ವಿಸ್ಮಯ: ಕಾರಿಗೆ ಡಿಕ್ಕಿ ಹೊಡೆದ ನಾಯಿ ಮಾಯವಾಗಿದ್ದು ಹೇಗೆ...?

Upayuktha
0

ಪುತ್ತೂರು: ಕಾರಿಗೆ ಡಿಕ್ಕಿಯಾದ ನಾಯಿ ಕಾರಿನ ಬಂಪರಿನೊಳಗೆ ಸಿಕ್ಕಿಹಾಕಿಕೊಂಡು ಸುಮಾರು 70 ಕಿ.ಮೀ ದೂರ ಪಯಣಿಸಿದ ನಂತರ ಯಾವುದೇ ಅಪಾಯವಿಲ್ಲದೆ ಇಳಿದು ಹೋದ ವಿಸ್ಮಯದ ಘಟನೆ ವರದಿಯಾಗಿದೆ. 


ಆಗಿದ್ದೇನು?

ಪುತ್ತೂರಿನ ಕಬಕ ನಿವಾಸಿ ಸುಬ್ರಹ್ಮಣ್ಯ ದಂಪತಿಗಳು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿ ಪುತ್ತೂರಿಗೆ ಮರಳಿ ಬರುತ್ತಿದ್ದಾಗ ದಾರಿ ಮಧ್ಯೆ ಬಳ್ಪ ಎಂಬಲ್ಲಿ ನಾಯಿಯೊಂದು ಕಾರಿಗೆ ಡಿಕ್ಕಿ ಹೊಡೆಯಿತು. ತಕ್ಷಣ ಸುಬ್ರಹ್ಮಣ್ಯ ಅವರು ಕಾರನ್ನು ನಿಲ್ಲಿಸಿದ್ದು, ಡಿಕ್ಕಿ ಹೊಡೆದ ನಾಯಿಗಾಗಿ ಕಾರಿನ ಸುತ್ತಮುತ್ತ ಹುಡುಕಾಡಿದ್ದಾರೆ. ಆದರೆ ನಾಯಿ ಎಲ್ಲಿ ಹೋಗಿದೆ ಎನ್ನುವುದನ್ನು ಊಹಿಸಲೂ ಸಾಧ್ಯವಾಗಲಿಲ್ಲ.


ನಂತರ ನೇರವಾಗಿ ಕಬಕದ ತನ್ನ ಮನೆಗೆ ಬಂದು ಕಾರನ್ನು ಪರಿಶೀಲಿಸಿದಾಗ ಬಂಪರ್‌ನ ಗ್ರಿಲ್ ಮುರಿದಿರುವುದು ಗಮನಕ್ಕೆ ಬಂತು. ತುಂಡಾದ ಗ್ರಿಲ್ ಮಧ್ಯೆ ಕಾರಿಗೆ ಡಿಕ್ಕಿಯಾದ ನಾಯಿ ಪ್ರತ್ಯಕ್ಷವಾಗಿದೆ. ನಾಯಿಯನ್ನು ಬಂಪರ್ ಒಳಗಿಂದ ತೆಗೆಯಲಾಗದ ಸ್ಥಿತಿಯಲ್ಲಿದ್ದ ಕಾರಣ ಪಕ್ಕದ ಗ್ಯಾರೇಜ್‌ಗೆ ತೆರಳಿ ನಾಯಿಯನ್ನು ಹೊರ ತೆಗೆಯಲು ಮೆಕ್ಯಾನಿಕ್‌ಗೆ ವಿನಂತಿಸಿದ್ದಾರೆ. ಗ್ಯಾರೇಜ್ ಮಂದಿ ಬಂಪರ್ ಬಿಚ್ಚಿ ನಾಯಿಯನ್ನು ಸುರಕ್ಷಿತವಾಗಿ ಕಾರಿಂದ ಹೊರ ತೆಗೆದರು. ಸುಮಾರು 70 ಕಿಲೊಮೀಟರ್ ವರೆಗೆ ಕಾರಿನ ಬಂಪರ್ ಒಳಗೇ ಇದ್ದ ನಾಯಿ ಆರಾಮವಾಗಿ ಹೊರಗೆ ಬಂದಿದೆ. ಆದರೆ ಅಪರಿಚಿತ ಸ್ಥಳವಾದ ಕಾರಣ ಕೊಂಚ ಗಲಿಬಿಲಿಗೊಂಡಿದೆ.


ಬಂಪರಿನೊಳಗೆ ಸಿಲುಕಿಕೊಂಡಿದ್ದ ಈ ನಾಯಿಗೆ ಯಾವುದೇ ಗಾಯಗಳಾಗಿಲ್ಲ; 70 ಕಿಲೋಮೀಟರ್ ದೂರ ಅದರೊಳಗೇ ಕುಳಿತು, ಕಾರಿನ ಎಂಜಿನ್ ಬಿಸಿಯೂ ತಾಗದೆ ಬದುಕಿ ಉಳಿದಿರುವುದು ವಿಸ್ಮಯದ ಸಂಗತಿಯೇ ಎಂದು ಪ್ರತ್ಯಕ್ಷದರ್ಶಿಗಳು ಅಚ್ಚರಿಪಟ್ಟಿದ್ದಾರೆ.

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top