ಅಗತ್ಯ ಮೂಲಭೂತ ಸೌಕರ್ಯಗಳ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಸದಾ ಸಿದ್ದ: ವೇದವ್ಯಾಸ ಕಾಮತ್

Upayuktha
0


ಮಂಗಳೂರು : ರೈತರ ಅಭ್ಯುದಯಕ್ಕಾಗಿ ಕೃಷಿ ಇಲಾಖೆಯಿಂದ ಸರ್ಕಾರ ರೂಪಿಸುವ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಲು ಅಗತ್ಯವಿರುವ ಮೂಲಭೂತ ಸೌಕರ್ಯಗಳ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಸದಾ ಸಿದ್ಧವಿದ್ದು, ಆ ದಿಸೆಯಲ್ಲಿ ಜಿಲ್ಲೆಯ ಸಮಗ್ರ ಕೃಷಿ ಪದ್ದತಿ ಉತ್ಕೃಷ್ಟತಾ ಕೇಂದ್ರವನ್ನು ನಿರ್ಮಿಸಲಾಗುತ್ತಿದೆ ಎಂದು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಿ. ವೇದವ್ಯಾಸ ಕಾಮತ್ ಅವರು ತಿಳಿಸಿದರು.


ಅವರು ಜ.20ರ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ಹಾಗೂ ನಬಾರ್ಡ್ ವತಿಯಿಂದ ಪಡಿಲು ಹತ್ತಿರದ ಅಳಪೆ ಗ್ರಾಮದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಮಗ್ರ ಕೃಷಿ ಪದ್ಧತಿ ಉತ್ಕೃಷ್ಟತಾ ಕೇಂದ್ರದ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.


 ಮಂಗಳೂರಿನ ಹೃದಯ ಭಾಗದಲ್ಲಿ ಅಂದಾಜು 13,000 ಚದರ ಅಡಿಯಲ್ಲಿ 3.88 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಬೃಹತ್ ಸುಸಜ್ಜಿತ ಕಟ್ಟಡವನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದ ಅವರು, ಈ ಕಟ್ಟಡ ನಿರ್ಮಾಣದಿಂದ ಜಿಲ್ಲೆಯ ಕೃಷಿಕರಿಗೆ ಸಾಕಷ್ಟು ಅನುಕೂಲಗಳಾಗಲಿವೆ, ಜಿಲ್ಲೆಯಲ್ಲಿ ಸಾಕಷ್ಟು ಸಣ್ಣ ಸಣ್ಣ ಕೃಷಿಕರಿದ್ದು ಅವರ ಕೃಷಿ ಚಟುವಟಿಕೆಗಳಿಗೆ ಪೂರಕ ಕ್ರಮಗಳ ಕೈಗೊಳ್ಳುವ ಸಂಶೋಧನೆ, ಲ್ಯಾಬೋರೇಟರಿ, ಯಾವ ಮಣ್ಣಿನಲ್ಲಿ ಯಾವ ರೀತಿಯ ಬೆಳೆಗಳನ್ನು ಬೆಳೆಯ ಬೇಕು ಎನ್ನುವ ಬಗ್ಗೆ ತರಬೇತಿ, ರೈತರಿಗೆ ಆದಾಯ ತಂದು ಕೊಡುವ ಬೆಳೆಗಳ ಬಗ್ಗೆ ಚರ್ಚೆಗಳು ಸೇರಿದಂತೆ ಇತರೆ ಕೆಲಸ ಕಾರ್ಯಗಳಿಗೆ ಸೆಮಿನಾರ್ ಹಾಲ್, ಎಕ್ಸಿಬಿಷನ್ ಹಾಲ್‍ಗಳ ನಿರ್ಮಾಣವಾಗಲಿದೆ ಎಂದರು.


ಕೃಷಿಕರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರವು ಸಾಕಷ್ಟು ಯೋಜನೆಗಳನ್ನು ರೂಪಿಸಿವೆ, ಮುಖ್ಯವಾಗಿ ಪ್ರಧಾನಮಂತ್ರಿಗಳು ಕೃಷಿ ಸಮ್ಮಾನ್ ಯೋಜನೆಯಡಿ 6,000 ರೂ.ಗಳನ್ನು ನೇರವಾಗಿ ರೈತರ ಖಾತೆಗೆ ಜಮೆ ಮಾಡಿ ಪ್ರೋತ್ಸಾಹಿಸುತ್ತಿದ್ದಾರೆ, ಅದರಂತೆ ರಾಜ್ಯ ಸರ್ಕಾರವು ಆರು ಸಾವಿರದೊಂದಿಗೆ 4,000 ರೂ.ಗಳನ್ನು ಸೇರಿಸಿ ಒಟ್ಟು 10 ಸಾವಿರ ರೂ.ಗಳನ್ನು ರೈತರಿಗೆ ನೀಡಿ ಪ್ರೋತ್ಸಾಹಿಸಲಾಗುತ್ತಿದೆ, ರೈತರ ಖಾತೆಗೆ ಸರ್ಕಾರದಿಂದ ನೇರವಾಗಿ ಹಣ ಬಿಡುಗಡೆ ಮಾಡುವ ವ್ಯವಸ್ಥೆ ಈ ಹಿಂದೆ ಇರಲಿಲ್ಲ, ಈ ಯೋಜನೆಯ ಅನುಷ್ಠಾನದಲ್ಲಿ ಯಾವುದೇ ಲೋಪದೋಷಗಳಿಗೆ ಆಸ್ಪದವಾಗದಂತೆ ಕೃಷಿ ಸಮ್ಮಾನ್ ಯೋಜನೆಯನ್ನು ಜಾರಿಗೊಳಿಸಲಾಗಿದೆ ಎಂದರು.


ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರವಿಶಂಕರ್ ಮಿಜಾರು, ಮಹಾನಗರ ಪಾಲಿಕೆ ಸದಸ್ಯರಾದ ಸಂದಿಪ್ ಗರೋಡಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಸೀತಾ ಎಂ.ಸಿ., ಕರ್ನಾಟಕ ಗೃಹ ಮಂಡಳಿಯ ಕಾರ್ಯನಿರ್ವಾಹಕ ಅಭಿಯಂತರಾದ ಮಂಗಳಾ ಸೇರಿದಂತೆ ಹಲವು ಗಣ್ಯರು ವೇದಿಕೆಯಲ್ಲಿದ್ದರು.


ಕೃಷಿ ಇಲಾಖೆಯ ಉಪ ನಿರ್ದೇಶಕರಾದ ಭಾರತಮ್ಮ ಜಿ.ಯು. ಸ್ವಾಗತಿಸಿದರು. ಮಂಗಳೂರು ತಾಲೂಕು ಸಹಾಯಕ ನಿರ್ದೇಶಕರಾದ ವೀಣಾ ಕೆಆರ್ ನಿರೂಪಿಸಿದರು. ಶಶಿಕಲಾ ಪ್ರಾರ್ಥಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
To Top