ನಮ್ಮೂರ ಕೌತುಕ ಯಾಕೂಬ

Upayuktha
0

ಗ ಸಂಜೆ ಆರರ ಸಮಯ. ಮೊಬೈಲ್ ರಿಂಗಣಿಸಿತು. ಆ ಕಡೆಯಿಂದ ಯಾಕೂಬ “ಭೈಯ್ಯಾ ಏನ್ಮಾಡ್ತಿದ್ದೀರಾ?” 

“ಏನೂ ಇಲ್ಲಪ್ಪ, ಸಿರಿಕನ್ನಡ ಚಾನಲ್‍ನಲ್ಲಿ ಥಿಯರಿ ಅಂತ ಯಾವುದೋ ಹೊಸ ಸಿನಿಮಾ ಬರ್ತಾ ಇದೆ. ಅದನ್ನು ನೋಡ್ತಾ ಇದ್ದೇನೆ"

“ಬನ್ನಿ ಭೈಯ್ಯಾ, ಹುಣಸಿನಕೆರೆ ಬ್ರಿಡ್ಜ್ ಮೇಲೆ ಕಾಯುತ್ತಿದ್ದೇನೆ ಗೋಬಿ ಮಂಚೂರಿ ತಂದಿರುವೆ"

“ಆಯ್ತು ಇನ್ನು ಹತ್ತು ನಿಮಿಷದಲ್ಲಿ ಅಲ್ಲಿರ್ತೇನೆ. ಆದರೆ ನೀನು ಎಲ್ಲೋ ದೂರದ ದುದ್ದದಲ್ಲಿ ನೀರಿನ ಟ್ಯಾಂಕ್ ಮೇಲೆ ಕುಳಿತು ಬೋರ್ಡ್ ಬರೀತಾ ಇಲ್ಲೇ ಗದ್ದೇ ಹಳ್ಳದಲ್ಲಿ ಇದ್ದೀನಿ ಅಂತ ಸುಳ್ಳು ಬೊಗಳಬಾರದು ಮತ್ತೆ!"


ಪಕ್ಕದ್ಮನೆ ಯೋಗೇಶ ಸಾಕಿದ್ದ ಕರಿನಾಯಿ ಜೋರು ಬೊಗಳಿದ ಶಬ್ದ ಕೇಳಿಸಿತು. ಅದೇನು ತರಹೇವಾರಿ ನಾಯಿಗಳನ್ನು ತಂದು ಸಾಕುತ್ತಾನೆ ಈತ! ಧರ್ಮರಾಯ ಜೀವನದ ಅಂತಿಮ ಯಾತ್ರೆ ಹೊರಟಾಗ ಅವನನ್ನು ಹಿಂಬಾಲಿಸಿ ಹೋದ ಕರಿನಾಯಿಯಂತೆ ಯೋಗೀಶನ ಹಿಂದಿಂದೆ ತಿರುಗುವ ಈ ಕರಿನಾಯಿ ನಮ್ಮನೆ ದಾರಿಯಲ್ಲಿ ಹಾಯ್ದು ಹೋಗುವ ಮಂದಿ ಮೇಲೆಲ್ಲಾ ಎಗರಿ ಬಿದ್ದು ಬೊಗಳುತ್ತಿರುತ್ತದೆ. ತೋಳದಂತಿರುವ ಆ ನಾಯಿಯ ಕೊರಳಿಗೆ ಸರಪಳಿ ಹಾಕಿ ಬಂಧಿಸಿರುವುದರಿಂದ ಯಾವ ಅನಾಹುತವು ಘಟಿಸಿಲ್ಲ. ಹೆಣ್ಣು ಮರಿನಾಯಿ ತಂದು ಸಾಕಿ ಅದರ ಮರಿಯನ್ನು ಮಾರಿ ದುಡ್ಡು ಸಂಪಾದಿಸಿದ್ದಾನೆ ಪುಣ್ಯಾತ್ಮ. ಒಮ್ಮೆ ಆತ ಒಂದು ಕುರಿಮರಿಯನ್ನು ತಂದು ಮನೆಯ ಮುಂದೆ ಕಟ್ಟಿಹಾಕಿದ. ಅವರ ತಾಯಿ ಬದುಕಿದ್ದಾಗ ನಾಟಿ ಕೋಳಿ ಅದರಲ್ಲೂ ಹ್ಯಾಟೆ ಕೋಳಿಗಳನ್ನು ತಂದು ಸಾಕಿ ಅದರ ಮರಿಗಳೊಂದಿಗೆ ಬೀದಿಯಲ್ಲಿ ಮೇಯಲು ಬಿಟ್ಟಿದ್ದರು.  ಮನೆಯ ಮುಂದೆಯೇ ಶನೇಶ್ವರ ದೇವಸ್ಥಾನ ಇದೆ. ದೇವಸ್ಥಾನ ಕನ್ವೀನರ್ ಒಮ್ಮೆ ಎದುರು ಸಿಕ್ಕಿ “ಸಾರ್, ನೀವಾದ್ರೂ ಈತನಿಗೆ ತಿಳಿ ಹೇಳಬಾರದೆ? ದೇವಸ್ಥಾನಕ್ಕೆ ಬ್ರಾಹ್ಮಣರಾದಿಯಾಗಿ ಭಕ್ತ ಮಹಾಶಯರು ಬರುತ್ತಿರುತ್ತಾರೆ. ಅವರ ಮುಂದೆ ಎಲ್ಲಾ ಈ ಕುರಿ ಕೋಳಿಗಳು ಓಡಾಡುವುದು ಶೋಭೆ ತರುವುದೇ ನೀವೇ ಹೇಳಿ?"

"ಅರೇ! ಇದಕ್ಕೆ ನಾನೇನು ಹೇಳಲಿ? ನೀವೇ ಅವರಿಗೆ ಒಂದು ಮಾತು ಹೇಳಿ. ಅವರು ಪ್ರತಿ ಶನಿವಾರ ದೇವಸ್ಥಾನದ ಬಾಗಿಲಿನಲ್ಲಿ ಬಾಳೆಹಣ್ಣು, ತೆಂಗಿನಕಾಯಿ, ಎಳ್ಳುಬತ್ತಿ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿರುವುದು ಸರಿಯಷ್ಟೇ. ಇದನ್ನೆ ಅವರಿಗೆ ನಯವಾಗಿ ಹೇಳಿ” ಎಂದು ಜಾರಿಕೊಂಡಿದ್ದೆ.


“ಇಲ್ಲಾ ಭೈಯ್ಯಾ, ನೀವು ಹೇಳಿದಂತೆ ದುದ್ದದಲ್ಲಿ ಸದ್ಯ ಇದ್ದೇನೆ. ಸ್ವಚ್ಛ ಭಾರತ ಸಂಕೀರ್ಣದ ಕೆಲಸ ಮುಗಿಸಿ ಹಾಸನಕ್ಕೆ ಬರಲು ಬಸ್ ಕಾಯುತ್ತಿದ್ದೇನೆ. ಏಳೂವರೆಗೆ ಅಲ್ಲಿರುತ್ತೇನೆ." ಸುಳ್ಳಿನ ಸರದಾರ ಎಂಟೂವರೆಗೆ ಹಾಸನಕ್ಕೆ ಬಂದ.


ಏಕೆ ಯಾಕೂಬ ಇದ್ದಕ್ಕಿದ್ದಂತೆ ನನಗೆ ಹೀಗೆ ಅಂಟಿಕೊಳ್ಳುತ್ತಿದ್ದಾನೆ? ದಿನಾ ಸಂಜೆ ಪೋನ್ ಮಾಡಿ, “ಎಲ್ಲಿದ್ದೀರಿ ದೇವ್ರು,. ಚಿಕನ್ ಕಬಾಬ್ ತರ್ತಾ ಇದ್ದೇನೆ ಎಂದೋ ಅಬ್ದುಲ್ ಕಲಾಂ ಪಾರ್ಕ್ ಬಳಿ ಪಾನಿ ಪುರಿ ಅಂಗಡಿಯಲ್ಲಿ ಮಸಾಲೆ ಪುರಿ ತಿನ್ನುವ ಬನ್ನಿ ದೇವ್ರು" ಎಂದೆಲ್ಲಾ ಆಸೆ ಹುಟ್ಟಿಸುತ್ತಾನೆ?


ಯಾಕೂಬ ನನ್ನ ಬಾಲ್ಯ ಸ್ನೇಹಿತ. ಆತ ಬಾಲ್ಯದಲ್ಲೇ ಗೋಡೆ ಬರಹ ಬರೆಯುವುದನ್ನು ಕರಗತ ಮಾಡಿಕೊಂಡಿದ್ದ. ಊರಿನ ಹೇಮಾವತಿ ಪ್ರಾಜೆಕ್ಟಿನ ಕಾಂಪೌಂಡು ಗೋಡೆ ಮೇಲೆ ಕನ್ನಡ ರಾಜ್ಯೋತ್ಸವ ಹಿಂದಿನ ದಿನ ಬಾಳ್ ಕನ್ನಡ ತಾಯ್ ಆಳ್ ಕನ್ನಡ ತಾಯ್, ಬಾರಿಸು ಕನ್ನಡ ಡಿಂಡಿಮವ, ಓ ಕರ್ನಾಟಕ ಹೃದಯ ಶಿವ, ಕನ್ನಡವೇ ಸತ್ಯ ಕನ್ನಡವೇ ನಿತ್ಯ, ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ.. ಎಂದೆಲ್ಲಾ ಕನ್ನಡಾಭಿಮಾನದ ನುಡಿಸಾಲು ಬರೆಯುತ್ತಿದ್ದ. ಕಾವೇರಿ ನದಿ ನೀರಿಗಾಗಿ ಹೋರಾಟದ ಕಿಚ್ಚು ಹೆಚ್ಚಾದ ದಿನಗಳಲ್ಲಿ ಕಾವೇರಿ ನೀ ರೈತರ ಬದುಕಿನ ಅನ್ನದಾತೆ ಎಂದು ಸ್ಲೋಗನ್ ಬರೆದು ನನ್ನಲ್ಲೂ ಕಾವೇರಿ ಕಿಚ್ಚು ಹೆಚ್ಚಿಸಿದವ. ಇದೇ ದಿನಗಳಲ್ಲಿ ಹಾಸನದಲ್ಲಿದ್ದ ಬಿಗ್‍ಬಾಸ್ ಖ್ಯಾತಿಯ ಚಂದ್ರಚೂಡ್, ಅಂಬ್ಲಿ ಪಾಲಿಕಾ ಹೋಟೆಲ್‍ನಲ್ಲಿ ಕಾಫಿ ಕುಡಿಯುತ್ತಾ "ರಾಜ್, ನಾನು ಸ್ನೇಹ ಸಂಕೋಲೆ ಎಂಬ ಒಂದು ವಾರಪತ್ರಿಕೆ ತರುತ್ತಿರುವುದಾಗಿ ಹೇಳಿ ಅದರಲ್ಲಿ ಒಂದು ಅಂಕಣ ಬರೆಯಿರಿ. ಈಗ ಕಾವೇರಿ ಹೋರಾಟ ತೀವ್ರಗೊಂಡಿದೆ. ತಾವು ಕಾವೇರಿ ನದಿ ಹುಟ್ಟುವ ತಲಕಾವೇರಿಯಿಂದ ಪ್ರಾರಂಭಿಸಿ ಬಂಗಾಳಕೊಲ್ಲಿ ಸೇರುವ ತಮಿಳುನಾಡಿನ ಪೂಂಪಟ್ಟಣದವರೆಗೆ ಕಾವೇರಿ ನದಿ ಹರಿದು ಹೋಗುವ ನದಿಯ ದಡದ ಸ್ಥಳ ಪರಿಚಯ, ನೀರಾವರಿ ಯೋಜನೆ, ಸ್ಮಾರಕಗಳು, ಪ್ರಕೃತಿ ತಾಣಗಳು, ಕಾವೇರಿ ನದಿಯ ಉಪನದಿಗಳು ಹೀಗೆಲ್ಲಾ ಮಾಹಿತಿ ಕ್ರೋಢೀಕರಿಸಿ ವಾರಕ್ಕೊಮ್ಮೆ ನಮ್ಮ ಪತ್ರಿಕೆಗೆ ಲೇಖನ ಕಳಿಸಿ" ಎಂದು ನನ್ನ ತಲೆಗೆ ಆಗಲೇ ಬ್ಯಾಟರಿ ಬಿಟ್ಟು ಹೋದವರು ಇನ್ನೂ ಕೈಗೆ ಸಿಕ್ಕಿಲ್ಲ. ಜನತಾ ಮಾಧ್ಯಮ ದಿನಪತ್ರಿಕೆಗೆ ಕಾವೇರಿ ನದಿಯ ದಡದಲ್ಲಿ ಎಂಬ ಲೇಖನ ಮಾಲೆಯನ್ನು 35 ವಾರ ಬರೆಯಲು ನೆರವಾದವರು ಆಗ ಹಾಸನದ ಹೇಮಗಂಗೋತ್ರಿಯಲ್ಲಿ ಕನ್ನಡ ಉಪನ್ಯಾಸಕರಾಗಿದ್ದ ಡಾ. ಹ್ಯಾರಾನೆ ವಸಂತಕುಮಾರ್. ಇವರಿಗೆ ಹೇಮಾವತಿ ನದಿ ತೀರದ ಸಾಂಸ್ಕೃತಿಕ ಅಧ್ಯಯನ ಎಂಬ ಪಿಹೆಚ್‍ಡಿ ಪ್ರಬಂಧ ಬರೆಯಲು ನನ್ನ ಗೊರೂರು ಹೇಮಾವತಿ ದರ್ಶನ ಕೃತಿಯನ್ನು ನೀಡಿದ್ದೆನು. ಅದರ ಪ್ರತಿಫಲವಾಗಿ ಅವರು ನನಗೆ ಕಾವೇರಿ ವೈಭವ ಪುಸ್ತಕ ಕೊಟ್ಟಿದ್ದರು.


ಯಾಕೂಬ ಗೋಕಾಕ ಚಳುವಳಿಯ ದಿನಗಳಲ್ಲಿ ಹಲವಾರು ಕಡೆ ಕಾಂಪೌಂಡ್ ಗೋಡೆಯ ಮೇಲೆಲ್ಲಾ ಕವಿಗಳ ನಾಡುನುಡಿ ಸಾಲುಗಳನ್ನು ಬರೆದು ಪೊಲೀಸರಿಂದ ಬೂಟಿನೇಟು ತಿಂದೆನೆಂದು ಬೆನ್ನು ತೋರಿಸಿ ಬುರುಡೆ ಬಿಟ್ಟನು. ಆದರೆ ಸಾಕ್ಷಿಕರಿಸಲು ಬೆನ್ನ ಮೇಲೆ ಯಾವುದೇ ಏಟಿನ ಗುರುತು ಇರಲಿಲ್ಲ. ಆ ಗಾಯಗಳೆಲ್ಲಾ ಒಣಗಿ ಮಾಯವಾಗಿವೆ ಎಂದು ಸಮರ್ಥಿಸಿಕೊಂಡನು. ಹೋರಾಟ ಸಾಗರಕ್ಕೆ ಸಾವಿರಾರು ನದಿಗಳು, ಕನ್ನಡಕ್ಕೆ ಸಾವಿರಾರು ಸರೋವರಗಳು ಎಂದೆಲ್ಲಾ ಪದಸಾಲು ಬರೆದಿದ್ದೆನೆಂದು ಅವನು ಹೇಳಿಕೊಂಡಾಗ ಹುಟ್ಟು ಕನ್ನಡಿಗ ನಾನೇ ನಾಚಿಕೊಂಡೆನು.


ಯಾಕೂಬ ದುಡಿದು ತಿನ್ನುವುದೇ ಬಡತನಕ್ಕೆ ಮದ್ದು ಎಂಬ ಸತ್ಯ ಅರಿತವ. ದೊಡ್ಡಪ್ಪನ ಜಿಎಎಸ್ ಚಿತ್ರಮಂದಿರದಲ್ಲಿ ಗೇಟ್‍ಕೀಪರ್ ಕೆಲಸ ಮಾಡುತ್ತಾ ನಾಲ್ಕಾಣೆ ಎಂಟಾಣೆಗೆ ಕಾಲುಭಾಗ ಅರ್ಧಭಾಗ ಸಿನಿಮಾ ಆದ ಮೇಲೆ ಹುಡುಗರನ್ನು ದೊಡ್ಡಪ್ಪನ ಕಣ್ತಪ್ಪಿಸಿ ಟೆಂಟ್ ಒಳಗೆ ಬಿಟ್ಟು ಆ ಚಿಲ್ಲರೆ ಕಾಸಿನಲ್ಲಿ ಬೆಳಿಗ್ಗೆ ಕನ್ನಡ ದಿನಪತ್ರಿಕೆ ಕೊಂಡು ಓದುತ್ತಿದ್ದನು. ಅದನ್ನೆ ಇವತ್ತಿಗೂ ಮುಂದುವರೆಸಿದ್ದಾನೆ.


ಈಗಿನಂತೆ ಆಗ ಡಿಜಿಟಲ್ ಪೋಸ್ಟರ್ ಕಟೌಟ್ಗಳು ಇರಲಿಲ್ಲ. ಊರಿನಲ್ಲಿ ಏನಾದರೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವಂತಿದ್ದರೆ ಯಾಕೂಬ ಬ್ಯಾನರ್ ಬರೆದು ಸಂಘಟಕರಿಗೆ ಒಳ್ಳೆಯ ಪ್ರಚಾರ ಕೊಡುತ್ತಿದ್ದನು. ಆಗೆಲ್ಲಾ ‘ಅಣ್ಣ, ನೀವು ನನಗೆ ಬರೆಯುವುದಕ್ಕೆ ಏನು ದುಡ್ಡು ಕೊಡಬೇಡಿ, ಫ್ರೀ ಬರೆದುಕೊಡುತ್ತೇನೆ. ನಾಲ್ಕು ಮೀಟರ್ ವೈಟ್ ಕ್ಲಾತ್, ಒಂದು ಬ್ರಷ್, ಒಂದುಂಡೆ ದಾರ, ಒಂದು ಲೀಟರ್ ನೀಲಿ ಬಣ್ಣ, ಅರ್ಧ ಲೀಟರ್ ಬ್ಲಾಕ್ ಮತ್ತು ಕಾಲು ಲೀಟರ್ ರೆಡ್ ಬಣ್ಣ ಅಷ್ಟೇ ಸಾಕು ಎನ್ನುತ್ತಿದ್ದನು. ಇವೆಲ್ಲ ಪಕ್ಕ ಲೆಕ್ಕ ಹಾಕಿದರೆ ನೂರು ರೂ. ಮೇಲಾಗುತ್ತಿತ್ತು. ಅಂಗಡಿಗೆ ಹೋಗಿ ಇವನ್ನೆಲ್ಲಾ ತೆಗೆದುಕೊಡುವುದಕ್ಕಿಂತ ಜಾಣರಾದವರು ನೂರು ರೂ. ಜೇಬಿಗಿಡುತ್ತಿದ್ದರು. ನೂರು ರೂ.ಗೆ ತಕ್ಕಂತೆ ಎರಡು ಮೀಟರ್ ಬಟ್ಟೆಯಲ್ಲೇ ಒಂದು ಬ್ಯಾನರ್ ರೆಡಿ ಮಾಡುತ್ತಿದ್ದ ಯಾಕೂಬ ಅಲ್ಲಿಯೂ 50 ರೂ. ರೈಟಿಂಗ್ ಚಾರ್ಜ್ ಗಿಟ್ಟಿಸುತ್ತಿದ್ದ ಜಾಣ. ಈ ಲೆಕ್ಕವನ್ನು ಒಂದು ದಿನ ಎರಡು ಪೆಗ್ ಏರಿಸಿ ತಾನು ಚಾರ್ಜ್ ಆಗಿದ್ದಾಗ ಹೇಳಿದನು.


ಯಾಕೂಬ ನನಗೆ ತುಂಬಾ ಆತ್ಮೀಯನಾಗಿದ್ದು 1991ರಲ್ಲಿ. ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರ್ ನಿಧನರಾದ ಆ ವರ್ಷ ಆಕಾಶಕ್ಕೆ ತೂತು ಬಿದ್ದು ಜೋರು ಮಳೆ ಹಾಸನ ಚಿಕ್ಕಮಗಳೂರು ಸಕಲೇಶಪುರ ಸುತ್ತಮುತ್ತ ಸುರಿದು ಹೇಮಾವತಿ ಜಲಾಶಯ ತುಂಬಿ ತುಳುಕಾಡಿತು. ಸಾಮಾನ್ಯವಾಗಿ 120 ಅಡಿ ಜಲಾಶಯದ ಮಟ್ಟಕ್ಕೆ ನೀರು ನಿಂತ ಮೇಲೆ ಕ್ರೆಸ್ಟ್‍ಗೇಟ್ ತೆರೆದು ನದಿಗೆ ನೀರು ಬಿಡುವುದು ವಾಡಿಕೆಯಾಗಿತ್ತು. ಈಗಿನಂತೆ ಆಗ ಟಿವಿ ಮಾಧ್ಯಮ ಅದರಲ್ಲೂ ಸುದ್ದಿ ಚಾನಲ್‍ಗಳು ಇರಲಿಲ್ಲವಷ್ಟೇ. ಇದ್ದರೂ ಅದು ಡಿಡಿ 9 ಮಾತ್ರ. ಅದು ಗೋವಾದಲ್ಲಿ ಸಿಐಡಿ 999ನಂತೆ! ಕಾಲು ಗಂಟೆ ಕನ್ನಡ ವಾರ್ತೆ ಅಷ್ಟೇ. ಊರಿನ ಯುವಕರೆಲ್ಲಾ ಸೇರಿ ಡಾ. ಗೊರೂರು ಸ್ಮರಣ ಸಮಿತಿ ರಚಿಸಿ ಡಾ.ಗೊರೂರು ಬದುಕು ಬರಹ ವಿಚಾರ ಸಂಕಿರಣ ಏರ್ಪಡಿಸಿದರು. ಆ ಹೊತ್ತಿಗೆ ಒಂದಿಷ್ಟು ಕಥೆ ಕವಿತೆ ಬರೆದು ಚಲಾವಣೆಯಲ್ಲಿದ್ದ ನನಗೆ ಡಾ. ಗೊರೂರರ ಬದುಕು ಬರಹ ಕುರಿತು ಉಪನ್ಯಾಸ ನೀಡಬೇಕೆಂದು ಇತಿಹಾಸ ಉಪನ್ಯಾಸಕ ಜಿ.ಟಿ. ಕುಮಾರ ತಾಕೀತು ಮಾಡಿದ. ಸರಿಯೆಂದು ಒಪ್ಪಿಕೊಂಡವ ಡಾ.ಗೊರೂರರ ಪುಸ್ತಕ ಹುಡುಕಾಡಿ 12 ಪುಟಗಳ ಟಿಪ್ಪಣಿ ಸಿದ್ದಪಡಿಸಿದ್ದೆ. ಆದರೆ ಅದನ್ನು  ಮಂಡಿಸಲು ಫಂಡ್ ರೈಸ್ ಮಾಡುವದಷ್ಟೇ ಗುರಿ ಹೊಂದಿದ್ದ ನಮ್ಮೂರ ಹುಡುಗರು ಅವಕಾಶವನ್ನೇ ಕೊಡಲಿಲ್ಲ. ನಮ್ಮ ಹಿರೀಕರು ಹೇಳಿ ಹೋಗಿದ್ದಾರಲ್ಲಾ ಹಿತ್ತಲ ಗಿಡ ಮದ್ದಲ್ಲ! ಡಾ. ಗೊರೂರರ ಹೆಸರಿನಲ್ಲಿ ಕಾರ್ಯಕ್ರಮ ಮಾಡುವುದು ಫಂಡ್ ಎತ್ತುವುದು ಒಂದು ಅಂಶವಾದರೇ ಕಲೆಕ್ಷನ್ ಭಾಗದಲ್ಲಿ ಅರ್ಧ ತುಂಗನ ಬಾರ್‍ಗೆ ಒಪ್ಪಿಸುವುದು ನುಂಗಂ ಬಕಗಳ ಪ್ಲಾನ್ ಆಗಿತ್ತು ದೇವ್ರು ಎಂಬ ಸತ್ಯ ಹರಿಶ್ಚಂದ್ರರ ಕಥೆಯನ್ನು ಹೇಳಿದವನು ಈ ಯಾಕೂಬನೇ! “ಭೈಯ್ಯ, ನಮ್ಮೂರಿನ ಹೈಸ್ಕೂಲ್‍ಗೆ ನೂರು ವರ್ಷ ಆಗಿದೆಯಂತೆ! ಅದಕ್ಕೆ ಹಳೆಯ ವಿದ್ಯಾರ್ಥಿಗಳ ಮಿಲನ ಮಾಡಿ ಒಂದು ಬೃಹತ್  ಕಾರ್ಯಕ್ರಮ ಏರ್ಪಡಿಸಲು ಹೆಡ್ ಮೇಡಂ ಯೋಚಿಸಿದ್ದಾರಂತೆ! ಅದಕ್ಕೆ ನಮ್ಮ ಸಾಹಿತಿಗಳನ್ನು ಕರೆಯಿರಿ ಎಂದು ಹೇಳಿ ನಿಮ್ಮ ಪೋನ್ ನಂಬರ್ ಕೊಟ್ಟಿದ್ದೀನಿ" ಎಂದು ಆತ ಹೇಳಿ ಒಂಬತ್ತು ತಿಂಗಳಾಗಿದೆ. ಕಾರ್ಯಕ್ರಮಕ್ಕೆ ಮುಹೂರ್ತ ಕೂಡಿ ಬಂದಿಲ್ಲ. 

ಅಂದು ನಾನು ಭಾಷಣ ಪ್ರಾರಂಭಿಸಿ ಹತ್ತೇ ನಿಮಿಷಕ್ಕೆ ಇತಿಹಾಸ ಉಪನ್ಯಾಸಕ ನನ್ನ ಬೆನ್ನ ಹಿಂದೆ “ ನಿಂತು ಬೇಗ ಮುಗಿಸಿ ಸಾಹಿತಿಗಳೇ.. ಎಂದು ಸಣ್ಣದಾಗಿಯೇ ಉಸಿರಿದ್ದರೂ ಅದು ಮೈಕಿನಲ್ಲಿ ಜೋರಾಗಿ ಕೇಳಿ ಅಡ್ಡ ಮಳೆ ಹುಯ್ಯದಂತೆ ಜನ ಜೋರು ಚಪ್ಪಾಳೆ ತಟ್ಟಿ ನಾನು ಸಿಟ್ಟಿನಿಂದ ಹಲ್ಲು ಕಡಿದರೂ ಹಲ್ಲು ಕಿತ್ತ ಹಾವಂತಾಗಿ ಬುಸ್‍ಗುಡದೆ ಅಷ್ಟಕ್ಕೆ ಭಾಷಣ ಮೊಟಕುಗೊಳಿಸಿ ತೆಪ್ಪಗೆ ಕುಳಿತ್ತಿದ್ದೆ.


ಆಗ ನಮ್ಮೂರಿನಲ್ಲಿ ಪ್ರಸಿದ್ಧ ಗುತ್ತಿಗೆದಾರ ಶ್ರೀರಾಮಲು ರೆಡ್ಡಿಯವರು ಊರಿನಲ್ಲಿ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ ನಡೆದರೂ ಸಾಕಷ್ಟು ಡೊನೇಷನ್ ಕೊಡುತ್ತಿದ್ದರು. ಅಂತೆಯೇ ಅವತ್ತಿನ ಕಾರ್ಯಕ್ರಮದ ಮುಖ್ಯ ಅತಿಥಿಯೂ ಅವರೇ! ಅವರಿಂದ ಕನಿಷ್ಠ ಹತ್ತು ಸಾವಿರವಾದರೂ ಪೀಕಿದ್ದಾರೆಂಬುದು ಎನ್. ನರಸಿಂಹಯ್ಯನವರ ಪತ್ತೇದಾರಿ ಕಾದಂಬರಿ ಓದುಗ ಪತ್ತೇದಾರಿ ಪುರುಷೋತ್ತಮ ಯಾಕೂಬನ ಅನುಮಾನ!  ಅಂದು ನಾನು ಬರೆದಾಡಿಸಿದ ವೀರಪ್ಪನ್ ಭೂತ ನಾಟಕದ  ಮೊದಲ ಪ್ರದರ್ಶನದ ವಿಮರ್ಶೆಯನ್ನು ಚಿತ್ರ ಕಲಾವಿದರು ಅಂಬೇಡ್ಕರ್ ನಗರದ ಕೃಪಾದಾಸರು ಬರೆದು ‘ರಂಗವೇರಿದ ದಂತಚೋರ’ ಎಂಬ ಶಿರೋನಾಮೆಯಲ್ಲಿ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು.


ಅವತ್ತಿನ ಯಾಕೂಬನ ಕೆಲಸ ಎಂದರೆ ಸ್ಟೇಜ್ ಬ್ಯಾನರ್ ಬರೆದುಕೊಟ್ಟಿದ್ದು, ಊರ ಹೇಮಾವತಿ ಕಾಂಪೌಂಡು ಮೇಲೆ ಡಾ. ಗೊರೂರರ ಚಿತ್ರ ಬರೆದಿದ್ದು ನೋಡಿ ಅರೆ! ನಮ್ಮ ಸಾಬಣ್ಣನಿಗೆ ಪೋಟ್ರೈಟ್ ಕಲೆಯೂ ಒಲಿದಿದೆ! ಭೇಷ್!! ಎಂದು ಶಹಭಾಷ್ ಹೇಳಿದ್ದೆ. ತುಂಗಣ್ಣನ ಬಾರ್ ಗೆಳೆಯರಲ್ಲಿ ಇವನು ಒಬ್ಬ ಆಪ್ತಮಿತ್ರನಿರಬಹುದೆಂಬ ಅನುಮಾನ ನನಗೆ ಇಂದಿಗೂ! ಯಾಕೂಬ 40 ರೂ. ಪ್ಯಾಕೇಟ್‍ನ ಡ್ರಿಂಕ್ಸನ್ನು ಗಟಗಟನೆ ಕುಡಿಯುವಾಗ ಇದನ್ನೆಲ್ಲಾ ಹೇಳುತ್ತಿರುತ್ತಾನೆ. ಅಂದು ರಾತ್ರಿ ವೀರಪ್ಪನ್ ಭೂತ ನಾಟಕ ನೋಡಿ ಬೆಳಿಗ್ಗೆ ಯಾಕೂಬ ಒಂದು ಚಿತ್ರ ಬರೆದು ತಂದು ತೋರಿಸಿದ. ಪಿಸ್ತೂಲ್ ಹಿಡಿದ ಭೂತವೊಂದು ಗನ್ ಹಿಡಿದು ಶೂಟ್ ಮಾಡುತ್ತಿರುವ ಚಿತ್ರ ಅದು. ಆಗ ಪ್ರಸಿದ್ದ ವ್ಯಂಗ್ಯಚಿತ್ರಕಾರ ನೀರ್ನಳ್ಳಿ ಗಣಪತಿಯವರು ಬರೆದುಕೊಟ್ಟಿದ್ದ ವ್ಯಂಗ್ಯ ಚಿತ್ರದ  ಜೊತೆಗೆ ಮಧ್ಯೆ ಯಾಕೂಬನ ಚಿತ್ರ ಸೇರಿಸಿ 1992ರಲ್ಲಿ ಪುಸ್ತಕ ಪ್ರಕಟಿಸಿದೆನು. ನ್ಯೂಸ್ ಪ್ರಿಂಟ್‍ನಲ್ಲಿ ಮುದ್ರಣ ಮಾಡಿಸಿದ್ದರಿಂದ ರಾಜ್ಯ ಗ್ರಂಥಾಲಯ ಇಲಾಖೆ ಪುಸ್ತಕ ಖರೀದಿಸದಾಯಿತು.1991ರಲ್ಲಿ ಪ್ರಕಟಿಸಿದ ನನ್ನ ವ್ಯವಸ್ಥೆ ನಾಟಕದ ಕಥೆಯೂ ಅದೇ ವ್ಯಥೆ! ಅದು ನಲ್ವತ್ತು ಪುಟದ ನಾಟಕ. ಅದು ಕೂಡ ಆಯ್ಕೆ ಸಮಿತಿಯಿಂದ ಆಯ್ಕೆ ಆಗಿದ್ದ ಆ ಕಾಲಕ್ಕೆ ದಿನಗೂಲಿ ನೌಕರನಾಗಿದ್ದ ನನಗೆ ದೊಡ್ಡ ನಷ್ಟವೇ ಸೈ! ನನ್ನ ನಾಟಕ ಚಟ ಬಿಡಿಸಲು ನನ್ನ ಹೆಂಡತಿ ಶಕುಂತಲೆ ನಾನು ಹುಟ್ಟೂರು ಬಿಟ್ಟು ಹಾಸನಕ್ಕೆ ಬರುವಾಗ ಹೇಮಾವತಿ ನದಿಯಲ್ಲಿ ವೀರಪ್ಪನ್ ಭೂತ ಮುಳುಗಿಸಿ ಬಂದಿದ್ದಳು. ಇವತ್ತು ಮನೆಯಲ್ಲಿ ಹುಡುಕಿದರೂ ಒಂದು ಪ್ರತಿ ಇಲ್ಲ.


ಯಾಕೂಬ ಬಡ ಕುಟುಂಬದಲ್ಲಿ ಜನಿಸಿದವ. ಇವರ ದೊಡಪ್ಪ ಬಾಬಜಾನ್ ಸಾಹೇಬರು ಜಿಎಎಸ್ ಚಿತ್ರಮಂದಿರ ನಡೆಸುತ್ತಿದ್ದರು. ಇಲ್ಲಿ ಗೇಟ್‍ಕೀಪರ್ ಕೆಲಸ ಮಾಡುತ್ತಾ ಊರಿನ ಎ.ಎನ್.ವಿ. ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಎ.ಪದವಿ ಮುಗಿಸಿದ. ಹಾಸನ ಜಿಲ್ಲೆಯಲ್ಲಿ ಸಾಕ್ಷರತಾ ಆಂದೋಲನ ಪ್ರಾರಂಭವಾದಾಗ ಸಾಕ್ಷರತಾ ಗೋಡೆಬರಹ ಬರೆಯಲು ಯಾಕೂಬನನ್ನು ಹಾಸನ ತಾಲ್ಲೂಕು ಸಮಿತಿಗೆ ಪರಿಚಯಿಸಿದ್ದು  ಯಾಕೂಬನ ಬದುಕಿಗೆ ದಾರಿದೀಪವಾಯಿತೆಂದು ಈಗಲೂ ಕುಡಿದಾಗ ಭಜಿಸುತ್ತಿರುತ್ತಾನೆ. ಯಾಕೂಬ ಎಂ.ಎ. ಪದವಿ ಪಡೆದ ಬಗ್ಗೆ ಅವನು ಹೇಳಿಕೊಂಡಿದ್ದು ಇಷ್ಟೇ. “ನಾನು, ನಮ್ಮೂರಿನ ಕೃಷ್ಣೇಗೌಡರ ಮಗ ಜಿ.ಕೆ.ಕುಮಾರ ಮತ್ತು ಜಗದೀಶ ಮೂವರು ಒಂದೇ ಬ್ಯಾಚಿನಲ್ಲಿ ಮೈಸೂರು ಮಾನಸ ಗಂಗೋತ್ರಿಯಲ್ಲಿ ಓದಿದೆವು. ನಾನು ಗಂಗೋತ್ರಿಗೆ ಹೋಗುವ ಮೊದಲ ದಿನ ಕವಿ ಕುವೆಂಪು ಅವರ ಮನೆಗೆ ಹೋಗಿ ಅವರಿಗೆ ಕಾಲಿಗೆ ನಮಸ್ಕರಿಸಿದೆ. ಅವರು ವಿಶ್ವ ಮಾನವ ಸಂದೇಶ ಮತ್ತು ರಾಮಾಯಣ ದರ್ಶನಂ ಪುಸ್ತಕ ಕೊಟ್ಟರು. ಗಂಗೋತ್ರಿಯಲ್ಲಿ ಓದಿ ಎಂ.ಎ. ಪದವೀದರನಾದರೂ ನನ್ನ ಬದುಕು ವಾಲ್‍ರೈಟಿಂಗ್‍ಗೆ ಅಂಟಿಕೊಂಡಿದೆ". ಈತ ಹಾಸನದ ನಿರ್ಮಲ ಕಲಾಶಾಲೆಯಲ್ಲಿ ಎರಡು ವರ್ಷ ಆರ್ಟ್ ಡಿಪ್ಲೋಮಾ ಕೂಡ ಓದಿದ್ದಾನೆ. ಇವತ್ತಿಗೂ ಯಾಕುಬ ಜಿಲ್ಲಾ ಪಂಚಾಯತ್‍ನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ಗ್ರಾಮೀಣ ಕುಡಿಯುವ ನೀರು ಸರಬರಾಜು, ಪ್ರಾಥಮಿಕ ಶಾಲೆಗಳ ನಲಿ ಕಲಿ ಪಠ್ಯ ಚಿತ್ರಗಳು, ಸರ್ವ ಶಿಕ್ಷಾ ಅಭಿಯಾನ, ಸರ್ಕಾರಿ ಯೋಜನೆಗಳ ಗೋಡೆ ಬರಹ, ಭಿತ್ತಿಚಿತ್ರಗಳು, ನಾಮಫಲಕ ಹೀಗೆ ಬರೆದು ಜೀವನೋಪಾಯ ನಡೆಸುತ್ತಿರುವನು.


ಯಾಕೂಬ ಊರಿನಲ್ಲಿ ಜನರ ಕಷ್ಟಸುಖಗಳಿಗೆ ಭಾಗಿಯಾದವ. ಭಾವುಕ ಜೀವಿಯೂ ಹೌದು. ಊರಿನ ಮನೆ ಮನೆ ಕಥೆಯು ಅವನಿಗೆ ಗೊತ್ತಿದೆ. ಅದನ್ನು ವರ್ಣಿಸಿ ಹೇಳುವ ಮಾತುಗಾರಿಕೆಯೂ ಅವನಲ್ಲಿದೆ. ನಾವು ಹೇಮಾವತಿ ಅಣೆಕಟ್ಟೆ ಕಡೆ ಸಂಜೆ ವಾಕಿಂಗ್ ಹೋಗುವಾಗ ಇಂತಹ ಕಥೆಯನ್ನು ಸಹಜವಾಗಿಯೇ ಹೇಳುತ್ತಿದ್ದ. ನನಗೆ ಅದರಲ್ಲಿ ಆಸಕ್ತಿ ಇಲ್ಲದಿದ್ದರೂ ನಗು ನಗುತ್ತಾ ಅವನು ವರ್ಣಿಸುವ ಶೈಲಿ ಇಷ್ಟವಾಗುತ್ತಿತ್ತು. ಯಾಕೂಬ ಊರಿನಲ್ಲಿ ಶ್ರೀ ಯೋಗಾನರಸಿಂಹಸ್ವಾಮಿ ದೇವರ ಜಾತ್ರೆ ದಿನಗಳಲ್ಲಿ ನಡೆಯುತ್ತಿದ್ದ ಊರಿನ ಯುವಕರು ಕಲಿತು ಪ್ರದರ್ಶಿಸುತ್ತಿದ್ದ ಶನಿಮಹಾತ್ಮೆ ನಾಟಕ ಪ್ರದರ್ಶನದ ನೇಪಥ್ಯದಲ್ಲಿ ತನ್ನದೇ ಪಾತ್ರ ನಿರ್ವಹಿಸುತ್ತಿದ್ದ. ಊರಿನ ದೇವಾಂಗದ ಕಲಾವಿದ ಜಿ.ಟಿ. ರಾಮಶೆಟ್ಟಿ ಮೇಕಪ್ ಕೆಲಸ ಬಲ್ಲವನಾಗಿದ್ದ. ಊರಿನಲ್ಲಿ ನಡೆಯುತ್ತಿದ್ದ ಮಿಡಿಚಲು ಹಬ್ಬಕ್ಕೆ ಕುಲುಮೆ ಭಾಸ್ಕರಚಾರ್ ಅವರು ಮಣ್ಣಿನಲ್ಲಿ 4 ಅಡಿ ಎತ್ತರದ ಕಾಳಿ ವಿಗ್ರಹ ಮಾಡುತ್ತಿದ್ದರಂತೆ! ಇದಕ್ಕೆ ಯಾಕೂಬ ಮತ್ತು ರಾಮಶೆಟ್ಟಿ ದೇವತೆಗೆ ಬಣ್ಣ ಹೊಡೆದು ಕೊಡುತ್ತಿದ್ದೆವು ಎಂಬುದಾಗಿ ಬ್ರಿಡ್ಜ್ ಮೇಲೆ ಕುಳಿತು ಬೋಂಡ ತಿನ್ನುತ್ತಾ ಮಿಡಿಚಲು ಜಾತ್ರೆ ಬಗ್ಗೆ  ಮಾಹಿತಿ ಹಂಚಿಕೊಂಡ. ನಮ್ಮೂರಿನ ಮಾರಮ್ಮ ದೇವತೆಯ ಪೂಜಾರಿ ನಿರ್ವಾಣಿ ಭಾಸ್ಕರಾಚಾರ್ ಅವರ ಮನೆಯಿಂದ ದೇವರನ್ನು ಹೊತ್ತು ಊರಿನ ಹಳೆಯ ಮಿಡ್ಲಸ್ಕೂಲ್ ಮೈದಾನಕ್ಕೆ ಮೆರವಣಿಗೆಯಲ್ಲಿ ವಾದ್ಯ ಸಮೇತ ತರುತ್ತಿದ್ದನು. ಅಲ್ಲಿ ಕೋಣ, ಹಂದಿ ಬಲಿಕೊಟ್ಟ ರಕ್ತವನ್ನು ನಾಲ್ಕು ಕುಕ್ಕೆಯಷ್ಟು ಅನ್ನದಲ್ಲಿ ಬೆರಸಿ ಮೈದಾನದಲ್ಲಿ ನೆರೆದ ಊರಿನ ದನಕರು ಎತ್ತು ಎಮ್ಮೆ ಕೋಣಗಳಿಗೆ ಪ್ರೋಕ್ಷಣೆ ಮಾಡಿ ಎರಚುತ್ತಿದ್ದರಂತೆ! ನಂತರ ಉಳಿದ ಅನ್ನವನ್ನು ಊರಿನ ನಾಲ್ಕು ದಿಕ್ಕುಗಳಿಗೆ ಹೋಗಿ ಎರಚುತ್ತಿದ್ದರಂತೆ! ಮಿಡಿಚಲಮ್ಮನನ್ನು ಊರಿಂದ ಆಚೆ ಹೇಮಾವತಿ ಅಣೆಕಟ್ಟೆ ಕಟ್ಟುತ್ತಿದ್ದ ಸ್ಥಳದಿಂದ ನಾಲ್ಕು ಕಿ.ಮೀ. ದೂರ ಕೋನಾಪುರ ದ್ವೀಪದ ಆಸುಪಾಸು ಇಟ್ಟು ಪೂಜೆ ಮಾಡಿ ಹಾಗೇ ಹಿಂತಿರುಗಿ ನೋಡದೆ ವಾಪಸ್ಸು ಬರುತ್ತಿದ್ದರಂತೆ! ಅಲ್ಲಿ ಕಡಿದ ಹಂದಿ ಕೋಣಗಳ ತಲೆಯ ಮೇಲೆ ಎಣ್ಣೆ ದೀಪ ಇಟ್ಟು ಊರಿಗೆ ಯಾವುದೇ ರೋಗ ರುಜಿನಗಳು ಕಾಯಿಲೆ ಕಸಾಲೆಗಳು ಮನುಷ್ಯರಿಗೆ ಮತ್ತು ದನಕರುಗಳಿಗೆ ಬಾರದಂತೆ ಬೇಡಿಕೊಂಡು ಮೋಡ ನೋಡಿ ಒಳ್ಳೆಯ ಮಳೆ ಬೇಳೆ ಬಿದ್ದು ಊರು ಸುಭಿಕ್ಷವಾಗಿರಲೆಂದು ಬೇಡಿಕೊಳ್ಳುತ್ತಿದ್ದರಂತೆ! ಎಂದು ಮಿಡಿಚಲು ಹಬ್ಬದಲ್ಲಿ ಸ್ವತ: ಭಾಗಿಯಾಗಿ ತಾನು ಕಂಡಿದನ್ನು ಯಾಕುಬ ನೆನೆಯುತ್ತಿದ್ದ.


ಯಾಕೂಬ ನಮ್ಮ ಊರಿನ ಜೂನಿಯರ್ ಶಾಲುಸಾಬಿ. ಡಾ. ಗೊರೂರರು ಚಿತ್ರಿಸಿರುವ ಶಾಲುಸಾಬಿ ಪಾತ್ರದಂತೆ ನಮ್ಮ ಯಾಕೂಬನೂ ರಾತ್ರಿಯೆಲ್ಲಾ ನಡೆಯುತ್ತಿದ್ದ ಪೌರಾಣಿಕ ನಾಟಕಗಳನ್ನು ಬೆಳಕು ಹರಿಯುವವರೆಗೆ  ನೋಡುತ್ತಿದ್ದನಂತೆ! ಅಷ್ಟೇ ಅಲ್ಲಾ ಈಗಲೂ ಹಾಸನದಲ್ಲಿ ನಡೆಯುವ ಪೌರಾಣಿಕ, ಸಾಮಾಜಿಕ ನಾಟಕಗಳನ್ನು ನೋಡುವ ಹವ್ಯಾಸ ಬೆಳೆಸಿಕೊಂಡಿದ್ದಾನೆ. ಶನಿಮಹಾತ್ಮೆ ನಾಟಕದ ಕಾರವಾನ್ ಪಾತ್ರದಾರಿ ದುಬ್ಬ, ಬಟ್ಟಿ ವಿಕ್ರಮಾದಿತ್ಯ ಪಾತ್ರದಾರಿ ಅಪ್ಪಾಜಿ (ಇವನಿಗೆ ಬಿಟ್ಟಿ ವಿಕ್ರಮಾದಿತ್ಯ ಎಂದು ಕರೆದು ನೆಗೆಯಾಡಿದ) ಅಲೋಲಿಕೆ ಪಾತ್ರದಾರಿ ಧರ್ಮರೇವಣ್ಣ, ಬಡಬ್ರಾಹ್ಮಣ ಪಾತ್ರದಾರಿ ಶ್ಯಾಮ ಇವರೊಟ್ಟಿಗೆ ಸೇರಿ ನಾಟಕ ಪ್ರದರ್ಶನಕ್ಕೆ ಬೇಕಾದ ದುಡ್ಡು ಎತ್ತುವುದರಿಂದ ಹಿಡಿದು ಬೆಳಿಗ್ಗೆ ಸೀನರಿಯರಿಗೆ ಮತ್ತು ಸ್ತ್ರೀ ಪಾತ್ರಧಾರಿಗಳಿಗೆ ದುಡ್ಡುಕೊಟ್ಟು ಕಳಿಸುವವರೆಗೆ ಜೊತೆಗಿರುತ್ತಿದ್ದ ಆತ ಕೆಲವು ಸ್ವಾರಸ್ಯಕರ ಸಂಗತಿಗಳನ್ನು ತಿಳಿಸಿದ. ಮೈಸೂರಿನಿಂದ ಕರೆಸಿದ್ದ ಸ್ತ್ರೀ ಪಾತ್ರಧಾರಿಗಳು ಸೀನರಿ ಹಿಂದೆ ಟೆಂಟ್‍ನಲ್ಲಿ ಡ್ರೆಸ್ ಮಾಡಿಕೊಳ್ಳುವಾಗ ಕೆಲ ಹುಡುಗರು ಕಂಡಿಯಲ್ಲಿ ಇಣುಕಿ ನೋಡುತ್ತಿದ್ದರಂತೆ! ಆಗ ಸಿಟ್ಟಿಗೆದ್ದ ಆ ನಟಿಮಣಿಗಳು ಮೇಲೇ ಏನ್ ನೋಡ್ತಿರೋ.. ಕೆಳಗೆ ಸೀರೆ ಬಿಚ್ಲಾ.. ಎಂಬ ಪೋಲಿ ಮಾತಿಗೆ ಊರ ಹುಡುಗರೇ ನಾಚಿ ನೀರಾಗಿ ಅಲ್ಲಿಂದ ಕಂಬಿಕಿತ್ತ ಆ ಅವಮಾನಿತ ಪೋಲಿ ಪಕಾಡಗಳು ಈ ಸೇಡನ್ನು ತೀರಿಸಿಕೊಳ್ಳಲು ಬೆಳಿಗ್ಗೆ ಆ ನಟಿಮಣಿಯರು ಬಂದಿದ್ದ ಕಾರಿನ ಡೀಸೆಲ್ ಟ್ಯಾಂಕಿಗೆ ಸಕ್ಕರೆ ಹಾಕಿ ಕಾರು ಸ್ಟಾರ್ಟಾಗದೆ ತೊಂದರೆ ಕೊಡುತ್ತಿರಲು ಆ ನಟಿಮಣಿಯರ ಬಾಯಿಂದ ಉದುರಿದ ಬೈಗುಳದ ಪದಪುಂಜಗಳನ್ನು ಕೇಳಿ ನಮ್ಮೂರ ಪೋಲಿ ಹುಡುಗರೇ ನಾಚಿ ನೀರಾದರಂತೆ..!


ಡಾ.ಗೊರೂರರು ಚಿತ್ರಿಸಿರುವ ಶಾಲುಸಾಬಿ ಪಾತ್ರದ ವ್ಯಕ್ತಿ ಯಾರು ನಿನಗೆ ಗೊತ್ತೇನೋ ಎಂದು ಒಮ್ಮೆ  ಕೇಳಿದೆ. ಅದಕ್ಕೆ ಯಾಕೂಬ ನಮ್ಮ ಊರಿನ ಮೂರನೇ ಹಿರಿಯ ತಲೆಮಾರಿನ ಖಲಂದರ್ ಖಾನ್ ಅವರನ್ನು ಕಲ್ಲು ಸಾಬ್ ಎಂದು ಕರೆಯುತ್ತಿದ್ದರು. ಇವರು ನಾಟಕ ನೋಡಲು ಶಾಲು ಹಾಕಿಕೊಂಡು ಹೋಗುತ್ತಿದ್ದರು. ಹೀಗೇ ಶಾಲು ಹಾಕಿ ನಾಟಕ ನೋಡಲು ಕೂರುತ್ತಿದ್ದ ಖಲಂದರ್‌ ಖಾನ್‍ರನ್ನು ಡಾ.ಗೊರೂರರು ಶಾಲುಸಾಬಿ ಎಂದು ಕರೆದಿದ್ದಾರೆ. ಇವರು ನಮ್ಮ ಅಜ್ಜ ಅಜೀಜ್ ಸಾಹೇಬರ ತಂದೆ. ಅವರು ಆ ಕಾಲದಲ್ಲಿ ಕುದುರೆ ಮೇಲೆ ಓಡಾಡುತ್ತಿದ್ದರು. ಇವರು ಮೊಹರಂ ಹಬ್ಬದಲ್ಲಿ ಹುಲಿ ವೇಷ ಹಾಕುತ್ತಿದ್ದರು. ಗ್ರಾಮ ದೇವತೆ ಮಾರಮ್ಮನ ಹಬ್ಬದಲ್ಲಿ ಭಾಗವಹಿಸುತ್ತಿದ್ದರು. ತೇರು ಕಟ್ಟುವ ಕೆಲಸದಲ್ಲಿ ನೆರವಾಗುತ್ತಿದ್ದರು. ಊರಿನ ರಾಜಿ ಪಂಚಾಯ್ತಿಯಲ್ಲಿ ಭಾಗಿಯಾಗುತ್ತಿದ್ದರು. ಇದನ್ನು ನಮ್ಮ ಅಯ್ಯ ಹೇಳುತ್ತಿದ್ದರು ಎಂದು ಯಾಕೂಬ ಹೇಳಿದ ಕಥೆ ಕೇಳಿ  ಡಾ.ಗೊರೂರರ ಪಾತ್ರಗಳ ಸಂಶೋಧನೆ ಮಾಡಲು ಹೊರಟಿದ್ದ ನನಗೆ ಖುಷಿಯಾಯಿತು. 


-ಗೊರೂರು ಅನಂತರಾಜು, ಹಾಸನ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top