ಅಚ್ಚರಿಯ ಶಿವರಾತ್ರಿಯ ಕಥೆಗಳು

Upayuktha
0


ಶಿವರಾತ್ರಿಯ ಕಥೆಯನ್ನು ಸ್ವತಃ ಶಿವನೇ ಶಿವಲೀಲಾಮೃತದಲ್ಲಿ ಹೇಳಿದ್ದಾನಂತೆ. ಪ್ರತ್ಯಂತ ಎಂಬ ದೇಶದಲ್ಲಿ ಸದಾ ಬೇಟೆಯಾಡಿ ಜೀವಿಸುವ ಒಬ್ಬ ಬೇಡನಿದ್ದ. ಒಂದು ದಿನ ಆತನಿಗೆ ಬೇಟೆ ಸಿಗಲಿಲ್ಲ. ರಾತ್ರಿ ಸರೋವರ ಒಂದರ ಬಳಿ ಇದ್ದ ಬಿಲ್ವ ವೃಕ್ಷವನ್ನು ಏರಿ, ಅಲ್ಲಿಗೆ ನೀರು ಕುಡಿಯಲು ಬರುವ ಪ್ರಾಣಿಗಳನ್ನು ಕೊಲ್ಲಲು ಹೊಂಚು ಹಾಕುತ್ತಿದ್ದ. ಅಂದು ಶಿವರಾತ್ರಿಯಾಗಿತ್ತು. ಆ ವೃಕ್ಷದ ಅಡಿಯಲ್ಲಿಯೇ ಶಿವಲಿಂಗ ಇರುವ ಅರಿವು ಅವನಿಗೆ ಇರಲಿಲ್ಲ. ಅವನಿಗೆ ಅರಿವಿಲ್ಲದಂತೆ ದೃಷ್ಟಿಗೆ ಅಡ್ಡಲಾಗಿದ್ದ ಬಿಲ್ವ ಪತ್ರೆಗಳನ್ನು ಬಿಸಾಡುತ್ತಿದ್ದ ಹಾಗೇ ಅವೆಲ್ಲವೂ ಮರದಡಿ ಇದ್ದ ಶಿವಲಿಂಗವನ್ನು ಮುಚ್ಚಿದವು. ಆ ಸಮಯಕ್ಕೆ ಗರ್ಭಿಣಿ ಜಿಂಕೆಯೊಂದು ನೀರು ಕುಡಿಯಲು ಬಂದಿತು. ಇನ್ನೇನು ಬೇಡನು ಬಾಣ ಬಿಡಬೇಕು ಎಂಬುವಷ್ಟರಲ್ಲಿ ಜಿಂಕೆಯು- 'ತುಂಬು ಗರ್ಭಿಣಿ ಆದ ನನ್ನನ್ನು ಕೊಂದು ಭ್ರೂಣ ಹತ್ಯೆಯ ಪಾಪಕ್ಕೆ ಗುರಿಯಾಗಬೇಡ. ಪ್ರಸವಿಸಿದ ಬಳಿಕ ನಾನಾಗಿ ಇಲ್ಲಿಗೆ ಬಂದು ದೇಹ ಅರ್ಪಿಸುವೆ. ಶಿವನಾಣೆ ಶಿವನಾಣೆ' ಎಂದಿತು. ಬೇಡನು ಶಿವ ಎಂಬ ಶಬ್ದ ಕೇಳಿದಾಗ ಜಿಂಕೆಯ ಮೇಲೆ ಕರುಣೆ ಬಂದು ಅದನ್ನು ಬಿಟ್ಟು ಬಿಟ್ಟನು. ನಿದ್ರೆ ತಡೆಯಲು ಬಿಲ್ವ ಪತ್ರೆಗಳನ್ನು ಕಿತ್ತು ಎಸೆಯುತ್ತಲೇ ಇದ್ದನು. ಆನಂತರ ಇನ್ನೊಂದು ಜಿಂಕೆ ತನ್ನ ಮೂರು ಮರಿಗಳೊಂದಿಗೆ ನೀರು ಕುಡಿಯಲು ಬಂದಿತು. ಅದು ಸಹ ಬೇಡನ ಕುರಿತು- 'ಈ ಮರಿಗಳನ್ನು ನನ್ನ ಗಂಡ ಇದ್ದಲ್ಲಿಗೆ ಬಿಟ್ಟು ಬರುವ ತನಕ ಸೈರಿಸು. ಇಲ್ಲದಿದ್ದರೆ ಮರಿಗಳು ಅನಾಥವಾಗುತ್ತವೆ' ಎಂದಾಗ ಮರುಕ ಹುಟ್ಟಿ ಅದನ್ನು ಕೂಡ ಬಿಟ್ಟನು. ಅನಂತರದಲ್ಲಿ ಒಂದು ಗಂಡು ಜಿಂಕೆಯೊಂದು ಬಂದಿತು. ಅದಕ್ಕೆ ಬಾಣ ಹೂಡಿದಾಗ ಅದು- 'ಶಿವ ಶಿವ ನನ್ನನ್ನು ಯಾಕೆ ಕೊಲ್ಲುವೆ? ಮೊದಲು ನೀನು ದಯೆತೋರಿ ಬಿಟ್ಟ ಎರಡೂ ಜಿಂಕೆಗಳು ನನಗಾಗಿ ಕಾಯುತ್ತಿವೆ. ಅವುಗಳೊಂದಿಗೆ ಇಲ್ಲಿಗೆ ತಪ್ಪದೆ ಬರುತ್ತೇನೆ. ಶಿವನ ಆಣೆ' ಎಂದಾಗ ಬೇಡನು ಅದನ್ನು ಬಿಟ್ಟುಕೊಟ್ಟ. 


ಕೊಟ್ಟ ಮಾತಿನ ಪ್ರಕಾರ ಬೆಳಗಿನ ಜಾವಕ್ಕೆ ಎಲ್ಲ ಜಿಂಕೆಗಳು, ಮರಿಗಳು ಬಂದು 'ಈಗ ಕೊಲ್ಲು' ಎಂದವು. ಆಗ ಬೇಡನ ಮನಸ್ಸಿನಲ್ಲಿ ಪರಿವರ್ತನೆಯಾಗಿತ್ತು. 


ಆಗ ಅವನು 'ಶಿವಶಿವ ನಿಮ್ಮನ್ನು ಕೊಂದು ನಾನು ಯಾವ ನರಕಕ್ಕೆ ಹೋಗಲಿ'  ಎಂದು ಹೇಳಿ ಬಿಲ್ಲು ಬಾಣಗಳನ್ನು ಸರೋವರಕ್ಕೆ ಎಸೆದನು. ಆ ದಿನ ಬೇಡನಿಗೆ ಅರಿವಿಲ್ಲದಂತೆ ನಿರಾಹಾರ, ಜಾಗರಣೆ,ಲಿಂಗಾರ್ಚನೆ, ಶಿವನಾಮಸ್ಮರಣೆ ಎಲ್ಲಾ ಆಗಿ ಶಿವರಾತ್ರಿಯ ಕಟ್ಟ ಆಚರಣೆ ನಡೆದಿತ್ತು. ಶಿವನು ಅವನ ಬಗ್ಗೆ ಪ್ರಸನ್ನನಾಗಿದ್ದ. ಕೂಡಲೇ ಅಲ್ಲಿಗೆ ಬಂದ ಶಿವಗಣಗಳು ವಿಮಾನದಲ್ಲಿ ಜಿಂಕೆಗಳೊಂದಿಗೆ ಕುಟುಂಬ ಸಹಿತ ಬೇಡನನ್ನು ಕೂಡಿಸಿಕೊಂಡು ಕೈಲಾಸಕ್ಕೆ ಕರೆದೊಯ್ದರು. ಅವನನ್ನು ಬರಮಾಡಿಕೊಂಡ ಶಿವನು ನಿನಗಷ್ಟೇ ಅಲ್ಲ ನಿನ್ನ ಕಥೆ ಕೇಳಿದವರಿಗೂ ಶಿವರಾತ್ರಿಯಂದು  ಮರಣ ಹೊಂದಿದವರಿಗೂ ಕೈಲಾಸ ಪದವಿ ಖಚಿತ ಎಂದು ಭೂಲೋಕಕ್ಕೆ ಆಶ್ವಾಸನೆ ಇತ್ತನು. 


ಇನ್ನೊಂದು ಕಥೆ 

ಉಜ್ಜೈನಿಯ ಚಂದ್ರ ಸೇನ ದೊರೆ ಮಹಾಶಿವ ಭಕ್ತನಾಗಿದ್ದ. ಪ್ರತಿನಿತ್ಯ ಅಲ್ಲಿಯ ಮಹಾಕಾಲೇಶ್ವರನನ್ನು ಪೂಜಿಸುತ್ತಿದ್ದ. ಶಿವಾನುಗ್ರಹ ಮತ್ತು ಅಂಗರಕ್ಷಕನಾದ ಮಣಿಭದ್ರನು ಕೊಟ್ಟ ಚಿಂತಾಮಣಿ ರತ್ನದ ಪ್ರಭಾವದಿಂದ ಇಂದ್ರನನ್ನು ಮೀರಿಸುವಷ್ಟು ಐಶ್ವರ್ಯ ಗಳಿಸಿ ಶ್ರೀಮಂತನಾಗಿದ್ದ. ಚಿಂತಾಮಣಿ ರತ್ನದ ಪ್ರಭಾವ ಕೇಳಿದ ಶತ್ರು ರಾಜರು ಆ ರತ್ನ ತಮಗೆ ಬೇಕೆಂದು ಕೇಳಿದರು. ಅಂದು ಶನಿವಾರ; ಶಿವರಾತ್ರಿ. ಅನಿರೀಕ್ಷಿತ ದಾಳಿಯಿಂದ ದಿಕ್ಕು ತೋಚದ ರಾಜನು ಮಹಾಬಲೇಶ್ವರನ್ನೇ ಮರೆಹೊಕ್ಕು ಪೂಜಾ ನಿರತನಾದ. ಆ ದೇವಾಲಯದ ಹೊರವಲಯದಲ್ಲಿ ಬಡವಿ ಒಬ್ಬಳ ಗುಡಿಸಲಿತ್ತು. ಅವಳ ಐದು ವರ್ಷದ ಮಗ ಶ್ರೀಕರನೆಂಬುವನು ರಾಜನ ಮಾಡುವ ಪೂಜೆ ನೋಡಿ ತಾನು ಮಣ್ಣಿನ ಲಿಂಗಗಳನ್ನು ಮಾಡಿ ಪೂಜಿಸುತ್ತಿದ್ದ. ತಾಯಿಯು ಮಗನ ಚೇಷ್ಟೆ ಕಂಡು ಪೂಜೆ ಸ್ವೀಕರಿಸು ತಾಯಿಗೆ ಒಳ್ಳೆಯ ಬುದ್ಧಿ ಕೊಡು ಎಂದು ಬೇಡಿಕೊಳ್ಳುತ್ತಿರುವಾಗ ಆ ಮಣ್ಣಿನ ಲಿಂಗಗಳೆಲ್ಲ ಹೊಳೆಹೊಳೆಯುವ ಸ್ಪಟಿಕ ಲಿಂಗಗಳಾಗಿ ಅದರ ಮೇಲೆ ಚಿನ್ನದ ದೇವಾಲಯ ನಿರ್ಮಾಣವಾಯಿತು. ಈ ಸುದ್ದಿ ಗಾಳಿಯಂತೆ ಎಲ್ಲೆಡೆ ವ್ಯಾಪಿಸಿತು. ಕೇಳಿದವರೆಲ್ಲ ಆಶ್ಚರ್ಯಪಟ್ಟರು. ಶತ್ರು ರಾಜರು ಈ ಸುದ್ದಿ ಕೇಳಿ ಆಶ್ಚರ್ಯಗೊಂಡು ವೈರವನ್ನು ಬಿಟ್ಟು ಶಿವ ದರ್ಶನಕ್ಕೆ ಬಂದರು. ಚಂದ್ರ ಸೇನನೊಂದಿಗೆ ಮಿತತ್ವ ಬೆಳೆಸಿ, ಎಲ್ಲ ಒಟ್ಟಾಗಿ ಶಿವರಾತ್ರಿಯಂದು ಶಿವಪೂಜೆ, ಭಜನೆ, ಪಂಚಾಕ್ಷರಿ ಕೀರ್ತನೆಗಳನ್ನು ವೈಭವದಿಂದ ನಡೆಸಿದರು. ಅವರೆಲ್ಲರಿಗೂ ಶಿವಾನುಗ್ರಹದಿಂದ ಇಹಪರ ಸುಖ ಸಂಪತ್ತುಗಳು ದೊರಕಿದವು.


-ಡಾ. ಪ್ರಸನ್ನಕುಮಾರ ಐತಾಳ್,

ಸಂಸ್ಕೃತ ಭಾಷಾ ಉಪನ್ಯಾಸಕರು,

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು, ಉಜಿರೆ.


ಸುದ್ದಿ, ಜಾಹೀರಾತಿಗೆ ಸಂಪರ್ಕಿಸಿ: 7019126946


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
To Top