ಜೀವನದ ಅತ್ಯಂತ ಅಮೂಲ್ಯ ಸಂಬಂಧಗಳಲ್ಲಿ ತಂದೆ ತಾಯಿಯ ಸಂಬಂಧ ಹೃದಯದಲ್ಲಿ ಬೆಟ್ಟದಷ್ಟು ನಂಬಿಕೆ ಪ್ರೀತಿ ವಿಶ್ವಾಸವನ್ನು ಹೊಂದಿದ ಅನುಬಂಧ. ಜೀವನವೆಂಬ ನದಿಗೆ ತಂದೆ ತಾಯಿ ಮೂಲ ಆಧಾರ. ತಂದೆ ತಾಯಿ ಇಲ್ಲದೆ ನನ್ನನ್ನು ಊಹಿಸಲು ಸಾಧ್ಯವೇ ಇಲ್ಲ. ನಮ್ಮ ಯಶಸ್ಸು, ಗೌರವ, ನಂಬಿಕೆಯುತವಾಗಿ ಬದುಕಲು ತಂದೆ ತಾಯಿಯೇ ಕಾರಣ. ಪ್ರತಿಯೊಬ್ಬ ತಂದೆಯು ತನ್ನ ಮಗು ಇಷ್ಟ ಪಟ್ಟ ವಸ್ತುವನ್ನು ಆಗಲಿ, ಆಸೆ- ಆಕಾಂಕ್ಷೆಗಳನ್ನಾಗಲಿ, ತನ್ನ ಆದಾಯದಲ್ಲಿ ಪೂರೈಸಲು ಸಾಧ್ಯವಾಗದೇ ಇದ್ದರು ಪ್ರಯತ್ನಿಸುತ್ತಾನೆ. ಹಾಗೇ ಅವನಿಗೆ ಸಿಗದ ಎಲ್ಲಾ ಖುಷಿಯನ್ನು ತನ್ನ ಮಗುವಿಗೆ ಧಾರೆ ಎಳೆಯಲು ಬಯಸುತ್ತಾನೆ. ಇಂತಹ ತಂದೆ ನನಗೆ ಸಿಕ್ಕಿರುವುದು ನನ್ನ ಪುಣ್ಯವೇ ಸರಿ. ತಾಯಿಯಾದವಳು ನನ್ನನ್ನು ಈ ಪ್ರಪಂಚಕ್ಕೆ ಪರಿಚಯಿಸಿದ ದೇವತೆ. ನನಗೋಸ್ಕರ ತನ್ನ ಪ್ರಾಣವನ್ನು ಒತ್ತೆಯಿಟ್ಟು ಜಗತ್ತಿಗೆ ತಂದವಳು. ಅವಳ ಋಣವನ್ನು ಈ ಜೀವನದಲ್ಲಿ ತೀರಿಸಲು ಸಾಧ್ಯವೇ ಇಲ್ಲ. ಆದರೂ ಅವಳನ್ನು ಕೊನೆಗಾಲದಲ್ಲಿ ಮಗುವಂತೆ ನೋಡಿಕೊಳ್ಳುವೆ ಎಂದು ದೇವರ ಹತ್ತಿರ ಪ್ರತಿದಿನ ಬೇಡುವೆ.
ಅಮ್ಮ- ಇದು ಜೀವನದಲ್ಲಿ ನಾನು ಆಡಿದ ಮೊದಲ ಪದ. ಆಗ ಆ ಪದವನ್ನು ಕೇಳಿ ಅವಳು ಎಷ್ಟು ಸಂತೋಷಪಟ್ಟಿರಬಹುದು, ನನಗೆ ಗೊತ್ತಿಲ್ಲ. ಆದರೆ ಖಂಡಿತ ಅವಳು ಪ್ರೀತಿಯಿಂದ ಅಪ್ಪುಗೆಯನ್ನು ನೀಡಿ ವಿಚಾರವನ್ನು ಇಡೀ ಮನೆಯ ಸದಸ್ಯರಿಗೆ ನನ್ನ ಮಗು ಅಮ್ಮ ಎಂದು ಕರೆದ ಸಂತೋಷದ ವಿಷಯವನ್ನು ಹರುಷದಿಂದ ವ್ಯಕ್ತಪಡಿಸಿದ್ದಾಳು. ಅವಳು ತನ್ನ ತಾಯಿತನದ ಅನುಭವಕ್ಕಿಂತ ಮಿಗಿಲಾಗಿ ಖುಷಿಪಟ್ಟಿರಬಹುದು.
ಆದರೆ ತಂದೆ ಸಂಗಾತಿ ಮತ್ತು ಮಗುವಿನ ಆರೋಗ್ಯ ಕಾರಣದಿಂದ ಪ್ರತಿ ದಿನ ದುಡಿಯುತ್ತಾನೆ, ಅವರಿಗೋಸ್ಕರ ಶ್ರಮಿಸುತ್ತಾನೆ. ಆದರೆ ಅವನಿಗೆ ಇರುವ ದುಃಖ ಆತಂಕ ನೋವುಗಳನ್ನು ತನ್ನ ಎದೆಯಲ್ಲಿ ಇರಿಸಿಕೊಂಡು ಅದನ್ನು ಮಗುವಿನ ನಗುವಿನಲ್ಲಿ ಮರೆಯುತ್ತಾನೆ. ತಂದೆಗೆ ಅವರ ಮಡದಿ ನೀವು ತಂದೆ ಆಗುತ್ತಿದ್ದೀರಾ ಎಂದು ಹೇಳಿದಾಗ ಆ ಜೀವ ಎಷ್ಟು ಖುಷಿಪಟ್ಟಿರಬಹುದು ಎಂದು ಎಣಿಸಿದರೆ ಕಣ್ಣಿನಲ್ಲಿ ಹರುಷದ ಕಣ್ಣೀರು ಸುರಿಯುತ್ತದೆ. ಆ ಹರುಷ ದಿಂದ ಒಂದು ಕ್ಷಣ ಉಸಿರಾಡುವುದನ್ನೇ ಮರೆತುಬಿಟ್ಟಿರಬಹುದು. ಪ್ರತಿಯೊಬ್ಬ ತಂದೆ ತಾಯಿಯು ತನ್ನ ಮಕ್ಕಳು ಖುಷಿಯಾಗಿರಲು ಬಯಸುತ್ತಾರೆ. ಅದು ಸಹಜವೇ ಆದರೆ, ಮಕ್ಕಳಿಗೆ ತಂದೆ ನಾನು ಎಷ್ಟು ಕಷ್ಟ ಪಡುತ್ತಿದ್ದೇನೆ ನಿಮಗೋಸ್ಕರ ಎಂಬ ಸತ್ಯ ವಾಕ್ಯವನ್ನು ತಿಳಿಸುವುದು ಅಷ್ಟೇ ಮುಖ್ಯವಾಗಿರುತ್ತದೆ. ಇಲ್ಲವಾದರೆ ಮಕ್ಕಳಿಗೆ ತಂದೆ ತಾಯಿಯ ಬೆಲೆಯು ಅರಿಯದೆ ಹೋಗಬಹುದು. ತಂದೆ ತಾಯಿ ಇರುವವರಿಗೆ ಅವರ ಬೆಲೆ ಎಂದಿಗೂ ತಿಳಿಯುವುದಿಲ್ಲ ಅಂತೆ, ಆದರೆ ತಂದೆ ತಾಯಿ ಇಲ್ಲದ ಮಗು ತಂದೆ ತಾಯಿಯರ ಪ್ರೀತಿ ವಾತ್ಸಲ್ಯಕ್ಕಾಗಿ ಹಾತೊರೆಯುತ್ತಿರುತ್ತದೆ.
ಜೀವನದಲ್ಲಿ ನಮಗೆ ಯಾರು ಕೂಡ ಮೋಸ ಮಾಡಬಹುದು ಆದರೆ, ಹುಟ್ಟಿಸಿದ ತಂದೆ ತಾಯಿ ಎಂದಿಗೂ ಮೋಸ ಮಾಡುವುದಿಲ್ಲ. ಅವರ ಪ್ರತಿಯೊಂದು ಮಾತಿನ ಹಿಂದೆ ಪ್ರೀತಿ, ಕಾಳಜಿ, ನಂಬಿಕೆ ಇದ್ದೇ ಇರುತ್ತದೆ. ಆದರೆ ನಾವು ವಿದ್ಯಾವಂತರಾದ ಮಾತ್ರಕ್ಕೆ ಅವರನ್ನು ಮಾತುಗಳಿಂದ ನಿರಾಕರಣೆ ಮಾಡಬಾರದು, ಅವರು ವಿದ್ಯಾವಂತರಾಗದೇ ಇರಬಹುದು, ಆದರೆ ಜೀವನದ ಅನುಭವದಲ್ಲಿ ಅವರ ಬುದ್ಧಿವಂತರಾಗಿರುತ್ತಾರೆ. ಅವರ ಜೀವನದ ಮೌಲ್ಯಗಳು, ಜೀವನದ ಉದ್ದಕ್ಕೂ ಎಂದಿಗೂ ನೆರವಾಗುತ್ತದೆ. ಆದರೆ ಇಂದಿನ ಮಕ್ಕಳಿಗೆ ಇದು ತಿಳಿಯದೆ ಹೋಗುತ್ತಿದೆ. ತಂದೆ ತಾಯಿಗಳಿಗೆ ಸದಾಕಾಲ ಆಸರೆ ಆಗಬೇಕಾದ ಮಕ್ಕಳೇ ವೃದ್ಧಾಶ್ರಮದಲ್ಲಿ ಬಿಟ್ಟು ಹೋಗುತ್ತಿದ್ದಾರೆ. ಆದರೆ ಇದಕ್ಕೆ ಆಧುನಿಕ ಪ್ರಪಂಚವನ್ನು ಹೊರೆಯಾಗಿಸಿದರೆ ಅದು ತಪ್ಪು ಎನ್ನುವುದು ನನ್ನ ಭಾವನೆ. ಮನುಷ್ಯ ನಿಜವಾದ ಸಂಬಂಧಗಳಿಗೆ ಬೆಲೆ ನೀಡದೆ, ಹಣದ ವ್ಯಾಮೋಹಕ್ಕೆ ಬಿದ್ದು ಅವನ ಖುಷಿ ಸಂತೋಷವನ್ನು ತ್ಯಾಗ ಮಾಡುತ್ತಿದ್ದಾನೆ. ಈಗಿನ ಕಾಲದಲ್ಲಿ ಹಣಕ್ಕೆ ಬೆಲೆ ಉಂಟು ಆದರೆ ಹಣ ಮಾಡದೆ ಇದ್ದ ವ್ಯಕ್ತಿಗೆ ಬೆಲೆ ಇಲ್ಲ ಎಂಬ ಪ್ರವೃತ್ತಿ ಮನುಕುಲದಲ್ಲಿ ಆರಂಭವಾಗಿದೆ. ಮನುಷ್ಯ ಮಾನವೀಯತೆಯನ್ನು ಎಂದಿಗೂ ಬಿಡಬಾರದು. ನಮ್ಮ ಹುಟ್ಟಿಗೆ ಕಾರಣರಾದವರನ್ನು ನಾವು ಯಾವುದೇ ಕಾರಣಕ್ಕೂ ಕೈಬಿಡಬಾರದು.
- ದೇವಿಶ್ರೀ ಶಂಕರಪುರ
ಆಳ್ವಾಸ್ ಕಾಲೇಜು ಮೂಡುಬಿದರೆ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ