ಬೆಂಗಳೂರು: ಹಿರಿಯ ಪತ್ರಕರ್ತ ಈಶ್ವರ ದೈತೋಟ ಅವರು ಈ ವರ್ಷದ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಜ.25ರಂದು ಸಂಜೆ 5 ಗಂಟೆಗೆ ಚಾಮರಾಜಪೇಟೆಯ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಹಿರಿಯ ಸಿನಿಮಾ ಪ್ರಚಾರಕರ್ತ ಡಿ.ವಿ ಸುಧೀಂದ್ರ ತಿಳಿಸಿದ್ದಾರೆ.
ಪ್ರಶಸ್ತಿಯನ್ನು ಡಿ.ವಿ ಸುಧೀಂದ್ರ ಅವರು ಸ್ಥಾಪಿಸಿದ್ದು, ರಾಘವೇಂದ್ರ ಚಿತ್ರವಾಣಿ ಸಂಸ್ಥೆ ಈ ಬಾರಿ 47ನೇ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದೆ.
ಈಶ್ವರ ದೈತೋಟರು ಪಾಣಾಜೆ ದೈತೋಟದ ಆಯುರ್ವೇದ ಪಂಡಿತ ಶಂಕರನಾರಾಯಣ ಭಟ್ ಮತ್ತು ವೆಂಕಟೇಶ್ವರಿ ಅಮ್ಮ ದಂಪತಿಯ ಕೊನೆಯ ಪುತ್ರರು. ರಾಜ್ಯದ ಅತಿಹೆಚ್ಚು ಪತ್ರಿಕೆಗಳಿಗೆ ಸಂಪಾದಕರಾಗಿ ಮುನ್ನಡೆಸಿದ ಹಿರಿಮೆಯನ್ನು ಹೊಂದಿರುವ ಈಶ್ವರ ದೈತೋಟರು 1992ರಿಂದ 1999ರ ವರೆಗೆ ಬೆಂಗಳೂರಿನಲ್ಲಿ ಉದಯವಾಣಿಯ ಸ್ಥಾನಿಕ ಸಂಪಾದಕರಾಗಿ, ವಿಜಯ ಕರ್ನಾಟಕ ಪತ್ರಿಕೆಯ ಸಂಸ್ಥಾಪಕ ಪ್ರಧಾನ ಸಂಪಾದಕರಾಗಿ, ಟೈಮ್ಸ್ ಆಫ್ ಇಂಡಿಯಾ ಕನ್ನಡ, ಸಂಯುಕ್ತ ಕರ್ನಾಟಕ ಪತ್ರಿಕೆಗಳ ಪ್ರಧಾನ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.
ಇವರು ಮಾಧ್ಯಮ ಅಕಾಡೆಮಿಯ 2006ನೆಯ ಸಾಲಿನ ವಾರ್ಷಿಕ ಪ್ರಶಸ್ತಿಗೆ ಭಾಜನರಾಗಿದ್ದರು. ಭಾರತೀಯ ಪತ್ರಿಕೋದ್ಯಮದಲ್ಲಿ ಅಭಿವೃದ್ಧಿ ಪತ್ರಿಕೋದ್ಯಮ ಎಂಬ ವಿನೂತನ ಪರಿಕಲ್ಪನೆಯನ್ನು ಪ್ರಾರಂಭಿಸಿದ ಮತ್ತು ಉದಯವಾಣಿಯ 'ಕುಗ್ರಾಮ ಗುರುತಿಸಿ' ಅಭಿಯಾನವನ್ನು ಯಶಸ್ವಿಯಾಗಿ ಮುನ್ನಡೆಸಿದ ಕೀರ್ತಿ ಇವರದ್ದು. ಮಾಧ್ಯಮ ಕ್ಷೇತ್ರದಲ್ಲಿ ಅನೇಕ ಹೊಸ ಪ್ರಯೋಗಗಳನ್ನು ಮಾಡಿದವರು ಈಶ್ವರ ದೈತೋಟರು.
ಕುಟುಂಬ: ಹೆಸರಾಂತ ಪಂಡಿತ ಮನೆತನದ ಈಶ್ವರ ದೈತೋಟರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಪರಿಸರ ಹೋರಾಟ, ಸಾಮಾಜಿಕ ಚಟುವಟಿಕೆಗಳಲ್ಲಿ ಹೆಸರಾಗಿದ್ದ ದಿವಂಗತ ಶಂಪಾ ದೈತೋಟರು, ಆಯುರ್ವೇದ ಪಂಡಿತ ವೆಂಕಟರಾಮ ದೈತೋಟ, ಮಂಗಳೂರಿನಲ್ಲಿ ಎಲ್‌ಐಸಿಯ ಲೀಗಲ್ ಅಡ್ವೈಸರ್ ಆಗಿರುವ ಚಂದ್ರಶೇಖರ ದೈತೋಟ ಹಾಗೂ ಡಾ. ರಾಮಕೃಷ್ಣ ದೈತೋಟ ಇವರ ಸಹೋದರರು. ಡಾ. ಸಾವಿತ್ರಿ ದೈತೋಟ ಮತ್ತು ಈಶ್ವರೀ ಬಾಲಕೃಷ್ಣ ಇವರ ಸಹೋದರಿಯರು. ಈಶ್ವರ ದೈತೋಟರ ಪತ್ನಿ ಆಶಾ ಅವರೂ ಹಿರಿಯ ಪತ್ರಕರ್ತರಾಗಿದ್ದು, ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ