಸಿಂಡಿಕೇಟ್ ನೆರವಾಯಿತು. "ನಾನು ಕಣ್ಣೀರು ಸುರಿಸುವ ಪರಿಸ್ಥಿತಿ ಬಂದಾಗ, ರಾಜೀನಾಮೆ ನೀಡಿದಾಗ ಕುಲಪತಿ, ಸ್ವಾರ್ಥವಿಲ್ಲದೆ ಕೆಲಸ ಮಾಡಿದ ಸಿಂಡಿಕೇಟ್ ಸದಸ್ಯರು ಧೈರ್ಯ ತುಂಬಿದರು," ಎಂದರು.
ವಿವಿ ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ, ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಡಾ. ಲಕ್ಷ್ಮೀ ದೇವಿ ಮೊದಲಾದವರು ಉಪಸ್ಥಿತರಿದ್ದರು. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಮಾಧವ ಎಂ ಕೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಘದ ಕಾರ್ಯದರ್ಶಿ ವೆಂಕಟೇಶ್ ನಾಯಕ್ ಧನ್ಯವಾದ ಸಮರ್ಪಿಸಿದರು. ಡಾ. ಸುಭಾಷಿಣಿ ಶ್ರೀವತ್ಸ, ಡಾ. ಸುಧಾ ಎನ್ ವೈದ್ಯ, ಡಾ. ಯತೀಶ್ ಕುಮಾರ್ ಸನ್ಮಾನ ಪತ್ರ ವಾಚಿಸಿದರು. ಸಂಧ್ಯಾ ಕಾಲೇಜಿನ ಕನ್ನಡ ಪ್ರಾಧ್ಯಾಪಿಕೆ ಆಶಾಲತಾ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

