ಸಣ್ಣಕಥೆಗಳು ಸಮಕಾಲೀನ ಇತಿಹಾಸವನ್ನು ಹೇಳುತ್ತವೆ: ಡಾ. ಪೆರ್ಲ

Chandrashekhara Kulamarva
0


ಮಂಗಳೂರು: ಸಣ್ಣಕಥೆಗಳು ನಿತ್ಯಬದುಕಿನ ಬೇರೆ ಬೇರೆ ಮಗ್ಗುಲುಗಳನ್ನು ಚಿತ್ರಿಸುವುದರಿಂದ ಈ ಸಾಹಿತ್ಯ ಪ್ರಕಾರವನ್ನು ಒಟ್ಟಾಗಿ ಸಮಕಾಲೀನ ಇತಿಹಾಸ ಎಂದು ಕರೆಯಬಹುದು. ಕಳೆದ ಶತಮಾನದ ಎಲ್ಲ ಸಣ್ಣಕಥೆಗಳನ್ನು ಸಮಗ್ರವಾಗಿ ಓದಿದರೆ ಒಂದು ಶತಮಾನ ಕಾಲದ ಸಂಸ್ಕೃತಿ ಜನಜೀವನ ತಿಳಿದು ಬರುತ್ತದೆ ಎಂದು ಹಿರಿಯ ಕವಿಸಾಹಿತಿ ಡಾ. ವಸಂತಕುಮಾರ ಪೆರ್ಲ ಹೇಳಿದರು.

 

ಮಂಗಳೂರಿನ ಕಲ್ಲಚ್ಚು ಪ್ರಕಾಶನವು ನಗರದ ಹೊಟೇಲ್ ಸಭಾಂಗಣದಲ್ಲಿ ಏರ್ಪಡಿಸಿದ ಸಮಾರಂಭದಲ್ಲಿ ಜಯಾನಂದ ಕಾಸರಗೋಡು ಅವರ ಸಣ್ಣಕಥೆಗಳ ಸಂಕಲನ ಕಾರಣಿಕ ವನ್ನು ಬಿಡುಗಡೆಗೊಳಿಸಿ ಅವರು ಮಾತಾನಾಡಿದರು.

 

ಜಯಾನಂದರ ಸಣ್ಣಕಥೆಗಳು ಮಲಯಾಳದ ಅನೂಹ್ಯತೆ ಮತ್ತು ಕನ್ನಡದ ಕಥನಶಕ್ತಿಯನ್ನು ಮೇಳೈಸಿಕೊಂಡು ಸಶಕ್ತವಾಗಿ ಮೂಡಿ ಬಂದಿವೆ. ಬರೆದದ್ದು ಕಡಿಮೆಯಾದರೂ ಗಡಿಪ್ರದೇಶದ ಸಂಸ್ಕೃತಿಯನ್ನು ಕಟ್ಟಿಕೊಡುವುದರಿಂದ ಅವರ ಕಥೆಗಳು ವಿಶೇಷವಾಗಿ ಗಮನ ಸೆಳೆಯುತ್ತವೆ ಎಂದು ಡಾ. ಪೆರ್ಲ ಹೇಳಿದರು.

 

ಮುಖ್ಯ ಅತಿಥಿಯಾಗಿ ಭಾಗವಹಿಸಿದ ದ. ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಂ. ಪಿ. ಶ್ರೀನಾಥ್, ಕನ್ನಡದಲ್ಲಿ ಪ್ರತಿವರ್ಷ ಪ್ರಕಟವಾಗುತ್ತಿರುವ ಸಾವಿರಾರು ಪುಸ್ತಕಗಳೇ ಕನ್ನಡದಲ್ಲಿ ಓದುವ ಪರಂಪರೆ ಹೆಚ್ಚಾಗುತ್ತಿರುವುದಕ್ಕೆ ಸಾಕ್ಷಿ ಎಂದರು.

 

ಪ್ರೊ. ಪಿ. ಎನ್. ಮೂಡಿತ್ತಾಯ ಕೃತಿ ಪರಿಚಯ ಮಾಡಿದರು. ಕಾಸರಗೋಡಿನ ಸಣ್ಣ ಕಥೆಗಾರರಾದ ಶಶಿ ಭಾಟಿಯಾ ಮತ್ತು ಸ್ನೇಹಲತಾ ದಿವಾಕರ್ ಶುಭಾಶಂಸನೆಗೈದರು. ಕೃತಿಕಾರ ಜಯಾನಂದ ಕಾಸರಗೋಡು ಕಥೆಗಳನ್ನು ಬರೆಯಲು ಪ್ರೇರಣೆಯಾದ ಅಂಶಗಳ ಕುರಿತು ಮಾತಾಡಿದರು.

 

ಲೇಖಕ - ಸಂಪಾದಕ  ಆಸ್ಟಿನ್ ಪ್ರಭು ಅಧ್ಯಕ್ಷತೆ ವಹಿಸಿದ್ದರು. ಕೊಂಕಣಿ ಲೇಖಕಿ ಡಾ. ಝೀಟಾ ಲೋಬೋ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕಲ್ಲಚ್ಚು ಪ್ರಕಾಶನದ ಮಹೇಶ ಆರ್. ನಾಯಕ್ ಸ್ವಾಗತಿಸಿ ವಂದಿಸಿದರು.
ಮುಲ್ಕಿಯ ಉಪನ್ಯಾಸಕಿ ಡಾ. ವಿಜಯಲಕ್ಷ್ಮಿ ನಾಯಕ್ ಕಾರ್ಯಕ್ರಮ ನಿರೂಪಿಸಿದರು.


إرسال تعليق

0 تعليقات
إرسال تعليق (0)
To Top