ಮನುಷ್ಯ ಇಂದು ಸಾಮಾಜಿಕವಾಗಿ ಮತ್ತು ಭೌಗೋಳಿಕವಾಗಿ ಬಹಳಷ್ಟು ವಿಕಾಸಗೊಂಡಿದ್ದಾನೆ, ಆ ಹಾದಿಯಲ್ಲಿ ನಡೆಯುತ್ತಲೂ ಇದ್ದಾನೆ. ಈ ಭೂಮಂಡಲದ ಯಾವ ಮೂಲೆಯಲ್ಲಿಯೇ ಇದ್ದರೂ ಕ್ಷಣಾರ್ಧದಲ್ಲಿ ಸಂಪರ್ಕಿಸಲು ಸಾಧ್ಯವಾಗುತ್ತದೆ. ಭೌತಿಕವಾಗಿ ನಾವು ಪ್ರತಿಕ್ಷಣವೂ ಹೊಸಬಗೆಯ ರೀತಿಯಲ್ಲಿ ನಮ್ಮ ನಮ್ಮ ಬದುಕನ್ನು ಮಾರ್ಪಾಡು ಮಾಡಿಕೊಳ್ಳುತ್ತಿದ್ದೆವೆ. ಆಯಾ ಕಾಲಘಟ್ಟಕ್ಕೆ ತಕ್ಕಂತೆ ಮನುಷ್ಯರ ಬದುಕಿನಲ್ಲಿ ಬೆಳವಣಿಗೆ ಕಾಣುವುದು ಅನಿವಾರ್ಯ. ಆದರೆ ನಮ್ಮ ಈ ಬೆಳವಣಿಗೆ ಮತ್ತು ಬದಲಾವಣೆಯ ಪಥದಲ್ಲಿ ಧಾರ್ಮಿಕ ನೆಲೆಗಟ್ಟು ಎಷ್ಟು ಸದೃಢವಾಗಿ ನೆಲೆ ನಿಲ್ಲುತ್ತಿದೆ ಎನ್ನುವುದು ಕೂಡ ಅಷ್ಟೇ ಮುಖ್ಯವಾದ ವಿಷಯ. ನಾವು ಪ್ರಾಪಂಚಿಕವಾಗಿ ಎಷ್ಟೇ ಉನ್ನತ ಮಟ್ಟ ತಲುಪಿದರೂ ಮತ್ತು ಪ್ರಪಂಚವೇ ಒಂದು ಕುಟುಂಬ ಎಂದರೂ ನಮ್ಮ ಸಂಸ್ಕೃತಿ, ಅದರ ಪಾಲನೆ ಯಾವ ರೀತಿಯಲ್ಲಿ ನಡೆಯುತ್ತಿದೆ ಎನ್ನುವುದರ ಮೇಲೆ ನಾವು ಜೀವನ ಕಟ್ಟಿಕೊಂಡಿರುವ ಪ್ರದೇಶ ಮತ್ತು ರಾಷ್ಟ್ರದ ಅಳಿವು ಉಳಿವು ನಿಂತಿರುವುದು. ಧರ್ಮದ ನೆಲೆಗಟ್ಟಿನಲ್ಲಿ ಆಧುನಿಕತೆಯನ್ನು ಒಟ್ಟುಗೂಡಿಸಿ ಭವಿಷ್ಯವನ್ನು ಇನ್ನಷ್ಟು ಬಲಗೊಳಿಸಿಕೊಳ್ಳಲು ಸಾಧ್ಯವೇ ಹೊರತು, ಕೇವಲ ಆಧುನಿಕತೆಯ ಭ್ರಮೆಯಲ್ಲಿ ಮುಳುಗಿದರೆ, ಇಂದು ಖುಷಿ ಕಂಡುಕೊಳ್ಳಬಹುದಾದರೂ ಮುಂದೊಂದು ದಿನ ಬೆಲೆ ತೆರಬೇಕಾಗುವ ಪರಿಸ್ಥಿತಿ ಬಂದರೆ ಆಶ್ಚರ್ಯವಿಲ್ಲ.
ಹಾಗಾದರೆ ನಮ್ಮ ಹಿರಿಯರು ಸಂಘರ್ಷದ ಹಾದಿಯ ಮೂಲಕ ಹಾಕಿಕೊಟ್ಟ ಧರ್ಮದ ಭದ್ರ ಬುನಾದಿಯನ್ನು ಇಂದಿನ ಪ್ರಸ್ತುತ ಕಾಲಘಟ್ಟದಲ್ಲಿ ಮತ್ತಷ್ಟು ಗಟ್ಟಿಗೊಳಿಸುವ ಕಾರ್ಯ ನಮ್ಮಿಂದ ಆಗುತ್ತಿದೆಯೇ ಎಂಬ ಬಗ್ಗೆ ಅವಲೋಕಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಏಕೆಂದರೆ ನಾವು ಪಾಶ್ಚಾತ್ಯರ ಅನುಕರಣೆಯ ಗುಂಗಿನಲ್ಲಿ ಮುಳುಗಿ ನಮ್ಮದೇ ಸಂಸ್ಕೃತಿ, ಅದರ ಆಚರಣೆಯನ್ನು ಕ್ರಮೇಣವಾಗಿ ಮರೆಯುತ್ತ ಬರುತ್ತಿದ್ದೇವೆ. ಅಂದು ನಮ್ಮ ಹಿರಿಯರು ಅವರವರ ಸ್ವಾರ್ಥಕ್ಕಾಗಿ ಬದುಕಿದ್ದರೆ ಇಂದು ನಮ್ಮ ಅಸ್ತಿತ್ವಕ್ಕೆ ಯಾವ ರೀತಿಯ ಮೌಲ್ಯವೂ ಇರುತ್ತಿರಲಿಲ್ಲ. ನಮ್ಮ ನಂಬಿಕೆಗಳು ಮೌಢ್ಯವೆಂದಾಗಲೆಲ್ಲ ಪರೀಕ್ಷೆಗಳಿಗೆ ಒಳಪಟ್ಟು ತನ್ನ ಶಕ್ತಿಯನ್ನು ನಿರೂಪಿಸಿ ಸುಧಾರಣೆ ಹೊಂದಿದ್ದು ಈ ನೆಲದ ಧರ್ಮ. ಸಹಸ್ರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಅದೆಷ್ಟೋ ಆಚರಣೆಗಳು ನಮ್ಮ ನಿಮ್ಮೆಲ್ಲರ ಬದುಕಿನಿಂದ ಈಗಾಗಲೇ ಮರೆಗೆ ಸರಿದಾಗಿದೆ. ನಾವು ನಿಂತಿರುವ ಅಡಿಪಾಯವನ್ನೆ ಅಲುಗಾಡಿಸುವ ಹಂತದ ಬದಲಾವಣೆ ಎಂದಿಗೂ ಸುರಕ್ಷಿತವಲ್ಲ. ಈ ಮಣ್ಣಿನ ಸತ್ವವೇ ಧರ್ಮದ ಹಾದಿಯಲ್ಲಿ ನಡೆಯುವಂತಹದು. ಭವ್ಯ ಇತಿಹಾಸ ಇರುವ ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ನಾವೆಲ್ಲರೂ ದಿನನಿತ್ಯದ ಬದುಕಿನಲ್ಲಿ ಆಚರಣೆಗೆ ತರುವ ಮೂಲಕ ಇನ್ನಷ್ಟು ಸಧೃಡಗೊಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಇದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಮುನ್ನಡೆಯುವುದು ನಮ್ಮ ಕರ್ತವ್ಯವಾಗಿದೆ.
-ಪ್ರದೀಪ ಶೆಟ್ಟಿ ಬೇಳೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ