ಪುಣೆ, ಮಹಾರಾಷ್ಟ್ರ: ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯ, ಪುಣೆಯ ತಾಳೇಗಾಂವ ದಾಭಾಡೆಯಲ್ಲಿರುವ ರುಡ್ ಸೆಟ್ ಸಂಸ್ಥೆಯು 25 ವರ್ಷ ಪೂರೈಸಿದ ಪ್ರಯುಕ್ತ ಬೆಳ್ಳಿಮಹೋತ್ಸವ ಕಾರ್ಯಕ್ರಮ ಆಚರಿಸಲಾಯಿತು.
ಈ ಸಮಾರಂಭದಲ್ಲಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಮಾವಳದ ಜನಪ್ರಿಯ ಶಾಸಕ ಸುನೀಲ್ ಶೆಲ್ಕೆ ಮಾತನಾಡಿ,ಮಾವಲದ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಹಾಗೂ ಸಮಾಜದ ನಿರುದ್ಯೋಗಿ ಯುವಕ ಯುವತಿಯರ ಉನ್ನತಿಗೆ ರುಡ್ ಸೆಟ್ ಸಂಸ್ಥೆ ಸಾಕಷ್ಟು ಕೊಡುಗೆ ನೀಡುತ್ತಿದ್ದು, ಸಂಸ್ಥೆಯು ಮಾಡಿದ ಕೆಲಸವನ್ನು ಮುಕ್ತವಾಗಿ ಪ್ರಶಂಶಿಸಿ, ಸಂಸ್ಥೆಯ ಅಧ್ಯಕ್ಷರಾದ ಡಾ.ಡಿ. ವೀರೇಂದ್ರ ಹೆಗಡೆಯವರ ಸ್ವ ಉದ್ಶೋಗ ಪರಿಕಲ್ಪನೆಯು ಸಮಾಜದ ಆರ್ಥಿಕ ಪ್ರಗತಿಗೆ ಸಹಕಾರಿಯಾಗಿದೆ ಎಂದ ಅವರು ಇದು ನಮ್ಮ ಸಂಸ್ಥೆ ಎಂದು ಹೆಮ್ಮೆ ವಕ್ತಪಡಿಸಿದರು.
ಅತಿಥಿಗಳಿಂದ ಆಲದಮರದ ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮವನ್ನು ವಿಶಿಷ್ಟ ರೀತಿಯಲ್ಲಿ ಉದ್ಘಾಟಿಸಲಾಯಿತು. ಸಂಸ್ಥೆಯು ಬೆಳ್ಳಿ ಹಬ್ಬ ವರ್ಷಾಚರಣೆಯು ವಿವಿಧ ಕಾರ್ಯಕ್ರಮಗಳೊಂದಿಗೆ ಆರಂಭಗೊಂಡಿತು.
ಕೆನರಾ ಬ್ಯಾಂಕ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಕೇನ್ ಮಹೋತ್ಸವ ಪ್ರದರ್ಶನ ಮತ್ತು ಮಾರಾಟ ಮಳಿಗೆಯನ್ನು ಕೆನರಾ ಬ್ಯಾಂಕ್ ಸರ್ಕಲ್ ಆಫೀಸ್ ಪುಣೆಯ ಜನರಲ್ ಮ್ಯಾನೇಜರ್ ಶ್ರೀ ರಾಜೇಶ್ ಕುಮಾರ್ ಸಿಂಗ್ ಉದ್ಘಾಟಿಸಿದರು. ವಿವಿಧ ತರಬೇತಿ ಪಡೆದ ಮಹಿಳಾ ಉದ್ಯಮಿಗಳು ತಯಾರಿಸಿದ ಬಗೆ ಬಗೆಯ ವಸ್ತುಗಳ ಪ್ರದರ್ಶನ ಮತ್ತು ಮಾರಾಟವನ್ನು ಆಯೋಜಿಸಲಾಗಿತ್ತು. ಸ್ವಯಂ ಉದ್ಯೋಗದ ಬಗ್ಗೆ ಜಾಗೃತಿ ಮೂಡಿಸುವ ನಿಮಿತ್ತ ತಾಲೇಗಾಂವ್ ನಗರಗಳಲ್ಲಿ ಜನಜಾಗೃತಿ ಜಾಥಾ ವನ್ನು ಏರ್ಪಡಿಸಲಾಗಿತ್ತು.
ಸಂಸ್ಥೆಯ ವತಿಯಿಂದ ಇಲ್ಲಿ ಈ ಹಿಂದೆ ಸೇವೆ ಸಲ್ಲಿಸಿದ ನಿರ್ದೇಶಕರನ್ನು ಅಭಿನಂದಿಸಿ ಅವರು ಮಾಡಿದ ಕಾರ್ಯವನ್ನು ಶ್ಲಾಘಿಸಿದರು. ಅವರು ನೆಟ್ಟ ಸಸಿಗಳು ಇಂದು ನಿಜವಾದ ಆಲದ ಮರಗಳಾಗಿ ಮಾರ್ಪಟ್ಟಿವೆ ಎಂಬ ಅಂಶವನ್ನು ಇದು ಎತ್ತಿ ತೋರಿಸುತ್ತದೆ ಎಂದು ಅತಿಥಿಗಳು ಸಂತೋಷ ವ್ಯಕ್ತ ಪಡಿಸಿದರು.
ಕೆನರಾ ಬ್ಯಾಂಕ್ ಸರ್ಕಲ್ ಆಫೀಸ್ ಪುಣೆಯ ಜನರಲ್ ಮ್ಯಾನೇಜರ್ ರಾಜೇಶ್ ಕುಮಾರ್ ಸಿಂಗ್ ಮಾತನಾಡಿ, ಬ್ಯಾಂಕ್ ವಹಿವಾಟಿನಲ್ಲಿ ಪಾರದರ್ಶಕತೆ ಕಾಯ್ದುಕೊಂಡರೆ ವ್ಯಾಪಾರ ವೃದ್ಧಿಯಾಗುತ್ತದೆ ಎಂದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾದ ಬ್ಯಾಂಕ್ ಆಫ್ ಮಹಾರಾಷ್ಟ್ರ ಪುಣೆ ಜಿಲ್ಲೆಯ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಶ್ರೀಕಾಂತ್ ಕರೆಗಾಂವ್ಕರ್, RSETI ಮಹಾರಾಷ್ಟ್ರ ರಾಜ್ಯ ನಿರ್ದೇಶಕ ಸುನೀಲ್ ಕಸ್ತೂರೆ, ಉಮೇದ್ ಅಭಿಯಾನದ ರಾಜ್ಯ ಸಂಯೋಜಕ ಶ್ರೀ ಅಶೋಕ್ ಚವ್ಹಾಣ, ವಿಶಾಲ ಜಾಧವ್, ಪರೀಕ್ಷಾ ನಿಯಂತ್ರಕಿ ಪ್ರೀತಿ ಪಾಂಡೆ ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾದ ರುಡ್‌ಸೆಟ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಗಿರಿಧರ್ ಕಲ್ಲಾಪುರ್ ಮಾರ್ಗದರ್ಶನ ನೀಡುವ ಮೂಲಕ ಸಮಾರಂಭದ ಯಶಸ್ಸಿಗೆ ಸಹಕರಿಸಿದರು.
ರುಡ್‌ಸೆಟ್ ಸಂಸ್ಥೆ ಉಜಿರೆಯ ನಿರ್ದೇಶಕರಾದ ಎಂ ಸುರೇಶ್, ತಾಳೇಗಾಂವದ ಅಂಬರ್ ವಾರಪತ್ರಿಕೆಯ ಸಂಪಾದಕ ಸುರೇಶ ಸಖಲ್ಕರ್, ಹಿರಿಯ ಪತ್ರಕರ್ತ ಸೋನಬಾ ಗೋಪಾಳೆ, ವಿಶ್ವನಾಥ, ಇನ್ನರ್ ವಿಲ್ ಕ್ಲಬ್ ಅಧ್ಯಕ್ಷೆ ವೈಶಾಲಿ ದಾಭಾಡೆ, ಯುವ ಉದ್ಯಮಿ ಆಶಿಶ್ ಭಾವು ಖಾಂಡ್ಗೆ, ಸಂಸ್ಥೆಯ ಮಾಜಿ ನಿರ್ದೇಶಕ ವರ್ಗ ಹಾಗೂ ಸಂಸ್ಥೆಯಿಂದ ತರಬೇತಿ ಪಡೆದು ಇದೀಗ ದೊಡ್ಡ ಮಟ್ಟದ ಉದ್ಯಮ ನಡೆಸುತ್ತಿರುವ ಯಶಸ್ವಿ ಉದ್ಯಮಿಗಳು ಉಪಸ್ಥಿತರಿದ್ದರು.
ಸಂಸ್ಥೆಯ ಹಾಲಿ ನಿರ್ದೇಶಕರಾದ ಪ್ರವೀಣ್ ಬಣಕಾರ್ ಅವರು ಕಾರ್ಯಕ್ರಮವನ್ನು ಪರಿಚಯಿಸಿದರು, ಕಾರ್ಯಕ್ರಮವನ್ನು ದಿನೇಶ್ ನೀಲಕಂಠರು ನಿರ್ವಹಿಸಿದರು ಮತ್ತು ಹರೀಶ್ ಬಾವ್ಚೆ ವಂದಿಸಿದರು. ಕಾರ್ಯಕ್ರಮವನ್ನು ಸಂದೀಪ ಪಾಟೀಲ, ಯೋಗಿತಾ ಗರುಡ, ರವಿ ಘೋಜ್ಗೆ, ಬಾಳು ತಿಕ್ಕೆ, ಲತಾ ತಾಕಲಕರ ಅವರು ಉತ್ತಮವಾಗಿ ಯೋಜಿಸಿದ್ದು, ಪ್ರಸ್ತುತ ನಡೆಯುತ್ತಿರುವ ಟೈಲರಿಂಗ್ ಪ್ರಶಿಕ್ಷಣಾರ್ಥಿಗಳು ಮತ್ತು ಬ್ಯೂಟಿ ಪಾರ್ಲರ್ ತರಬೇತಿಯ ಹಳೆಯ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕರಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ


