ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‍ಇ ಸಂಸ್ಥೆಯ ಒಂಬತ್ತನೆಯ ತರಗತಿ ವಿದ್ಯಾರ್ಥಿನಿ ತನ್ವಿ ವಿ. ಪುಲ್ವಾಮಾ ದಾಳಿ ಹಿನ್ನೆಲೆಯಲ್ಲಿ ತನ್ನಹುಟ್ಟುಹಬ್ಬ ಆಚರಣೆ ನಿರಾಕರಿಸಿ ಮಾದರಿಯಾಗಿದ್ದಾಳೆ.
ಫೆಬ್ರವರಿ 14 ಆಕೆಯ ಜನ್ಮದಿನ. ಆದರೆ ನಾಲ್ಕು ವರ್ಷದ ಹಿಂದೆ ಇದೇ ದಿನದಂದು ಪುಲ್ವಾಮಾ ದಾಳಿಯಲ್ಲಿ ದೇಶದ ಯೋಧರು ವೀರಮರಣವನ್ನಪ್ಪಿದ್ದಾರೆ. ಈ ವಿಚಾರ ಈಕೆಯ ಮನಸ್ಸಿನಲ್ಲಿ ಅಚ್ಚೊತ್ತಿದೆ. ಆ ಭಾವನೆ ಆಕೆ ದೊಡ್ಡವಳಾದಂತೆ ಮತ್ತಷ್ಟು ಗಾಢವಾಗಿದೆ. ಹಾಗಾಗಿ ಫೆ. 14 ರಂದು ತನಗೆ ಯಾವುದೇ ಸಂಭ್ರಮ ಇಲ್ಲ ಎಂದು ಆಕೆ ನಿರ್ಧರಿಸಿದ್ದಾಳೆ. ತಮ್ಮ ಹುಟ್ಟುಹಬ್ಬದ ದಿನದಂದು ಆಯಾ ಮಕ್ಕಳು ಸಮವಸ್ತ್ರದ ಹೊರತಾಗಿ ಬಣ್ಣದ ವಸ್ತ್ರ ಧರಿಸಿ ಶಾಲೆಗೆ ಬರಬಹುದೆಂಬ ನಿಯಮವನ್ನು ಸಂಸ್ಥೆ ರೂಪಿಸಿದೆ. ಅದರನ್ವಯ ಹುಟ್ಟುಹಬ್ಬದ ದಿನ ಆಯಾ ಮಕ್ಕಳು ಮಾತ್ರ ವರ್ಣಮಯ ವಸ್ತ್ರದೊಂದಿಗೆ ಶಾಲೆಗೆ ಆಗಮಿಸುತ್ತಾರೆ. ಆದರೆ ತನ್ವಿ ತನ್ನ ಹುಟ್ಟುಹಬ್ಬದಂದು ಸಮವಸ್ತ್ರದಲ್ಲೇ ಶಾಲೆಗೆ ಬಂದಿದ್ದಾಳೆ. ಈ ಬಗ್ಗೆ ಆಕೆಯಲ್ಲಿ ವಿಚಾರಿಸಿದಾಗ ಆಕೆಯ ಈ ನಿರ್ಧಾರ ಹೊರಬಿದ್ದಿದೆ. ಎಳೆಯ ಮಗುವಿನ ಬಾಯಿಯಲ್ಲಿ ದೇಶಪ್ರೇಮದ ನುಡಿಗಳನ್ನು ಕೇಳಿ ಆಡಳಿತ ಮಂಡಳಿ ಹಾಗೂ ಶಿಕ್ಷಕರು ಭಾವುಕರಾಗಿದ್ದಾರೆ.
‘ದೇಶಕ್ಕಾಗಿ ನಮ್ಮ ಸೈನಿಕರು ತಮ್ಮ ಪ್ರಾಣಕೊಟ್ಟಿದ್ದಾರೆ. ಹಾಗಾಗಿ ಜನ್ಮದಿನದ ಆಚರಣೆ ಮಾಡಿಕೊಳ್ಳುವುದಿಲ್ಲ. ಮನೆಯಲ್ಲಿ ನನ್ನ ಈ ನಿರ್ಧಾರವನ್ನು ಬೆಂಬಲಿಸಿದ್ದಾರೆ. ನಿನಗೆ ಹೇಗೆ ತೋಚುತ್ತದೋ ಹಾಗೆ ಮಾಡು ಎಂದು ಹೇಳಿದ್ದಾರೆ’ ಎನ್ನುವುದು ತನ್ವಿ ಮಾತು. ಈಕೆ ಪುತ್ತೂರಿನ ಕೃಷ್ಣನಗರದ ವೆಂಕಟೇಶ್ ನಾಯಕ್ ಹಾಗೂ ಲವೀನಾ ಕೆ.ಬಿ ದಂಪತಿ ಪುತ್ರಿ.
ಮಕ್ಕಳು ತಮ್ಮ ಹುಟ್ಟುಹಬ್ಬವನ್ನು ವೈಭವದಿಂದ ಆಚರಿಸಿಕೊಳ್ಳಬೇಕೆಂದು ಬಯಸುತ್ತಾರೆ. ಆದರೆ ತನ್ವಿ ಅದಕ್ಕೆ ವಿರುದ್ಧವಾಗಿ ದೇಶದ ಬಗೆಗೆ ಆಲೋಚಿಸಿದ್ದಾಳೆ. ಈ ಮಗುವಿಗೆ ಇಂತಹ ವ್ಯಕ್ತಿತ್ವ ರೂಪುಗೊಳ್ಳುವಲ್ಲಿ ಮನೆಯ ಮತ್ತು ಶಾಲೆಯ ವಾತಾವರಣ ಕಾರಣವಾಗಿದೆ. ನಮ್ಮ ಸಂಸ್ಥೆ ಇಂತಹ ಮಕ್ಕಳನ್ನು ರೂಪಿಸುತ್ತಿರುವ ಬಗೆಗೆ ಹೆಮ್ಮೆ ಇದೆ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು, ಪುತ್ತೂರು ಇದರ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಹೇಳಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ