ಬೆಂಗಳೂರು: ಸುಸ್ವರಾಲಯ ಕಾಲೇಜ್ ಆಫ್ ಮ್ಯೂಸಿಕ್ ಸಂಸ್ಥೆಯು ನಗರದ ಕುಮಾರಸ್ವಾಮಿ ಬಡಾವಣೆಯಲ್ಲಿರುವ ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಏರ್ಪಡಿಸಿದ್ದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮದಲ್ಲಿ ವಿದುಷಿಯರಾದ ಕಲಾಧರಿ ಭವಾನಿ ಮತ್ತು ಅಂಬಿಕಾ ದತ್ (ಕಲಾಂಬಿಕ ಸಹೋದರಿಯರು) ಅವರ ದ್ವಂದ್ವ ಗಾಯನ ನಡೆಯಿತು.
ಪುರಂದರದಾಸರ ಹಂಸಧ್ವನಿ ರಾಗದ 'ಗಜವದನ ಬೇಡುವೆ' ಮೂಲಕ ಆರಂಭಿಸಿ ನಂತರ ಕ್ರಮವಾಗಿ ಚಿತ್ತರಂಜಿನಿ ರಾಗದ 'ನಾದತನುಮನಿಶಂ ಶಂಕರಂ', ತ್ಯಾಗರಾಜರ ಕೃತಿ, ವೇದ ಬ್ರಹ್ಮ ಶ್ರೀ ವೆಂಕಟನಾರಾಯಣ ಉಡುಪ ಶಾಸ್ತ್ರಿಗಳ ರಚನೆ ವೀರಮೋಹಿನಿ ರಾಗದ 'ಉಮಾಪತೆ ಪರಿಪಾಹಿ ಶಂಕರ' ಪ್ರಸ್ತುತ ಪಡಿಸಿದರು. ಅಪರೂಪದ ರಾಗದ ಈ ಕೃತಿ ಧೃತ ಕಾಲದಲ್ಲಿ ಪೂರ್ವಿಕಲ್ಯಾಣಿ ರಾಗವನ್ನು ಸುಶ್ರಾವ್ಯವಾಗಿ ವಿನಿಕೆ ಮಾಡಿದರು. ಪ್ರೇಮ ವಿವೇಕ್ ರವರ ವಾದನ ಪೂರಕವಾಗಿದ್ದಿತು. ಮೈಸೂರು ಸದಾಶಿವರಾಯರ 'ಗಂಗಾಧರ ತ್ರಿಪುರಹರ' ಕೃತಿ ಚೆನ್ನಾಗಿ ಮೂಡಿಬಂದಿತು. ಎತ್ತಣ ಮಾಮರ ಎತ್ತಣ ಕೋಗಿಲೆ - ಶಿವಶರಣರ ವಚನ ಕೇಳುಗರಿಗೆ ಮುದನೀಡಿತು. ನಂತರದಲ್ಲಿ ಕೇದಾರ ರಾಗವನ್ನು ಪ್ರೌಢವಾಗಿ ಪ್ರಸ್ತುತ ಪಡಿಸಿ, ಮುತ್ತುಸ್ವಾಮಿ ದೀಕ್ಷಿತರ 'ಆ ನಂದ ನಟನಪ್ರಕಾಶಂ' ಕೃತಿ, ಅದಕ್ಕೆ ಸ್ವರ ಪ್ರಸ್ತಾರ ಶಾಸ್ತ್ರೀಯವಾಗಿ ಮೂಡಿಬಂದಿತು. ಕಾರ್ಯಕ್ರಮ ಸ್ವಾತಿ ತಿರುನಾಳ್ ಮಹಾರಾಜರ 'ವಿಶ್ವೇಶ್ವರ ದರುಶನ್ ಕರ'ದೊಂದಿಗೆ ಮುಕ್ತಾಯವಾಯಿತು. ವಿದ್ವಾನ್ ಗುರುದತ್ ಹಾಗೂ ಕೃಷ್ಣಪ್ರಸಾದ್ ರವರ ತನಿ ಆವರ್ತನ ಅದ್ಭುತವಾಗಿದ್ದಿತು.
ಶಿವರಾತ್ರಿಯ ವಿಶೇಷ ದಿನದಂದು ಗಾಯನ ಸೇವೆಗೆ ಅವಕಾಶ ಕಲ್ಪಿಸಿಕೊಟ್ಟ ಸುಸ್ವರಾಲಯ ಕಾಲೇಜ್ ಆಫ್ ಮ್ಯೂಸಿಕ್ ಸಂಸ್ಥೆಗೆ ಮತ್ತು ಸಂಸ್ಥೆಯ ಪ್ರಾಂಶುಪಾಲರೂ ಹಾಗೂ ಹಿರಿಯ ಮೃದಂಗ ವಿದ್ವಾಂಸರೂ ಆದ ವಿದ್ವಾನ್ ಶ್ರೀ ಎಚ್.ಎಸ್. ಸುಧೀಂದ್ರ ಅವರಿಗೆ ಸಹೋದರಿಯರು ಕೃತಜ್ಞತೆ ಸಲ್ಲಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ